ಆಯುರ್ವೇದ (Ayurveda) ಗ್ರಂಥದಲ್ಲಿ ‘ಜಗತೈವ ಮಹೌಷಧಂ’ ಎಂಬ ಸುಪ್ರಸಿದ್ಧ ಹೇಳಿಕೆ ಇದೆ. ಎಂದರೆ ‘ಜಗತ್ತಿನಲ್ಲಿರುವುದೆಲ್ಲ ಔಷಧಿಯೇ. ಆದರೆ, ನಮ್ಮ ಸಂಪರ್ಕಕ್ಕೆ ಬರುವ ವಸ್ತುಗಳ ಔಷಧೀಯ ಗುಣದ ಪರಿಚಯವಾದಾಗ ಮಾತ್ರ ನಮಗೆ ಅದರ ಅರಿವಾಗುವುದು. ನಾವು ತಿಂದು ಅಥವಾ ಬಳಸಿ ಬಿಸಾಡುವ ಅನೇಕ ಹಣ್ಣು, ತರಕಾರಿ, ದವಸ ಧಾನ್ಯಗಳ ತ್ಯಾಜ್ಯಗಳಲ್ಲಿ ಬಹಳಷ್ಟು ಔಷಧೀಯ ಸತ್ತ ಗಳಿರುತ್ತವೆ. ಅದನ್ನು ತಿಳಿದು ಬಳಸಿಕೊಳ್ಳುವುದರಿಂದ ಬಹಳಷ್ಟು ಸಮಯ, ಹಣ, ಪರಿಶ್ರಮಗಳ ಉಳಿತಾಯವಾಗುತ್ತದೆ. ಅಲ್ಲದೆ ಒಂದು ಉಪಯುಕ್ತ ವಸ್ತುವಿನ ಸಮರ್ಪಕ ಬಳಕೆಯಾದಂತಾಗುತ್ತದೆ! ಮನೆಯಲ್ಲಿ ನಾವು ದಿನನಿತ್ಯ ಬಳಸುವ ವಸ್ತುಗಳಲ್ಲಿನ ಸಿಪ್ಪೆಗಳನ್ನು ಹೇಗೆ ಆರೋಗ್ಯದ ಹಾಗೂ ಸೌಂದರ್ಯದ ವೃದ್ಧಿಗಾಗಿ ಬಳಸಬಹುದು. ಮುಖದ ಚರ್ಮಕ್ಕೆ ಹೊಳಪು ಹಾಗೂ ಉತ್ತಮ ವರ್ಣ ನೀಡಲು ರಸ ತೆಗೆದ ನಿಂಬೆಹಣ್ಣಿನ ಹೋಳನ್ನು ಅದರ ಒಳಪದರು ಆಚೆ ಬರುವಂತೆ ಮಾಡಿ ಅದನ್ನು ಮುಖ ಮತ್ತು ಕುತ್ತಿಗೆಗೆ ಮೃದುವಾಗಿ ತಿಕ್ಕಬೇಕು. ನಂತರ ನೀರಿನಿಂದ ತೊಳೆಯುವುದರಿಂದ ಮುಖಕ್ಕೆ ಅಂಟಿದ ಕೊಳೆಯೆಲ್ಲ ಹೋಗಿ ಮುಖದ ಚರ್ಮ ಶುಭ್ರವಾಗುತ್ತದೆ. ತೆಂಗಿನಕಾಯಿಯ ಕೊಬ್ಬರಿ ತೆಗೆದ ನಂತರ ಸಿಗುವ ಕರಟವನ್ನು ಒಲಗೆ ಹಾಕಿ ಉರಿಸಬೇಕು. ನಂತರ ಅದರ ಇದ್ದಿಲನ್ನು ಶೇಖರಿಸಿ ಪುಡಿಮಾಡಿ ಸಮಪ್ರಮಾಣದಷ್ಟು ಬೆಟ್ಟದ ನೆಲ್ಲಿಚೆಟ್ಟಿನ ಪುಡಿಯನ್ನು ಬೆರೆಸಿ ಶೇಖರಿಸಿಟ್ಟು ಕೊಳ್ಳಬೇಕು. ಇದರ ಒಂದೆರಡು ಚಮಚದಷ್ಟು ಪುಡಿಯನ್ನು ತಲೆ ಸ್ನಾನದ ಒಂದು ಅಥವಾ ಎರಡು ಗಂಟೆ ಮೊದಲು ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚಿ ಅರ್ಧಗಂಟೆ ನಂತರ ತಲೆ ತೊಳೆಯಬೇಕು. ಈ ರೀತಿ ನಿಯಮಿತವಾಗಿ ಮಾಡುವುದರಿಂದ ತಲೆಕೂದಲು ಒತ್ತೊತ್ತಾಗಿ ಕಪ್ಪಾಗಿ ಹಾಗೂ ಉದ್ದವಾಗಿ ಬೆಳೆಯುತ್ತದೆ. ಪೀಚ್ ಹಣ್ಣಿನ ಸಿಪ್ಪೆಗೆ ಚರ್ಮದ ವರ್ಣವನ್ನು ಉತ್ತಮಪಡಿಸುವ ಗುಣವಿದೆ. ಪ್ರತಿರಾತ್ರಿ ಮಲಗುವುದಕ್ಕೆ ಮೊದಲು ಅದರ ಒಳಭಾಗವನ್ನು ಹಲವು ನಿಮಿಷಗಳವರೆಗೆ ಮುಖಕ್ಕೆ ಉಜ್ಜಿ ಹಾಗೆ ಬಿಡಿ, ಮರುದಿನ ಮುಖ ತೊಳೆಯಿರಿ. ಇದು ಮುಖವನ್ನು ಶುಭ್ರಗೊಳಿಸುತ್ತದೆ ಹಾಗೂ ಕಪ್ಪು ಚುಕ್ಕೆಗಳನ್ನು, ರಂಧ್ರಗಳನ್ನು ಶುಚಿಗೊಳಿಸುತ್ತದೆ. ಇದಕ್ಕೆ ಕಷಾಯ ಗುಣವಿರುವುದರಿಂದ ಮುಖದಲ್ಲಿನ ಮಾಂಸಪೇಶಿಗಳನ್ನು ಗಟ್ಟಿಮಾಡುತ್ತದೆ ಹಾಗೂ ಮುಖದ ಚರ್ಮ ಜೋಲದಂತೆ ಬಿಗಿಯಾಗಿರುವಂತೆ ಮಾಡುತ್ತದೆ. ಮುಖದಲ್ಲಿದ್ದ ಕಲೆಗಳನ್ನು ನಿವಾರಿಸಿ ಮುಖದ ಚರ್ಮವನ್ನು ಮೃದುಗೊಳಿಸಿ ಕಾಂತಿಯುಕ್ತವಾಗಿಸಲು ಒಣಗಿಸಿದ ಕಿತ್ತಲೆ ಸಿಪ್ಪೆ ಕಾಲು ಚಮಚ, ಕಡಲೇಹಿಟ್ಟು ಒಂದು ಚಮಚ, ಕಡೆದ ಮೊಸರು 1 ಚಮಚ, ಆಲಿವ್ ಎಣ್ಣೆ 1 ಚಮಚ – ಇವೆಲ್ಲವನ್ನು ಚೆನ್ನಾಗಿ ಬೆರೆಸಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಲೇಪವು ಒಣಗಿ ಅದರಿಂದ ಮುಖದ ಚರ್ಮ ಬಿಗಿ ಬಂದಾಗ ಮುಖವನ್ನು ಅಂಗೈಯಿಂದ ಮೃದುವಾಗಿ ತಿಕ್ಕಿ ನಂತರ ಮೊದಲು ಬಿಸಿ ನೀರಿನಿಂದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Ayurvedic health tips: ತಲೆಹೊಟ್ಟು ನಿವಾರಣೆ ಮಾಡುತ್ತೆ ನಿಂಬೆಹಣ್ಣು ಸಿಪ್ಪೆ, ದಾಸವಾಳದ ಎಲೆ ಬಲ, ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ತರಕಾರಿ ಮತ್ತು ಹಣ್ಣುಗಳ ಬೀಜಗಳು