ಭುವನೇಶ್ವರ, ಏಪ್ರಿಲ್ 30: ಡಿ.ಆರ್.ಡಿ.ಒ ಮತ್ತು ಭಾರತೀಯ ನೌಕಾಪಡೆಯು ಒಡಿಶಾದ ಬೆಂಗಾಳ ಕೊಲ್ಲಿಯ ಕರಾವಳಿಯ ಬಳಿ ನೌಕಾ ನಿರೋಧಕ ಕ್ಷಿಪಣಿ-ಸಣ್ಣ ಶ್ರೇಣಿಯ ಮೊದಲ ‘ಸಾಲ್ವೋ’ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿವೆ. ಈ ಪರೀಕ್ಷೆಯ ಸಮಯದಲ್ಲಿ, ಒಂದೇ ಹೆಲಿಕಾಪ್ಟರ್‌ನಿಂದ ಎರಡು ಕ್ಷಿಪಣಿಗಳನ್ನು ಕ್ಷಿಪ್ರವಾಗಿ ಒಂದರ ಹಿಂದೆ ಒಂದರಂತೆ ಉಡಾವಣೆ ಮಾಡಲಾಯಿತು. ಇದು ಸುಧಾರಿತ ವಾಯು-ಚಾಲಿತ ಹಡಗು ವಿರೋಧಿ ಕ್ಷಿಪಣಿ ವ್ಯವಸ್ಥೆಯ ಮೊದಲ ‘ಸಾಲ್ವೋ’ ಉಡಾವಣೆಯಾಗಿದೆ. ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಯೋಜಿಸಿದ ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್ ಮತ್ತು ಟೆಲಿಮೆಟ್ರಿಯಂತಹ ವಿವಿಧ ಶ್ರೇಣಿಯ ಟ್ರ್ಯಾಕಿಂಗ್ ಉಪಕರಣಗಳ ಮೂಲಕ ಸಂಗ್ರಹಿಸಿದ ದತ್ತಾಂಶದ ಪ್ರಕಾರ, ಪರೀಕ್ಷೆಯ ಎಲ್ಲಾ ಉದ್ದೇಶಗಳನ್ನು ಸಂಪೂರ್ಣವಾಗಿ ಈಡೇರಿಸಲಾಗಿದೆ. ಎನ್ಎಎಸ್ಎಂ-ಎಸ್ಆರ್ ಶತ್ರುಗಳ ಯುದ್ಧ ನೌಕೆಗಳ ಮೇಲೆ ದಾಳಿ ಮಾಡುವ ಸಲುವಾಗಿ ಯುದ್ಧ ವಿಮಾನ ಅಥವಾ ಹೆಲಿಕಾಪ್ಟರ್‌ಗಳಿಂದ ಉಡಾವಣೆ ನಡೆಸಬಹುದಾದ ಮೊದಲ ಸಂಪೂರ್ಣ ಭಾರತೀಯ ನಿರ್ಮಾಣದ ಕ್ಷಿಪಣಿಯಾಗಿದೆ. ಇದನ್ನು ನಿಜಕ್ಕೂ ವಿಶೇಷವಾಗಿಸುವುದು ಕ್ಷಿಪಣಿಯ ಸೀ ಸ್ಕಿಮ್ಮಿಂಗ್ ಸಾಮರ್ಥ್ಯ. ಅಂದರೆ, ಇದು ಶತ್ರುಗಳ ರೇಡಾರ್ ಕಣ್ಣಿಗೆ ಬೀಳುವುದನ್ನು ತಪ್ಪಿಸುವ ಸಲುವಾಗಿ ಸಮುದ್ರದ ಮೇಲ್ಮೈಗೆ ಬಹಳ ಹತ್ತಿರಾಗಿ ಸಾಗುತ್ತದೆ. ನೀರಿನ ಮೇಲ್ಮೈಗೆ ಬಹಳ ಸನಿಹದಲ್ಲಿ, ಶತ್ರುವಿನ ಕಣ್ಣಿಗೆ ಬಹುತೇಕ ಅಗೋಚರವಾಗಿ ಸಾಗುವ ಒಂದು ಕ್ಷಿಪಣಿಯನ್ನು ಊಹಿಸಿಕೊಳ್ಳಿ. ಭಾರತದ ವಿನೂತನ ಕ್ಷಿಪಣಿ ಯಥಾವತ್ ಅಂತಹದ್ದೇ ಆಗಿದೆ. ಇದು ಬಹುತೇಕ 55 ಕಿಲೋಮೀಟರ್ ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದಾಗಿದ್ದು, ‘ಫೈರ್ ಆ್ಯಂಡ್ ಫಾರ್ಗೆಟ್’ ವ್ಯವಸ್ಥೆಯಡಿ ಕಾರ್ಯಾಚರಿಸುತ್ತದೆ. ಒಂದು ಬಾರಿ ಉಡಾವಣೆಗೊಳಿಸಿದರೆ, ಈ ಕ್ಷಿಪಣಿ ತನ್ನದೇ ಬುದ್ಧಿವಂತಿಕೆಯನ್ನು ಬಳಸಿಕೊಂಡು, ಪೈಲಟ್‌ನಿಂದ ಹೆಚ್ಚುವರಿ ನಿರ್ದೇಶನದ ಅಗತ್ಯವಿಲ್ಲದೆ, ತಾನೇ ಗುರಿಯನ್ನು ಹುಡುಕುತ್ತಾ ಹಾರಿ, ಅದನ್ನು ನಾಶಪಡಿಸುತ್ತದೆ. ಇದು ಯಾವುದೇ ಹವಾಮಾನದಲ್ಲೂ ಕಾರ್ಯನಿರ್ವಹಿಸಬಹದು. ಹಗಲು ಮತ್ತು ರಾತ್ರಿ ಎರಡರಲ್ಲೂ ನಿಖರ ದಾಳಿ ನಡೆಸಬಲ್ಲದು. ಆದ್ದರಿಂದ ಇದು ನೈಜ ಯುದ್ಧ ಸನ್ನಿವೇಶಕ್ಕೂ ಪೂರಕವಾಗಿದೆ. ಈ ಕ್ಷಿಪಣಿ ವ್ಯವಸ್ಥೆಯನ್ನು ಹೈದರಾಬಾದ್‌ನ ರಿಸರ್ಚ್ ಸೆಂಟರ್ ಇಮಾರತ್ (Research Centre Imarat) ಮುಖ್ಯವಾಗಿ ಅಭಿವೃದ್ಧಿಪಡಿಸಿದ್ದು, DRDO ಯ ಇತರೆ ಪ್ರಯೋಗಾಲಯಗಳಾದ ಡಿಫೆನ್ಸ್ ರಿಸರ್ಚ್ & ಡೆವಲಪ್‌ಮೆಂಟ್ ಲ್ಯಾಬೋರೇಟರಿ (DRDL), ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೋರೇಟರಿ (HEMRL), ಟರ್ಮಿನಲ್ ಬಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೋರೇಟರಿ (TBRL) ಹಾಗೂ ITR ಚಾಂದಿಪುರ ಸಹಕಾರ ನೀಡಿವೆ. ಈ ಕ್ಷಿಪಣಿಗಳನ್ನು ಈಗ ಅಭಿವೃದ್ಧಿ-ಉತ್ಪಾದನಾ ಸಹಭಾಗಿತ್ವದ (DcPP) ಸಂಸ್ಥೆಗಳು ಭಾರತೀಯ ಕೈಗಾರಿಕೆಗಳು ಮತ್ತು ಸ್ಟಾರ್ಟ್‌ಅಪ್‌ಗಳ ಸಹಕಾರದೊಂದಿಗೆ ಉತ್ಪಾದಿಸುತ್ತಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು DRDO, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ ಮತ್ತು DcPP ಸಹಭಾಗಿತ್ವದ ಕೈಗಾರಿಕೆಗಳಿಗೆ ಈ ಯಶಸ್ವಿ ಮೊದಲ ಸಲ್ವೋ ಉಡಾವಣೆಗೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಕ್ಷಿಪಣಿಯ ಅಭಿವೃದ್ಧಿ ದೇಶದ ರಕ್ಷಣಾ ಪಡೆಗಳ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಅವರು ಹೇಳಿದರು. ಟ್ವಿಟರ್ ಪೋಸ್ಟ್ DRDO and the #IndianNavy have successfully conducted the maiden salvo launch of the Naval Anti-Ship Missile – Short Range (#NASM-SR) from a naval helicopter platform off the coast of Bay of Bengal (Odisha).The test validated multi-missile engagement capability, guidance, and… pic.twitter.com/hVZ6lzSWin— Defence Decode® (@DefenceDecode) April 29, 2026 ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ DRDO ಅಧ್ಯಕ್ಷರಾದ ಡಾ. ಸಮೀರ್ ವಿ. ಕಾಮತ್ ಅವರು ಈ ಯಶಸ್ವಿ ಸಲ್ವೋ ಉಡಾವಣೆಯಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಹಣ ಪಡೆಯಲು ಸಹೋದರಿಯ ಅಸ್ಥಿಪಂಜರ ಹೊತ್ತು ಬ್ಯಾಂಕ್ಗೆ ಬಂದ ಸಹೋದರ: ವಿಡಿಯೋ ನೋಡಿ ಭಾರತ 6 ವರ್ಷಗಳಲ್ಲಿ 38 ದೇಶಗಳನ್ನು ಒಳಗೊಂಡ 9 FTA ಒಪ್ಪಂದ