Odisha Tribal Man brings sister skeleton to bank to withdraw money from accountಸಹೋದರಿಯ ಅಸ್ಥಿಪಂಜರ ಹೊತ್ತು ತಂದ ಸಹೋದರ

ಭುವನೇಶ್ವರ, ಏಪ್ರಿಲ್‌ 30: ಓಡಿಶಾದ ಕಿಯೋಂಜಾರ್‌ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರದ ಅವಶೇಷಗಳನ್ನು ಭುಜದ ಮೇಲೆ ಹೊತ್ತುಕೊಂಡು, ಬಿಸಿಲಿನಲ್ಲಿ 3 ಕಿಮೀ ನಡೆದು ಬ್ಯಾಂಕಿಗೆ ಹೋಗಿದ್ದಾರೆ.

ಹೌದು, ಆಶ್ಚರ್ಯವೆನಿಸಿದರೂ ಸತ್ಯ. 59 ವರ್ಷದ ಜಿತು ಮುಂಡಾ ಅವರು ಕಿಯೋಂಜಾರ್‌ನ ಡಯಾನಾಲಿ ಗ್ರಾಮದವರು. ಅವರ ಸಹೋದರಿ ಕಾಕ್ರಾ ಮುಂಡಾ, ಮಲ್ಲಿಪಾಸಿಯ ಒಡಿಶಾ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರು. ಕಾಕ್ರಾ ಎರಡು ತಿಂಗಳ ಹಿಂದೆ ನಿಧನರಾದರು. ಆಕೆಯ ಪತಿ ಮತ್ತು ಏಕೈಕ ಮಗು ಮೊದಲೇ ಮೃತಪಟ್ಟಿದ್ದರು.

ಜಿತು ಅವರ ಏಕೈಕ ಸಹೋದರ. ಹೀಗಾಗಿ ಜಿತು ತನ್ನ ಸಹೋದರಿಯ ಖಾತೆಯಲ್ಲಿ ಉಳಿದಿರುವ 19,300 ರೂಪಾಯಿ ಹಿಂಪಡೆಯಲು ಬ್ಯಾಂಕ್‌ಗೆ ತೆರಳಿದಾಗ, ಅದನ್ನು ವಾಪಸ್‌ ಕೊಡಲು ವ್ಯವಸ್ಥಾಪಕರು ನಿರಾಕರಿಸಿದರು. ಖಾತೆದಾರರು ಹಾಜರಿರಬೇಕು ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ದಾಖಲೆ ಒದಗಿಸಬೇಕು ಎಂದು ಕೇಳಿದರು.

ಶಿಕ್ಷಣವಿಲ್ಲದ ಬುಡಕಟ್ಟು ಜನಾಂಗದ ಜಿತು ಬಳಿ ಮರಣ ಪ್ರಮಾಣಪತ್ರ ಅಥವಾ ಉತ್ತರಾಧಿಕಾರ ಪತ್ರ ಇರಲಿಲ್ಲ. ಹೀಗಾಗಿ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅಸಹಾಯಕರಾಗಿ ಹಿಂತಿರುಗಿದರು. ಮನೆಗೆ ಮರಳಿದ ಜಿತು, ನೇರವಾಗಿ ಹೋದರಿಯ ಅಂತ್ಯಕ್ರಿಯೆ ಸ್ಥಳಕ್ಕೆ ಹೋದರು. ತನ್ನ ಸಹೋದರಿಯ ಅವಶೇಷಗಳನ್ನು ಹೊರತೆಗೆದು, ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿ, ಬಿರು ಬಿಸಿಲಿನಲ್ಲೂ 3 ಕಿ.ಮೀ. ನಡೆದುಕೊಂಡು ಬ್ಯಾಂಕಿಗೆ ತೆರಳಿದರು.

ಜಿತು ಬ್ಯಾಂಕನ್ನು ತಲುಪಿದ ತಕ್ಷಣ, ಆ ದೃಶ್ಯ ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿತು. ಗ್ರಾಮಸ್ಥರು ಬ್ಯಾಂಕ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಡವನೊಬ್ಬ ತನ್ನ ಸ್ವಂತ ಹಣವನ್ನು ಪಡೆಯುವುದು ಇಷ್ಟೊಂದು ಕಷ್ಟವೇ? ಎಂದು ಪ್ರಶ್ನಿಸಿದರು. ಬ್ಯಾಂಕ್ ಸಿಬ್ಬಂದಿಯೇ ಪರಿಶೀಲಿಸಬಹುದಿತ್ತು ಅಥವಾ ಸ್ಥಳಕ್ಕೆ ಭೇಟಿ ನೀಡಬಹುದಿತ್ತು ಎಂದು ಸ್ಥಳೀಯರು ಹೇಳಿದರು.

ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಬ್ಯಾಂಕ್‌ಗೆ ಆಗಮಿಸಿ, ಜಿತು ಅವರನ್ನು ಸಮಾಧಾನಪಡಿಸಿದರು. ನಂತರ ತಹಶೀಲ್ದಾರ್ ಕಚೇರಿಗೆ ಹೋಗಿ ಕಾನೂನುಬದ್ಧ ವಾರಸುದಾರರ ಪ್ರಮಾಣಪತ್ರ ಪಡೆದುಕೊಂಡರೆ ಹಣವನ್ನು ಪಡೆಯಬಹುದು ಎಂದು ತಿಳಿಸಿದರು. ಬಳಿಕ ಪೊಲೀಸರು ಅಸ್ಥಿಪಂಜರವನ್ನು ತೆಗೆದುಕೊಂಡು ಮತ್ತೆ ಸಮಾಧಿ ಮಾಡಿದರು.

ವಿಡಿಯೋ ನೋಡಿ

ಪಟ್ನಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕಿರಣ್ ಪ್ರಸಾದ್ ಸಾಹು ಮಾತನಾಡಿ, “ಜಿತು ಅವರಿಗೆ ಶಿಕ್ಷಣ ಇಲ್ಲದ ಕಾರಣ ಕಾನೂನುಬದ್ಧ ವಾರಸುದಾರರು ಅಥವಾ ನಾಮಿನಿ ಎಂಬುದರ ಅರ್ಥವೇ ತಿಳಿದಿಲ್ಲ. ಬ್ಯಾಂಕ್ ಅಧಿಕಾರಿಗಳು ಹಣ ಪಡೆಯುವ ವಿಧಾನವನ್ನು ಸರಿಯಾಗಿ ಅವರಿಗೆ ಅರ್ಥಮಾಡಿಕೊಡಲು ವಿಫಲರಾದರು,” ಎಂದು ಹೇಳಿದರು.

ಘಟನೆಯ ನಂತರ ಸ್ಥಳೀಯ ಆಡಳಿತ ತಕ್ಷಣ ಕ್ರಮಕ್ಕೆ ಇಳಿದು, ಸಾಧ್ಯವಾದಷ್ಟು ಬೇಗ ಜಿತು ಅವರ ಪರವಾಗಿ ಹಣ ಬಿಡುಗಡೆ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಮೂಲಗಳ ಪ್ರಕಾರ, ಈ ಘಟನೆ ಕುರಿತು ಜಿಲ್ಲಾಡಳಿತ ಅಧಿಕಾರಿಗಳಿಂದ ವರದಿ ಕೇಳಿದೆ. ಬ್ಯಾಂಕ್ ಸಿಬ್ಬಂದಿ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *