ಹುಬ್ಬಳ್ಳಿ, ಮಾರ್ಚ್ 3: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ (HDMC) ನಿರ್ವಹಿಸಲ್ಪಡುವ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಏಪ್ರಿಲ್ ಮೊದಲ ವಾರದಿಂದ ಡಯಾಲಿಸಿಸ್ ಕೇಂದ್ರ (Dialysis Center in Hubli) ಆರಂಭವಾಗುವ ಸಾಧ್ಯತೆ ಇದೆ. ಹೀಗೆಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಡಯಾಲಿಸಿಸ್ ಕೇಂದ್ರ ಆರಂಭಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ದಾನಿಗಳ ಸಹಕಾರದಿಂದ ಬಡ ರೋಗಿಗಳಿಗೆ ಮತ್ತೊಂದು ಪ್ರಮುಖ ಆರೋಗ್ಯ ಸೇವೆ ಲಭ್ಯವಾಗಲಿದೆ. ಡಯಾಲಿಸಿಸ್ ಕೇಂದ್ರಕ್ಕೆ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ದಾನಿಗಳ ಮೂಲಕ ಒದಗಿಸಲಾಗಿದೆ. ಶೀಘ್ರದಲ್ಲೇ ಮೂರು ಡಯಾಲಿಸಿಸ್ ಯಂತ್ರಗಳು ಆಗಮಿಸಲಿವೆ . ಹಿಂದಿನಿಂದ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದರೂ, ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಯಾದ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಅಗತ್ಯ ಚಿಕಿತ್ಸಾ ಸೌಲಭ್ಯಗಳು ಹಾಗೂ ವೈದ್ಯರ ಲಭ್ಯತೆ ಹೆಚ್ಚಿದ ಪರಿಣಾಮ ರೋಗಿಗಳ ಸಂಖ್ಯೆಯೂ ದ್ವಿಗುಣಗೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ್ ಅವರು ಮಾತನಾಡಿ, “ಈ ಡಯಾಲಿಸಿಸ್(Dialysis Center in Hubli) ಕೇಂದ್ರವು ದೀರ್ಘಕಾಲ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನಿರ್ವಹಣಾ ಯೋಜನೆ ಸಿದ್ಧಪಡಿಸಲಾಗಿದೆ. ಸ್ಥಳೀಯ ಉದ್ಯಮಿಯೊಬ್ಬರು ಸಿಎಸ್‌ಆರ್ ಯೋಜನೆಯಡಿ 40 ಲಕ್ಷ ರೂ. ಸಹಾಯ ನೀಡುತ್ತಿದ್ದಾರೆ. ಅಗತ್ಯ ಮೂಲಸೌಕರ್ಯವನ್ನು ಮಹಾನಗರ ಪಾಲಿಕೆ ಒದಗಿಸುತ್ತಿದೆ. ಇದು ಮಾದರಿ ಕೇಂದ್ರವಾಗಲಿದೆ. ಬಡಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ ನಮ್ಮ ಆಸ್ಪತ್ರೆಗೆ ಸಹಾಯ ಮಾಡಲು ದಾನಿಗಳು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧಾರವಾಡ ಪ್ರತಿಭಟನೆ: ಉತ್ತರ ಕರ್ನಾಟಕದ ಯುವಕರು ಸರ್ಕಾರಿ ಕೆಲಸವನ್ನೇ ಏಕೆ ನೆಚ್ಚಿದ್ದಾರೆ? ವಿಶ್ಲೇಷಣೆ ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಸುಮಾರು 2,000 ರೋಗಿಗಳು ಪ್ರತಿತಿಂಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ದಿನಕ್ಕೆ ಸುಮಾರು 1,500 ರೂ. ವೆಚ್ಚವಾಗುತ್ತದೆ. ಅನೇಕ ರೋಗಿಗಳಿಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಅಗತ್ಯವಿರುತ್ತದೆ. ಹೀಗಾಗಿ, ಚಿಟಗುಪ್ಪಿ ಆಸ್ಪತ್ರೆಯಲ್ಲಿ ಈ ಸೇವೆಯನ್ನು ಉಚಿತವಾಗಿ ನೀಡುವ ಮೂಲಕ ಬಡವರಿಗೆ ಅನುಕೂಲವಾಗಲಿದೆ ಎಂದರು. ಮಾರ್ಚ್ ಮೊದಲ ವಾರದಲ್ಲಿ ಡಯಾಲಿಸಿಸ್ ಯಂತ್ರಗಳು ಬರುವ ನಿರೀಕ್ಷೆಯಿದ್ದು, ಅವುಗಳ ಇನ್‌ಸ್ಟಾಲೇಷನ್ ಮತ್ತು ಇತರೆ ಸಿದ್ಧತೆಗಳಿಗೆ ಒಂದು ತಿಂಗಳು ಬೇಕಾಗಲಿದೆ. ಎಲ್ಲ ಕಾರ್ಯಗಳು ಪೂರ್ಣಗೊಂಡ ಬಳಿಕ ಏಪ್ರಿಲ್ ಮೊದಲ ವಾರದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭವಾಗಲಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಚಿಟಗುಪ್ಪಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಚಿಟಗುಪ್ಪಿ ಆಸ್ಪತ್ರೆ ಮೊದಲು 30 ಹಾಸಿಗೆಗಳ ಆಸ್ಪತ್ರೆಯಾಗಿತ್ತು. ಈಗ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿಸಲಾಗಿದೆ. ಆಸ್ಪತ್ರೆಯಲ್ಲಿ ಲ್ಯಾಪೋಸ್ಕೋಪಿ ಶಸ್ತ್ರಚಿಕಿತ್ಸೆ ಹೆಚ್ಚಿಗೆ ನಡೆಸಲಾಗುತ್ತದೆ. ಅಲ್ಲದೇ, ಮಹಿಳೆಯರ ಗರ್ಭಚೀಲದ ಆಪರೇಷನ್, ಗಡ್ಡೆಗಳು, ಟ್ಯೂಮರ್‌ಗಳ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿಗೆ ಮಲಕಪ್ಪ ಹಳ್ಳಿಗುಡಿ ಆಯ್ಕೆ ಹೋಳಿ: ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿಯಿಂದ ವಿಶೇಷ ರೈಲು, ಬಾಗಲಕೋಟೆ-ವಿಜಯಪುರ ನಡುವೆ ಈ 2 ದಿನ ಟ್ರೈನ್ ಇಲ್ಲ