Dharwad Protest: Why North Karnataka Youth Prefer Government Jobs Analysisಸಾಂದರ್ಭಿಕ ಚಿತ್ರ

ಧಾರವಾಡದಲ್ಲಿ (Dharwad) ಇತ್ತೀಚೆಗೆ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಭಾರಿ ಪ್ರತಿಭಟನೆ (Dharwad Govt job aspirants Protest) ನಡೆಯಿತು. ಈ ಪ್ರತಿಭಟನೆ ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಪ್ರತಿಭಟನೆಗಳು ನಡೆದಿದ್ದವು. ಸರ್ಕಾರಿ ಉದ್ಯೋಗಕ್ಕಾಗಿ (Government Job) ಉದ್ಯೋಗಾಂಕ್ಷಿಗಳು ಪ್ರತಿಭಟನೆಗೆ ಇಳಿದು ಸರ್ಕಾರವನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದರು. ಯಾಕೆ ಇವರೆಲ್ಲ ಸರ್ಕಾರಿ ಕೆಲಸವನ್ನೇ ನೆಚ್ಚಿಕೊಂಡು ಕೂತಿದ್ದಾರೆ? ಯಾಕೆ ಖಾಸಗಿ ಸ್ಥಂಸ್ಥೆಗಳು, ಐಟಿ-ಬಿಟಿ ಕಂಪನಿಗಳಲ್ಲಿ ಹಾಗೂ ಖಾರ್ಕಾನೆಗಳು ಕೆಲಸ ನೀಡುವುದನ್ನು ನಿಲ್ಲಿಸಿವೆಯೇ? ಮತ್ತು ಪ್ರತಿಭಾರಿಯೂ ಉತ್ತರ ಕರ್ನಾಟಕದ ಉದ್ಯೋಗಾಕಾಂಕ್ಷಿಗಳ ಮಾತ್ರ ಪ್ರತಿಭಟಿಸುತ್ತಾರೆ ಏಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ಖಾಸಗಿ ಸುದ್ದಿ ಸಂಸ್ಥೆ ದಿ ಹಿಂದೂ ತನ್ನ ವಿಶ್ಲೇಷಣಾ ವರದಿಯಲ್ಲಿ ನೀಡಿದೆ. ಆ ವಿಶ್ಲೇಷಣಾ ವರದಿಯ ಕನ್ನಡ ಅನುವಾದ ಹೀಗಿದೆ.

ಧಾರವಾಡದಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಭಾರಿ ಪ್ರತಿಭಟನೆ ಕರ್ನಾಟಕದ ಪ್ರಾದೇಶಿಕ ಅಭಿವೃದ್ಧಿಯಲ್ಲಿನ ಆಳವಾದ ಅಸಮತೋಲನವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಉತ್ತರ ಕರ್ನಾಟಕದ ಶೈಕ್ಷಣಿಕ ಮತ್ತು ಕೈಗಾರಿಕಾ ದೃಷ್ಟಿಯಿಂದ ಹಿಂದುಳಿದ ಭಾಗಗಳಿಂದ ಧಾರವಾಡಕ್ಕೆ ಬಂದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳಲ್ಲಿ ದಾಖಲಾತಿ ಪಡೆಯುವ ಯುವಕರಿಗೆ ಸರ್ಕಾರಿ ಉದ್ಯೋಗವು ಹಲವಾರು ವೃತ್ತಿ ಆಯ್ಕೆಗಳಲ್ಲಿ ಒಂದಲ್ಲ; ಅದು ಅವರಿಗೆ ಏಕೈಕ ಆಯ್ಕೆಯಾಗಿದೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಕೈಗಾರಿಕಾ ಹೂಡಿಕೆ, ಖಾಸಗಿ ವಲಯದ ಬೆಳವಣಿಗೆ ಹಾಗೂ ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಕೈಗಾರಿಕೆಯಲ್ಲಿ ಮುಂದಿರುವ ಜಿಲ್ಲೆಗಳಲ್ಲಿ ಉತ್ಪಾದನಾ ಘಟಕಗಳು, ಐಟಿ ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸೇವಾ ವಲಯಗಳು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ.

ಆದರೆ ಹಿಂದುಳಿದ ಪ್ರದೇಶಗಳಲ್ಲಿ ಕೃಷಿ, ಸಣ್ಣ ವ್ಯಾಪಾರ ಮತ್ತು ಅಸಂಘಟಿತ ವಲಯದ ಕೆಲಸಗಳ ಹೊರತಾಗಿ ಹೆಚ್ಚಿನ ಅವಕಾಶಗಳಿಲ್ಲ. ಆದ್ದರಿಂದ ಸರ್ಕಾರಿ ಉದ್ಯೋಗವೇ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ಪ್ರಮುಖ ಅಸ್ತ್ರವಾಗಿದೆ.

2026ರಲ್ಲಿ ಆರ್ಥಿಕ ತಜ್ಞ ಎಂ. ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿ ಪ್ರಕಾರ, ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳಿವೆ. ಕರ್ನಾಟಕವನ್ನು “ಪ್ರಾದೇಶಿಕ ಅಸಮತೋಲನ”ಇದೆ ಎಂದು ವರದಿ ನೀಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಶೇ. 33.7 ರಷ್ಟು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಶೇ 26.1 ರಷ್ಟು ಹಿಂದುಳಿದ ಪ್ರದೇಶಗಳಿವೆ ಎಂದು ತಿಳಿಸಿದೆ.

ಅಭಿವೃದ್ಧಿ ಆರ್ಥಿಕ ತಜ್ಞ ಪ್ರೊ. ಚಂದ್ರ ಪುಜಾರಿ ಅವರ ಪ್ರಕಾರ, ರಾಜ್ಯದ ಕೈಗಾರೀಕರಣ ಮತ್ತು ಸೇವಾ ವಲಯದ ಬೆಳವಣಿಗೆ ಬಹುತೇಕವಾಗಿ ಬೆಂಗಳೂರಿನ ಸುತ್ತ ಕೇಂದ್ರೀಕೃತವಾಗಿದೆ. ಬೆಂಗಳೂರು ರಾಜ್ಯದ ಒಟ್ಟು ಜಿಡಿಪಿಯಲ್ಲಿಶೇ 33 ಕ್ಕಿಂತ ಹೆಚ್ಚು ಪಾಲು ಹೊಂದಿದೆ. ಮೈಸೂರು ಮತ್ತು ಮಂಗಳೂರು ಜಿಲ್ಲೆಗಳನ್ನೂ ಸೇರಿಸಿದರೆ, ಅವರ ಒಟ್ಟು ಪಾಲು ಅರ್ಧಕ್ಕಿಂತ ಹೆಚ್ಚು ಆಗುತ್ತದೆ. ತಲಾ ಆದಾಯದಲ್ಲಿಯೂ ಭಾರಿ ವ್ಯತ್ಯಾಸ ಕಂಡುಬರುತ್ತದೆ. ಬೆಂಗಳೂರಿನಲ್ಲಿ ಸುಮಾರು 7.39 ಲಕ್ಷ ರೂ. ಇದ್ದರೆ, ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅದು 1.5 ಲಕ್ಷ ರೂಪಾಯಿಗಿಂತಲೂ ಕಡಿಮೆ ಇದೆ.

ದಕ್ಷಿಣ ಮತ್ತು ಕರಾವಳಿ ಕರ್ನಾಟಕದ ಗ್ರಾಮೀಣ ಜನಸಂಖ್ಯೆಯ ಶೇ 80 ಕ್ಕಿಂತ ಹೆಚ್ಚು ಜನ ಕೃಷಿಯೇತರ ವಲಯದ ಆದಾಯಕ್ಕೆ ಅವಲಂಬಿತರಾಗಿದ್ದಾರೆ. ಆದರೆ ಉತ್ತರ ಕರ್ನಾಟಕದಲ್ಲಿ 2/3 ಜನರು ಕೃಷಿಯ ಮೇಲೆಯೇ ಅವಲಂಬಿತರಾಗಿದ್ದಾರೆ. ಈ ಅಸಮತೋಲನದಿಂದ ಆದಾಯ ಮಟ್ಟ, ಶಿಕ್ಷಣದ ಗುಣಮಟ್ಟ ಹಾಗೂ ಕೌಶಲ್ಯಾಭಿವೃದ್ಧಿ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ. ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕಾ ಸಂಪರ್ಕ, ಕ್ಯಾಂಪಸ್ ನೇಮಕಾತಿ ಹಾಗೂ ಕೌಶಲ್ಯಾಧಾರಿತ ತರಬೇತಿ ಕಡಿಮೆಯಿರುವುದರಿಂದ ಯುವಕರು ಸರ್ಕಾರಿ ಉದ್ಯೋಗಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಡುತ್ತಾರೆ.

ಕಲ್ಯಾಣ ಕರ್ನಾಟಕ ಮೂಲದ ಅಭಿವೃದ್ಧಿ ತಜ್ಞ ಸಂಗೀತಾ ಕಟ್ಟಿಮಣಿ ಅವರ ಪ್ರಕಾರ, ಈ ಪ್ರದೇಶದಲ್ಲಿ ಕೈಗಾರಿಕಾ ವಾತಾವರಣ ನಿರ್ಮಾಣಕ್ಕೆ ಸಹಾಯಧನ, ಉತ್ಪಾದನಾ ಆಧಾರಿತ ಪ್ರೋತ್ಸಾಹಧನ (PLI) ಹಾಗೂ ಸಮರ್ಪಕ ಮೂಲಸೌಕರ್ಯ ಅಭಿವೃದ್ಧಿ ಅಗತ್ಯವಿದೆ.

ಕುಂಟುತ್ತಿರುವ ಪ್ರವಾಸೋದ್ಯಮ ಅಭಿವೃದ್ಧಿ

ಪ್ರಾದೇಶಿಕ ಅಸಮತೋಲನದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯೂ ಮಹತ್ವದ ಅಂಶವಾಗಿದೆ. ಮೈಸೂರು ಅರಮನೆ, ವನ್ಯಜೀವಿ ಅಭಯಾರಣ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬಲಿಷ್ಠ ಪ್ರವಾಸೋದ್ಯಮ ವ್ಯವಸ್ಥೆಯನ್ನು ನಿರ್ಮಿಸಿದೆ. ಆದರೆ ಕಲ್ಯಾಣ ಕರ್ನಾಟಕ ಮತ್ತು ಸುತ್ತಮುತ್ತಲಿನ ಐತಿಹಾಸಿಕ ಪರಂಪರೆ ಹೊಂದಿರುವ ಪ್ರದೇಶಗಳು ಇನ್ನೂ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ. ವಿಜಯನಗರ ಜಿಲ್ಲೆಯ ವಿಶ್ವ ಪಾರಂಪರ್ಯ ತಾಣ ಹಂಪಿ ಮಾತ್ರ ಗಮನಾರ್ಹವಾಗಿದೆ.

ಕಲಬುರಗಿ ಜಿಲ್ಲೆಯ ಪ್ರಾಚೀನ ಬೌದ್ಧ ಕೇಂದ್ರ ಸನ್ನತಿ, ರಾಯಚೂರು ಜಿಲ್ಲೆಯ ಅಶೋಕ ಶಾಸನ ಪ್ರಸಿದ್ಧ ಮಾಸ್ಕಿ ಸೇರಿದಂತೆ ಅನೇಕ ಐತಿಹಾಸಿಕ ತಾಣಗಳು ಅಭಿವೃದ್ಧಿ ಮತ್ತು ಪ್ರಚಾರದ ಕೊರತೆಯಿಂದ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿವೆ.

ಪ್ರಾದೇಶಿಕ ಅಸಮತೋಲನ ನಿವಾರಣೆಗೆ 2013ರಲ್ಲಿ ಸಂವಿಧಾನದಲ್ಲಿ 371(ಜೆ) ವಿಧಿಯನ್ನು ಸೇರಿಸಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇದರ ಮೂಲಕ ಸ್ಥಳೀಯರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಸ್ಥಾಪಿಸಿ ವಿಶೇಷ ಅನುದಾನ ಒದಗಿಸಲಾಗಿದೆ.

ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರ ಪ್ರಕಾರ, ಮಂಡಳಿಯ ಒಟ್ಟು ಅನುದಾನದ ಶೇ 25 ರಷ್ಟನ್ನು ಶಿಕ್ಷಣಕ್ಕಾಗಿ ಮೀಸಲಿರಿಸಲಾಗಿದೆ. ಕಳೆದ ಎರಡು ವರ್ಷಗಳನ್ನು ‘ಶಿಕ್ಷಣ ವರ್ಷ’ಗಳೆಂದು ಘೋಷಿಸಿ, ‘ಅಕ್ಷರ ಆವಿಷ್ಕಾರʼ ಯೋಜನೆಯಡಿ 5,000 ಕೋಟಿ ರೂ. ಅನುದಾನವನ್ನು ಶೇ 25 ರಷ್ಟು ಸರ್ಕಾರಿ ಶಾಲೆಗಳ ಸುಧಾರಣೆಗೆ ಬಳಸಲಾಗುತ್ತಿದೆ.

ಈ ವರ್ಷ ಸರ್ಕಾರ 100 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅನುಮೋದಿಸಿದ್ದು, ಕೆಕೆಆರ್‌ಡಿಬಿ ಮತ್ತಷ್ಟು 200 ಶಾಲೆಗಳನ್ನು ಸೇರಿಸಿದೆ. ಶಿಕ್ಷಣ ಮೂಲಸೌಕರ್ಯ ಸುಧಾರಣೆ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *