ಬೆಂಗಳೂರು, ಏಪ್ರಿಲ್ 6: ರಾಜ್ಯದಲ್ಲಿ ಆನ್‌ಲೈನ್ ಗೇಮ್ ಎಂಬ ಅಪಾಯಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಐವರು ಮಕ್ಕಳು ಆನ್‌ಲೈನ್ ಗೇಮಿಂಗ್‌ನಿಂದ (Online Gaming) ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಒಂದು ಪ್ರಕರಣ ದಾಖಲಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಹುಬ್ಬಳ್ಳಿ-ಧಾರವಾಡದಲ್ಲಿ ಒಂದು ಪ್ರಕರಣ ವರದಿಯಾಗಿದೆ. ಈ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಅವರು ವಿಧಾನ ಪರಿಷತ್ತಿನ ಇತ್ತೀಚಿಗೆ ನಡೆದ ಬಜೆಟ್ ಅಧಿವೇಶನದಲ್ಲಿ ಮಾಹಿತಿ ನೀಡಿದರು. ಮಾರ್ಚ್ 25ರಂದು ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆ (BRIMS) ಯ ಎಂಬಿಬಿಎಸ್ ವಿದ್ಯಾರ್ಥಿ ಆನ್‌ಲೈನ್ ಗೇಮ್ ವ್ಯಸನದಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. “ಇಂತಹ ಘಟನೆಗಳನ್ನು ತಡೆಯುವ ಉದ್ದೇಶದಿಂದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಲಾಗುತ್ತದೆ. ಎಲ್ಲಾ ವಿಧದ ಅನಧಿಕೃತ ಗೇಮ್‌ಗಳು ಮತ್ತು ಜೂಜಾಟವನ್ನು ನಿಯಂತ್ರಿಸಲು ಭಾರತೀಯ ನ್ಯಾಯ ಸಂಹಿತೆ, ಕರ್ನಾಟಕ ಪೊಲೀಸ್ ಕಾಯಿದೆ 1963 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು. ಜೊತೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆನ್‌ಲೈನ್ ಗೇಮಿಂಗ್ ಪ್ರೋತ್ಸಾಹ ಮತ್ತು ನಿಯಂತ್ರಣ ಕಾಯಿದೆ 2025 ಅಡಿಯಲ್ಲಿ ಸಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. ಪೊಲೀಸರ ಬೀಟ್ “ಪೊಲೀಸ್ ಇಲಾಖೆ ‘ಮನೆ ಮನೆಗೆ ಪೊಲೀಸ್ʼ ಮತ್ತು ‘ತೆರೆದ ಮನೆʼ ಕಾರ್ಯಕ್ರಮಗಳ ಮೂಲಕ ಮಕ್ಕಳೊಂದಿಗೆ ನೇರ ಸಂಪರ್ಕ ಸಾಧಿಸಿ ಜಾಗೃತಿ ಮೂಡಿಸಲಾಗುತ್ತಿದೆ” ಎಂದರು. “ಪೊಲೀಸರು ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಿ, ಸಭೆಗಳ ಮೂಲಕ ಆನ್‌ಲೈನ್ ಗೇಮ್‌ಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ,” ಎಂದು ಅವರು ಹೇಳಿದರು. ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲ್ವಿಚಾರಣೆ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಪರವಾನಗಿ ಪಡೆಯುವಂತೆ ಮಾಡಲಾಗುವುದು ಹಾಗೂ ಅನಧಿಕೃತ ಆಪ್‌ಗಳನ್ನು ತಕ್ಷಣ ತೆಗೆದುಹಾಕಲಾಗುವುದು ಎಂದು ಸಚಿವರು ಹೇಳಿದರು. ಅಪಾಯಕಾರಿ ಅಥವಾ ಜೂಜಾಟವನ್ನು ಉತ್ತೇಜಿಸುವ ಆಪ್‌ಗಳನ್ನು Google Play Store ಮತ್ತು App Storeಗಳಿಂದ ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುತ್ತದೆ. ಜನರಲ್ಲಿ ಜೂಜಾಟದ ಹಾನಿಗಳ ಬಗ್ಗೆ ಅರಿವು ಮೂಡಿಸಲು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಮಕ್ಕಳನ್ನು ಆನ್‌ಲೈನ್ ಗೇಮ್‌ಗಳಿಂದ ದೂರವಿಡಲು ಪೋಷಕರಿಗೆ ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ ಎಂದರು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಶಂಕರಲಿಂಗೇಶ್ವರ ಜಾತ್ರಾ ವಿಶೇಷ: ಲಚ್ಯಾಣದಲ್ಲಿ ನಿಲ್ಲುತ್ತವೆ ಬಸವ, ಗೋಲಗುಂಬಜ್ ರೈಲುಗಳು ಕಳೆದ 3 ವರ್ಷಗಳಲ್ಲಿ ಸರ್ಕಾರಿ ಶಾಲೆಯನ್ನು ತೊರೆದ 7 ಲಕ್ಷ ವಿದ್ಯಾರ್ಥಿಗಳು