ಕಳೆದ ನಾಲ್ಕೈದು ವರ್ಷಗಳಿಂದ ಒಂದಲ್ಲ ಒಂದು ದೇಶ ಸಮರ ಮೈದಾನಕ್ಕೆ ಇಳಿಯುತ್ತಲೇ ಇದೆ. ರಷ್ಯಾ-ಉಕ್ರೇನ್‌ನಿಂದ ಆರಂಭವಾಗಿರುವ ಯುದ್ಧ ಕಾರ್ಮೋಡ ದಿನದಿಂದ ದಿನಕ್ಕೆ ಎಲ್ಲಕಡೆ ಆವರಿಸಿಕೊಳ್ಳುತ್ತಾ ಸಾಗಿದೆ. ಇದೀಗ, ಮಧ್ಯಪ್ರಾಚ್ಯದಲ್ಲಿ ಯುದ್ಧ (Middle East War) 17ನೇ ದಿನಕ್ಕೆ ಕಾಲಿಟಿದೆ. ಈ ಯುದ್ಧದಲ್ಲಿ ಸಾಮಾನ್ಯ ಜನರೂ ಕೂಡ ಬಲಿಯಾಗುತ್ತಿದ್ದಾರೆ. ಈ ಯುದ್ಧದ ಕರಾಳತೆಯನ್ನು ಮತ್ತು ಸಮಾನ್ಯ ಜನರ ಸಾವನ್ನು ತಮ್ಮ ಕಠೋರ ಶಬ್ಧಗಳಿಂದ ಕನ್ನಡದ ಆಧುನಿಕ ಸರ್ವಜ್ಞ ಪ್ರಸಿದ್ಧರಾಗಿರುವ ಡಿ.ವಿ ಗುಂಡಪ್ಪನವರು (DV Gundappa) ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಬರೆದಿದ್ದಾರೆ. ಡಿವಿಜಿಯವರ ಸಾಹಿತ್ಯವೆಂದರೇ ಅದು ವಜ್ರದಷ್ಟು ಮೊಣಚಾಗಿರುತ್ತದೆ. ಇಂದು ಡಿ.ವಿ ಗುಂಡಪ್ಪ ಅವರ 139ನೇ ಜನ್ಮದಿನ. ಡಿವಿ ಗುಂಡಪ್ಪ ಅವರ 945 ಪುಟ್ಟ ಪದ್ಯಗಳ ದೊಡ್ಡ ಸಂಗ್ರಹವಾದ ಮಕ್ಕುತಿಮ್ಮನ ಕಗ್ಗವನ್ನು ಕನ್ನಡದ ಭಗವದ್ಗೀತೆ ಎಂದು ಕರೆಯಲಾಗುತ್ತದೆ. ಡಿವಿ ಗುಂಡಪ್ಪ ಅವರು ಯುದ್ಧ, ಸಾವು-ನೋವುಗಳ ಕುರಿತು ಕಗ್ಗದಲ್ಲಿ ಮೊಣಚಾದ ಲೇಖನಿಯಿಂದ ಕಠೋರವಾಗಿ ಬರೆದಿದ್ದಾರೆ. ಯುದ್ಧದ ಕುರಿತು ಅವರು ಬರೆದ ಪುಟ್ಟ ಪದ್ಯಗಳು ಭಾವಾರ್ಥ ಸಹಿತ ಇಲ್ಲಿವೆ. ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ | ಮೃತ್ಯು ಕುಣಿಯುತಲಿಹನು ಕೇಕೆಹಾಕುತಲಿ ॥ ಸುತ್ತಿವುದು ತಲೆಯನನುದಿನದ ಲೋಕದ ವಾರ್ತೆ | ಎತ್ತಲಿದಕೆಲ್ಲ ಕಡೆ? – ಮಂಕುತಿಮ್ಮ ॥ (ಮುತ್ತಿರುವುದು+ಇಂದು) (ಭೂಮಿಯನು+ಒಂದು) (ತಲೆಯನು+ಅನುದಿನದ) ಇವತ್ತಿನ ದಿನ, ಈ ಭೂಮಿಯನ್ನು ಒಂದು ದುರ್ದೈವ ಮುತ್ತಿಕೊಂಡಿದೆ. ಈ ಜಗತ್ತಿನ ಪರಿಸ್ಥಿತಿ ಯಾವಾಗಲೂ ಹೀಗೆ ಇದ್ದಿದ್ದೇ. ಒಂದು ಕಡೆ ಮೃತ್ಯು ಕೇಕೆ ಹಾಕುತ್ತ ಕುಣಿಯುತ್ತಿದ್ದಾನೆ. ಅನೇಕಾನೇಕ ಕಡೆಗಳಲ್ಲಿ ಯುದ್ಧಗಳು ಇಂದೂ ನಡೆಯುತ್ತ ಇರುತ್ತವೆ. ಪತ್ರಿಕೆಗಳನ್ನು ಓದಿದರೆ, ಪ್ರತಿದಿನವೂ ತಲೆ ಸುತ್ತಿ ಬೀಳುವಂತಹ ಸುದ್ದಿಗಳೇ ಕಂಡುಬರುತ್ತವೆ. ಇವನು ಅವನನ್ನು ಕೊಂದ. ಅವನು ದರೋಡೆ ಮಾಡಿದ, ಈ ಅತ್ಯಾಚಾರ, ಯುದ್ಧ ಇತ್ಯಾದಿ. ಇವೆಲ್ಲವನ್ನು ತಿಳಿದಾಗ ಮತ್ತು ನೋಡುತ್ತಿರುವಾಗ, ಇವುಗಳಿಗೆಲ್ಲಾ ಯಾವಾಗ ಕೊನೆ ಎಂದೆನಿಸುತ್ತದೆ. ಮಾನವರೋ ದಾನವರೋ ಭೂಮಾತೆಯನು ತಣಿಸೆ: ಶೋಣಿತವನೆರೆಯವರು ಬಾಷ್ಪ ಸಲುವುದಿರೆ? ಈ ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ! ಸೌನಿಕನ ಕಟ್ಟೆಯೇಂ? – ಮಂಕುತಿಮ್ಮ ॥ (ಶೋಣಿತವನು+ಎರೆಯುವರು) (ಬಾಷ್ಪ+ಸಲುವುದು+ಇರೆ) ಇವರೇನು ಮನುಷ್ಯರೋ ಅಥವಾ ರಾಕ್ಷಸರೋ, ಈ ಭೂಮಾತೆಯನ್ನು ತೃಪ್ತಿಪಡಿಸಲು, ಕಣ್ಣೀರು (ಬಾಷ್ಪ) ಸುರಿಸುವುದರ ಬದಲು, ರಕ್ತವನ್ನು (ಶೋಣಿತ) ಸುರಿಯುತ್ತಿದ್ದಾರೆ. ಈ ಪ್ರಪಂಚದಲ್ಲಿರುವ ಹಗೆ ಮತ್ತು ಹೊಗೆಗಳನ್ನು ನೋಡಿದರೆ, ಇದು ಕಟುಕನ (ಸೌನಿಕ) ಜಗಲಿಯಂತೆ ಕಾಣುತ್ತಿದೆ. ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು? । ಧರಣಿಗನುದಿನದ ರಕ್ತಾಭಿಷೇಚನೆಯೇ? ॥ ಕರವಾಲವನು ಪುಷ್ಪಸರವೆಂದು ಸೆಳೆದಾಡೆ | ಪರಿಮಳವ ಸೂಸುವುದೆ? – ಮಂಕುತಿಮ್ಮ ॥ (ಪರಮ+ಸಿದ್ಧಿ+ಅದೇನು) (ಧರಣಿಗೆ+ಅನುದಿನದ) (ರಕ್ತ+ಅಭಿಷೇಚನೆ) ಎಲ್ಲರಿಗೂ ಸ್ವತಂತ್ರ ಬಂದುದರ ಪರಿಣಾಮವೇನಾಗಿದೆ? ಅವರುಗಳೆಲ್ಲ ಸಾಧಿಸಿದುದಾದರೂ ಏನು? ಇದರಿಂದ ಆದ ಪರಿಣಾಮ ಕೇವಲ ಯುದ್ಧ, ಕಲಹ ಮತ್ತು ಈ ಭೂಮಿತಾಯಿಗೆ ಪ್ರತಿ ನಿತ್ಯವೂ ರಕ್ತದಿಂದ ಸ್ನಾನ ಅಷ್ಟೆ ಬೀಸು ಕತ್ತಿಯನ್ನು (ಕರವಾಲ), ಹೂವಿನ ಮಾಲೆಯೆಂದುಕೊಂಡು ಎಳೆದಾಡಿದರೆ, ಆಗುವ ಪರಿಣಾಮ, ಕೈಯೆಲ್ಲಾ ರಕ್ತವಾಗುತ್ತದೆಯೇ ಹೊರತು, ಅದೇನು ಹೂವಿನ ಸುಗಂಧವನ್ನು ಹರಡುತ್ತದೇನು (ಸೂಸು)? ಪ್ರಪಂಚದಲ್ಲಿ ಈಗ ಆಗುತ್ತಿರುವುದನ್ನು, ಡಿ.ವಿ.ಜಿ.ಯವರು ಆಗಲೇ ಬಹಳ ಚೆನ್ನಾಗಿ ಬರೆದಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ರಾಜ್ಯದ 50% ಕ್ಕೂ ಹೆಚ್ಚು ಮಣ್ಣುಗಳಲ್ಲಿ ಸಾವಯವ ಇಂಗಾಲ ಕೊರತೆ: ವೈಜ್ಞಾನಿಕ ಮಣ್ಣು ಪರೀಕ್ಷೆ ರೈತರ ಮನೆಬಾಗಿಲಿಗೆ ಸರಳತೆಯ ‘ಸೈನ್ಯಾಧಿಪತಿ’ ಮನೋಹರ್ ಪರಿಕ್ಕರ್: ಕರ್ಮಯೋಗಿಯ ಸ್ಮರಣೆ