cbse new curriculum three language policy nesara newsಸಿಬಿಎಸ್‌ಇ

ನವದೆಹಲಿ, ಏಪ್ರಿಲ್‌ 3: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) ಹೊಸ ಶಾಲಾ ಪಠ್ಯಕ್ರಮವನ್ನು (New School Curriculum Released) ಪ್ರಕಟಿಸಿದೆ. 2026-27ರ ಶೈಕ್ಷಣಿಕ ಸಾಲಿನಿಂದ 6ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯುವುದು ಕಡ್ಡಾಯವಾಗಿದೆ. ಇದರಲ್ಲಿ ಎರಡು ಭಾಷೆಗಳು ಭಾರತೀಯ ಮೂಲಕದ್ದಾಗಿರಬೇಕು. (ಉದಾ: ಕನ್ನಡ, ಹಿಂದಿ, ಸಂಸ್ಕೃತ ಇತ್ಯಾದಿ) ಇದು ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡಲಿದೆ.

9ನೇ ತರಗತಿಯಿಂದಲೇ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸ್ಟ್ಯಾಂಡರ್ಡ್‌ ಮತ್ತು ಅಡ್ವಾನ್ಸ್ಡ್‌ ಎಂಬ ಎರಡು ಹಂತದ ಪಠ್ಯಕ್ರಮ ಮತ್ತು ಪರೀಕ್ಷೆ ಇರಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಎರಡು ಭಾರತೀಯ ಭಾಷೆಗಳನ್ನು ಕಲಿಯಬೇಕಾಗಿರುವುದರಿಂದ, 2031ರಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಮೂರನೇ ಭಾಷೆ ಕಡ್ಡಾಯವಾಗಿರಲಿದೆ.

ಸಿಬಿಎಸ್‌ಇಯ ಹೊಸ ಮೂರು ಭಾಷಾ ನೀತಿಯು R1, R2 ಮತ್ತು R3 ಎಂಬ ಮೂರು ಹಂತಗಳನ್ನು ಒಳಗೊಂಡಿದೆ. ಹೊಸ ವ್ಯವಸ್ಥೆಯಡಿ, ವಿದ್ಯಾರ್ಥಿಗಳು 10ನೇ ತರಗತಿ ತನಕ ಮೂರು ಭಾಷೆಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಆದರೆ ಅವುಗಳನ್ನು ವಿಭಿನ್ನ ಮಟ್ಟಗಳಲ್ಲಿ ಕಲಿಯುತ್ತಾರೆ. ಒಂದು ಭಾಷೆ R1 ಮಟ್ಟದಲ್ಲಿ, ಮತ್ತೊಂದು R2 ಮಟ್ಟದಲ್ಲಿ ಮತ್ತು ಇನ್ನೊಂದು R3 ಮಟ್ಟದಲ್ಲಿ ಕಲಿಯುತ್ತಾರೆ.

9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೂರನೇ ಭಾಷೆ (R3) ಇನ್ನೂ ಕಡ್ಡಾಯವಾಗಿಲ್ಲ. “ಈ ವರ್ಷದಿಂದ 6ನೇ ತರಗತಿಯಲ್ಲಿಓದುವ ಮಕ್ಕಳು R3 ಮಟ್ಟದ ಪಠ್ಯಪುಸ್ತಕಗಳನ್ನು ಓದುತ್ತಾರೆ. ಈ ವಿದ್ಯಾರ್ಥಿಗಳು 2031ರಲ್ಲಿ ಬೋರ್ಡ್ ಪರೀಕ್ಷೆ ಬರೆಯುವ ಹೊತ್ತಿಗೆ ತ್ರಿಭಾಷಾ  ನಿಯಮ ಸಂಪೂರ್ಣವಾಗಿ ಅನುಷ್ಠಾನಗೊಂಡಿರುತ್ತದೆ.

2026–27ರಲ್ಲಿ 9ನೇ ತರಗತಿಗೆ ಓದುವ ವಿದ್ಯಾರ್ಥಿಗಳಿಗೆ ಈ ಬದಲಾವಣೆ ಭಾಗಶಃ ಅನ್ವಯವಾಗುತ್ತದೆ. ಅವರು R1 ಮತ್ತು R2 ಮಟ್ಟದ ಭಾಷಾ ಪಠ್ಯಪುಸ್ತಕಗಳನ್ನು ತಕ್ಷಣದಿಂದಲೇ ಅಭ್ಯಾಸ ಮಾಡುತ್ತಾರೆ. 2028ರಲ್ಲಿ ಬೋರ್ಡ್ ಪರೀಕ್ಷೆ ಬರೆಯುವ ವೇಳೆಗೆ, ಎರಡು ಭಾಷೆಗಳು (R1 ಮತ್ತು R2 ಮಟ್ಟಗಳಲ್ಲಿ) ಕಡ್ಡಾಯವಾಗಿರುತ್ತವೆ.

2031ರಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ವಿದೇಶಿ ಭಾಷೆಯನ್ನು ಎರಡನೇ ಅಥವಾ ಮೂರನೇ ಭಾಷೆಯಾಗಿ ಆಯ್ಕೆಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇಂಗ್ಲಿಷ್ ಈಗ ವಿದೇಶಿ ಭಾಷೆಯಾಗಿ ಪರಿಗಣಿಸಲಾಗಿದೆ. ಮತ್ತು ಹೊಸ ಪಠ್ಯಕ್ರಮದಲ್ಲಿ ಒಂದೇ ಒಂದು ವಿದೇಶಿ ಭಾಷೆಗೆ ಮಾತ್ರ ಅವಕಾಶ ಇದೆ.

 ಕೃತಕ ಬುದ್ಧಿಮತ್ತೆ (AI) ಮತ್ತು ಗಣನಾತ್ಮಕ ಚಿಂತನೆ

ಈ ವರ್ಷದಿಂದಲೇ 3ರಿಂದ 8ನೇ ತರಗತಿವರೆಗೆ ಪರಿಚಯಿಸಲಾದ AI ಮತ್ತು ಗಣನಾತ್ಮಕ ಚಿಂತನೆ ವಿಷಯಗಳನ್ನು 2027–28ರಿಂದ 9ನೇ ತರಗತಿಗೂ ವಿಸ್ತರಿಸಲಾಗುತ್ತದೆ. 10ನೇ ತರಗತಿಗೆ ಅಗತ್ಯವಾದ ಪಠ್ಯಪುಸ್ತಕಗಳನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಿದ್ಧಪಡಿಸಲಾಗುತ್ತದೆ.

ವೃತ್ತಿಪರ, ಕಲಾ ಮತ್ತು ಆರೋಗ್ಯ ಶಿಕ್ಷಣ ಕಡ್ಡಾಯ

9 ಮತ್ತು 10ನೇ ತರಗತಿಗಳಲ್ಲಿ ವೃತ್ತಿಪರ ಶಿಕ್ಷಣವನ್ನು ಈಗ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಕಲಾ ಶಿಕ್ಷಣ, ಆರೋಗ್ಯ ಶಿಕ್ಷಣ ಮತ್ತು ದೈಹಿಕ ಕ್ಷೇಮವೂ ಕಡ್ಡಾಯವಾಗಲಿದೆ.

ಈ ವಿಷಯಗಳಿಗೆ ಸಿಬಿಎಸ್‌ಇ ಸಂರಚಿತ ಪಠ್ಯಪುಸ್ತಕಗಳನ್ನು ಪರಿಚಯಿಸುತ್ತಿದ್ದು, ಇವುಗಳನ್ನು ಕೇವಲ ಚಟುವಟಿಕೆ ಆಧಾರದ ಮೇಲೆ ಅಧಿಕೃತ ಕಲಿಕೆಯ ಭಾಗವಾಗಿ ಪರಿವರ್ತಿಸಲಾಗುತ್ತಿದೆ.  9 ಮತ್ತು 10ನೇ ತರಗತಿಗಳಲ್ಲಿ ಈ ವಿಷಯಗಳ ಮೌಲ್ಯಮಾಪನ ಶಾಲಾ ಹಂತದಲ್ಲೇ ನಡೆಯಲಿದೆ ಎಂದು ಸಿಬಿಎಸ್‌ಇ ತಿಳಿಸಿದೆ.

ಈ ಎಲ್ಲಾ ಬದಲಾವಣೆಗಳು ಒಮ್ಮಿಲೇ ಜಾರಿಗೆ ಬರುವುದಿಲ್ಲ. ಮುಂದಿನ ಕೆಲವು ಬ್ಯಾಚ್‌ಗಳ ವಿದ್ಯಾರ್ಥಿಗಳು ಹಳೆಯ ಮತ್ತು ಹೊಸ ಪಠ್ಯಕ್ರಮವನ್ನು ಕಲಿಯುತ್ತಾರೆ. 2031ರ ವೇಳೆಗೆ R1-R2-R3 ಭಾಷಾ ವ್ಯವಸ್ಥೆಯನ್ನು ಒಳಗೊಂಡ ಸಂಪೂರ್ಣ ಹೊಸ ಪಠ್ಯಕ್ರಮ ಜಾರಿಗೆ ಬರುವ ನಿರೀಕ್ಷೆಯಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *