Bhajagovindam Shloka 1st Shloka Meaning in Kannadaಭಗವತ್ಪಾದ ಶ್ರೀ ಶಂಕರಾಚಾರ್ಯರು

ಭಗವತ್ಪಾದ ಶ್ರೀ ಶಂಕರಾಚಾರ್ಯರು ರಚಿಸಿದ ಭಜಗೋವಿಂದಂ ಶ್ಲೋಕದ ಪ್ರತಿನಿತ್ಯ ಓದುವುದರಿಂದ ಸಂಸಾರದ ಜಂಜಾಟದಿಂದ ಪಾರಾಗುತ್ತೇವೆ. ಭಜಗೋವಿಂದಂ ಅರ್ಥ ಕನ್ನಡದಲ್ಲಿದೆ.  

ಶಂಕರಾಚಾರ್ಯರು ಪ್ರಸ್ಥಾನತ್ರಯಕ್ಕೆ ಭಾಷ್ಯ ರಚಿಸಿ, ವ್ಯಾಸರ ಅನುಜ್ಞೆಯಂತೆ ಭಾರತದ ಪರ್ಯಟನೆ ಮಾಡುತ್ತಾ, ಜನರಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಬಿತ್ತುತ್ತಾ ಕಾಶೀ ಕ್ಷೇತ್ರಕ್ಕೆ ಬಂದಿದ್ದಾರೆ.

ಪಾವನಗಂಗೆಯಲ್ಲಿ ಮಿಂದು ತಮ್ಮ ಶಿಷ್ಯರೊಡನೆ ಸಂಚರಿಸುತ್ತಿದ್ದಾಗ ಮಾರ್ಗದಲ್ಲಿ ಒಬ್ಬ ವಯೋವೃದ್ಧ ಮುದುಕ ಪಾಣಿನಿಯ ಸೂತ್ರವೊಂದನ್ನು(ಡುಕೃಂಕರಣೇ ) ಪುನಃ ಪುನಃ ಬಾಯಿಪಾಠ ಮಾಡುತ್ತಿದ್ದುದು ಕಾಣುತ್ತಾರೆ. ಹಣ್ಣು ಮುದುಕನಾದರೂ, ಮೃತ್ಯು ಸಮೀಪಿಸುತ್ತಿದ್ದರೂ ಮಾನವ ಜೀವನದ ಉದ್ದೇಶವನ್ನರಿಯದೇ ಜೀವಿಸುತ್ತಿರುವ ವ್ಯಕ್ತಿಯ ಚರ್ಯೆಯನ್ನು ಕಂಡು ಆಶ್ಚರ್ಯಚಕಿತರಾಗಿ, ಅವನಿಗೆ ಸರಿಯಾದ ಮಾರ್ಗದರ್ಶನ ಮಾಡಲು ಕರುಣೆಯಿಂದ ಹೊರಬ೦ದ ಪ್ರೇರಣಾಸಾಹಿತ್ಯವೇ ಭಜಗೋವಿಂದಮ್. ಆ ವೃದ್ಧನನ್ನು ನೆಪಮಾಡಿಕೊಂಡು ನಮ್ಮೆಲ್ಲರನ್ನೂ ಉದ್ದೇಶಿಸಿ, ಉಪದೇಶಿಸಿರುವ ಭಜಗೋವಿಂದಮ್ ಗ್ರಂಥದ ಒಂದೊಂದೇ ಶ್ಲೋಕವನ್ನು ಅಧ್ಯಯನ ಮಾಡೋಣ.

ಭಜ ಗೋವಿಂದಮ್ ಭಜ ಗೋವಿಂದಮ್

ಗೋವಿಂದ ಭಜ ಮೂಢಮತೇ |

ಸಂಪ್ರಾಪ್ತೇ ಸನ್ನಿಹಿತೇ ಕಾಲೇ

ನಹಿ ನಹಿ ರಕ್ಷತಿ ಡುಕೃಂಕರಣೇ

ಹೇ ಮೂಢಮತೇ – ಎಲೈ ಮೂರ್ಖನೇ! ಶಂಕರಾಚಾರ್ಯರು ನಮ್ಮೆಲ್ಲರನ್ನೂ ಮೂರ್ಖ ಎಂದು ಕಠೋರವಾಗಿ ಸಂಬೋಧಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಏಳಬಹುದು. ಮನೆಗೆ ಬೆಂಕಿ ಹತ್ತಿ ನಮ್ಮೆಲ್ಲರ ಪ್ರಾಣ ಅಪಾಯದಲ್ಲಿರುವಾಗ, ಮಲಗಿರುವ ನಮ್ಮನ್ನು ಪಾರುಮಾಡಬೇಕೆಂದಿರುವ ವ್ಯಕ್ತಿ ಶಿಷ್ಟಾಚಾರದಿಂದ ಏಳಿಸುವುದು ಅಗತ್ಯವೇ!!? ಹಾಗೇ, ಸಂಬೋಧಿಸಿ ನಾವೆಲ್ಲರೂ ಮೋಹವೆಂಬ ಮದಿರೆಯನ್ನು ಕುಡಿದು ಈ ಜೀವನದ ಪ್ರಯಾಣದಲ್ಲಿ ಗಂತವ್ಯವನ್ನು ಮರೆತು ದಾರಿತಪ್ಪಿ ಅಪಘಾತ ಸಂಭವಿಸಬಹುದಾದ ವೇಳೆಯಲ್ಲಿ ತುರ್ತಾಗಿ ನಮ್ಮನ್ನು ಎಚ್ಚರಿಸಲು ಚಾಟಿಯ ಏಟಿನಂತೆ ‘ಹೇ ಮೂಢಮತೇ’ ಎಂದು ಸಂಬೋಧಿಸಿ, ನಮ್ಮ ಗಮನವನ್ನುಉಪದೇಶದೆಡೆಗೆ ಸೆಳೆಯುತ್ತಿರುವುದು ಆಚಾರ್ಯರ ಚಾತುರ್ಯವೇ ಸರಿ.

ಸಂಪ್ರಾಪ್ತೇ ಸನ್ನಿಹಿತೇ ಕಾಲೇ  – ಮರಣಕಾಲ ಸಮೀಪಿಸಿದಾಗ. ಇಲ್ಲಿ ‘ಕಾಲೇ’ ಎಂಬ ಪದವು ಕಾಲದೇವತೆಯಾದ ಯಮನನ್ನು ಅಥವಾ ಮೃತ್ಯುವನ್ನು ಸೂಚಿಸುತ್ತದೆ. ಮರಣಸಮಯ ಯಾವಾಗ ಬರುತ್ತದೆ? ಸಾಧಾರಣವಾಗಿ ವಯಸ್ಸಾದ ನಂತರ ಎಂದು ಭಾವಿಸುತ್ತೇವೆ. ಆದರೆ ಈ ಅನಿಶ್ಚಿತ ಜೀವನದಲ್ಲಿ ಯಾವ ಕ್ಷಣದಲ್ಲಾದರೂ ಮೃತ್ಯು ಸಮೀಪಿಸಬಹುದು ಎಂಬುದು ನಮ್ಮ ಸುತ್ತ ನಡೆಯುತ್ತಿರುವ ವಿದ್ಯಮಾನದಿಂದಲೇ ತಿಳಿಯುತ್ತದೆ. ಆದ್ದರಿಂದ ಈ ಗ್ರಂಥದ ಉಪದೇಶವು ವಯಸ್ಸಾಗಿ ಹಾಸಿಗೆ ಹಿಡಿದವರಿಗಷ್ಟೇ ಅಲ್ಲದೆ, ಸಮಸ್ತ ಮಾನವಜನಾಂಗಕ್ಕೆ ಎಚ್ಚರಿಕೆಯ ಗಂಟೆಯಂತಿದೆ.

ನಹಿ ನಹಿ ರಕ್ಷತಿ ಡುಕೃಂಕರಣೇ – ಕೊನೇಕ್ಷಣದಲ್ಲಿ ಈ ವ್ಯಾಕರಣಾದಿ ವಿಷಯಗಳು ನಮ್ಮನ್ನು ಕಾಪಾಡುವುದಿಲ್ಲ. ಈ ವಾಕ್ಯವನ್ನು ಅರ್ಥಮಾಡಿ- ಕೊಳ್ಳುವುದಕ್ಕಿಂತ ಅಪಾರ್ಥಮಾಡಿಕೊಳ್ಳುವವರೇ ಹೆಚ್ಚು. ಸಂಸ್ಕೃತ ಕಲಿಯಲು ನಮ್ಮಲ್ಲಿರದ ಆಸಕ್ತಿ, ಶ್ರದ್ಧೆ ಮತ್ತು ನಿಷ್ಠೆಗೆ ಆಚಾರ್ಯರ ಒಪ್ಪಿಗೆಯೂ ಸಿಕ್ಕಿತಲ್ಲ ಎಂದು  ಆಚಾರ್ಯರೇ ಮಹಾಸಂಸ್ಕೃತಜ್ಞರೂ, ವ್ಯಾಕರಣಜ್ಞರೂ ಆಗಿದ್ದಾಗ ವ್ಯಾಕರಣವನ್ನು ದೂಷಿಸುವರೇ? ಯಾವುದೇ ಅಧ್ಯಯನವೂ ಅದರ ಉದ್ದೇಶವನ್ನರಿಯದೇ ಮಾಡಬಾರ- ದೆನ್ನುವುದನ್ನು ಇಲ್ಲಿ ಸೂಚಿಸಿದೆ.

ಹಾಗಾದರೆ ವ್ಯಾಕರಣಾದಿ ವಿಷಯಗಳ ಅಧ್ಯಯನದ ಉದ್ದೇಶವೇನು? ಸಂಸ್ಕೃತ ವ್ಯಾಕರಣದ ಅಧ್ಯಯನದ ಮೂಲಕ ಸರಿಯಾಗಿ ಶಾಸ್ತ್ರ ಶ್ರವಣ, ಮನನ, ನಿದಿಧ್ಯಾಸನ ಮತ್ತು ತನ್ಮೂಲಕ ಆತ್ಮಜ್ಞಾನರೂಪ ಮೋಕ್ಷಪ್ರಾಪ್ತಿ. ಇಲ್ಲಿ ವ್ಯಾಕರಣ ಎಂಬುದು ಉಪಲಕ್ಷಣವಷ್ಟೇ; ಇದರಲ್ಲಿ ಸಮಸ್ತ ಲೌಕಿಕಜ್ಞಾನವನ್ನೂ ಸೇರಿಸಿಕೊಳ್ಳಬೇಕು.

ಈ ವಿಚಾರವನ್ನು ಮನದಟ್ಟುಮಾಡುವ ಕಥೆಯನ್ನು, ಭಜ ಎಂಬುದರ ಅರ್ಥವನ್ನು, ಗೋವಿಂದ ಎಂಬುದಕ್ಕೆ ವಿವಿಧ ನಿರ್ದೇಶನಗಳು ಮತ್ತು ಹಲವು ವಿಷಯಗಳನ್ನು ನಾಳಿನ ಅಂಕಣದಲ್ಲಿ ನೋಡೋಣ

ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *