ಭಜ ಗೋವಿಂದಂ ಎಂಬ ಮಹಾನ್ ಕೃತಿ ಆದಿ ಶಂಕರಾಚಾರ್ಯರು (Adi Shankracharya) ರಚಿಸಿದ್ದು, ಮಾನವನ ಜೀವನದ ನಿಜವಾದ ಅರ್ಥವನ್ನು ತಿಳಿಸುವ ಆಧ್ಯಾತ್ಮಿಕ ಸಂದೇಶಗಳನ್ನು ಹೊಂದಿದೆ. ಈ ಕೃತಿಯ ಸಾರವನ್ನು ವಿವರಿಸಲು ನಾರದ ಮತ್ತು ಸನತ್ಕುಮಾರರ ಕಥೆ ಬಹಳ ಪ್ರಸಿದ್ಧವಾಗಿದೆ. ಸಕಲವಿದ್ಯಾಪಾರಂಗತರಾದರೂ ನಾರದರು ಮಾನಸಿಕ ಖಿನ್ನತೆಯಿಂದ ಸನತ್ಕುಮಾರರ ಬಳಿ ಹೋಗಿ, ತಮಗೆ ಉಪದೇಶಿಸಿ ಎಂದರು. ಆಗ, ಸನತ್ಕುಮಾರರು, ‘ನಿನಗೀಗ ಏನೇನು ತಿಳಿದಿದೆಯೋ ಅದನ್ನು ತಿಳಿಸು’ ಎನ್ನುತ್ತಾರೆ. ಆಗ ನಾರದರು ತಮಗೆ ತಿಳಿದಿರುವ ವಿಷಯಗಳ ಪಟ್ಟಿಯನ್ನು ಹೇಳುತ್ತಾರೆ. ಅದರಲ್ಲಿ ಚತುರ್ವೇದಗಳು, ವೇದಾಂಗಗಳು, ಪುರಾಣ, ಇತಿಹಾಸಗಳು, ನೀತಿಶಾಸ್ತ್ರ, ಧರ್ಮಶಾಸ್ತ್ರ, ತರ್ಕಶಾಸ್ತ್ರ, ಕಲೆ, ಕಾತ್ರವಿದ್ಯೆ. ಭೂತವಿದ್ಯೆ, ಸರ್ಪವಿದ್ಯೆ ಎಲ್ಲವನ್ನೂ ಹೇಳುತ್ತಾರೆ. ಸನತ್ಕುಮಾರರು ತಾಳ್ಮೆಯಿಂದ ಆಲಿಸಿ, ‘ಇವೆಲ್ಲವೂ ಅಪರಾವಿದ್ಯೆ. ಇದರಿಂದ ಪರಿಪೂರ್ಣತೆ ದೊರೆಯಲಸಾಧ್ಯ. ಆತ್ಮವಿದ್ಯೆ, ಬ್ರಹ್ಮವಿದ್ಯೆ ಅಥವಾ ಪರಾವಿದ್ಯೆಯಿಂದ ಮಾತ್ರ ಅತ್ಯುನ್ನತವಾದ ಮೊಕ್ಷರೂಪವಾದ ಪರಿಪೂರ್ಣತೆ ಸಾಧ್ಯವಾಗುತ್ತದೆ’ ಎನ್ನುತ್ತಾರೆ. ನಂತರ ಆತ್ಮಜ್ಞಾನದ ಉಪದೇಶವನ್ನು ಪಡೆದು ನಾರದರು ಸ೦ಸಾರಸಾಗರದಿಂದ ಮುಕ್ತರಾಗಿ ಪರಿಪೂರ್ಣತೆಯನ್ನು ಹೊಂದುತ್ತಾರೆ (ತರತಿ ಶೋಕಮ್ ಆತ್ಮವಿತ್). ಪ್ರಸ್ತುತದಲ್ಲೂ ಕೂಡ ಆಚಾರ್ಯರು ಸಮಸ್ತಲೌಕಿಕಜ್ಞಾನದ (ಆಪರಾವಿದ್ಯೆ ) ಪರಿಮಿತಿಯನ್ನು ತಿಳಿಸುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಲೌಕಿಕಜ್ಞಾನವು ಉಪಯೋಗಕ್ಕಿಲ್ಲವೆಂದಲ್ಲ. ಅದನ್ನು ಸಾಧನವಾಗಿ ಬಳಸಿಕೊಂಡು ಸಾಧ್ಯವಾದ ಮೋಕ್ಷದೆಡೆಗೆ ನಡೆಯಬೇಕೆಂಬುದೇ ಲಕ್ಷ್ಯಾರ್ಥ, ಮರಣಕಾಲದ ಯೋಚನೆ ಜೀವಿಯ ಮುಂದಿನ ಗತಿಯನ್ನು ಸೂಚಿಸುತ್ತದೆ ಎಂಬುದನ್ನು ಕೃಷ್ಣ ಗೀತೆಯಲ್ಲಿ ತಿಳಿಸಿದ್ದಾನೆ. ಯಂ ಯಂ ವಾಪಿ ಸ್ಮರಮ್ಭಾವಂ ತ್ಯಜತ್ಯಂತೇ ಕಲೇವರಮ್ | ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ | ಅಂತಕಾಲೇ ಚ ಮಾಮೇವ ಸ್ಮರನ್ನುಕ್ಕಾ ಕಲೇವರಮ್ | ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಲ್ವತ್ರ ಸಂಶಯಃ । ಮರಣಸಮಯದಲ್ಲಿ ವ್ಯಕ್ತಿಯು ಯಾವ ಚಿಂತನೆಯಲ್ಲಿರುತ್ತಾನೋ, ಅವನು ಸ್ಥಿತಿಯನ್ನೇ ಪಡೆಯುತ್ತಾನೆ. ಹಾಗಾದರೆ ಕೊನೆಯ ಸಂದರ್ಭದಲ್ಲಿ ಯಾವ ಚಿಂತನೆ ಮಾಡಬೇಕು? ಜೀವಿಯ ಸದ್ಗತಿಗೆ ಮರಣಸಂದರ್ಭದಲ್ಲಿ ಭಗವಂತನ ಸ್ಮರಣೆಯೇ ಮಾರ್ಗವೆಂದು, ಅಂತ್ಯಕಾಲದಲ್ಲಿ ಭಗವಂತನ ಚಿಂತನೆ ಬರಬೇಕಾದರೆ ಬದುಕಿರುವ ಅನುಕ್ಷಣವೂ ಅದೇ ಭಾವದಲ್ಲಿರಬೇಕೆನ್ನುವುದನ್ನೂ (ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಥರ ) ಕೃಷ್ಣನೇ ತಿಳಿಸಿದ್ದಾನೆ. ಈ ವಿಷಯವನ್ನೇ ಪ್ರಸ್ತಾಪಿಸುತ್ತಾ, ಬದುಕಿನ ಪ್ರತೀಕ್ಷಣ ಮತ್ತು ಕೊನೆಯ ಕ್ಷಣ ನಾವು ಮಾಡಬೇಕಾದದ್ದು ಭಜಗೋವಿಂದಮ್ ಎಂದು ತಿಳಿಹೇಳುತ್ತಿದ್ದಾರೆ. ಭಜ ಎಂದರೆ ಸೇವಿಸುವುದು, ಪೂಜಿಸುವುದು ಅಥವಾ ಕಂಡುಕೊಳ್ಳುವುದು ಎಂದು ಅರ್ಥೈಸಬಹುದು. ಗೋವಿಂದ ಎಂಬ ಪದಕ್ಕೆ ಹಲವಾರು ಅರ್ಥಗಳಿವೆ. ಗಾಂ ವಿಂದತಿ ಪಾಲಯತಿ ವಿಕೋಪದಿಂದ ಇಂದ್ರನ ಗೋಕುಲದ ನಿವಾಸಿಗಳನ್ನು ಗೋರಕ್ಷಕನಾಗಿ ರಕ್ಷಿಸಿ, ಪಾಲಿಸಿದ ಗೋವರ್ಧನೋದ್ಧಾರಕ ಕೃಷ್ಣ. ಗಾಂ ಪೃಥಿವೀಂ ಬಾಲಯತಿ – ಭೂಭಾರಹರಣ – ಮಾಡಿ ಪೃಥ್ವಿಯನ್ನು ರಕ್ಷಿಸಲು ಭಗವಂತನೆತ್ತಿದ ಸರ್ವ ಅವತಾರಗಳು. ಗಃ ಇಂದ್ರಿಯಾಣಿ ಬಾಲಯತಿ – ಸಮಸ್ತ ಇಂದ್ರಿಯಗಳನ್ನೂ, ಮನಸ್ಸನ್ನೂ ಸಚೇತನಗೊಳಿಸುವ ಆತ್ಮ. ಗೋಭಿಃ ವೇದಾಂತವಾಕ್ಯ: ವಿಂದ್ಯತೆ ಉಪನಿಷತ್ ಪ್ರಮಾಣಮಾತ್ರದಿಂದ ತಿಳಿಯಲ್ಪಡುವ ಪರಬ್ರಹ್ಮ. ಭಜಗೋವಿಂದಂ ಪದದ ಅರ್ಥ ‘ಕೃಷ್ಣನನ್ನು ಭಜಿಸು’ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ ಹಾಗೂ ಆದರಿಂದ ಚಿತ್ತಶುದ್ಧಿಯೂ ಆಗುತ್ತದೆ. ಆದರೆ ಶಂಕರಾಚಾರ್ಯರು ಭಜಗೋವಿಂದಮ್ ಎಂದಾಗ ಆತ್ಮ- ಜ್ಞಾನದ ಮೂಲಕ ಪರಬ್ರಹ್ಮನನ್ನು ಹೃದಯದಲ್ಲಿ ಸಾಕ್ಷಾತ್ಕರಿಸುವುದು ಎಂಬ ಗೂಢಾರ್ಥವನ್ನು ಹುದುಗಿಸಿದ್ದಾರೆ. ಶಂಕರರು ತಮ್ಮ ಇಷ್ಟದೇವತೆ (ಕುಲದೇವತೆ)ಯಾದ ಕೃಷ್ಣನಿಗೆ, ಗುರುಗಳಾದ ಗೋವಿಂದ ಭಗವತ್ಪಾದರಿಗೆ ಮತ್ತು ಹೃದಯಾಂತರ್ಗತವಾದ ಬ್ರಹ್ಮಚೈತನ್ಯಕ್ಕೆ ತಮ್ಮ ನಮನಗಳನ್ನು ಸಲ್ಲಿಸಲು ಮೂರು ಬಾರಿ ಭಜಗೋವಿಂದಂ ಬಳಸಿದ್ದಾರೆ ಎನ್ನಬಹುದು. ಲೌಕಿಕಜ್ಞಾನದ ಬಗ್ಗೆ ನಮ್ಮಲ್ಲಿರುವ ಸಾಧ್ಯಸಾಧಕದ ಅವಿವೇಕದ ಮೋಹವನ್ನು ಹೋಗಲಾಡಿಸಿ, ಅಪರಾವಿದ್ಯೆಯನ್ನು ಪರಾವಿದ್ಯೆಗೆ ಪೂರಕವಾಗುವಂತೆ ಬಳಸಿಕೊಂಡು ‘ಮೋಹದಿಂದ ಮೋಕ್ಷದೆಡೆಗೆ ಸಾಗುವುದು. ಲೇಖಕರು: ಶ್ರೀ. ಪ್ರಮೋದ್ ನಟರಾಜ್, pramodhnlp@gmail.com ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಜಗೋವಿಂದಂ ಶ್ಲೋಕ – 1: ಭಜ ಮೂಢಮತೇ, ಸಂಪ್ರಾಪ್ತೇ ಸನ್ನಿಹಿತೇ ಕಾಲೇ, ನಹಿ ನಹಿ ರಕ್ಷತಿ ಡುಕೃಂಕರಣೇ ಅರ್ಥ ಭಜಗೋವಿಂದಂ ಶ್ಲೋಕ 2: ಹಣದ ಮೇಲಿನ ಮೋಹ ತೊರೆಯುವ ಸರಳ ಮಾರ್ಗ