ಸಾಮಾನ್ಯವಾಗಿ ಎಲ್ಲರೂ ಜೀವಿತದ ಒಂದಲ್ಲ ಒಂದು ವಯಸ್ಸಿನಲ್ಲಿ ಒಂದು ಬಾರಿ ಅಥವಾ ಹಲವು ಬಾರಿ ರಕ್ತ ಕುರುಗಳಿಗೆ ಈಡಾಗುತ್ತಾರೆ. ಹಲವರಲ್ಲಂತೂ ಇದು ಯಾವ ಚಿಕಿತ್ಸೆಗೂ ಜಗ್ಗದೆ ಅನೇಕ ವರ್ಷಗಳವರೆಗೂ ಕಾಡಿಸುವುದೂ ಉಂಟು! ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಇದಕ್ಕೆ ‘ಪ್ರಶೋಥ’ (ಹುಣ್ಣು-ಊತ) ಎಂದು ನಾಮಕರಣ ಮಾಡಲಾಗಿದ್ದು ಇದನ್ನು ಕ್ರಮವಾಗಿ ಅಪಕ್ವ ಅಥವಾ ಆಮ ಅಂದರೆ ಹಸಿಯಾಗಿರುವ, ಪಚ್ಯಮಾನ ಅಂದರೆ ದೋರೆಹಣ್ಣಿನಂಥ ಮಧ್ಯಮಾವಸ್ಥೆಯ ಹಾಗೂ ಕೊನೆಯದಾಗಿ ಪಕ್ವಾವಸ್ಥೆ, ಅಂದರೆ ಪೂರ್ತಿ ಹಣ್ಣಾದ ಹಂತ ಎಂಬುದಾಗಿ ಮೂರು ರೀತಿಯಲ್ಲಿ ಗುರುತಿಸಿದೆ. ಉಪದ್ರವಗಳಿಲ್ಲದ ಸಾಧಾರಣವಾದ ಕುರುಗಳಿಗೆ ಈ ಕೆಳಗಿನ ಮನೆ ಮದ್ದುಗಳನ್ನು ಮಾಡಿ ಲಾಭ ಪಡೆಯಬಹುದು. ಹರಳು ಬೀಜದ (ಔಡಲ ಬೀಜ) ಪಪ್ಪನ್ನು (ಬೇಳೆ) ಬೆಲ್ಲದೊಡನೆ ಅರೆದು ಕುರುವಿನ ಮೇಲೆ ಲೇಪಿಸಿದರೆ ಕುರುಶಮನವಾಗುತ್ತದೆ. ಬಲಿತ ಬಿಲ್ವದ ಬೇರನ್ನು ನಿಂಬೆರಸದಲ್ಲಿ ತೇಯ್ದು ಲೇಪಿಸುವುದರಿಂದ ಕುರುವು ಬೇಗ ಹಣ್ಣಾಗುತ್ತದೆ. ಮನೆಯಲ್ಲಿರುವ ಶಂಖವನ್ನು ನಿಂಬೆರಸದಲ್ಲಿ ತೇಯ್ದು ಹಚ್ಚಬಹುದು. ಬೆಳ್ಳುಳ್ಳಿಯನ್ನು ಸುಟ್ಟು ಅದಕ್ಕೆ ಅರಿಸಿನ ಸೇರಿಸಿ ಬೆಣ್ಣೆಯಲ್ಲಿ ಕಲಸಿ ಹಚ್ಚಬಹುದು. ರಾಗಿಹಿಟ್ಟು ಹಾಗೂ ಅರಿಸಿನವನ್ನು ಕುದಿಯುವ ನೀರಿಗೆ ಹಾಕಿ ಅದನ್ನು ತಿರುವಿ ಗಟ್ಟಿಮಾಡಿ ಅದು ಸಹಿಸುವಷ್ಟು ಬಿಸಿಯಾಗಿರುವಾಗಲೇ ಬಟ್ಟೆಯ ಮೇಲೆ ಹರಡಿ ಅದನ್ನು ಕುರುವಿಗೆ ಕಟ್ಟಬಹುದು. ಇದೇ ರೀತಿ* ಮೆಂತ್ಯದ ಹಿಟ್ಟು ಮತ್ತು ಅರಿಸಿನ ಪುಡಿಯನ್ನು ಸಹ ಬಿಸಿಮಾಡಿ ಕಟ್ಟಬಹುದು. ಸೀತಾಫಲದ ಹಣ್ಣನ್ನು ಚೆನ್ನಾಗಿ ಹಿಸುಕಿ ಗಟ್ಟಿಯಾದ ಗೊಜ್ಜಿನಂತೆ ಮಾಡಿ ಕುರುಗಳ ಮೇಲೆ ಕಟ್ಟಿದರೆ ಬೇಗ ಮಾಯುತ್ತದೆ. ಆಗ ತಾನೆ ಏಳುತ್ತಿರುವ ಕುರುವಿಗೆ ಭತ್ತದ ಅರಳು ಹಿಟ್ಟನ್ನು ತುಪ್ಪದಲ್ಲಿ ಕಲಸಿ ಸ್ವಲ್ಪ ಬೆಚ್ಚಗೆ ಮಾಡಿ ಕಟ್ಟುವುದರಿಂದ ಅದು ಬೇಗ ಪಕ್ವವಾಗುತ್ತದೆ. ಆರಿಸಿನದ ಕೊಂಬನ್ನು ಸುಟ್ಟು ಕರಕಲು ಮಾಡಿ ಅದನ್ನು ತಾಂಬೂಲದ ಸುಣ್ಣದ ಜೊತೆಯಲ್ಲಿ ಅರೆದು ಕುರುವಿನ ಮೇಲೆ ಕಟ್ಟುವುದರಿಂದ ಬೇಗ ಪಕ್ವವಾಗುತ್ತದೆ. ಗೋಧಿಹಿಟ್ಟು ಹಾಗೂ ಅಕ್ಕಿಹಿಟ್ಟನ್ನು ಕುದಿಯವ ನೀರಿಗೆ ಹಾಕಿ ಚೆನ್ನಾಗಿ ತಿರುವಿ ಸ್ವಲ್ಪ ಬಿಸಿ ಇರುವಾಗಲೇ ಅದರ ಮುದ್ದೆಯನ್ನು ಬಟ್ಟೆಯ ಮೇಲೆ ಹಾಕಿ ಕುರುವಿಗೆ ಕಟ್ಟುವುದರಿಂದ ಬೇಗ ಪಕ್ವ ಆಗುತ್ತದೆ ಹಾಗೂ ಒಡೆಯುತ್ತದೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Ayurveda Health Tips: ಸೊಂಟದ ಬೊಜ್ಜು ಕರಗಿಸಿಕೊಳ್ಳಲು ಮನೆಮದ್ದು ಮತ್ತು ವ್ಯಾಯಾಮ Doctor Interview: ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಂಡರೆ ಗರ್ಭಕೋಶ ಕ್ಯಾನ್ಸರ್ ಬರುತ್ತಾ? ಗುಣಮುಕವಾಗಲು ಈ ನಿಯಮ ಪಾಲನೆ ಕಡ್ಡಾಯ