Ane Banthondu Ane Yavura Ane? Do you know about the incident behind the song? How the song was born?ಸಾಂದರ್ಭಿಕ ಚಿತ್ರ

ಆನೆ ಬಂತೊಂದಾನೆ…ಯಾವೂರ ಆನೆ..?

ಬಿಜಾಪುರ ಆನೆ…ಇಲ್ಲಿಗ್ಯಾಕ ಬಂತು..?

ಹಾದಿ ತಪ್ಪಿ ಬತ್ತು…ಹಾದಿಗೊಂದು ದುಡ್ಡು…

ಬೀದಿಗೊಂದು ದುಡ್ಡು…

ಹೀಗೆ ಸಾಗುವ ಈ ಹಾಡು ʼಶಿಶುಗೀತೆ’ಅಲ್ಲ ಅನ್ನೋದು  ಬಹುತೇಕ ಜನಕ್ಕೆ ಗೊತ್ತಿಲ್ಲ. ಅಳುತ್ತಿರುವ ಮಕ್ಕಳನ್ನು ಸಮಾಧಾನ ಪಡಿಸಲು ಶತಮಾನಗಳಿಂದ ನಮ್ಮ ಹಿರಿಯರು ಹಾಡುತ್ತಾ ಬಂದಿದ್ದಾರೆ. ನಾವು ಕೂಡ ನಮ್ಮ ಮಕ್ಕಳನ್ನು ಮೊಳಕಾಲ ಮೇಲೆ ಕೂಡಿಸಿಕೊಂಡು ಈ ಗೀತೆಯನ್ನ ಹಾಡುತ್ತೇವೆ. ಆದರೆ, ಈ ಹಾಡು ವಿಜಯನಗರ ಸಮ್ರಾಜ್ಯದ ಅವನತಿಯ ಸತ್ಯ ಇತಿಹಾಸವನ್ನು ಹೇಳುವ ಗೀತೆ. ಮೊಘಲರು ಹೇಗೆ ಭಾರತವನ್ನು ದೋಚಿದರು ಅಂತ ಹೇಳುವ ಗೀತೆ. ಹಿಂದೂ ಸಮಾಜವನ್ನು ಹೇಗೆ ಗಾಢವಾದ ಕತ್ತಲೆಗೆ ನೂಕಿದರು ಅಂತ ಹೇಳುವ ಗೀತೆಯಾಗಿದೆ.

ಈ ಹಾಡನ್ನು ಹಾಡಿದವರಿಗೆ ಹಾಗೂ ಕೇಳಿದವರಿಗೆ ಥಟ್ ಅಂತ ಮೂಡುವ ಪ್ರಶ್ನೆಯೆಂದರೆ ʼಬಿಜಾಪುರದಲ್ಲಿ ಆನೆಗಳಿದ್ದವಾ..? ಅನ್ನೋದು. ಹೌದು, ಈ ಗೀತೆಯಲ್ಲಿ ʼಬಿಜಾಪುರದ ಆನೆ’ ಅಂತಲೇ ಯಾಕೆ ಬಳಸಲಾಯ್ತ ಅನ್ನೋದು ಈವರೆಗೆ ಹಲವರಿಗೆ ಪ್ರಶ್ನೆಯಾಗಿಯೇ ಉಳಿದಿದೆ. ಅಷ್ಟೆಅಲ್ಲ, ಈ ಹಾಡು ಜಾನಪದವಾ..? ಅಥವಾ ಕಾಲ್ಪನಿಕ ಗೀತೆಯಾ..? ಹೀಗೆ ಹಲವಾರು ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಲೇ ಇವೆ.

ಈ ಹಾಡಿಗೆ ಸುಮಾರು 450 ವರ್ಷಗಳ ಇತಿಹಾಸವಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. 16ನೇ ಶತಮಾನದಲ್ಲಿ ಬಿಜಾಪುರ, ಬೀದರ ಮತ್ತು ಗೋಲ್ಕೊಂಡದಲ್ಲಿ ಬಹುಮನಿ ಸುಲ್ತಾನರ ಆಡಳಿತವಿತ್ತು. ಆ ವೇಳೆ ವಿಜಯನಗರ ಸಾಮ್ರಾಜ್ಯವೂ ವೈಭವದಿಂದ ಮೇರೆಯುತ್ತಿತ್ತು. ಶ್ರೀಕೃಷ್ಣದೇವರಾಯರ ಕಾಲದಲ್ಲಿ ವಿಜಯನಗರ ಸಮ್ರಾಜ್ಯ ಭಾರತದಲ್ಲಿಯೇ ಅತ್ಯಂತ ಸಂಪತ್ಭರಿತ ರಾಜ್ಯವಾಗಿತ್ತು. ಕೃಷ್ಣದೇವರಾಯರ ಕಾಲಾನಂತರ ಅಧಿಕಾರಕ್ಕೆ ಬಂದ ರಾಮರಾಯರ ಆಡಳಿತದಲ್ಲೂ ವಿಜಯನಗರ ಸಾಮ್ರಾಜ್ಯ ತನ್ನ ವೈಭವವನ್ನು ಮುಂದುವರೆಸಿಕೊಂಡು ಹೋಗುತ್ತಿತ್ತು.

ಹೀಗಿರುವಾಗ ಬಿಜಾಪುರದ ಸುಲ್ತಾನರು ಸೇರಿದಂತೆ ಬೀದರ್ ಹಾಗೂ ಗೋಲ್ಕೊಂಡಗಳ ಬಹುಮನಿ ಸುಲ್ತಾನರ ಕಣ್ಣು ವಿಜಯನಗರ ಸಾಮ್ರಾಜ್ಯದ ಸಂಪತ್ತಿನ ಮೇಲೆ ಬೀಳುತ್ತೆ. ವಿಜಯನಗರದ ಸಂಪತ್ತನ್ನು ಲೂಟಿ ಹೊಡೆಯಲು ತಿರ್ಮಾನಿಸುವ ಬಹುಮನಿ ಸುಲ್ತಾನರುಗಳ ಒಕ್ಕೂಟ, 1565ರಲ್ಲಿ ತಾಳಿಕೋಟೆಯ ಯುದ್ಧದಲ್ಲಿ ವಿಜಯನಗರದ ಸೇನೆಯೊಂದಿಗೆ ಯುದ್ಧ ಮಾಡಿ ಗೆಲ್ಲುತ್ತಾರೆ. ಅಲ್ಲಿಗೆ ಭಾರತದಲ್ಲಿದ್ದ  ಕೊನೆಯ ಹಿಂದೂ ಸಾಮ್ರಾಜ್ಯ ಅವನತಿಯಾಗುತ್ತೆ. ಅಲ್ಲಿಗೆ ಹಿಂದೂ ಸಮಾಜವನ್ನು ಒಂದು ಧೀರ್ಘವಾದ ಕತ್ತಲು ಆವರಿಸಿಕೊಂಡಿತ್ತು.

ವಿಜಯನಗರವನ್ನು ಗೆದ್ದ ಬಹುಮನಿ ಸುಲ್ತಾನರು ಅಲ್ಲಿಯ ಪ್ರಜೆಗಳನ್ನು ಹಿಂಸಿಸಿ ಕೊಲ್ಲುತ್ತಾರೆ. ಜೊತೆಗೆ ಅಲ್ಲಿದ್ದ ಸಂಪತ್ತನ್ನು ಆನೆಗಳ ಮೇಲೆ ಬಿಜಾಪುರಕ್ಕೆ ಸಾಗೀಸುತ್ತಾರೆ. ಹೀಗೆ ಅಪಾರ ಪ್ರಮಾಣದ ಸಂಪತ್ತನ್ನು ಹೊತ್ತುಕೊಂಡು ಆನೆಗಳು ಹೋಗುತ್ತಿರುವಾಗ ದಾರಿಯುದ್ದಕ್ಕೂ ಮುತ್ತು, ರತ್ನ, ವಜ್ರಗಳು ಬೀಳುತ್ತವೆ.  ಅದನ್ನು ಕಣ್ಣಾರೆ ಕಂಡ ಅಲ್ಲಿನ ಪ್ರಜೆಗಳು ಮುಂದೆ `ವಿಜಯನಗರವೆಂಬ ಮಹಾನ್ ಸಾಮ್ರಾಜ್ಯದ ಅವನತಿ ಹೇಗಾಯಿತು’ ಎಂದು ಕೇಳಿದ ತಮ್ಮ ಮಕ್ಕಳಿಗೆ ಈ ಹಾಡಿನ ಮೂಲಕ ಹೇಳುತ್ತಾರೆ. ಯಾಕೆ ಹಾಡಿನ ಮೂಲಕ ಹೇಳಿದರು ಅಂದರೆ ನಡೆದ ಸತ್ಯ ಇತಿಹಾಸ ಹೇಳಿದರೆ ಸುಲ್ತಾನರು ಕೊಂದು ಹಾಕುತ್ತಿದ್ದರು ಅದಕ್ಕೆ ಹಾಡಿನ ಮೂಲಕ ಹೇಳಿದರು.

ನಾವು ಗಮನಿಸಬೇಕು ಈ ಹಾಡಲ್ಲಿ ಪ್ರಶ್ನೆಗಳೂ ಇವೆ ಉತ್ತರಗಳೂ ಇವೆ.

ʼಆನೆ ಬಂತೊಂದು ಆನೆʼ…ʼಯಾವೂರ ಆನೆ?’

ʼಬಿಜಾಪುರದ ಆನೆʼ…ʼಇಲ್ಲಿಗೇಕೆ ಬಂತು?’

ʼಹಾದಿ ತಪ್ಪಿ (ಮತಿಗೆಟ್ಟು) ಬಂತು?’

ʼಶಿರ ಕೊಬ್ರಿಯಂಗೆ ಲಟ ಲಟ ಮುರಿದುʼ….(ಸುಲ್ತಾನರ ಸೈನ್ಯ ವಿಜಯನಗರದ ಸೈನಿಕರ ಹಾಗೂ ಪ್ರಜೆಗಳ ಶಿರವನ್ನು ಕೊಬ್ಬರಿಯಂತೆ ಛೇದನ ಮಾಡಿತ್ತು.)

ʼಹಾದಿಗೊಂದು ದುಡ್ಡುʼ…. ʼಬೀದಿಗೊಂದು ದುಡ್ಡುʼ… (ಆನೆಗಳ ಮೇಲೆ ಸಂಪತ್ತು ಹೊತ್ತೊಯ್ಯುವಾಗ ಬಿದ್ದ ಸಂಪತ್ತು)

ಹೀಗೆ ನಮ್ಮ ಹಿರಿಯರು ತಮ್ಮ ಮಕ್ಕಳಿಗೆ ಪ್ರಪಂಚದ ಅತ್ಯಂತ ಶ್ರೀಮಂತ ರಾಜಧಾನಿ ವಿಜಯನಗರದ ಸಮ್ರಾಜ್ಯದ ಅವನತಿಯ ಕಥೆಯನ್ನು ಹೇಳಿದರು…! ಕಥೆ ಅಲ್ಲ ನಡೆದ ಸತ್ಯ ಘಟನೆಯನ್ನು ಹೇಳಿದರು.

ಲೇಖಕರು: ಅವ್ವಪ್ಪ ಹೆಗಡ್ಯಾಳ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *