ಕನ್ನಡದ ಕರಿಮಣ್ಣ ಬಸರಿನಿಂದ ಬಂದವ… ಇಮ್ಮಡಿ ಪುಲಿಕೇಶಿ ಪುಲಿಕೇಶಿ… ಇಮ್ಮಡಿ ಪುಲಿಕೇಶಿ ಪುಲಿಕೇಶಿ… ಈ ಹಾಡಿನ ಬಗ್ಗೆ ತಿಳಿಯದವರು ಇಲ್ಲ..ಬಹುತೇಕ ಕನ್ನಡಿಗರ ಹೆಮ್ಮೆಯ ಪ್ರತೀಕ ಈ ಹಾಡು ಅದಾಗ್ಯೂ ತಿಳಿದಿಲ್ಲವೆಂದರೆ ಒಂದೊಮ್ಮೆ ನಿಮ್ಮ ಫೋನ್ ನಲ್ಲಿ ಈ ಹಾಡಿನ್ನು ಹುಡುಕಿ ಕೇಳಿ…ಅಬ್ಬಬ್ಬಾ ಅದೇನು ಸಾಲುಗಳು ಆ ಮಹಾನ್ ವ್ಯಕ್ತಿಯ ಶೌರ್ಯ ಹಾಡಿನಲ್ಲಿ ಅದರ ಸಂಗೀತದಲ್ಲಿ ವ್ಯಕ್ತವಾಗಿದೆ. ಕರ್ನಾಟಕದ ಹೆಮ್ಮೆಯ ರಾಜವಂಶ ಬಾದಾಮಿ ಚಾಲುಕ್ಯ ಮನೆತನದ ಮಹಾನ್ ಚಕ್ರವರ್ತಿ, ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಕನ್ನಡದ ಕೀರ್ತಿ, ಶೌರ್ಯವನ್ನು ದೇಶಾದ್ಯಂತ ಅಲ್ಲಲ್ಲಾ ವಿಶ್ವಾದ್ಯಂತ ತಲುಪಿಸಿದ ಕನ್ನಡಮ್ಮನ ಮೊದಲ ಕುವರ ಅಂದ್ರೆ ತಪ್ಪಾಗ್ಲಿಕ್ಕಿಲ್ಲ. ಇಂತಹ ವ್ಯಕ್ತಿಯ ಪ್ರತಿಮೆಗಳು ಕರ್ನಾಟಕದಲ್ಲಿ ಕಾಣಸಿಗುವುದು 4-5 ಎನ್ನುವುದು ನಿಜಕ್ಕೂ ಖೇದಕರ. ಆದ್ರೆ ಭಾರತ ಸರ್ಕಾರವು ಪಕ್ಕದ ಆಂಧ್ರಪ್ರದೇಶದಲ್ಲಿನ ವಿಶಾಖಪಟ್ಟಣಂನಲ್ಲಿ ಪುಲಿಕೇಶಿಯ ಆಳೆತ್ತರದ ಪ್ರತಿಮೆಯನ್ನು eastern naval command ನಲ್ಲಿ ಸ್ಥಾಪಿಸಿ ತಮ್ಮ ವಿನಂಮ್ರ ಗೌರವವನ್ನು ಸೂಚಿಸಿದೆ. ಕಾರಣ ಪುಲಿಕೇಶಿ ಮಹಾರಾಜರು ಭಾರತದ ನೌಕಾಪಡೆಯ ಪಿತಾಮಹ. ದೂರದ ದೇಶಗಳಿಗೆ ನೌಕಾ ಪಡೆಯನ್ನು ಪರಿಚಯಿಸಿದವರು, ಕರ್ಣಾಟ ಬಲ ಎಂಬ ಹೆಸರಿನ ಅತ್ಯಂತ ಪ್ರಬಲ ನೌಕಾಪಡೆ ಹೊಂದಿದ್ದರು. ಆದರೆ ಇದನ್ನು ಒಪ್ಪದಿರುವವರೇ ಹೆಚ್ಚು. ಇಲ್ಲಿ ನಮ್ಮವರೇ ಆದ, ಕನ್ನಡಿಗರಿಗೆ ಹೆಮ್ಮೆಯ ಗುರುತನ್ನು ನೀಡಿದ ನೆಲದ ಕಣ್ಮಣಿಯ ಕುರಿತು ತಿಳಿದುಕೊಳ್ಳದಿರುವುದು ನಮ್ಮ ದೌರ್ಭಾಗ್ಯವೋ ಅಥವಾ ನಮ್ಮ ಭಾಷೆಗಿಂತ ಅನ್ಯ ಭಾಷೆಯ ಮೇಲೆ ನಮಗಿರುವ ಅನಗತ್ಯ ಮೋಹವೋ ನಾವೇ ಅರಿತುಕೊಳ್ಳಬೇಕು. ಆದರೆ ಕನ್ನಡ ನಾಡಲ್ಲಿ ಪುಲಿಕೇಶಿಯ ಕುರಿತು ಹೆಚ್ಚು ಕನ್ನಡಿಗರಿಗೆ ತಿಳಿಯದರುವುದು ದುಃಖಕರ. ಇತಿಹಾಸದ ಈ ದಿನ 1407 ವರ್ಷಗಳ ಹಿಂದೆ ಅಂದರೆ 619 ನೇ ಇಸವಿ 6000 ಗಜದಳದೊಂದಿಗೆ ಬಲಿಷ್ಠ ಅಶ್ವದಳದೊಂದಿಗೆ ಬಾದಾಮಿಯ ಚಾಲುಕ್ಯರನ್ನು ಮಣಿಸಲು ಉತ್ತರ ಪಥೇಶ್ವರ ಹರ್ಷವರ್ಧನನು ನರ್ಮದಾ ನದಿಯತ್ತ ಬಂದನು. ನರ್ಮದಾ ನದಿಯ ತಟದಲ್ಲಿ ಇಮ್ಮಡಿ ಪುಲಿಕೇಶಿ ಮತ್ತು ಹರ್ಷವರ್ಧನನ ನಡುವೆ ಘನಘೋರ ಯುದ್ಧ ನಡೆಯಿತು. ಕೊನೆಗೆ ಏಪ್ರಿಲ್ 4 ರಂದು ಬಲಿಷ್ಠ ಕರ್ಣಾಟ ಬಲದ ಮುಂದೆ ಹರ್ಷವರ್ಧನ ಹೀನಾಯವಾಗಿ ಸೋತು ಶರಣಾದನು. ಇಮ್ಮಡಿ ಪುಲಕೇಶಿಯ ವಿಜಯೋತ್ಸವದ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್ 4 ರಂದು ಕನ್ನಡಿಗರ ವಿಜಯ ದಿವಸ ಆಚರಿಸಲಾಗುತ್ತದೆ. ಬೇದಿಸಲಾಗದ ಸೈನ್ಯದೊಂದಿಗೆ ಬಂದಿದ್ದ ಹರ್ಷನ ಆಟ ಕರ್ನಾಟ ಬಲದ ಮುಂದೆ ನಡೆಯಲಿಲ್ಲ. ಹರ್ಷನ ಅಶ್ವಗಳು ಮತ್ತು ಗಜಪಡೆಗಳು ಸತ್ತು ಬೀಳುತಿರುವುದನ್ನು ಕಂಡು ಹರ್ಷನ ಹರ್ಷವು ಮಂಜಿನಂತೆ ಕರಗಿತು. ಎಂದು ಇಮ್ಮಡಿ ಪುಲಕೇಶಿಯ ಆಸ್ಥಾನದ ಜೈನ ಕವಿ ‘ರವಿ ಕೀರ್ತಿ ‘ ಐಹೊಳೆ ಶಾಸನದಲ್ಲಿ ಯುದ್ಧದ ರೀತಿಯನ್ನು ವರ್ಣಿಸಿದ್ದಾರೆ. ನಂತರ ಚಾಲುಕ್ಯ ಚಕ್ರವರ್ತಿಯೊಂದಿಗೆ ಒಪ್ಪಂದ ಮಾಡಿಕೊಂಡ ಪುಲಕೇಶಿಗೆ ಹರ್ಷವರ್ಧನ “ಪರಮೇಶ್ವರ” , “ದಕ್ಷಿಣ ಪಥೇಶ್ವರ” ಎಂಬ ಬಿರುದನ್ನು ನೀಡಿ ಗೌರವಿಸುತ್ತಾನೆ. ಪುಲಕೇಶಿಯ ಉದ್ದೇಶ ರಾಜ್ಯದ ರಕ್ಷಣೆ ಆಗಿತ್ತೇ ಹೊರತು ಹರ್ಷವರ್ಧನನ ರಾಜ್ಯವನ್ನು ಆಕ್ರಮಿಸುವುದಾಗಿರಲಿಲ್ಲ. ಮತ್ತು ಪುಲಕೇಶಿ ಹರ್ಷವರ್ಧನನ ಯಾವುದೇ ಪ್ರದೇಶವನ್ನು ಆಕ್ರಮಿಸದೆ ಆತನೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸುವುದರ ಮೂಲಕ ಕನ್ನಡಿಗರ ಉದಾರತೆ, ಔದಾರ್ಯ, ನಂಬುಗೆಯನ್ನು ಇಡೀ ವಿಶ್ವಕ್ಕೇ ಸಾರಿದ ದಿನವಿದು. ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗನು ಹೆಮ್ಮೆಯಿಂದ ಸಂಭ್ರಮಿಸಬೇಕಾದ ದಿನವಿದು. ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾದಿಪ್ಪ ಕಲಿಯುಗ ವಿಪರೀತನ್ ಮಾಧವನೀತನ್ ಪೆರನಲ್ಲ. ಅಂದರೆ ಒಳ್ಳೆಯರಿಗೆ ಒಳ್ಳೆಯವನು, ಪ್ರೀತಿಯಿಂದ ವರ್ತಿಸುವವರಿಗೆ ಅಷ್ಟೇ ಪ್ರೀತಿಯ ಕೊಡುವವನು, ತೊಂದರೆ ಕೊಡುವ ಕೆಟ್ಟಬುದ್ಧಿಯ ವೀರರಿಗೆ ಸಿಂಹ ಸ್ವಪ್ನವಾಗಿ ಅತಿ ಉಗ್ರನಾಗಿರುವವನು ಈತ ಸಾಕ್ಷಾತ್ ವಿಷ್ಣು ಸ್ವರೂಪದವನು ಬೇರೆ ಯಾರು ಅಲ್ಲ. ಕನ್ನಡದ ಕುಲತಿಲಕ, ದಕ್ಷಿಣ ಪಥೇಶ್ವರ, ಪರಮ ಭಾಗವತ, ಪೃಥ್ವಿ ವಲ್ಲಭ, ದಕ್ಷಿಣ ಭಾರತದ ಅತ್ಯಂತ ಶ್ರೇಷ್ಠ ದೊರೆ, ನೌಕಾಪಡೆಯ ಪಿತಾಮಹ, ಎರೆಯ, ನಮ್ಮ ಹೆಮ್ಮೆ ಇಮ್ಮಡಿ ಪುಲಿಕೇಶಿಯು ತನ್ನ ಶೌರ್ಯ ಪರಾಕ್ರಮ ಮಾತ್ರವಲ್ಲದೇ ಕನ್ನಡಿಗರ ವಿಶಾಲತೆ ವಿನಮ್ರತೆಯನ್ನು ಜಗಕ್ಕೆ ಸಾರಿದರು. ಲೇಖಕರು: ಕನ್ನಡದ ಆನಂದ Post navigation ಬಲಿದಾನ ದಿವಸ: ಬ್ರಿಟಿಷರ ನಿದ್ದೆಗೆಡಸಿದ್ದ ಅದಮ್ಯ ಚೈತನ್ಯ ಭರಿತ ಭಗತ್ ಸಿಂಗ್ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ದಿನ: ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕ್ರೌರ್ಯದ ಇತಿಹಾಸ