ನವದೆಹಲಿ, ಮಾರ್ಚ್ 18: ಭಾರತದಲ್ಲಿ ಪದವೀಧರರಲ್ಲಿ (India’s Graduates) ಶೇ. 40 ರಷ್ಟು ಜನರಿಗೆ ಉದ್ಯೋಗವೇ ಸಿಗುತ್ತಿಲ್ಲ ಎಂದು ಅಜಿತ್ ಪ್ರೇಮಜಿ ಪ್ರಕಟಿಸಿರುವ State of Working India ವರದಿ ತಿಳಿಸಿದೆ. ಭಾರತದಲ್ಲಿ 20 ರಿಂದ 29 ವರ್ಷದ ವಯಸ್ಸಿನ 63 ಮಿಲಿಯನ್ ಪದವೀಧರರಲ್ಲಿ ಸುಮಾರು 11 ಮಿಲಿಯನ್ ಜನರು ನಿರುದ್ಯೋಗಿಗಳಾಗಿದ್ದಾರೆ. ಪದವಿ ಪಡೆದ ಒಂದು ವರ್ಷದ ಒಳಗೆ ಕೆಲವೇ ಕೆಲವು ಯುವಕರು ಮಾತ್ರ ಸ್ಥಿರ ಸಂಬಳದ ಉದ್ಯೋಗ ಪಡೆದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕೇವಲ ಶೇ 7 ರಷ್ಟು ಯುವಕರು ಮಾತ್ರ ತಮ್ಮನ್ನು ನಿರುದ್ಯೋಗಿಗಳೆಂದು ವರದಿ ಮಾಡಿದ ಒಂದು ವರ್ಷದೊಳಗೆ ಶಾಶ್ವತ ವೇತನದ ಉದ್ಯೋಗವನ್ನು ಪಡೆಯಬಹುದು ಎಂದು ವರದಿ ಹೇಳಿದೆ. ಯುವ ಪದವೀಧರರ ನಿರುದ್ಯೋಗ ಪ್ರಮಾಣ ಇನ್ನೂ ಹೆಚ್ಚಿನ ಮಟ್ಟದಲ್ಲಿದೆ. 15 ರಿಂದ 25 ವರ್ಷದ ವಯಸ್ಸಿನ ಶೇ 40 ರಷ್ಟು ಪದವೀಧರರು ನಿರುದ್ಯೋಗಿಳಾಗಿದ್ದಾರೆ. ಇನ್ನು, 25 ರಿಂದ 29 ವಯಸ್ಸಿನ ಶೇ 20 ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯಲ್ಲಿದೆ. ಪದವಿ ಪಡೆದವರಲ್ಲಿ ಬಹಳ ಕಡಿಮೆ ಜನರು ಮಾತ್ರ ಒಂದು ವರ್ಷದೊಳಗೆ ಖಾಯಂ ವೇತನದ ಉದ್ಯೋಗ ಪಡೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಪದವೀಧರರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ, ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಕಳೆದ ಕೆಲವು ದಶಕಗಳಲ್ಲಿ ಯುವಜನಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಜೊತೆಗೆ ಉನ್ನತ ಶಿಕ್ಷಣ ಪಡೆಯುವರರ ಪ್ರಮಾಣವೂ ಹೆಚ್ಚಿದ್ದು, ಇದರಿಂದ ಯುವ ಪದವೀಧರರ ಸಂಖ್ಯೆಯೂ ಹೆಚ್ಚಾಗಿದೆ. ಈ ಹೆಚ್ಚಳದಿಂದ 2023ರ ವೇಳೆಗೆ 20 ರಿಂದ 29 ವರ್ಷದೊಳಗಿನ 63 ಮಿಲಿಯನ್ ಪದವೀಧರರಲ್ಲಿ ಸುಮಾರು 11 ಮಿಲಿಯನ್ ಜನರು ಉದ್ಯೋಗವಿಲ್ಲದೆ ಇದ್ದರು ಎಂದು ವರದಿ ಹೇಳಿದೆ. ಸ್ವಾತಂತ್ರ್ಯ ನಂತರ ಭಾರತವು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಉನ್ನತ ಶಿಕ್ಷಣಕ್ಕೆ ದಾಖಲಾತಿ ಪ್ರಮಾಣವು ಹೆಚ್ಚಾಗಿದೆ. ಲಿಂಗ ಹಾಗೂ ಜಾತಿ ಆಧಾರಿತ ಹಾಗೂ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಯುವಕರು ಸ್ವಂತ ಉದ್ಯೋಗ ಸೇರಿದಂತೆ ಮಾರುಕಟ್ಟೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 2017ರಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಯುವಕರ (ಯುವಕ&ಯುವತಿ) ಪ್ರಮಾಣ ಶೇ 58 ಇದ್ದರೆ, 2023ರ ವೇಳೆಗೆ ಇದು ಶೇ 72 ಕ್ಕೆ ಏರಿಕೆಯಾಗಿದೆ. ಈ ಎಲ್ಲ ಯುವಕರು ಹೇಳಿದ ಕಾರಣ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಿ ಶಿಕ್ಷಣವನ್ನು ಮೊಟಕುಗೊಳಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧಾರವಾಡ ಪ್ರತಿಭಟನೆ: ಉತ್ತರ ಕರ್ನಾಟಕದ ಯುವಕರು ಸರ್ಕಾರಿ ಕೆಲಸವನ್ನೇ ಏಕೆ ನೆಚ್ಚಿದ್ದಾರೆ? ವಿಶ್ಲೇಷಣೆ 2004-05 ರಿಂದ 2023ರವರೆಗೆ ಪ್ರತಿವರ್ಷ ಸುಮಾರು 50 ಲಕ್ಷ ಯುವಕರು ಪದವೀಧರರಾಗುತ್ತಾರೆ. ಇವರಲ್ಲಿ ಕೇವಲ 28 ಲಕ್ಷ ಜನರಿಗೆ ಮಾತ್ರ ಉದ್ಯೋಗ ದೊರಕುತ್ತಿದೆ. ಇದರಲ್ಲಿ ಸ್ಥಿರ ವೇತನದ ಉದ್ಯೋಗ ಪಡೆಯುವವರ ಪ್ರಮಾಣ ಇನ್ನೂ ಕಡಿಮೆ ಇದೆ. ಇದರಿಂದ ಪದವೀಧರರ ನಿರುದ್ಯೋಗ ಹೆಚ್ಚುತ್ತಿದ್ದು, ಆದಾಯದ ಬೆಳವಣಿಗೆಯೂ ನಿಧಾನವಾಗುತ್ತಿದೆ ಎಂದು ವರದಿ ತಿಳಿಸಿದೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ‘ಶ್ರೀ ರಾಮಾಯಣ ಯಾತ್ರೆ’: ದಿನಾಂಕ, ಯಾವ್ಯಾವ ಸ್ಥಳಗಳು, ಎಷ್ಟು ವೆಚ್ಚ? ಇಲ್ಲಿದೆ ವಿವರ ಕೇಂದ್ರದಿಂದ ಮಹತ್ವದ ಸೂಚನೆ: ಈ ನಿಯಮ ಮೀರಿದ್ರೆ ಪ್ಯಾನ್ ಕಾರ್ಡ್ ನಿಷ್ಕ್ರಿಯ!