Will India Meet Pakistan Again in T20 World Cup 2026?ಭಾರತ vs ಪಾಕಿಸ್ತಾನ

ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತವು ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿ ಟ್ರೋಪಿಯತ್ತ ದಾಪುಗಾಲು ಇಡುತ್ತಿದೆ. ಆರಂಭಿಕ ಪಂದ್ಯಗಳಲ್ಲಿ ಯುಎಸ್‌ಎ ಮತ್ತು ನಮೀಬಿಯಾ ವಿರುದ್ಧ ಸುಲಭ ಜಯಗಳಿಸಿದ ಭಾರತಕ್ಕೆ ಬದ್ಧವೈರಿ ಪಾಕಿಸ್ತಾನ ಕೊಲೊಂಬೊದಲ್ಲಿ ಎದುರಾಯಿತು. ಈ ಪಂದ್ಯ ಅಷ್ಟೇನು ರೋಚಕತೆ ಸೃಷ್ಟಿಸಲಿಲ್ಲ. ಭಾರತ 61 ರನ್‌ಗಳ ಭಾರೀ ಜಯ ಸಾಧಿಸಿತು.

ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ಭಾರತ ಆಡಿದ ಎಲ್ಲಾ ಪಂದ್ಯಗಳಲ್ಲಿ ಜಯ ಸಾಧಿಸಿ ಈಗ ಸೂಪರ್ 8 ಸುತ್ತಿಗೆ ಪ್ರವೇಶಿಸಿದೆ. ಇನ್ನು, ಬುಧವಾರ ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾವನ್ನು ಸೋಲಿಸಿದ ಪಾಕಿಸ್ತಾನ ಸೂಪರ್ 8 ಸುತ್ತಿಗೆ ಪ್ರವೇಶಿಸಿದೆ.

ಅಚ್ಚರಿ ವಿಚಾರ ಅಂದ್ರೆ, 2021ರಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದ ಬಲಿಷ್ಠ ಆಸ್ಟ್ರೇಲಿಯಾ, ಈಗ ಸೂಪರ್‌ 8ನ್ನೂ ಕೂಡ ಪ್ರವೇಶಿಸದೆ ವಿಶ್ವಕಪ್‌ನಿಂದ ಹೊರಬಿದ್ದಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ. ಆಸ್ಟ್ರೇಲಿಯಾ ತಂಡವು ಜಿಂಬಾಬ್ವೆ ಮತ್ತು ಶ್ರೀಲಂಕಾ ವಿರುದ್ಧ ಭಾರೀ ಸೋಲನ್ನು ಅನುಭವಿಸಿ, ಹೊರಬಿದ್ದಿದೆ.

ವಿಶ್ವದ ಚಿತ್ತ ಸುಪರ್ 8ರ ಸುತ್ತಿನ ತಂಡಗಳತ್ತ

ಟಿ20 ವಿಶ್ವಕಪ್‌ನಲ್ಲಿ ತಂಡಗಳಿಗೆ ಪೂರ್ವನಿರ್ಧರಿತ ಸೀಡಿಂಗ್ ನೀಡಲಾಗುತ್ತದೆ. ಇದರರ್ಥ, ಗುಂಪು ಹಂತದಲ್ಲಿ ಅರ್ಹತೆ ಪಡೆಯುವುದಷ್ಟೇ ಮುಖ್ಯ. ಮೊದಲ ಅಥವಾ ಎರಡನೇ ಸ್ಥಾನಕ್ಕೆ ಮುಕ್ತಾಯಗೊಳ್ಳುವ ಒತ್ತಡ ಇರುವುದಿಲ್ಲ.

ನಾಲ್ಕು ಗುಂಪುಗಳಲ್ಲಿನ ತಲಾ ಎರಡು ತಂಡಗಳು ಸೂಪರ್ 8 ಸುತ್ತಿಗೆ ಪ್ರವೇಶಿಸುತ್ತವೆ. ನಂತರ ಆ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಮತ್ತು ಪ್ರತಿ ತಂಡವು ಮೂರು ಪಂದ್ಯಗಳನ್ನು ಆಡುತ್ತದೆ. ಆ ಎರಡು ಗುಂಪುಗಳಲ್ಲಿನ ತಲಾ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ.

ಸುಪರ್ 8ರ ಹಂತದಲ್ಲಿ ಭಾರತ ಒಂದನೇ ಗುಂಪಿನಲ್ಲಿ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ನಮೀಬಿಯಾ ತಂಡಗಳನ್ನು ಎದುರಿಸಲಿದೆ. ಇತ್ತ ಪಾಕಿಸ್ತಾನ ಗುಂಪು 2ರಲ್ಲಿ ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ವಿರುದ್ಧ ಆಡಲಿದೆ. ಪಾಕಿಸ್ತಾನವು ಮುಂದಿನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲಿದೆ.

ಮತ್ತೆ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ?

ಐಸಿಸಿ ಮತ್ತು ಎಸಿಸಿ ಟೂರ್ನಮೆಂಟ್‌ಗಳಲ್ಲಿ ಪದೇಪದೇ ಮುಖಾಮುಖಿಯಾಗುತ್ತಿದ್ದರೂ, ಭಾರತ–ಪಾಕಿಸ್ತಾನ ಪಂದ್ಯಗಳ ಸುತ್ತಲಿನ ಉತ್ಕಟತೆ ಎಂದಿಗೂ ಕಡಿಮೆಯಾಗಿಲ್ಲ. ಈಗಿನ ಪ್ರಮುಖ ಪ್ರಶ್ನೆ, ಈ ಟೂರ್ನಮೆಂಟ್‌ನಲ್ಲಿ ಈ ಎರಡು ತಂಡಗಳು ಮತ್ತೆ ಎದುರಾಗಬಹುದೇ?

ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನದ ಮೊದಲ ಪಂದ್ಯವೇ ನಡೆಯದ ಹಂತಕ್ಕೆ ತಲುಪಿತ್ತು. ಹಲವು ವಾರಗಳ ಮಾತುಕತೆಗಳು, ಸದಸ್ಯ ಮಂಡಳಿಗಳ ಮನವಿಗಳು ಮತ್ತು ರಾಜತಾಂತ್ರಿಕ ಮಧ್ಯಸ್ಥಿಕೆಗಳ ನಂತರ, ಟೂರ್ನಮೆಂಟ್‌ನಿಂದ ಬಾಂಗ್ಲಾದೇಶವನ್ನು ತೆಗೆದುಹಾಕಿದ್ದಕ್ಕೆ ಒಗ್ಗಟ್ಟಿನ ಸೂಚಕವಾಗಿ ಪಂದ್ಯವನ್ನು ಆಡಲು ಮೊದಲು ನಿರಾಕರಿಸಿದ್ದ ಪಾಕಿಸ್ತಾನ, ಕೊನೆಗೆ ಕೊಲಂಬೊದಲ್ಲಿ ಭಾರತ ವಿರುದ್ಧ ಆಡಲು ಒಪ್ಪಿಕೊಂಡಿತು.

ಭಾರತ ಭರ್ಜರಿ ಪ್ರದರ್ಶನ ನೀಡಿ 61 ರನ್‌ಗಳಿಂದ ಭಾರೀ ಜಯ ಸಾಧಿಸಿತು. ಇತ್ತೀಚಿನ ಐಸಿಸಿ ಟೂರ್ನಮೆಂಟ್‌ಗಳಲ್ಲಿ ಈ ಎರಡು ರಾಷ್ಟ್ರಗಳ ನಡುವಿನ ಮತ್ತೊಂದು ಏಕಪಕ್ಷೀಯ ಪಂದ್ಯವಾಗಿ ಇದು ದಾಖಲಾಗಿದೆ. ಒಟ್ಟಾರೆಯಾಗಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡಿದ 9 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಸೀಡಿಂಗ್ ವ್ಯವಸ್ಥೆಯ ಪ್ರಕಾರ ಈಗ ಪಾಕಿಸ್ತಾನ ಮತ್ತು ಭಾರತ ಸೂಪರ್ 8 ಹಂತದಲ್ಲಿ ವಿಭಿನ್ನ ಗುಂಪುಗಳಲ್ಲಿ ಇದ್ದು, ಸೆಮಿಫೈನಲ್‌ನಲ್ಲಿ ಮಾತ್ರ ಮುಖಾಮುಖಿಯಾಗುವ ಸಾಧ್ಯತೆ ಇದೆ. ಟೂರ್ನಮೆಂಟ್ ನಿಯಮಗಳ ಪ್ರಕಾರ, ಪ್ರತಿ ಗುಂಪಿನೊಳಗೆ ರೌಂಡ್-ರಾಬಿನ್ ಪದ್ಧತಿ ಪ್ರಕಾರ ಪಂದ್ಯಗಳು ನಡೆಯುತ್ತವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ. ಒಂದು ಗುಂಪಿನಲ್ಲಿ ಪ್ರಥಮ ಸ್ಥಾನ ಪಡೆದ ತಂಡ ಇನ್ನೊಂದು ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದ ತಂಡವನ್ನು ಸೆಮಿಫೈನಲ್‌ನಲ್ಲಿ ಎದುರಿಸುತ್ತದೆ.

ಆ ಪರಿಸ್ಥಿತಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಸೆಮಿಫೈನಲ್ ಮಾರ್ಚ್ 4ರಂದು ಕೊಲಂಬೊದಲ್ಲಿ ನಡೆಯಲಿದೆ. ಆದರೆ ಎರಡು ತಂಡಗಳೂ ಸೂಪರ್ ಎಂಟು ಹಂತವನ್ನು ಒಂದೇ ಸ್ಥಾನದಲ್ಲಿ ಅಂದರೆ ಗುಂಪು 1ರ ಮೊದಲನೇ ಸ್ಥಾನದಲ್ಲಿ ಭಾರತ ಮತ್ತು ಗುಂಪು 2ರ ಮೊದಲನೇ ಸ್ಥಾನದಲ್ಲಿ ಪಾಕಿಸ್ತಾನ ತಂಡ ಇದ್ದರೇ, ಫೈನಲ್‌ನಲ್ಲಿ ಮಾತ್ರ ಎದುರಾಗಬಹುದು. ಆ ಫೈನಲ್ ಪಂದ್ಯ ಮಾರ್ಚ್ 8ರಂದು ಕೊಲಂಬೊದಲ್ಲಿ ನಡೆಯಲಿದೆ. ಇದು ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಪಂದ್ಯವಾಗಿ ಪರಿಣಮಿಸುವ ಸಾಧ್ಯತೆ ಇದ್ದು, ಜಾಗತಿಕ ವೀಕ್ಷಕರ ದಾಖಲೆಯನ್ನೇ ಮುರಿಯುವಷ್ಟು ಗಮನ ಸೆಳೆಯಬಹುದು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *