ನವದೆಹಲಿ, ಮೇ 20: ಕೇಂದ್ರ ಲೋಕಸೇವಾ ಆಯೋಗ (UPSC) ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆ-2026ಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮೊದಲ ಬಾರಿಗೆ ಪರೀಕ್ಷೆಯ ಬಳಿಕ ಕೀ ಉತ್ತರವನ್ನು (Provisional Answer Key) ಬಿಡುಗಡೆ ಮಾಡಲು ನಿರ್ಧರಿಸಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಹೆಚ್ಚಿಸುವ ಗುರಿ ಮತ್ತು ಅಭ್ಯರ್ಥಿಗಳ ವಿಶ್ವಾಸವನ್ನು ಬಲಪಡಿಸುವ ಆಯೋಗದ ಬದ್ಧತೆಯ ಭಾಗವಾಗಿ ಈ ಹೊಸ ಕ್ರಮ ಜಾರಿಗೆ ತರಲಾಗುತ್ತಿದೆ ಎಂದು ಅಧ್ಯಕ್ಷ ಡಾ. ಅಜಯ್ ಕುಮಾರ್ ತಿಳಿಸಿದ್ದಾರೆ. ಈ ವರ್ಷದ ಪರೀಕ್ಷೆಯು ಮೇ 24 ರಂದು ನಡೆಯಲಿದೆ. ಇದೇ ಮೊದಲ ಬಾರಿಗೆ ಕೀ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಮೊದಲ ಬಾರಿಗೆ UPSC ನಾಗರಿಕ ಸೇವೆಗಳ ಪರೀಕ್ಷೆಗೆ ಕೀ ಉತ್ತರವನ್ನು ಪ್ರಕಟಿಸಲಿದೆ. ಹೆಚ್ಚಿನ ಪಾರದರ್ಶಕತೆ ಮತ್ತು ಅಭ್ಯರ್ಥಿಗಳೊಂದಿಗೆ ಉತ್ತಮ ಸಂವಹನಕ್ಕಾಗಿ ಈ ಹೊಸ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕೀ ಉತ್ತರ ಬಿಡುಗಡೆಯಾದ ಬಳಿಕ, ಅಭ್ಯರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು. ಮೇ 31 ಸಂಜೆ 6 ಗಂಟೆಯವರೆಗೆ ಅಭ್ಯರ್ಥಿಗಳು https://upsconline.nic.in/login ನಲ್ಲಿ ಲಭ್ಯವಿರುವ “ಆನ್‌ಲೈನ್ ಪ್ರಶ್ನೆ ಪತ್ರಿಕೆ ಪ್ರಾತಿನಿಧ್ಯ ಪೋರ್ಟಲ್ (QPRep)” ಮೂಲಕ ಸಲ್ಲಿಸಬಹುದು. ಅಭ್ಯರ್ಥಿಗಳಿಂದ ಬಂದ ಎಲ್ಲಾ ಆಕ್ಷೇಪವನ್ನು ವಿಷಯ ತಜ್ಞರ ತಂಡ ಪರಿಶೀಲಿಸಲಿದೆ. ಪ್ರತಿ ಆಕ್ಷೇಪಣೆಯನ್ನೂ ದಾಖಲೆಗಳೊಂದಿಗೆ ಪರಿಶೀಲಿಸಿದ ಬಳಿಕವೇ ಅಂತಿಮ ಉತ್ತರ ಕೀ ಬಿಡುಗಡೆ ಮಾಡಲಾಗುತ್ತದೆ ಎಂದು ಯುಪಿಎಸ್‌ಸಿ ತಿಳಿಸಿದೆ. ಕೀ ಉತ್ತರವನ್ನು ಪ್ರಕಟಿಸುವಂತೆ ಅಭ್ಯರ್ಥಿಗಳು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಈ ಕ್ರಮ ಜಾರಿಗೆ ತರಲಾಗಿದೆ. ಇದರಿಂದ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಅಭ್ಯರ್ಥಿಗಳ ವಿಶ್ವಾಸ ಮತ್ತಷ್ಟು ಬಲವಾಗಲಿದೆ ಎಂದು UPSC ಅಧ್ಯಕ್ಷ ಡಾ. ಅಜಯ್ ಕುಮಾರ್ ಹೇಳಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation English Grammar ಪಾಠ 19: Tenses with WH-Questions (Interrogative Sentences)