NEET-UG is finally shifting to computer-based testingಧರ್ಮೇಂದ್ರ ಪ್ರಧಾನ್‌

ನವದೆಹಲಿ, ಮೇ 15: ಮುಂದಿನ ವರ್ಷದಿಂದ NEET ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ.

ನವದಹೆಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಈ ವರ್ಷ ರದ್ದುಗೊಂಡಿದ್ದ NEET-UG ಮರು ಪರೀಕ್ಷೆಯನ್ನು ಜೂನ್ 21ರಂದು ನಡೆಸಲಾಗುವುದು ಹಾಗೂ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಜೂನ್ 14ರಂದು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆ ಪರೀಕ್ಷಾ ವ್ಯವಸ್ಥೆಯಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದ್ದು, ಅದರ ಭಾಗವಾಗಿ ಮುಂದಿನ ವರ್ಷದಿಂದ ಒಎಂಆರ್ ಮಾದರಿಯನ್ನು ಕೈಬಿಟ್ಟು ಕಂಪ್ಯೂಟರ್ ಆಧಾರಿತ ಪರೀಕ್ಷಾ ವ್ಯವಸ್ಥೆ ಅಳವಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯ ಮತ್ತು ಅವರ ಪರಿಶ್ರಮವೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ಸರ್ಕಾರ ಸೂಕ್ಷ್ಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮೇ 3ರಂದು ದೇಶಾದ್ಯಂತ ನಡೆದಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಿತ್ತು.

ಆದರೆ ಜೂನ್ 21ರಂದು ನಡೆಯಲಿರುವ ಮರು ಪರೀಕ್ಷೆ ಹಳೆಯ ಒಎಂಆರ್ ಮಾದರಿಯಲ್ಲೇ ನಡೆಯಲಿದ್ದು, ಹೊಸ ಕಂಪ್ಯೂಟರ್ ಆಧಾರಿತ ವ್ಯವಸ್ಥೆ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ನ್ಯಾಯಸಮ್ಮತ ಹಾಗೂ ದೋಷರಹಿತ ಪರೀಕ್ಷೆ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ ಧರ್ಮೇಂದ್ರ ಪ್ರಧಾನ್, ಮರು ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಎದುರಿಸಬೇಕು. ಸರ್ಕಾರ ನಿಮ್ಮೊಂದಿಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳ ಹಕ್ಕು ಕಾಪಾಡುವ ಉದ್ದೇಶದಿಂದಲೇ ಮರು ಪರೀಕ್ಷೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು  ಭರವಸೆ ನೀಡಿದರು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *