ತಿರುಪತಿ, ಫೆಬ್ರವರಿ 24: ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರಿಗೆ ನೀಡಲಾಗುವ ಲಡ್ಡು (Tirupati Laddu) ಪ್ರಸಾದ ಮತ್ತು ಆಹಾರದ ಗುಣಮಟ್ಟವನ್ನು ಪರೀಕ್ಷಿಸಲು ಅಂಧ್ರಪ್ರದೇಶ ಸರ್ಕಾರ (Andhra Pradesh Government) ಶೀಘ್ರದಲ್ಲೇ ಅತ್ಯಾಧುನಿಕ ಆಹಾರ ಪ್ರಯೋಗಾಲಯವನ್ನು ಸ್ಥಾಪಿಸಲಿದೆ. ಲಡ್ಡು ಮತ್ತು ಆಹಾರ ತಯಾರಿಕೆಯಲ್ಲಿ ಬಳಸುವ ತುಪ್ಪ, ಗೋಡಂಬಿ, ಒಣದ್ರಾಕ್ಷಿ, ಕಡಲೆಬೇಳೆ, ಸಕ್ಕರೆ, ಏಲಕ್ಕಿ ಅರಿಶಿನ ಮತ್ತು ಮೆಣಸಿನ ಪುಡಿ ಸೇರಿದಂತೆ ಸುಮಾರು 60 ಪದಾರ್ಥಗಳ ಗುಣಮಟ್ಟ ಪರೀಕ್ಷಿಸಲು ತಿರುಮಲದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಲ್ಯಾಬ್ ಸ್ಥಾಪಿಸಲಾಗುತ್ತಿದೆ. ಪ್ರಯೋಗಾಲಯದಲ್ಲಿ ಫ್ರಾನ್ಸ್‌ನಿಂದ 3.5ಕೋಟಿ ರೂ. ವೆಚ್ಚದಲ್ಲಿ ಅಮದು ಮಾಡಿಕೊಳ್ಳಲಾಗುವ ‘ಇ ಟಂಗ್’ ಮತ್ತು ‘ಇ ನೋಸ್ ಯಂತ್ರಗಳನ್ನು ಅಳವಡಿಸಲಾಗುವುದು. ಈ ಯಂತ್ರಗಳು ತುಪ್ಪದ ಗುಣಮಟ್ಟದಲ್ಲಿನ ಅತಿಸೂಕ್ಷ್ಮ ಬದಲಾವಣೆಗಳನ್ನೂ ಪತ್ತೆ ಹಚ್ಚಬಲ್ಲದು ಎಂದು ಅಂಧ್ರದ ಆರೋಗ್ಯ ಸಚಿವ ವೈ. ಸತ್ಯ ಕುಮಾರ್ ಯಾದವ್ ತಿಳಿಸಿದ್ದಾರೆ. ಮಾರ್ಚ್‌ನಲ್ಲಿ ಕಾರ್ಯಾರಂಭ: 2024ರ ಅಕ್ಟೋಬರ್ 8 ರಂದು ಆಂಧ್ರಪ್ರದೇಶದ ಆರೋಗ್ಯ ಇಲಾಖೆ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಡುವೆ ಸಹಿ ಮಾಡಲಾದ ಒಪ್ಪಂದದಂತೆ ಪ್ರಯೋಗಾಲಯ ನಿರ್ಮಿಸಲಾಗುತ್ತಿದೆ. ಈ ಯೋಜನೆಗಾಗಿ ಎಫ್‌ಎಸ್ ಎಸ್‌ಎಐ 23 ಕೋಟಿ ರೂ. ಬಿಡುಗಡೆ ಮಾಡಿದೆ. ತಿರುಮಲದಲ್ಲಿ 12 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ಪ್ರಯೋಗಾಲಯ ನಿರ್ಮಾಣ ಕಾರ್ಯ ಶೇ. 90ರಷ್ಟು ಪೂರ್ಣಗೊಂಡಿದ್ದು, ಮಾರ್ಚ್ ನಲ್ಲಿ ಕಾರ್ಯಾರಂಭಮಾಡುವ ನಿರೀಕ್ಷೆ ಇದೆ. ಮೇ ತಿಂಗಳೊಳಗೆ ಸುಮಾರು 50 ಸುಧಾರಿತ ಉಪಕರಣಗಳನ್ನು ಪ್ರಯೋಗಾಲಯದಲ್ಲಿ ಅಳವಡಿಸಲಾಗುವುದು, ಪ್ರಯೋಗಾಲಯದಲ್ಲಿ ಮೈಕ್ರೋಬಯಾಲಜಿ, ಕೆಮಿಸ್ಟ್ರಿ, ಸೆನ್ಸರಿ ವಿಶ್ಲೇಷಣೆ ಪರೀಕ್ಷೆ ನಡೆಸುವ ಸೌಲಭ್ಯ ಇರಲಿದೆ. ಇದರಿಂದ ಆಹಾರ ಮತ್ತು ನೀರಿನ ಮಾದರಿಗಳಲ್ಲಿ 200 ವಿಧದ ಕೀಟನಾಶಕ ಅವಶೇಷಗಳು, ಭಾರಲೋಹಗಳು ಮತ್ತು ಸೂಕ್ಷಾಣು ಜೀವಿಗಳನ್ನು ಪತ್ತೆ ಹಚ್ಚಬಹುದು. ಟಿಟಿಡಿ ಒದಗಿಸುವ ನೀರು ಮತ್ತು ಪ್ರಸಾದದ ಮಾದರಿಗಳನ್ನು ನಿಯಮಿತವಾಗಿ ಪರೀಕ್ಷಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಯಾಕೆ ಕ್ರಮ? ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ತು ಅವರು 2019 ರಿಂದ 2024 ರವರೆಗೆ ಲಡ್ಡು ತಯಾರಿಕೆಗೆ 250 ಕೋಟಿ ರೂ. ಮೌಲ್ಯದ ಕಲಬೆರಕೆ ತುಪ್ಪ ಪೂರೈಕೆಯಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತನಿಖೆ ನಡೆಸಲು ಸಿಬಿಐ ನೇತೃತ್ವದ ಎಸ್‌ಐಟಿಯನ್ನು ರಚಿಸಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ರಾಜ್ಯದಲ್ಲಿನ 2 ವಿಶ್ವವಿದ್ಯಾಲಯಗಳು ನಕಲಿ ಸಾಲ ಪಡೆದು 109 ವರ್ಷ ಕಳೆದ್ರೂ ಅಸಲು, ಬಡ್ಡಿ ನೀಡದ ಬ್ರಿಟಿಷ್ ಸರ್ಕಾರ: ನೋಟಿಸ್ ನೀಡಲು ಮುಂದಾದ ಮದ್ಯಪ್ರದೇಶದ ವ್ಯಕ್ತಿ