Madhya Pradesh Family Lent ₹35,000 to British Government During World Warಸಾಲ ಪತ್ರ

ಭೋಪಾಲ್, ಫೆಬ್ರವರಿ 25: ತಾವು ನೀಡಿದ್ದ 35 ಸಾವಿರ ರೂ. ಸಾಲವನ್ನು ಬ್ರಿಟಿಷ್‌ ಸರ್ಕಾರ (British Government) ಇನ್ನೂವರೆಗೂ ಮರು ಪಾವತಿಸಲ್ಲವೆಂದು ಮಧ್ಯಪ್ರದೇಶ (Madhya Pradesh) ರಾಜ್ಯದ ಸೆಹೋರ್‌ ನಗರದ ಕುಟುಂಬವೊಂದು ಯುಕೆ ಸರ್ಕಾರಕ್ಕೆ ನೋಟಿಸ್‌ ನೀಡಲು ಮುಂದಾಗಿದೆ. ಸೆಹೋರ್‌ನ ನಿವಾಸಿ ವಿವೇಕ್ ರುಥಿಯಾ (63) ಅವರು ಇತ್ತೀಚೆಗೆ ತಮ್ಮ ಕುಟುಂಬದ ಆಸ್ತಿಯ ಹಳೆಯ ದಾಖಲೆಗಳನ್ನು ಪರಿಶೀಲಿಸುವಾಗ 1917ರಲ್ಲಿ ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್‌ ಸರ್ಕಾರಕ್ಕೆ ಸಾಲ ನೀಡಿದ ಪ್ರಮಾಣಪತ್ರ ಪತ್ತೆಯಾಗಿದೆ.

ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್‌ರ ಪರವಾಗಿ ಹೋರಾಡಲು ಪ್ರತಿ ಮನೆಯಿಂದ ಓರ್ವ ಪುರುಷನನ್ನು ಕಳುಹಿಸಬೇಕಾಗಿತ್ತು. ಹಾಗೂ ಸಾಲದ ರೂಪದಲ್ಲಿ ಹಣವನ್ನೂ ಕೂಡ ನೀಡಬೇಕಾಗಿತ್ತು. ಅದರಂತೆ, ವಿವೇಕ್ ರುಥಿಯಾ ಅವರ ಅಜ್ಜ ಸೇಠ್ ಜುಮ್ಮಾ ಲಾಲ್ ರುಥಿಯಾ ಅವರು 1917ರಲ್ಲಿ ಭೋಪಾಲ್ ಸಂಸ್ಥಾನದ ರಾಜಕೀಯ ಪ್ರತಿನಿಧಿ ಡಬ್ಲ್ಯೂ.ಎಸ್. ಡೇವಿಸ್ ಅವರಿಗೆ “ಇಂಡಿಯನ್ ವಾರ ಲೋನ್” ಯೋಜನೆಯಡಿ 35,000 ರೂಪಾಯಿಗಳನ್ನು ಸಾಲವಾಗಿ ನೀಡಿದ್ದರು. ಈ ಸಾಲವನ್ನು ಬ್ರಿಟಿಷ್‌ ಸರ್ಕಾರ  ಇನ್ನೂವರೆಗೂ ಹಿಂತಿರುಗಿಸಿಲ್ಲ ಎಂದು ವಿವೇಕ್ ರುಥಿಯಾ ತಿಸಿಳಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ನ್ಯೂಸ್‌ 18 ವರದಿ ಮಾಡಿದೆ.

1917ರ ಜೂನ್ 4 ರಂದು “ಸೇಠ್ ರಾಮ ಕಿಶನ್ ಜಾಸ್ಕರಣ ರುಥಿಯಾ ಸಂಸ್ಥೆಯ ಸೇಠ್ ಜುಮ್ಮಾ ಲಾಲ್ ಅವರು ಇಂಡಿಯನ್ ವಾರ ಲೋನ್ ಅಡಿಯಲ್ಲಿ 35,000 ರೂಪಾಯಿಗಳನ್ನು ಸಾಲದ ರೂಪದಲ್ಲಿ ನೀಡಿ, ಸರ್ಕಾರ ಮತ್ತು ಸಾಮ್ರಾಜ್ಯಕ್ಕೆ ನಿಷ್ಠೆ ತೋರಿದ್ದಾರೆ”ಎಂದು ದಾಖಲೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ದಾಖಲೆ ಮೇಲೆ ಡಬ್ಲ್ಯೂ.ಎಸ್. ಡೇವಿಸ್ ಅವರ ಸಹಿಯಿದೆ.

ಆ ಕಾಲದಲ್ಲಿ ಯುದ್ಧ ಸಾಲಗಳು ಸರ್ಕಾರವು ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಹೊರತಂದ ಸಾಲಪತ್ರಗಳಾಗಿದ್ದವು. ಸಾಮಾನ್ಯವಾಗಿ ಇವು ಶೇ 5.5 ವಾರ್ಷಿಕ ಬಡ್ಡಿದರವನ್ನು ನೀಡುತ್ತಿತ್ತು. 1937ರಲ್ಲಿ ಸೇಠ್ ಜುಮ್ಮಾ ಲಾಲ್ ನಿಧನರಾದರು. ನಂತರ 1947ರಲ್ಲಿ ಬ್ರಿಟಿಷರು ಭಾರತ ತೊರೆದರೂ, ಈ ಸಾಲವನ್ನು ಮರುಪಾವತಿಸಿರಲಿಲ್ಲ ಎಂದು ಕುಟುಂಬವು ಹೇಳಿದೆ.

1917ರಲ್ಲಿ 35,000 ರೂಪಾಯಿಗಳು ಶೇ 5.5 ವಾರ್ಷಿಕ ಚಕ್ರಬಡ್ಡಿಯೊಂದಿಗೆ ಲೆಕ್ಕ ಹಾಕಿದರೆ, ಇಂದು ಅದು ಕೋಟ್ಯಾಂತರ ರೂಪಾಯಿ ಆಗುತ್ತದೆ. ಚಿನ್ನದ ಬೆಲೆ ಏರಿಕೆಯನ್ನು ಆಧಾರವನ್ನಾಗಿ ಮಾಡಿಕೊಂಡರೆ, ಈ ಮೊತ್ತವು 10 ಕೋಟಿ ರೂಪಾಯಿಗಿಂತ ಹೆಚ್ಚು ಆಗಬಹುದು ಎಂಬ ಅಂದಾಜು ಇದೆ.

ಇದೀಗ ಕುಟುಂಬವು ಪ್ರಸ್ತುತ ಯುಕೆ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ವಕೀಲರೊಂದಿಗೆ ಚರ್ಚೆ ನಡೆಸುತ್ತಿದೆ. ಈ ಘಟನೆ ಕೇವಲ ಹಣದ ವಿಚಾರವಲ್ಲ, ಇತಿಹಾಸ ಮತ್ತು ನ್ಯಾಯದ ಪ್ರಶ್ನೆಯೂ ಆಗಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *