The Story of Sage Dadhichi: The Great Sacrifice Behind Indra’s VajraAI ಚಿತ್ರ

ದೇಶ ಮತ್ತು ಧರ್ಮ ರಕ್ಷಣೆಗೆ ಅನೇಕ ಮಹಾಪುರಷರು ಬಲಿದಾನ ಮಾಡಿದ್ದಾರೆ. ಅವರುಗಳಲ್ಲಿ ದಧೀಚಿ ಮಹರ್ಷಿಗಳು ಇಬ್ಬರು. ದಧೀಚಿ ಮರ್ಹಷಿಯವರ ತಂದೆ ಅಥರ್ವಣ ಮಹರ್ಷಿ, ತಾಯಿ ಶಾಂತಿ. ತಮ್ಮ ತಪೋಬಲದಿಂದ ಪ್ರಸಿದ್ಧರಾಗಿದ್ದ ಇವರು ಸರಸ್ವತೀನದಿಯ ತೀರದಲ್ಲಿ ಆಶ್ರಮವನ್ನು ನಿರ್ಮಿಸಿಕೊಂಡು ವಾಸವಾಗಿದ್ದರು.

ಒಂದು ಸಲ ದೇವತೆಗಳು ತಮ್ಮ ಆಯುಧಗಳನ್ನು ದಧೀಚಿ ಮಹರ್ಷಿಗಳ ರಕ್ಷಣೆಯಲ್ಲಿಟ್ಟು ಕೆಲವು ದಿನಗಳ ನಂತರ ಬಂದು ತೆಗೆದುಕೊಳ್ಳುವುದಾಗಿ ಹೇಳಿ ಹೊರಟು ಹೋದರು. ಆದರೆ ಎಷ್ಟು ದಿನಗಳು ಕಳೆದರೂ ದೇವತೆಗಳು ಹಿಂದಿರುಗಿ ಬಂದು ತಮ್ಮ ಆಯುಧಗಳನ್ನು ಪಡೆಯಲಿಲ್ಲ.

ಇನ್ನೊಬ್ಬರ ವಸ್ತುಗಳನ್ನು ಕಾಪಾಡು ವುದು ನಿಜಕ್ಕೂ ಕಷ್ಟದ ಕೆಲಸ! ಕಬ್ಬಿಣದ ಈ ಆಯುಧಗಳನ್ನು ಉಪಯೋಗಿಸದೆ ಇಟ್ಟಾಗ ಅವುಗಳಿಗೆ ತುಕ್ಕುಹಿಡಿಯುತ್ತದೆ. ಹೀಗೆ ದಿನದಿನಕ್ಕೆ ತಮ್ಮ ಕಾಂತಿಯನ್ನು ಕಳೆದುಕೊಂಡು ಮಂಕಾಗುತ್ತಿದ್ದ ಆಯುಧಗಳನ್ನು ನೋಡಿ ಮಹರ್ಷಿಗಳು ಚಿಂತಿತರಾದರು.

ಕೊನೆಗೆ ಒಂದು ನಿರ್ಧಾರಕ್ಕೆ ಬಂದವರಾಗಿ, ಅವುಗಳನ್ನೆಲ್ಲ ತಮ್ಮ ಯೋಗಬಲದಿಂದ ಪುಡಿ ಮಾಡಿ, ನೀರಿನಲ್ಲಿ ಕದಡಿ ಕುಡಿದುಬಿಟ್ಟರು. ಆ ಆಯುಧಗಳೆಲ್ಲವೂ ಮಹರ್ಷಿಗಳ ಬೆನ್ನುಮೂಳೆಯಲ್ಲಿ ಸಂಗ್ರಹವಾದ ಕಾರಣ ಅವರ ಬೆನ್ನುಮೂಳೆಯು ಬಹಳ ಗಟ್ಟಿಯಾಯಿತು.

ಕೃತಯುಗದಲ್ಲಿ ಯುದ್ಧವಿಶಾರದರಾದ, ಮದದಿಂದ ಕೊಬ್ಬಿದ, ಅತಿಭಯಂಕರ ರಾದ ಕಾಲೇಯರೆಂಬ ರಾಕ್ಷಸರಿದ್ದರು. ಇವರು ವೃತ್ರಾಸುರನನ್ನು ಆಶ್ರಯಿಸಿ ದೇವತೆಗಳಿಗೆ ಸಾಕಷ್ಟು ತೊಂದರೆಕೊಡುತ್ತಿದ್ದರು. ದೇವತೆಗಳಿಗೆ ಕಾಲೇಯರ ಮುಖಂಡನಾದ ವೃತ್ರಾಸುರನನ್ನು ಸಂಹರಿಸುವುದು ಅನಿವಾರ್ಯವಾಯಿತು.

ಅವರೆಲ್ಲ ಇಂದ್ರನನ್ನು ಮುಂದಿಟ್ಟುಕೊಂಡು ಬ್ರಹ್ಮನ ಬಳಿಗೆ ಹೋಗಿ ಅವನನ್ನು ಈ ರಾಕ್ಷಸನ ವಧೆಗಾಗಿ ಪ್ರಾರ್ಥಿಸಿದರು. ಆಗ ಬ್ರಹ್ಮನು ವೃತ್ರಾಸುರನು ಯಾವ ಸಾಂಪ್ರದಾಯಿಕ ಆಯುಧಗಳಿಂದಲೂ ಮರಣಹೊಂದುವುದಿಲ್ಲವೆಂಬ ರಹಸ್ಯವನ್ನು ತಿಳಿಸಿದನು. ನೀವೆಲ್ಲರೂ ದಧೀಚಿಮಹರ್ಷಿಯನ್ನು ಪಾರ್ಥಿಸಿ, ಅವರ ಬೆನ್ನುಮೂಳೆಯನ್ನು ತಂದು, ಅದರಿಂದ ಆಯುಧವನ್ನು ತಯಾರಿಸಿ ವೃತ್ರನನ್ನು ಸಂಹರಿಸಿ” ಎಂದು ಹೇಳಿದನು.

ಬ್ರಹ್ಮನಿಂದ ಈ ರೀತಿಯಾದ ಆದೇಶವನ್ನು ಪಡೆದ ದೇವತೆಗಳೆಲ್ಲರೂ ದಧೀಚಿ ಮಹರ್ಷಿಗಳ ದಿವ್ಯಾಶ್ರಮಕ್ಕೆ ತೆರಳಿದರು. ಅಲ್ಲಿ ಸೂರ್ಯನಂತೆ ದಿವ್ಯ ದೇಹಕಾಂತಿಯಿಂದ ಕೂಡಿದ್ದ ಮಹರ್ಷಿಗಳನ್ನು ಕಂಡರು. ಅವರೆಲ್ಲರೂ ಮಹರ್ಷಿಗಳ ಪಾದಾರವಿಂದಗಳಿಗೆ ನಮಸ್ಕರಿಸಿ ಬದ್ಧಾಂಜಲಿಗಳಾಗಿ ನಿಂತುಕೊಂಡರು.

ಋಷಿಗಳು ಅವರೆಲ್ಲರನ್ನೂ ಸ್ವಾಗತಿಸಿ, ಸತ್ಕರಿಸಿ, ಬಂದ ಕಾರಣವನ್ನು ಕೇಳಿದರು. ಮಹೇಂದ್ರನು ವೃತ್ರಾಸುರನಿಂದ ಆಗುತ್ತಿರುವ ತೊಂದರೆಗಳನ್ನೆಲ್ಲ ವಿವರಿಸಿ, ಮಹರ್ಷಿಗಳಿಂದ ಒಂದು ವರವನ್ನು ಕೋರಿದನು. ಯಾವ ವರವನ್ನು ಕೇಳಿದರೂ ಕೊಡುವುದಾಗಿ ಋಷಿಗಳು ಪ್ರತಿಜ್ಞೆ ಮಾಡಿದರು.

ಆಗ ದೇವತೆಗಳು, “ಮೂರು ಲೋಕಗಳಿಗೂ ಕಲ್ಯಾಣವನ್ನುಂಟುಮಾಡುವ ಸಲುವಾಗಿ ನಿಮ್ಮ ಬೆನ್ನುಮೂಳೆಯನ್ನು ದಯ ಪಾಲಿಸಿ” ಎಂದು ಪ್ರಾರ್ಥಿಸಿದರು. ಪರಮಪ್ರೀತರಾದ ದಧೀಚಿಮುನಿ ಮುಗುಳುನಗೆ ಯಿಂದ ಕೂಡಿದವರಾಗಿ, “ದೇವತೆಗಳಿರಾ! ನಿಮ್ಮೆಲ್ಲರ ಹಿತಕ್ಕಾಗಿ ನಾನು ನನ್ನ ದೇಹವನ್ನು ಈಗಲೇ ಪರಿತ್ಯಾಗ ಮಾಡುವೆನು. ಆನಂತರ ನೀವು ನನ್ನ ಮೂಳೆಗಳಿಂದ ಆಯುಧವನ್ನು ತಯಾರಿಸಿ ವೃತ್ರನನ್ನು ಸಂಹರಿಸಿರಿ” ಎಂದು ಹೇಳುತ್ತ ತಮ್ಮ ಯೋಗಬಲದಿಂದ ಒಡನೆಯೇ ಶರೀರವನ್ನು ತೊರೆದರು.

ಬ್ರಹ್ಮನ ನಿರ್ದೇಶದಂತೆ ದೇವತೆಗಳು ದಧೀಚಿಯನ್ನು ಪ್ರಶಂಸೆ ಮಾಡುತ್ತಾ, ಅವರ ಬೆನ್ನುಮೂಳೆಯನ್ನು ತೆಗೆದುಕೊಂಡು ಹೋಗಿ ದೇವಶಿಲ್ಪಿಯಾದ ತ್ವಷ್ಟವೆಂಬ ಹೆಸರಿನ ವಿಶ್ವಕರ್ಮನಿಗೆ ಕೊಟ್ಟರು. ತ್ವಷ್ಟವು ಏಕಾಗ್ರಚಿತ್ತದಿಂದಲೂ ಜಾಗರೂಕತೆಯಿಂದಲೂ ಕೆಲಸ ಮಾಡಿ ಮಹರ್ಷಿಯ ಮೂಳೆಯಿಂದ ಭಯಂಕರವಾದ ವಜ್ರಾಯುಧವನ್ನು ನಿರ್ಮಿಸಿ, ಇಂದ್ರನಿಗೆ ಒಪ್ಪಿಸಿದನು.

ವಜ್ರಾಯುಧವು ಆರು ಕೋನಗಳನ್ನು ಹೊಂದಿದ್ದು, ಘೋರ ಶಬ್ದಯುಕ್ತವಾಗಿದ್ದು, ಎಂತಹ ಪ್ರಬಲ ಶತ್ರುವನ್ನೂ ವಿನಾಶಗೊಳಿಸಲು ಸಮರ್ಥವಾಗಿತ್ತು. ಇಂದ್ರನು ಉಳಿದೆಲ್ಲ ದೇವಾಧಿದೇವತೆಗಳಿಂದಲೂ ಬಲವನ್ನು ಪಡೆದು ವಜ್ರಾಯುಧದಿಂದ ವೃತ್ರಾಸುರನನ್ನು ಸಂಹರಿಸಿದನು. ಇದೇ ವಜ್ರಾಯುಧವು ಮುಂದೆ ಪರ್ವತಗಳ ರೆಕ್ಕೆಗಳನ್ನು ಕತ್ತರಿಸಲೂ ಬಳಕೆಯಾಯಿತು. ಈ ಕಥೆ ತ್ಯಾಗ, ಧೈರ್ಯ ಮತ್ತು ಭಕ್ತಿಯ ಮಹತ್ವವನ್ನು ಸಾರುತ್ತದೆ.

ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1 

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *