The Story of Rishyasringa’s Blessing and the Birth of Lord Ramaಸಪ್ತರ್ಷಿಗಳಲ್ಲಿ ಒಬ್ಬರಾದ ಋಷ್ಯಶೃಂಗರ ತಪೋಬಲದಿಂದ ಪ್ರಭು ಶ್ರೀರಾಮ ಜನಿಸಿದ ಕಥೆ

ಋಷ್ಯಶೃಂಗರು ಮಹಾಮಹಿಮರಾದ ವಿಭಾಂಡಕಮಹರ್ಷಿಗಳ ಪುತ್ರರು. ಇವರ ತಾಯಿಯು ಬ್ರಹ್ಮನ ಶಾಪದಿಂದ ಹೆಣ್ಣು ಜಿಂಕೆಯಾಗಿ ಜನಿಸಿದ್ದ ಒಬ್ಬ ದೇವ ಸ್ತ್ರೀ. ಆದ್ದರಿಂದಲೇ ಶಿಶುವಿಗೆ ಮನುಷ್ಯದೇಹವಿದ್ದರೂ ತಲೆಯಲ್ಲಿ ಜಿಂಕೆಯಂತೆ ಒಂದು ಕೊಂಬು ಇದ್ದಿತು.

ಈ ಮಗುವು ತಂದೆಯೊಂದಿಗೆ ಆಶ್ರಮದಲ್ಲಿ ಬೆಳೆಯುತ್ತ ವೇದಾಧ್ಯಯನ ಸಂಪನ್ನನಾದುದಲ್ಲದೇ ಯಾವಾಗಲೂ ತಪಸ್ಸಿನಲ್ಲಿಯೇ ನಿರತನಾಗಿ ಶ್ರೇಷ್ಠ ಋಷಿಯಾಗಿ ರೂಪುಗೊಂಡನು. ಪುರುಷರನ್ನು ಬಿಟ್ಟು ಬೇರಾರನ್ನೂ ಕಾಣದ ಈ ಋಷಿ ಜಿತೇಂದ್ರಿಯರಾಗಿ ತಪಸ್ಸಿನ ಮೂಲಕ ಸಿದ್ಧಿಯನ್ನು ಸಂಪಾದಿಸಿದ್ದರು. ಅವರೇ ಋಷ್ಯಶೃಂಗರು.

ಋಷ್ಯಶೃಂಗರ ಆರ್ಶಿವಾದಿಂದ ರಾಮ ಜನಿಸಿದ ಕಥೆ

ದಶರಥಮಹಾರಾಜನು ಸಂತತಿಗೋಸ್ಕರ ಒಂದು ಯಾಗವನ್ನು ಮಾಡ ಬೇಕೆಂದು ಇಚ್ಛಿಸಿದನು. ಅದಕ್ಕಾಗಿ ಮಂತ್ರಿಗಳಲ್ಲಿಯೂ ಮಹರ್ಷಿಗಳಲ್ಲಿಯೂ ಸಲಹೆಗಳನ್ನು ಕೇಳಿದನು. ಆಗ ಸುಮಂತನು ಸನತ್ಕುಮಾರರಿಂದ ತನಗೆ ಹೇಳಲ್ಪಟ್ಟಿದ್ದಂತೆ ಋಷ್ಯಶೃಂಗರ ಚರಿತ್ರೆಯನ್ನು ದಶರಥನಿಗೆ ತಿಳಿಸಿ, ಯಾಗಕ್ಕೆ ಋಷ್ಯಶೃಂಗಮಹರ್ಷಿಯನ್ನು ಆಹ್ವಾನಿಸಿದರೆ, ಅವರ ತಪಃಪ್ರಭಾವದಿಂದ ಯಜ್ಞವು ವೀರ್ಯವತ್ತರವಾಗಿ ಫಲಪ್ರದವಾಗುವುದೆಂದು ತಿಳಿಸಿದನು.

ದಶರಥನು ಆನಂದದಿಂದ ಮಂತ್ರಿಪರಿವಾರಸಮೇತನಾಗಿ ರೋಮಪಾದನ ರಾಜ್ಯವನ್ನು ಪ್ರವೇಶಿಸಿದನು. ರೋಮಪಾದನು ತನ್ನ ಮಿತ್ರನಾದ ದಶರಥನನ್ನು ಸತ್ಕರಿಸಿ, ಋಷ್ಯಶೃಂಗರಿಗೆ ತಮ್ಮ ಸ್ನೇಹವನ್ನೂ ಪರಿಚಯವನ್ನೂ ತಿಳಿಸಿದನು. ದಶರಥನು ತಾನು ಬಂದಿರುವ ಕಾರ್ಯವನ್ನು ತಿಳಿಸಿ, ಮಹರ್ಷಿಗಳನ್ನು ಯಾಗಕ್ಕೆ ಆಹ್ವಾನಿಸಿದನು.

ಋಷ್ಯಶೃಂಗರು ಯಾಗ ಮಾಡಿಸಲು ಒಪ್ಪಿ ಪತ್ನಿಯೊಡನೆ ದಶರಥನ ಜೊತೆಯಲ್ಲಿ ಹೊರಟರು. ಎಲ್ಲರೂ ಆಯೋಧ್ಯೆಗೆ ಬಂದು, ಮನೋಹರವಾದ ವಸಂತಕಾಲದಲ್ಲಿ, ಋಷ್ಯಶೃಂಗರ ಆದೇಶದಂತೆ ಎಲ್ಲವನ್ನೂ ಸಿದ್ಧಪಡಿಸಿ. ಯಾಗವನ್ನು ಪ್ರಾರಂಭಿಸಿದರು. ಯಾವ ಶಾಸ್ತ್ರಲೋಪವೂ ಇಲ್ಲದೆ ಯಜ್ಞವು ನಿರ್ವಿಘ್ನವಾಗಿ ನೆರವೇರಿತು. ಮಹರ್ಷಿಗಳ ಆಶೀರ್ವಾದದಿಂದ ದಶರಥನು ಸಾಕ್ಷಾತ್ ವಿಷ್ಣುವನ್ನೇ ಪುತ್ರನನ್ನಾಗಿ ಪಡೆಯುವ ಭಾಗ್ಯವಂತನಾದನು. ಅವರೇ ಪ್ರಭು ಶ್ರೀರಾಮಚಂದ್ರ

ಹೀಗೆ ಋಷ್ಯಶೃಂಗರು ತಪೋಬಲಸಮನ್ವಿತರಾದ ಪ್ರಖ್ಯಾತ ಋಷಿಗಳು. ಸಾವರ್ಣಿಕ ಮನ್ವಂತರದಲ್ಲಿದ್ದ ಸಪ್ತರ್ಷಿಗಳಲ್ಲಿ ಇವರೂ ಒಬ್ಬರು.

ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1 

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *