The Incredible Story of Animandavya Who Traveled Across Worlds in His Physical Bodyಅಣಿಮಾಂಡವ್ಯ ಮಹರ್ಷಿ

ಮಾಂಡವ್ವರೆಂಬ ಸತ್ಯಸಂಧನೂ ತಪಸ್ವಿಯೂ ಧರ್ಮಜ್ಞನೂ ಆದ ಬ್ರಾಹ್ಮಣರೊಬ್ಬರು. ಅವರು ಕಠಿಣವಾದ ತಪಸ್ಸನ್ನು ಮಾಡಲು ನಿಶ್ಚಯಿಸಿ, ಆಶ್ರಮದ ಹೊರಗಿನ ಮರದ ಕೆಳಗೆ ಯೋಗನಿಷ್ಠನಾಗಿ ಎರಡು ಕೈಗಳನ್ನೂ ಮೇಲೆತ್ತಿ ಕುಳಿತು, ಮೌನವ್ರತ ಧಾರಿಯಾಗಿ ಅನೇಕ ವರ್ಷಗಳ ಕಾಲ ಧ್ಯಾನಮಗ್ನನಾಗಿದ್ದರು.

ಒಂದು ದಿನ ಹಲವು ಮಂದಿ ಕಳ್ಳರು ನಗನಾಣ್ಯಗಳೊಡನೆ ಆಶ್ರಮದ ಸಮೀಪಕ್ಕೆ ಓಡಿಬಂದರು. ಅವರ ಹಿಂದೆಯೇ ರಾಜಭಟರೂ ಅವರನ್ನು ಬೆನ್ನಟ್ಟಿಬಂದರು. ಕಳ್ಳರು ಆಶ್ರಮದೊಳಕ್ಕೆ ನುಸುಳಿ, ತಾವು ತಂದಿದ್ದ ವಸ್ತುಗಳೊಡನೆ ಬಚ್ಚಿಟ್ಟುಕೊಂಡರು. ಆದು ಋಷಿಯ ಆಶ್ರಮವಾದ್ದರಿಂದ ರಾಜಭಟರು ಅದನ್ನು ಪ್ರವೇಶಿಸಿ ತಮಗಾಗಿ ಹುಡುಕುವುದಿಲ್ಲವೆಂದು ಕಳ್ಳರು ಭಾವಿಸಿದ್ದರು.

ರಾಜಭಟರು ಆಶ್ರಮದ ಸಮೀಪಕ್ಕೆ ಬಂದು, ಮರದ ಕೆಳಗೆ ಧ್ಯಾನಮಗ್ನರಾಗಿ ಕುಳಿತಿದ್ದ ಮಾಂಡವ್ಯರನ್ನು ಕಳ್ಳರ ವಿಷಯವಾಗಿ ಪ್ರಶ್ನಿಸಿದರು. ಅವರ ಪ್ರಶ್ನೆಗಳಿಗೆ ಮೌನವ್ರತದಲ್ಲಿದ್ದ ಋಷಿಗಳಿಂದ ಯಾವ ಉತ್ತರವೂ ಬರಲಿಲ್ಲ. ರಾಜಭಟರು ಆಶ್ರಮದ ಒಳಗೆ ಹೋಗಿ ಪರಿಶೋಧಿಸಿದರು.

ಕಳ್ಳರೆಲ್ಲರೂ ತಾವು ಕೊಳ್ಳೆಹೊಡೆದಿದ್ದ ವಸ್ತುಗಳ ಸಮೇತ ಸಿಕ್ಕಿಬಿದ್ದರು. ಆಶ್ರಮದಲ್ಲಿಯೇ ಎಲ್ಲವೂ ಸಿಕ್ಕಿದುದರಿಂದ ರಾಜಭಟರಿಗೆ, ಹೊರಗೆ ಮರದಡಿ ಕುಳಿತಿರುವವನೇ ಕಳ್ಳರ ಗುರು ವಿರಬೇಕೆಂಬ ಸಂಶಯ ಬಂದಿತು. ಹಾಗಾಗಿ ಮಾಂಡವ್ಯರನ್ನೂ ಕಳ್ಳರ ಜೊತೆಯಲ್ಲಿ ಬಂಧಿಸಿ ರಾಜನ ಬಳಿಗೆ ಎಳೆದು ತಂದರು. ರಾಜನೂ ಕೂಡಾ ಋಷಿಯು ಏನನ್ನೂ ಹೇಳದೆ ಮೌನವಾಗಿದ್ದುದರಿಂದ, ಎಲ್ಲ ಕಳ್ಳರ ಜೊತೆಯಲ್ಲಿ ಮಾಂಡವ್ಯರನ್ನೂ ಶೂಲಕ್ಕೆ ಏರಿಸುವಂತೆ ಆಜ್ಞಾಪಿಸಿದನು.

ರಾಜಭಟರು ರಾಜಾಜ್ಞೆಯನ್ನು ನಿರ್ವಹಿಸಿ ಹೊರಟುಹೋದರು. ಆದರೆ ಯೋಗನಿಷ್ಠರಾದ ಮಹರ್ಷಿಗಳು ಅನೇಕ ದಿನಗಳು ಕಳೆದರೂ ಶೂಲಾರೂಢರಾಗಿಯೇ ಜೀವಂತವಾಗಿ, ಎಂದಿನಂತೆ ಧ್ಯಾನಾಸಕ್ತರಾಗಿಯೇ ಇದ್ದರು. ಅಷ್ಟೇ ಅಲ್ಲದೆ ತಮ್ಮ ಯೋಗಬಲದಿಂದ ಆಶ್ರಮವಾಸಿಗಳಾಗಿದ್ದ ಬೇರೆ ಬೇರೆ ಮಹರ್ಷಿಗಳನ್ನು ತಾವಿದ್ದ ಸ್ಥಳಕ್ಕೇ ಆಹ್ವಾನಿಸಿದರು. ಅವರೆಲ್ಲರೂ ರಾತ್ರಿಯ ವೇಳೆಯಲ್ಲಿ ಪಕ್ಷಿಗಳ ರೂಪವನ್ನು ಧರಿಸಿ ಬಂದು, ಮಾಂಡವ್ಯರ ಸ್ಥಿತಿಯನ್ನು ನೋಡಿ ಮರುಗಿದರು.

ರಾತ್ರಿಯಲ್ಲಿ ಪಹರೆ ನಡೆಸುತ್ತಿದ್ದ ರಾಜಭಟರು ಈ ಎಲ್ಲವನ್ನೂ ನೋಡಿ, ವಿಷಯವನ್ನು ರಾಜನಲ್ಲಿ ನಿವೇದಿಸಿದರು. ರಾಜನು ಕೂಡಲೇ ಮಂತ್ರಿ-ಪುರೋಹಿತರೊಂದಿಗೆ ಮಹರ್ಷಿಯ ಬಳಿಗೆ ಬಂದು, ಅಂಜಲಿಬದ್ಧನಾಗಿ ಸ್ತೋತ್ರ ಮಾಡಿ, ತಾನು ಮಾಡಿದ ಅಪರಾಧವನ್ನು ಮನ್ನಿಸಬೇಕೆಂದು ಬೇಡಿಕೊಂಡನು. ಮಹರ್ಷಿಗಳು “ನನಗೆ ನಾನೇ ಅಪರಾಧಿ. ಬೇರೆ ಯಾರೂ ಅಪರಾಧ ಮಾಡಿರುವುದಿಲ್ಲ” ಎಂದು ಶಾಂತಭಾವದಿಂದ ಹೇಳಿದರು.

ಮಾಂಡವ್ಯರನ್ನು ಶೂಲದಿಂದ ಕೆಳಗಿಳಿಸಲಾಯಿತು. ಆದರೆ ಶೂಲವನ್ನು ಅವರ ಶರೀರದಿಂದ ಬೇರ್ಪಡಿಸಲು ಆಗಲೇ ಇಲ್ಲ. ಕೊನೆಗೆ ಶರೀರದ ಒಳಗೆ ಹೊಕ್ಕಿದ್ದ ಶೂಲದ ಭಾಗವನ್ನು ಬಿಟ್ಟು ಉಳಿದ ಭಾಗವನ್ನು ಕತ್ತರಿಸಲಾಯಿತು. ಶೂಲದ ಭಾಗವು ದೇಹದಲ್ಲೇ ಉಳಿಯಿತಾದ್ದರಿಂದ ಮುಂದೆ ಅವರು ‘ಆಣಿಮಾಂಡವ್ಯ’ರೆಂದು ಪ್ರಸಿದ್ದಿ ಹೊಂದಿ, ಮಹತ್ತರವಾದ ತಪವನ್ನು ಮಾಡಿ. ಇತರರಿಂದ ಜಯಿಸಲಸಾಧ್ಯವಾದ ಉತ್ತಮ ಲೋಕಗಳನ್ನು ಪಡೆದರು. ಸಶರೀರಿಯಾಗಿಯೇ ಸಕಲಲೋಕಗಳಲ್ಲಿಯೂ ಸಂಚರಿಸುವ ಸಾಮರ್ಥ್ಯವನ್ನು ಗಳಿಸಿದರು.

ಮಹರ್ಷಿಗಳಿಗೆ ತಮಗೆ ದೊರೆತ ದಂಡನೆಗೆ ಕಾರಣವಾದ , ತಾವು ಮಾಡಿದ ಮಹಾಪರಾಧವೇನೆಂದು ತಿಳಿಯಬೇಕೆನ್ನಿಸಿ ಯಮಧರ್ಮನಲ್ಲಿಗೆ ಹೋದರು.  

ನೇರವಾಗಿ ಯಮನನ್ನೇ ಕುರಿತು “ನಾನು ಮಾಡಿರುವ ಯಾವ ಮಹಾಪಾಪದ ಕಾರಣದಿಂದ ಹೀಗೆ ನಿರಂತರ ಶೂಲದ ಯಾತನೆಯನ್ನು ಅನುಭವಿಸಬೇಕಾಗಿದೆ?” ಎಂದು ಕೇಳಿದರು. ಯಮನು, “ಮಹರ್ಷಿಗಳೇ! ನೀವು ಪತಂಗಗಳನ್ನು ಕಡ್ಡಿಯಿಂದ ಚುಚ್ಚಿ ತೊಂದರೆಪಡಿಸಿರುತ್ತೀರಿ, ಮಾನವನು ದಾನಮಾಡಿದ ವಸ್ತುವು ಅಲ್ಪವಾದರೂ ಹೆಚ್ಚಿನ ಫಲವು ಸಿಕ್ಕುವಂತೆ, ಪಾಪವು ಅಲ್ಪವಾದರೂ ಅದರ ನೂರುಮಡಿ ದುಃಖಕ್ಕೆ ಕಾರಣವಾಗುತ್ತದೆ” ಎಂದು ಹೇಳಿದನು. ಮಹರ್ಷಿಗಳಿಗೆ ತಾವು ಯಾವ ಕ್ರಿಮಿಕೀಟವನ್ನೂ ಘಾಸಿಗೊಳಿಸಿದ ನೆನಪು ಇರಲಿಲ್ಲ.

ಅವರು ಯಮನನ್ನು ಕುರಿತು ಮತ್ತೆ “ಯಮಧರ್ಮ! ನೀನೀಗ ಹೇಳಿದ ಪಾಪಕಾರ್ಯವನ್ನು ನಾನು ಯಾವಾಗ, ಎಲ್ಲಿ ಮಾಡಿದನೆಂದು ಹೇಳುತ್ತೀಯಾ?” ಎಂದು ಕೇಳಿದರು. ಯಮನು “ತಾವು ಬಾಲಕರಾಗಿದ್ದಾಗ ಹೀಗೆ ಮಾಡುತ್ತಿದ್ದೀರಿ” ಎಂದು ಉತ್ತರವಿತ್ತನು.

ಆಗ ಮಹರ್ಷಿಗಳು, “ಯಮರಾಜ! ಹುಟ್ಟಿದ ಹನ್ನೆರಡು ವರ್ಷಗಳವರೆಗೆ ಮಾಡಿದ ಪಾಪವು ಖಂಡಿತವಾಗಿಯೂ ಪಾಪವೆನಿಸದು. ಅಲ್ಲಿಯವರೆಗೆ ಬಾಲಕರಿಗೆ ಕಾರ್ಯಾಕಾರ್ಯವಿವೇಕವು ಇರುವುದಿಲ್ಲ.

ಇಂದಿನಿಂದ ನಾನು ನೂತನವಾದ ನಿಯಮವನ್ನು ಮಾಡುತ್ತೇನೆ. 14 ವರ್ಷದವರೆಗೆ ಮಕ್ಕಳು ಮಾಡಿದ ಅಪರಾಧಗಳು ಪಾಪವೆಂದು ಪರಿಗಣಿತವಾಗಬಾರದು. ಅನಂತರ ಮಾಡಿದ ಪಾಪಗಳಿಗೆ ನೀನು ಶಿಕ್ಷೆಯನ್ನು ಕೊಡಬಹುದು” ಎಂದು ಯಮನಿಗೇ ಶಾಸನ ಮಾಡಿದರು. ಯಮನೂ ಅದನ್ನು ಮಾನ್ಯಮಾಡಬೇಕಾಯಿತು.

ಅಷ್ಟೇ ಅಲ್ಲದೆ ಬಾಲ್ಯದಲ್ಲಿ ತಿಳಿಯದೇ ಮಾಡಿದ ಒಂದು ಅಪರಾಧಕ್ಕಾಗಿ ಯಮನು ತಮಗೆ ಅಷ್ಟು ಕಠಿಣವಾದ ಶಿಕ್ಷೆಯನ್ನು ವಿಧಿಸಿದುದು ಮಹರ್ಷಿಗಳಿಗೆ ಸರಿ ಎನಿಸಲಿಲ್ಲ. ಮತ್ತೆ ಯಮನನ್ನು ಕುರಿತು, “ವಿವೇಚನೆಯಿಲ್ಲದೆ, ಅಲ್ಪವಾದ ಅಪರಾಧಕ್ಕೆ ನಿರಂತರ ಯಾತನೆ ಅನುಭವಿಸುವ ಈ ಕಠಿಣಶಿಕ್ಷೆಯನ್ನು ಒಬ್ಬ ಬ್ರಾಹ್ಮಣನಿಗೆ ನೀಡಿದುದಕ್ಕಾಗಿ ನೀನು ಶೂದ್ರಯಲ್ಲಿ ಮಾನವನಾಗಿ ಹುಟ್ಟು” ಎಂದು ಶಾಪವಿತ್ತರು.

ಬ್ರಹ್ಮಾಸ್ತ್ರದ ಗುರಿಯನ್ನಾದರೂ ತಪ್ಪಿಸಿಕೊಳ್ಳಬಹುದು; ತಪಸ್ವಿಗಳ ಶಾಪವು ಎಂದೂ ಸುಳ್ಳಾಗುವುದಿಲ್ಲ. ಮುಂದೆ ಯಮಧರ್ಮರಾಯನು ವಿದುರನಾಗಿ ಜನಿಸಿದನು. ಯಮನ ಅವತಾರವಾದ್ದರಿಂದ ಅವನಲ್ಲಿ ಸಕಲವಿದ್ಯೆಗಳೂ ನೆಲೆಸಿದ್ದವಲ್ಲದೆ, ಧರ್ಮದ ಅಪರಾವತಾರವಾಗಿದ್ದನು.

ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1 

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *