ಭಾರತದ ಮಹರ್ಷಿಗಳಲ್ಲಿ ಗೌತಮರು ಒಬ್ಬರು. ಗೌತಮ ಮಹರ್ಷಿಗಳ ಹೆಸರು ಪುರಾಣ ಮತ್ತು ರಾಮಾಯಣದಲ್ಲಿ ಕೇಳಿದ್ದೇವೆ. ಗೌತಮ ಮಹರ್ಷಿಗಳು ಪತ್ನಿ ಅಹಲ್ಯಗೆ ಶಾಪ ನೀಡಿದ್ದು, ಪ್ರಭು ಶ್ರೀರಾಮ ಶಾಮವಿಮೋಚನೆ ಮಾಡಿದ ಕಥೆಯನ್ನು ಕೇಳಿದ್ದೇವೆ. ಆದರೆ, ಗೋದಾವರಿ ನದಿ ಉಗಮಕ್ಕೆ ಗೌತಮ ಮಹರ್ಷಿಗಳು ಕಾರಣ ಎಂಬ ಕಥೆ ಇಲ್ಲಿದೆ. ಗೋದಾವರಿ ಭಾರತದ ಪವಿತ್ರವೂ ಪ್ರಖ್ಯಾತವೂ ಆದ ನದಿಗಳಲ್ಲೊಂದು. ಇದರ ಉಗಮಕ್ಕೆ ಕಾರಣರಾದವರು ಗೌತಮ ಮಹರ್ಷಿಗಳು, ಈ ತೀರ್ಥದ ಮಹಿಮೆ ಅಪಾರವಾದುದು. ಉತ್ತರದಲ್ಲಿರುವ ಗಂಗೆಗೆ ಸಮಾನವಾದ ಈ ನದಿಯು ‘ಗೌತಮೀ ಗಂಗಾ’ ಎಂದೇ ಪ್ರಸಿದ್ಧವಾಗಿದೆ. ಗಂಗೆಯ ಉದಕದ ಲಾಭವನ್ನು ಪಡೆಯಲು ತ್ರ್ಯಂಬಕಕ್ಷೇತ್ರದಲ್ಲಿದ್ದ ಋಷಿಗಳೆಲ್ಲ ಸೇರಿ ಒಂದು ಉಪಾಯವನ್ನು ಮಾಡಿದರು. ಬ್ರಹ್ಮರ್ಷಿಯೆನಿಸಿದ ಗೌತಮರು ಆ ಕಾಲಕ್ಕೆ ಅಲ್ಲಿ ತಪಸ್ಸು ಮಾಡುತ್ತಿದ್ದರು. ಅವರು ತಮ್ಮ ಆಶ್ರಮದ ಸುತ್ತ ಇರುವ ಪ್ರದೇಶದಲ್ಲಿ ಬತ್ತವನ್ನು ಬಿತ್ತಿದ್ದರು. ಪುಣ್ಯಪುರುಷರಾದ ಅವರು ತಮ್ಮ ತಪಃಸಾಮರ್ಥ್ಯದಿಂದಲೇ ಬೆಳೆಯನ್ನು ಬೆಳೆಯುತ್ತಿದ್ದರು. ‘ಋಷಿಗಳಲ್ಲಿ ಶ್ರೇಷ್ಠರಾದ ಮತ್ತು ಸರ್ವೆಶ್ವರನ ಮುಖ್ಯ ದಾಸರಾದ ಗೌತಮರಿಗೆ ಏನಾದರೂ ಒಂದು ಬಗೆಯ ಸಂಕಟವನ್ನುಂಟುಮಾಡಿದರೆ, ಅವರು ತಮ್ಮ ಪಾಪಪರಿಹಾರಕ್ಕಾಗಿ ಪ್ರಾಯಶ್ಚಿತ್ತಕ್ಕೆ ಮುಂದಾಗುವರು. ಆಗ ಅವರಿಗೆ ಗಂಗೆಯನ್ನು ತರುವಂತೆ ಹೇಳಬೇಕೆಂದು ಉಳಿದೆಲ್ಲ ಮುನಿಗಳು ಯೋಚಿಸಿದರು. ಅವರೆಲ್ಲರೂ ಸೇರಿ ದರ್ಭೆಯಿಂದ ಒಂದು ಹಸುವನ್ನೂ ಅದಕ್ಕೊಂದು ಕರುವನ್ನೂ ಸೃಷ್ಟಿಸಿದರು. ಮಂತ್ರದ ಪ್ರಭಾವದಿಂದ ಅದಕ್ಕೆ ಜೀವವನ್ನು ತುಂಬಿ ಗೌತಮರು ಬೆಳೆದಿರುವ ಬೆಳೆಯನ್ನು ಮೇಯಲು ಬಿಟ್ಟರು. ಅಲ್ಲಿಯೇ ಅನುಷ್ಠಾನಮಾಡುತ್ತಿದ್ದ ಗೌತಮರು, ಅದನ್ನು ಓಡಿಸಲು ಒಂದು ದರ್ಭೆಯನ್ನು ಅದರತ್ತ ಎಸೆದರು. ಅದು ಹಸುವಿಗೆ ತಗುಲಿದ ಕೂಡಲೇ ವಜ್ರಾಸ್ತ್ರದಂತೆ ಪರಿಣಮಿಸಿ, ಹಸುವು ಮರಣಹೊಂದಿತು. ಗೌತಮರಿಗೆ ಗೋಹತ್ಯಾದೋಷವು ಪ್ರಾಪ್ತವಾಯಿತು. ಈ ದೋಷದ ಪರಿಹಾರಕ್ಕಾಗಿ ಗಂಗೆಯನ್ನು ಭೂಮಿಗೆ ತಂದು ಅದರಲ್ಲಿ ಸ್ನಾನ ಮಾಡಬೇಕೆಂದು ಋಷಿಗಳ ಪರಿಷತ್ತು ವಿಧಿಸಿತು. ಈ ನಿಮಿತ್ತವಾಗಿ ಗೌತಮರು ಈಶ್ವರನನ್ನು ಕುರಿತು ಘೋರ ತಪಸ್ಸನ್ನು ಮಾಡಿದರು. ಅವರ ತಪಸ್ಸಿಗೆ ಮೆಚ್ಚಿದ ಶಂಕರನು ತನ್ನ ಜಟೆಯಲ್ಲಿದ್ದ ಗಂಗೆಗೆ, ಭೂಮಿಗೆ ಹೋಗಲು ನಿರೂಪಕೊಟ್ಟನು. ಗಂಗೆಯು ಗೋದಾವರಿಯಾಗಿ ಗೌತಮರ ಆಶ್ರಮದ ಬಳಿ ಪ್ರವಹಿಸಿ ಅವರನ್ನು ಪವಿತ್ರರನ್ನಾಗಿ ಮಾಡಿದಳು. ಹೀಗೆ ಗೌತಮರು ಲೋಕೋಪಕಾರಕ್ಕಾಗಿ ಗಂಗೆಯನ್ನೇ ಭೂಮಿಗೆ ತಂದರು. ಈ ಕಾರಣದಿಂದಲೇ ಗೋದಾವರಿಯು ‘ಗೌತಮೀ ಗಂಗಾ’ ಎಂದೇ ಪ್ರಖ್ಯಾತಳಾದಳು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಸಪ್ತರ್ಷಿಗಳಲ್ಲಿ ಒಬ್ಬರಾದ ಋಷ್ಯಶೃಂಗರ ಆಶಿರ್ವಾದಿಂದ ಪ್ರಭು ಶ್ರೀರಾಮ ಜನಿಸಿದ ಕಥೆ ಭರತನ ಗಾಯ ಗುಣಮುಖವಾಗಲು ಲಕ್ಷ್ಮಣ ಮುದ್ಗಲ ಮಹರ್ಷಿಗಳ ಆಶ್ರಮದಿಂದ ಸಂಜೀವಿನಿ ತಂದ ಕಥೆ