ಭಾರತದ ಮಹರ್ಷಿಗಳ ಬಗ್ಗೆ ತಿಳಿಯುತ್ತಾ ಹೋದಂತೆ ಉದ್ದಾಲಕ ಮಹರ್ಷಿಗಳ ಹೆಸರೂ ಕೇಳಿಬರುತ್ತದೆ. ಉದ್ದಾಲಕ ಮಹರ್ಷಿಗಳ ಹೆಸರು ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಹೌದು, ಜಪತಪಾನುಷ್ಠಾನಕರ್ಮಗಳಿಗೆ ಸಹಕಾರಿಯಾಗಿರಲೆಂದು ಚಂಡಿಯೆಂಬ ವಧುವನ್ನು ಉದ್ದಾಲಕ ಮಹರ್ಷಿಗಳು ವಿವಾಹವಾದರು. ಆದರೆ, ಚಂಡಿಯು ಉದ್ದಾಲಕರು ಹೇಳಿದುದಕ್ಕೆ ವಿರುದ್ಧವಾಗಿ ಮಾಡುತ್ತಿದ್ದಳು. ಒಂದು ದಿನ ಉದ್ದಾಲಕರು ಪಿತೃಕಾರ್ಯ ಮಾಡುತ್ತಿದ್ದರು. ಆಗ, ಉದ್ದಾಲಕರು ಪಿಂಡುವನ್ನು ಮಡುವಿಗೆ ಹಾಕು ಎಂದು ಚಂಡಿಗೆ ಹೇಳಿಬಿಟ್ಟರು. ಆದರೆ, ಇವರು ಹೇಳಿದ್ದನ್ನು ವಿರುದ್ಧವಾಗಿಯೇ ಮಾಡಿಕೊಂಡು ಬಂದಿದ್ದ ಚಂಡಿ, ಪಿಂಡವನ್ನು ಎತ್ತಿ ಬೀದಿಗೆ ಬಿಸಾಕಿದಳು. ಇದರಿಂದ ಕುಪಿತರಾದ ಉದ್ದಾಲಕರು ಕಲ್ಲಾಗುವಂತೆ ಶಾಪಕೊಟ್ಟರು. ಸುಮಾರು ವರ್ಷಗಳ ನಂತರ ಅರ್ಜುನನು, ಕಲ್ಲಾಗಿರುವ ಚಂಡಿಯನ್ನು ಮುಟ್ಟಿದಾಗ ಆಕೆಯ ಶಾಪವಿಮೋಚನೆಯಾಯಿತು. ಹೀಗೆ, ಉದ್ದಾಲಕರ ಮಹರ್ಷಿಗಳ ಉಲ್ಲೇಖ ಮಹಾಭಾರತದಲ್ಲಿ ಇದೆ. ಉದ್ದಾಲಕರ ಗುರುಭಕ್ತಿ ಜನಮೇಜಯ ಮಹಾರಾಜನ ಕಾಲದಲ್ಲಿ ಆಯೋಧಧೇಮ್ಯರೆಂಬ ಹೆಸರಿ ಮಹರ್ಷಿಗಳೊಬ್ಬರಿದ್ದರು. ಅವರಿಗೆ ಆರುಣಿ, ಉಪಮನ್ಯು ಮತ್ತು ವೇದರೆಂಬ ಮೂವರು ಪ್ರಮುಖ ಶಿಷ್ಯರಿದ್ದರು. ಅವರಲ್ಲಿ ಮೊದಲನೆಯವನಾದ ಆರುಣಿಯ ಪಾಂಚಾಲ ದೇಶದವನು ಒಮ್ಮೆ ದೌಮ್ಯರು ಅವನನ್ನು ಕರೆದು ಒಡೆದುಹೋಗಿದ್ದ ಗದ್ದೆಯ ಬದುವನ್ನು ಕಟ್ಟುವಂತೆ ಹೇಳಿದರು. ಗುರುಗಳಿಂದ ನಿರ್ದೇಶಿತನಾದ ಆರುಣಿಯು ಗದ್ದೆಯ ಬಳಿಗೆ ಹೋಗಿ ಕೊಟ್ಟ ಹೋಗುತ್ತಿದ್ದ ಬದುವನ್ನು ಸರಿಪಡಿಸಲು ಬಹುವಾಗಿ ಪ್ರಯತ್ನಿಸಿದನು. ಆದರೆ ನೀರಿನ ರಭಸದಿಂದಾಗಿ, ಮಾಡಿದ ಪ್ರಯತ್ನಗಳೆಲ್ಲ ವಿಫಲವಾಗುತ್ತಿದ್ದವು. ಆಗ ಅವನಿಗೊಂದು ಉಪಾಯವು ಹೊಳೆಯಿತು. ‘ಅದೇ ಸರಿ, ಹಾಗೆಯೇ ಮಾಡುತ್ತೇನೆ’ ಎಂದು ಯೋಚಿಸಿ, ಹರಿಯುತ್ತಿದ್ದ ನೀರಿಗೆ ತಾನೇ ಅಡ್ಡಲಾಗಿ ಮಲಗಿಬಿಟ್ಟನು! ಆಗ ಹರಿಯುತ್ತಿದ್ದ ನೀರು ನಿಂತು, ಗದ್ದೆಯು ಪೂರ್ಣವಾಗಿ ತೃಪ್ತವಾಯಿತು. ಬಹಳ ಹೊತ್ತಾದರೂ ಶಿಷ್ಯನು ಬಾರದಿದ್ದಾಗ ಗುರುಗಳು ಕಳವಳಗೊಂಡು ಶಿಷ್ಯಸಮೇತರಾಗಿ ಅವನನ್ನು ಹುಡುಕಲು ಹೊರಟರು. ಗದ್ದೆಯ ಬಳಿ ಬಂದು ನೋಡಿದಾಗ, ಶಿಷ್ಯನು ಎಲ್ಲಿಯೂ ಕಾಣಲಿಲ್ಲ. ಗಟ್ಟಿಯಾಗಿ ಚಪ್ಪಾಳೆ ತಟ್ಟುತ್ತಾ, “ಮಗೂ ಆರುಣೀ, ಪಾಂಚಾಲ್ಯ, ಎಲ್ಲಿರುವೆ? ಬೇಗ ಬಾ?” ಎಂದು ಕೂಗಿದರು. ಗುರುಗಳ ಧ್ವನಿಯನ್ನು ಕೇಳಿದ ಕೂಡಲೇ ಶಿಷ್ಯನು ಗದ್ದೆಯ ಬದುವಿನಿಂದ ಮೇಲೆದ್ದು, ಗುರುಗಳ ಸಂಮುಖದಲ್ಲಿ ವಿನಯಪೂರ್ವಕ ಆಂಜಲಿಬದ್ಧನಾಗಿ ನಿಂತುಕೊಂಡನು. ಗುರುಗಳು “ಅಪ್ಪಾ ಹೀಗೇಕೆ ಮಲಗಿಕೊಂಡಿದ್ದೆ?” ಎಂದು ಕೇಳಿದರು. ಆಗ ಆರುಣಿಯು “ಭಗವನ್! ಬದುವು ಕೊಚ್ಚಿಹೋಗಿ ಗದ್ದೆಯಿಂದ ಹರಿದುಹೋಗುತ್ತಿದ್ದ ನೀರನ್ನು ತಡೆಯುವಂತೆ ತಮ್ಮಿಂದ ಆಜ್ಞಪ್ತನಾಗಿದ್ದೆನು. ಆದರೆ ಯಾವ ಪ್ರಯತ್ನದಿಂದಲೂ ಬದುವು ನಿಲ್ಲದೆ, ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಲಿದ್ದಿತು. ಗುರುವಿನ ಆಜ್ಞೆಯನ್ನು ನಡೆಸಲಾರದ ಶಿಷ್ಯನು ಅಧಮನೇ ಸರಿ. ನಾನು ಹಾಗಾಗಬಾರದೆಂದು ನೀರಿಗೆ ಅಡ್ಡಲಾಗಿ ನಾನೇ ಮಲಗಿ, ರಭಸದಿಂದ ಹರಿಯುತ್ತಿದ್ದ ನೀರನ್ನು ತಡೆಯುತ್ತಿದ್ದೆನು. ಈಗ ತಮ್ಮ ಕೂಗನ್ನು ಕೇಳಿ ಎದ್ದುಬಂದಿರುತ್ತೇನೆ. ಈಗ ಮತ್ತೇನು ಮಾಡಬೇಕೆಂದು ಆಜ್ಞಾಪಿಸಬೇಕು” ಎಂದು ಪ್ರಾರ್ಥಿಸಿದನು. “ನನ್ನ ಕೂಗನ್ನು ಕೇಳಿದೊಡನೆಯೇ ನೀನು ಯಾವ ಕಾರಣದಿಂದ ಬದುವನು ಗುರುಗಳಿಗೆ ಶಿಷ್ಯನ ಗುರುಭಕ್ತಿಯನ್ನು ಕಂಡು ಅತೀವ ಸಂತೋಷವಾಯಿತು, ಭೇದಿಸಿಕೊಂಡು ಬಂದೆಯೋ ಅದೇ ಕಾರಣದಿಂದ ನೀನು ‘ಉದ್ಘಾಲಕ’ನೆಂದು ಪ್ರಸಿದ್ದನಾಗು. ನನ್ನ ಆಜ್ಞೆಯನ್ನು ಯಥಾವತ್ತಾಗಿ ಪಾಲಿಸಿದ ಕಾರಣ ಶ್ರೇಯೋವಂತ ನಾಗುವೆ. ಎಲ್ಲ ವೇದಗಳೂ ಸಮಸ್ತ ಧರ್ಮಶಾಸ್ತ್ರಗಳೂ ನಿನ್ನ ಬುದ್ದಿಗೆ ಗೋಚರಿ ವಾಗುತ್ತವೆ” ಎಂದು ಹರಸಿದರು. ಉದ್ದಾಲಕನೆಂದರೆ ಬದುವಿಗೆ ಬಂಧಿಸಲ್ಪಟ್ಟವ ನೆಂದು ಅರ್ಥ. ಈ ಶಿಷ್ಯನೇ ಮುಂದೆ ಉದ್ಘಾಲಕ ಮಹರ್ಷಿಯೆಂದು ವಿಖ್ಯಾತರಾದವರು. ಉಪನಿಷತ್ತಿನಲ್ಲಿ ಬರುವ ಪ್ರಮುಖ ಆಚಾರರಲ್ಲಿ ಇವರೂ ಒಬ್ಬರು. ಇವರ ತಂದೆಯ ಹೆಸರು ಅರುಣ ಔಪವೇಶಿ. ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1 ಲೇಖಕರು: ಡಾ. ಎಸ್. ಹೇಮಲತಾ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಅಗಸ್ತ್ಯ ಮಹರ್ಷಿಗಳ ಕಮಂಡಲದಿಂದ ಕಾವೇರಿ ನದಿಯಾಗಿ ಹರಿದ ಲೋಪಾಮುದ್ರೆ 14 ವರ್ಷದವರೆಗೆ ಮಕ್ಕಳು ಮಾಡಿದ ಅಪರಾಧ ಪಾಪವೆಂದು ಪರಿಗಣಿಸಬಾರದು: ಯಮನಿಗೇ ಶಾಸನ ಮಾಡಿದ ಅಣಿಮಾಂಡವ್ಯ ಮಹರ್ಷಿ