ಸೃಷ್ಟಿಕಾರ್ಯವನ್ನು ನೆರವೇರಿಸಲು ಬ್ರಹ್ಮನು ತನ್ನ ಮನಸ್ಸಿನಿಂದ ಸೃಷ್ಟಿಸಿದ ಮಹರ್ಷಿಗಳಲ್ಲಿ (Sage) ಪುಲಸ್ತ್ಯರೂ ಒಬ್ಬರು. ಇವರು ಸ್ವಾಯಂಭಾವ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬರು. ಇದೇ ಮೊದಲನೆಯ ಮನ್ವಂತರವು. ಮರೀಚಿ, ಅತ್ರಿ, ಪುಲಹ, ಪುಲಸ್ತ್ಯ, ಕ್ರತು, ಅಂಗಿರಸ ಮತ್ತು ವಸಿಷ್ಠರು ಮನ್ವಂತರ ಮಹರ್ಷಿಗಳು. ಕರ್ದಮನೇ ಮುಂತಾದ ಹತ್ತು ಪ್ರಜಾಪತಿಗಳಲ್ಲಿ ಪುಲಸ್ಥರೂ ಒಬ್ಬರು. ಕರ್ದಮ ಪ್ರಜಾಪತಿಯು ಬ್ರಹ್ಮನಿಂದ ಆಜ್ಜಪ್ಪನಾಗಿ ಸರಸ್ವತಿ ನದಿಯ ತೀರದಲ್ಲಿ ಹತ್ತುಸಾವಿರ ವರ್ಷ ತಪಸ್ಸನ್ನು ಮಾಡಿದ ನಂತರ ದೇವಹೂತಿಯನ್ನು ಪತ್ನಿಯಾಗಿ ಸ್ವೀಕರಿಸಿದರು. ಇವರ ಮಗಳಾದ ಹವಿರ್ಭುಕ್ ಎಂಬುವಳನ್ನು ಪುಲಸ್ಥರು ವರಿಸಿದರು. ಅವರಿಗೆ ಇಲಿಬಿಲಾ, ಪ್ರೀತಿ, ಸಂಧ್ಯಾ, ಪ್ರತೀಚ್ಯಾ ಮುಂತಾದ ಪತ್ನಿಯರೂ ಇದ್ದರೆಂದು ಹೇಳುತ್ತಾರೆ. ಇವೆಲ್ಲವೂ ಒಬ್ಬಳೇ ಪತ್ನಿಯ ಹಲವು ನಾಮಧೇಯಗಳೆಂದೂ ಕೆಲವರು ಹೇಳುವುದುಂಟು. ಪುಲಸ್ಕರಿಗೆ ಇಲಬಿಲಾ ಎಂಬ ಪತ್ನಿಯಲ್ಲಿ ವೈಶ್ರವಣನೆಂಬ ಪುತ್ರನು ಜನಿಸಿದನು. ವೈಶ್ರವಣನೇ ಕುಬೇರನು. ಇವನು ಚಿಕ್ಕವಯಸ್ಸಿನಲ್ಲಿಯೇ ತಂದೆಯನ್ನು ಬಿಟ್ಟು ಬ್ರಹ್ಮನನ್ನು ಆಶ್ರಯಿಸಿದನು. ಬ್ರಹ್ಮನು ಸಂತೋಷಗೊಂಡು ಕುಬೇರನಿಗೆ ಆಮರತ್ನ, ಧನಪಾಲಕತ್ವ ಮತ್ತು ಲೋಕಪಾಲಕರ ಸ್ಥಾನಗಳನ್ನು ಅನುಗ್ರಹಿಸಿದನು. ಇದ್ದ ಒಬ್ಬನೇ ಮಗನು ತಮ್ಮನ್ನು ಬಿಟ್ಟು ಹೊರಟುಹೋದುದಕ್ಕೆ ಪುಲಸ್ಯರು ಕುಪಿತರಾದರು. ಪ್ರತೀಕಾರ ರೂಪವಾಗಿ ತಮ್ಮ ದೇಹದಿಂದ ಮತ್ತೊಂದು ದೇಹವನ್ನು ಸೃಷ್ಟಿಸಿದರು. ಅವನೇ ವಿಶ್ರವಸ್, ವಿಶ್ರವಸನು ಕುಬೇರನನ್ನು ಘಾಸಿಪಡಿಸಲು ಸಿದ್ದನಾದನು. ಅಷ್ಟರಲ್ಲಿಯೆ, ತಂದೆಯು ಕೋಪಗೊಂಡು ಪ್ರತೀಕಾರಕ್ಕಾಗಿ ದೇಹಾಂತರದಿಂದ ಬರುತ್ತಿರುವುದನ್ನು ತಿಳಿದ ಕುಬೇರನು, ಅವರ ಕೋಪಶಮನ ಮತ್ತು ಅನುಗ್ರಹಕ್ಕಾಗಿ ಯತ್ನಿಸಿ. ಮೂವರು ರಾಕ್ಷಸಸ್ತ್ರೀಯರನ್ನು ಅವರ ಸೇವೆಗೆಂದು ಕಳಿಸಿಕೊಟ್ಟನು. ಕುಬೇರನಿಗೆ ಈಶ್ವರನೊಡನೆ ಸಖ್ಯವೂ ರಕ್ಷೋಗಣಗಳಿಂದ ಪರಿವೃತವಾದ ಲಂಕಾ ರಾಜ್ಯವೂ ಬ್ರಹ್ಮನಿಂದ ಕೊಡಲ್ಪಟ್ಟಿತ್ತು. ಇಚ್ಛೆ ಬಂದಲ್ಲಿಗೆ ಹೋಗಬಹುದಾಗಿದ್ದ ಪುಷ್ಪಕವೆಂಬ ವಿಮಾನವನ್ನು ಚತುರ್ಮುಖನು ಕುಬೇರನಿಗೆ ಕೊಟ್ಟಿದ್ದನು. ಯಕ್ಷರ ನಾಯಕತ್ವವನ್ನೂ ರಾಜನೆಂಬ ಬಿರುದನ್ನೂ ಅವನು ಬ್ರಹ್ಮನಿಂದ ಪಡೆದಿದ್ದನು. ಆದ್ದರಿಂದ ಅವನು ರಾಕ್ಷಸಸ್ತ್ರೀಯರಲ್ಲಿ ಸುಂದರಿಯರೂ ಸುಶೀಲೆಯರೂ ಆಗಿದ್ದವರನ್ನೇ ತಂದೆಯ ಬಳಿಗೆ ಕಳಿಸಿದನು. ಯಾವಾಗಲೂ ಉಗ್ರದೃಷ್ಟಿಯಿಂದ ನೋಡುತ್ತಿದ್ದ ತಂದೆಯನ್ನು ಸಂತೃಪ್ತಗೊಳಿಸಿ, ಅವನಿಂದ ಶಾಪಗ್ರಸ್ತನಾಗದಂತಿರಲು ಪ್ರಯತ್ನಿಸುತ್ತಲೇ ಇದ್ದನು. ಕುಬೇರನಿಂದ ಕಳಿಸಲ್ಪಟ್ಟಿದ್ದ ಮೂವರೂ ರಾಕ್ಷಸಿಯರೂ ಪರಸ್ಪರ ಸ್ಪರ್ಧೆಗಿಳಿದವರಂತೆ ಮಹಾತ್ಮರಾದ ಪುಲಸ್ಪರ ಸೇವೆಯನ್ನು ಮಾಡುತ್ತಿದ್ದರು. ಅವರ ಸೇವೆಯಿಂದ ಸಂಪ್ರೀತರಾದ ಮಹರ್ಷಿಗಳು, ಅವರೆಲ್ಲರಿಗೂ ವರಗಳನ್ನು ದಯಪಾಲಿಸಿದರು. ಅವರ ಆಶಯದಂತೆ ಮೂವರಿಗೂ ಲೋಕಪಾಲಕನಾದ ಕುಬೇರನಿಗೆ ಅನುರೂಪರಾದ ಪುತ್ರರನ್ನು ಅನುಗ್ರಹಿಸಿದರು. ಅತ್ಯಂತ ಬಲಶಾಲಿಗಳಾದ ರಾವಣ-ಕುಂಭಕರ್ಣರು ವುಷೋತ್ಕಟಾ ಎಂಬ ರಾಕ್ಷಸ ಸ್ತ್ರೀಯಲ್ಲಿ ಜನಿಸಿದರು. ಎರಡನೆಯವಳಾದ ಮಾಲಿನಿಯೆಂಬವಳಲ್ಲಿ ವಿಭೀಷಣನು ಜನಿಸಿದನು. ಮೂರನೆಯವಳಾದ ‘ರಾಕಾ’ ಎಂಬವಳು ಖರನೆಂಬ ಪುತ್ರನನ್ನು ಶೂರ್ಪನಖಾ ಎಂಬ ಪುತ್ರಿಯನ್ನೂ ಪಡೆದಳು. ಇವರಲ್ಲಿ ರಾವಣನೇ ಹಿರಿಯನು. ಅವನಿಗೆ ಕುಬೇರನು ತಂದೆಗೆ ಮಾಡಿದ ಅನ್ಯಾಯವು ತಿಳಿಯಿತು. ತಾನೂ ತಪಸ್ಸು ಮಾಡಿ ಬ್ರಹ್ಮನಿಂದ ವರವನ್ನು ಪಡೆದು, ಕುಬೇರನನ್ನು ಜಯಿಸಿ, ಅವನಿಂದ ಲಂಕಾಧಿಪತ್ಯವನ್ನೂ ಪುಷ್ಪಕವಿಮಾನವನ್ನೂ ಕಿತ್ತುಕೊಂಡನು.” ಇದನ್ನೂ ಓದಿ: ತತ್ತ್ವಶಾಸ್ತ್ರದ ಪಿತಾಮಹ ಕಪಿಲ ಮಹರ್ಷಿ ಕಥೆ ಒಮ್ಮೆ ರಾವಣನು ಕಾರ್ತವೀರ್ಯಾರ್ಜುನನನ್ನು ಕೆಣಕಿದನು. ದತ್ತಾತ್ರೇಯನ ಭಕ್ತನೂ ಸಹಸ್ರಬಾಹುವೂ ಆದ ಕಾರ್ತವೀರ್ಯನು ರಾವಣನನ್ನು ಕ್ಷಣಮಾತ್ರದಲ್ಲಿ ಜೀವಂತವಾಗಿ ಸೆರೆಹಿಡಿದು ಬಂಧಿಸಿಟ್ಟನು. ಮಗನ ದುಃಸ್ಥಿತಿಯನ್ನು ಕಂಡು ಪುಲಸ್ಯರು ಕಾರ್ತವೀರ್ಯನಲ್ಲಿಗೆ ಬಂದು, ರಾವಣನನ್ನು ಬಿಡುವಂತೆ ಪ್ರಾರ್ಥಿಸಿದರು. ಅದರಂತೆ ರಾವಣನು ಬಂಧನದಿಂದ ಬಿಡುಗಡೆಯನ್ನು ಪಡೆದು ಲಂಕೆಗೆ ಮರಳಿದನು. ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Shankaracharya Jayanti: ಆದಿ ಶಂಕರಾಚಾರ್ಯರಿಂದ ವೃದ್ಧೆ ಮನೆಯಲ್ಲಿ ಬಂಗಾರದ ನೆಲ್ಲಿಕಾಯಿಗಳು ಸುರಿದ ಕಥೆ ದೃಢಭಕ್ತಿಯಿಂದ ಯಮನನ್ನೇ ಸೋಲಿಸಿದವರು ಮಾರ್ಕಂಡೇಯ ಮಹರ್ಷಿಗಳು