Brahmarshi Asiladeva explained in detail to Narada the creation of the animal kingdomಅಸಿಲದೇವ ಮಹರ್ಷಿ

ಅಸಿತದೇವಲರು ಮಹಾಭಾರತದ ಕಾಲಕ್ಕೆ ಸಾಕಷ್ಟು ಪ್ರಸಿದ್ಧರಾದ ಋಷಿಗಳಾಗಿದ್ದರು. ಭಗವದ್ಗೀತೆಯ ಹತ್ತನೆಯ ಅಧ್ಯಾಯದಲ್ಲಿ ಅರ್ಜುನನು ಶ್ರೀಕೃಷ್ಣನನ್ನು ಪರಬ್ರಹ್ಮ, ಪರಂಧಾಮ ಮತ್ತು ಪರಮಪವಿತ್ರನೆಂದು ಹೇಳುತ್ತ ನಾರದ, ಅಸಿತದೇವಲ, ವ್ಯಾಸರಂತಹ ಮಹರ್ಷಿಗಳು ಈ ರೀತಿ ಅಭಿಪ್ರಾಯವುಳ್ಳವರಾಗಿದ್ದರೆಂದೂ ಮತವು ಮಹರ್ಷಿಗಳ ಅನುಭವಕ್ಕೆ ಹೊಂದಿಕೆಯಾದುದೆಂದೂ ಹೇಳುತ್ತಾನೆ.

ಹೀಗೆ ಅಸಿತದೇವಲರನ್ನು ಪ್ರಖ್ಯಾತರಾದ ನಾರದ ಮತ್ತು ವ್ಯಾಸರ ಸಾಲಿನಲ್ಲಿ ಸೇರಿಸಿರುವುದೇ ಅವರ ಮಹತ್ತಿಗೆ ಸಾಕ್ಷಿಯಾಗಿದೆ. ಇವರು ಮಂತ್ರದ್ರಷ್ಟಾರ ಋಷಿಗಳು, ಋಗೈದದ ಎಪ್ಪತ್ನಾಲ್ಕು ಮಂತ್ರಗಳು ಇವರ ಹೆಸರಿನಲ್ಲಿವೆ. ಈ ಮಂತ್ರಗಳ ದೇವತೆ -ಪವಮಾನ ಸೋಮ.

ಭೀಷ್ಮನು ಶಾಂತಿಪರ್ವದಲ್ಲಿ ‘ಮೋಕ್ಷಕ್ಕೆ ವಾಕ್, ಕಾಯ ಮತ್ತು ಮನಸ್ಸುಗಳ ನಿಯಮನವೇ ಶ್ರೇಷ್ಠವಾದ ಮಾರ್ಗವೆಂದು ಯುಧಿಷ್ಠಿರನಿಗೆ ಹೇಳುತ್ತ, ಜೀವಾತ್ಮನು ದೇಹಭಾವದಿಂದ ಮುಕ್ತನಾಗುವ ವಿಷಯದಲ್ಲಿ ಅಸಿತದೇವಲ ಮತ್ತು ನಾರದರ ಸಂವಾದವನ್ನು ಉಲ್ಲೇಖಿಸುತ್ತಾನೆ.

ಹಿಂದೊಮ್ಮೆ ನಾರದರು ಬುದ್ಧಿವಂತರಲ್ಲಿ ಶ್ರೇಷ್ಠರಾದ ದೇವಲಮಹರ್ಷಿಯನ್ನು ಸಮೀಪಿಸಿ, ಪ್ರಾಣಿಗಳ ಉತ್ಪತ್ತಿ ಮತ್ತು ಲಯಗಳ ವಿಷಯವಾಗಿ ಪ್ರಶ್ನಿಸಿದರು. ಅದಕ್ಕೆ ಉತ್ತರವಾಗಿ ದೇವಲರು ಪರಮಾತ್ಮನ ಪ್ರೇರಣೆಯಿಂದ ಕಾಲನು ಪಂಚಭೂತಗಳ ಸಹಾಯವನ್ನು ಪಡೆದು ಸಮಸ್ತಪ್ರಾಣಿಗಳನ್ನೂ ಸೃಷ್ಟಿಸುತ್ತಾನೆಂದು, ಸೃಷ್ಟಿಯ ಪ್ರಕ್ರಿಯೆಯನ್ನು ವಿಸ್ತಾರವಾಗಿ ತಿಳಿಸಿದರು. ‘ಕಾಲಪ್ರೇರಿತವಾಗಿಯೇ ಜೀವವು ಶರೀರದಿಂದ ಶರೀರಕ್ಕೆ ಹೋಗುತ್ತಿರುತ್ತದೆ. ವ್ಯಕ್ತಿಯು ತತ್ತ್ವಜ್ಞಾನದಿಂದ ಶರೀರದ ಮೇಲಿನ ಅಭಿಮಾನವನ್ನು ತೊರೆದು ಪರಮಗತಿಯನ್ನು ಹೊಂದುತ್ತಾನೆಂದು’ ಅವರು ತತ್ರೋಪದೇಶ ಮಾಡಿದರು.

ಮಹಾಭಾರತದ ಆದಿಪರ್ವದಲ್ಲಿ ದೇವಲರ ಜನ್ಮವೃತ್ತಾಂತವಿದೆ. ಬ್ರಹ್ಮನ ಮಗ ಮನು. ಮನುವಿನ ಮಗ ಪ್ರಜಾಪತಿ. ಪ್ರಜಾಪತಿಗೆ ಧರ, ಧುವ, ಸೋಮ, ಅಹಸ್ಸು, ಅನಿಲ, ಅನಲ, ಪ್ರತ್ಯಷ, ಪ್ರಭಾಸರೆಂಬ ಎಂಟು ಮಂದಿ ಮಕ್ಕಳಿದ್ದರು. ಇವರೇ ಅಷ್ಟವಸುಗಳು. ಪ್ರತ್ಯಷನ ತಾಯಿಯ ಹೆಸರು ಪ್ರಭಾತಾ. ಈ ಪ್ರತ್ಯಷನ ಮಗನೇ ದೇವಲಮಹರ್ಷಿ. ಇವರು ಕಪ್ಪು ವರ್ಣದವರಾಗಿದ್ದುದರಿಂದ ಅಸಿತದೇವಲರೆಂದು ಹೆಸರಾಯಿತು. ಅಷ್ಟವಸುಗಳು ಋಗ್ವೇದದ ಮೂವತ್ತೂರು ದೇವತೆಗಳಲ್ಲಿ ಸೇರಿದ್ದಾರೆ.

ದೇವಲರು ದೇವರ್ಷಿಗಳೂ, ತಮ್ಮ ಬ್ರಹ್ಮಜ್ಞಾನದ ಪ್ರಭಾವದಿಂದ ಬ್ರಹ್ಮರ್ಷಿಗಳೂ ಆದವರು. ಪಾಂಡವರ ಕುಲಪುರೋಹಿತರಾದ ದೌಮ್ಯರು ದೇವಲರ ಸಹೋದರರು. ಜನಮೇಜಯನು ಮಾಡಿದ ಸರ್ಪಯಾಗದಲ್ಲಿ ಭಾಗವಹಿಸಿದ್ದ ಋಷಿಗಳ ಪಟ್ಟಿಯಲ್ಲಿ ದೇವಲರ ಹೆಸರನ್ನು ಕಾಣುತ್ತೇವೆ. ಬಲರಾಮನ ತೀರ್ಥಯಾತ್ರಾಪ್ರಸಂಗದಲ್ಲಿಯೂ ಅಸಿತದೇವಲರ ವೃತ್ತಾಂತವನ್ನು ಕಾಣುತ್ತೇವೆ.

ಅಸಿತದೇವಲರು ಹಿಮಾಲಯದ ಆದಿತ್ಯತೀರ್ಥವೆಂಬ ಸ್ಥಳದಲ್ಲಿ ತಪಸ್ಸು ಮಾಡಿಕೊಂಡಿದ್ದರು. ಅವರು ಧರ್ಮಪರಾಯಣರೂ ಜಿತೇಂದ್ರಿಯರೂ ಕೋಪವನ್ನು ನಿಯಂತ್ರಿಸಬಲ್ಲವರೂ ನಿಂದಾಸ್ತುತಿಗಳನ್ನು ಸಮನಾಗಿ ಭಾವಿಸಬಲ್ಲವರೂ ಎಲ್ಲರಲ್ಲಿಯೂ ಮತ್ತು ಎಲ್ಲ ವಸ್ತುಗಳಲ್ಲಿಯೂ ಸಮದೃಷ್ಟಿಯುಳ್ಳವರೂ ಆಗಿದ್ದರು. ಪ್ರತಿನಿತ್ಯವೂ ದೇವತೆಗಳನ್ನು, ಬ್ರಾಹ್ಮಣರನ್ನು ಮತ್ತು ಅತಿಥಿಗಳನ್ನು ಆದರಿಸುತ್ತಿದ್ದರು.

ಜೈಗೀಷವ್ಯರೆಂಬ ಮುನಿಗಳು ದೇವಲರಿದ್ದ ಪ್ರದೇಶಕ್ಕೇ ಬಂದು ನೆಲಸಿದರು. ಅವರು ಸದಾ ಯೋಗದಲ್ಲಿ ತನ್ಮಯರಾಗಿರುತ್ತಿದ್ದರು. ಸಂನ್ಯಾಸಿಗಳಾಗಿದ್ದ ಜೈಗೀಷರನ್ನು ಗೃಹಸ್ಥರಾಗಿದ್ದ ಅಸಿತದೇವಲರು ಆದರಿಸಿ ಭಿಕ್ಷೆ ನೀಡಿ ಗೌರವಿಸುತ್ತಿದ್ದರು. ಹೀಗೆಯೇ ಅನೇಕ ವರ್ಷಗಳು ಕಳೆದುಹೋದವು. ಜೈಗೀಷವ್ಯರು ಒಂದು ಮಾತನ್ನೂ ಆಡುತ್ತಿರಲಿಲ್ಲ.

ಅದೊಂದು ದಿನ ಈ ಕುರಿತು ಅಲೋಚಿಸುತ್ತ ದೇವಲರು ಕೈಯಲ್ಲಿ ಕಲಶವನ್ನೆತ್ತಿಕೊಂಡು ಸಮುದ್ರದ ಕಡೆಗೆ ಹೋಗುತ್ತಿದ್ದರು. ಸಮುದ್ರತೀರಕ್ಕೆ ಹೋಗುವ ಹೊತ್ತಿಗೆ ಇವರಿಗಿಂತ ಮೊದಲು ಅಲ್ಲಿದ್ದ ಜೈಗೀಷವ್ಯರನ್ನು ನೋಡಿ ಅಸಿತದೇವಲರಿಗೆ ಆಶ್ಚರ್ಯವಾಯಿತು. ಆಕಾಶಮಾರ್ಗದಲ್ಲಿ ವೇಗವಾಗಿ ಬಂದ ಈ ಸಂನ್ಯಾಸಿಯು ತಮಗಿಂತಲೂ ಮೊದಲು ಸ್ನಾನಾದಿಗಳನ್ನು ಮುಗಿಸಿರುತ್ತಾರೆ. ಇದು ಹೇಗೆ ಸಾಧ್ಯವೆಂದು ಚಿಂತಿಸುತ್ತಲೇ ತಮ್ಮ ಸ್ನಾನ. ನಿತ್ಯಕರ್ಮಗಳನ್ನೆಲ್ಲ ಮುಗಿಸಿದರು.

ಜಪಾದಿಗಳನ್ನು ಮುಗಿಸಿಕೊಂಡು ಹಿಂದಿನಂತೆಯೇ ಆಕಾಶಮಾರ್ಗವಾಗಿ ಜಲಪೂರ್ಣವಾದ ಕಲಶದ ಸಮೇತ ಆಶ್ರಮಕ್ಕೆ ಹಿಂದಿರುಗಿದರು. ಆದರೆ ಅಸಿತದೇವಲರಿಗಿಂತ ಮೊದಲೇ ಜೈಗೀಷವ್ಯರು ಆಶ್ರಮದಲ್ಲಿ ಆಸೀನರಾಗಿದ್ದರು. ಅವರು ಅಸಿತದೇವಲರೊಂದಿಗೆ ಒಂದು ಮಾತನ್ನೂ ಆಡಲಿಲ್ಲ. ಎಂದಿನಂತೆ ಭಿಕ್ಷೆಯನ್ನು ಸ್ವೀಕರಿಸಿ ಹೊರಟು ಹೋದರು.

ಮಂತ್ರಶಾಸ್ತ್ರದಲ್ಲಿ ಪಾರಂಗತರಾಗಿದ್ದ ಅಸಿತದೇವಲರು ಜೈಗೀಷ್ಟವರ ಆಂತರ್ಯವನ್ನು ಅರಿಯುವ ಸಲುವಾಗಿ ಆಶ್ರಮದಿಂದ ಹೊರಟು ಅಂತರಿಕದಲ್ಲಿ ಸುತ್ತಾಡತೊಡಗಿದರು. ಅಲ್ಲಿ ಅನೇಕ ಸಿದ್ಧಪುರುಷರು ಇದ್ದರು. ಅವರೆಲ್ಲರೂ ಜೈಗೀಷವ್ಯರನ್ನು ಬಹಳ ಆದರದಿಂದ ಪೂಜಿಸುತ್ತಿದ್ದರು.

ಆ ದೃಶ್ಯವನ್ನು ನೋಡಿ ದೇವಲರಿಗೆ ಆಶ್ಚರ್ಯವೂ ಕೋಪವೂ ಏಕಕಾಲದಲ್ಲಿ ಉಂಟಾದುವು. ಜೈಗೀಷವ್ಯರು ಅಲ್ಲಿಂದ ಹೊರಟಾಗ ಆಸಿತದೇವಲರು ಅವರನ್ನು ಅನುಸರಿಸಿದರು. ಜೈಗೀಷವ್ಯರು ಕ್ರಮವಾಗಿ ಸ್ವರ್ಗಲೋಕ, ಪಿತೃಲೋಕ, ಯಮಲೋಕ, ಸೋಮಲೋಕಗಳನ್ನು ಸಂದರ್ಶಿಸುತ್ತ, ಅನೇಕ ಪುಣ್ಯಲೋಕಗಳಿಗೆ ಹೋಗುತ್ತಿರುವುದನ್ನು ದೇವಲರು ನೋಡುತ್ತಲೇ ಇದ್ದರು.

ರಾಜಸೂಯ, ಅಶ್ವಮೇಧಾದಿ ಯಾಗ ಮಾಡಿದವರಿಗೂ ದುಷ್ಟಾಪ್ಯವಾದ ಲೋಕಗಳಿಗೆ ಜೈಗೀಷವ್ಯರು ಸುಲಭವಾಗಿ ಹೋಗಿಬರುತ್ತಿದ್ದುದನ್ನು ನೋಡುತ್ತಿದ್ದ ದೇವಲರು ಚಿಕಿತರಾಗಿ, ಅಲ್ಲಿ ವಾಸಮಾಡುತ್ತಿದ್ದ ಸಿದ್ದರನ್ನು ವಿನಯಭಾವದಿಂದ ಬದ್ಧಾಂಜಲಿಗಳಾಗಿ ಪ್ರಶ್ನಿಸಿದರು:

“ಮಹಾತೇಜಸ್ವಿಗಳಾದ ಜೈಗೀಷವ್ಯರನ್ನು ಹಿಂಬಾಲಿಸಿ ಬಂದೆನು. ಅವರು ಅನೇಕ ಲೋಕಗಳಿಗೆ ಹೋಗಿ ಬರುತ್ತಿದ್ದುದನ್ನು ನೋಡಿದೆ. ಇದೀಗ ಅವರು ಎಲ್ಲಿಗೆ ಹೋದರೋ ಗೊತ್ತಾಗಲಿಲ್ಲ. ಅವರು ಎಲ್ಲಿಗೆ ಹೋಗಿರಬಹುದೆಂಬುದನ್ನು ತಮ್ಮಿಂದ ತಿಳಿಯಲು ಬಯಸುತ್ತೇನೆ.” ಇದಕ್ಕೆ ಉತ್ತರವಾಗಿ ಸಿದ್ಧರು ‘ಜೈಗೀಷವ್ಯರು ಬ್ರಹ್ಮಲೋಕಕ್ಕೆ ಹೋಗಿರುತ್ತಾರೆಂದೂ, ಅಲ್ಲಿಗೆ ಉಳಿದವರಿಗೆ ಪ್ರವೇಶವಿಲ್ಲವೆಂದೂ’ ಹೇಳಿದರು. ದೇವಲರು ತಾವೂ ಅಲ್ಲಿಗೆ ಹೋಗಬೇಕೆಂದು ಬಯಸಿ, ಹಾರಲು ಪ್ರಯತ್ನಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ. ಸಿದ್ದರಿಂದ ಅನುಮತಿಯನ್ನು ಪಡೆದು ಅಸಿತದೇವಲರು ತಾವು ಬಂದ ಲೋಕಗಳ ಮಾರ್ಗವಾಗಿ ಹಿಂದಿರುಗಿ, ತಮ್ಮ ಆಶ್ರಮಕ್ಕೆ ಬಂದರು.

ಅಲ್ಲಿ ಆಗಲೇ ಜೈಗೀಷವ್ಯರು ಕುಳಿತಿರುವುದನ್ನು ಅವರು ನೋಡಿದರು; ಜೈಗೀಷವ್ಯರು ತಮಗಿಂತ ಉತ್ತಮ ಸಾಧಕರೆಂದು ಮನಗಂಡರು. ಕೂಡಲೇ ಅವರು ಜೈಗೀಷವ್ಯರಿಗೆ ಶರಣಾಗಿ, ‘ತಾವು ಅವರ ಶಿಷ್ಯರಾಗಬೇಕೆಂದು ಬಯಸಿರುವುದಾಗಿಯೂ ಮುನಿಗಳು ಕೃಪೆ ಮಾಡಬೇಕೆಂದೂ’ ಬೇಡಿಕೊಂಡರು.

ಅಸಿತದೇವಲರು ಈಗಾಗಲೇ ಸಾಕಷ್ಟು ಸಾಧನೆ ಮಾಡಿರುವುದನ್ನು ಜೈಗೀಷವ್ಯರೂ ಗುರುತಿಸಿದ್ದರು. ದೇವಲರು ಯೋಗಶಕ್ತಿಸಂಪನ್ನರಾದವರೇ ಆಗಿದ್ದರು. ಈಗ ಮೋಕ್ಷಾರ್ಥಿಗಳಾಗಿ ಗುರುಗಳನ್ನು ಆಶ್ರಯಿಸಿದ್ದರು. ಜೈಗೀಷವ್ಯರು ಅಸಿತದೇವಲರಿಗೆ ಯೋಗವಿಧಿಯನ್ನೂ ಸಂನ್ಯಾಸದೀಕ್ಷೆಯನ್ನೂ ನೀಡಿದರು.

ಇಲ್ಲಿಯವರೆಗೆ ಅಸಿತದೇವಲರು ಗೃಹಸ್ಥಾಶ್ರಮದಲ್ಲಿದ್ದರು. ದೇವ-ಪಿತೃ ಕಾರ್ಯಗಳನ್ನು ತಪ್ಪದೇ ಮಾಡುತ್ತಿದ್ದರು. ಆಲಸ್ಯವಿಲ್ಲದೆ ಅತಿಥಿ-ಅಭ್ಯಾಗತರನ್ನು ಸೇವಿಸುತ್ತಿದ್ದರು. ಈಗ ಅವರು ಸಂನ್ಯಾಸ ಸ್ವೀಕಾರಮಾಡುವರೆಂಬ ವಿಷಯವನ್ನು ಕೇಳಿ, ಎಲ್ಲ ಪ್ರಾಣಿಗಳೂ ಮತ್ತು ಪಿತೃದೇವತೆಗಳೂ “ಇನ್ನು ಮುಂದೆ ನಮಗಾರು ದಿಕ್ಕು?” ಎಂದು ಗಟ್ಟಿಯಾಗಿ ರೋದನ ಮಾಡತೊಡಗಿದರು. ಹತ್ತು ದಿಕ್ಕುಗಳಿಂದಲೂ ಕೇಳಿಬರುತ್ತಿದ್ದ ಅಳುವಿನ ಶಬ್ದವು ಅಸಿತದೇವಲರ ಮನಸ್ಸನ್ನು ಕಲಕಿತು. ಕರುಣಾಮೂರ್ತಿಗಳಾದ ದೇವಲರು ಸಂನ್ಯಾಸವನ್ನು ಸ್ವೀಕರಿಸಬಾರದೆಂದು ನಿಶ್ಚಯಿಸಿದರು. ಹೀಗೆ ಸಂನ್ಯಾಸಧರ್ಮವನ್ನು ಸ್ವೀಕರಿಸಲು ನಿಶ್ಚಯಿಸಿ, ಮತ್ತೆ ಗೃಹಸ್ಥರಾಗಿಯೇ ಉಳಿಯಬೇಕೆಂದು ಅವರು ತೀರ್ಮಾನಿಸಿದಾಗ ಫಲಮೂಲಗಳೂ-ದರ್ಭೆ-ಪುಷ್ಪ-ಯಜ್ಞಸಂಬಂಧೀ ಪದಾರ್ಥಗಳೆಲ್ಲ ಗಟ್ಟಿಯಾಗಿ ರೋದನ ಮಾಡತೊಡಗಿದವು.

ಈಗ ಅಸಿತದೇವಲರ ಮನಸು ಡೋಲಾಯಮಾನವಾಯಿತು. ಅವರು ಈ ಸಂನ್ಯಾಸ ಮತ್ತು ಗೃಹಸ್ಥಧರ್ಮದಲ್ಲಿ ಯಾವುದು ಶ್ರೇಯಸ್ಕರವೆಂದು ತರ್ಕಿಸತೊಡಗಿದರು. ಎರಡರ ಸಾಧಕ ಬಾಧಕಗಳನ್ನು ಚಿಂತಿಸಿ, ಕೊನೆಗೆ ಸಂನ್ಯಾಸಧರ್ಮವೇ ಉತ್ತಮವೆಂದು ತೀರ್ಮಾನಿಸಿ, ಉತ್ತಮವಾದ ಸಿದ್ಧಿಯನ್ನೂ ಯೋಗವನ್ನೂ ಜೈಗೀಷವ್ಯರಿಂದ ಪಡೆದುಕೊಂಡರು. ಆದಿತ್ಯತೀರ್ಥದಲ್ಲಿಯೇ ಬಹಳಕಾಲ ತಪಸ್ಸು ಮಾಡುತ್ತಿದ್ದು ಪರಮಪದವನ್ನು ಹೊಂದಿದರು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *