Guru Purnima, Vedavyasa Jayanti: Importance of Guru Purnimaಸಾಂದರ್ಭಿಕ ಚಿತ್ರ

“ಗುರು ರ್ಬ್ರಹ್ಮಾ ಗುರುರ್‌ವಿಷ್ಣುಃ ಗುರುರ್‌ದೇವೋ ಮಹೇಶ್ವರಃ।

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ॥”

ಭಾರತೀಯ ಸಂಸ್ಕೃತಿಯು ವಿಶ್ವಕ್ಕೆ ನೀಡಿದ ಅನನ್ಯ ಕೊಡುಗೆಗಳಲ್ಲಿ ಗುರು–ಶಿಷ್ಯ ಪರಂಪರೆ ಅತ್ಯಂತ ಶ್ರೇಷ್ಠವಾದುದು. ಗುರುಪೂರ್ಣಿಮೆ ಕೇವಲ ಒಂದು ಹಬ್ಬವಲ್ಲ. ಅದು ಜ್ಞಾನಕ್ಕೆ, ಸಂಸ್ಕೃತಿಗೆ, ಆತ್ಮ ಜಾಗೃತಿಗೆ ಮತ್ತು ಜೀವನದ ಮಾರ್ಗದರ್ಶನಕ್ಕೆ ಸಲ್ಲಿಸುವ ಕೃತಜ್ಞತೆಯ ಮಹೋತ್ಸವ. ಮನುಷ್ಯನ ಬದುಕಿನಲ್ಲಿ ತಾಯಿಯು ಜನ್ಮ ನೀಡಿದರೆ, ತಂದೆಯು ಜೀವನದ ಆಧಾರವನ್ನು ಕಟ್ಟಿಕೊಟ್ಟರೆ, ಗುರುವು ಬದುಕಿನ ಅರ್ಥವನ್ನು ತಿಳಿಸಿ ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕಿನತ್ತ ಕರೆದೊಯ್ಯುವ ದಿವ್ಯಶಕ್ತಿ. ‘ಗು’ ಎಂದರೆ ಅಂಧಕಾರ, ‘ರು’ ಎಂದರೆ ಅದನ್ನು ನಿವಾರಿಸುವವನು. ಆದ್ದರಿಂದ ಗುರು ಎಂದರೆ ಅಜ್ಞಾನವನ್ನು ದೂರ ಮಾಡಿ ಜ್ಞಾನ ಜ್ಯೋತಿಯನ್ನು ಬೆಳಗಿಸುವ ಮಹಾನ್ ವ್ಯಕ್ತಿ.

ಪುರಾಣಗಳ ಪುಣ್ಯಗಾಥೆಯಲ್ಲಿ ಗುರು ಪೂರ್ಣಿಮೆ

ಭಾರತೀಯ ಸಂಸ್ಕೃತಿಯಲ್ಲಿ ಗುರು ಎಂಬ ಪದವು ಕೇವಲ ಶಿಕ್ಷಕನನ್ನು ಸೂಚಿಸುವುದಿಲ್ಲ; ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನ ಜ್ಯೋತಿಯನ್ನು ಬೆಳಗಿಸುವ ದಿವ್ಯ ಶಕ್ತಿಯನ್ನು ಸೂಚಿಸುತ್ತದೆ. ಆಷಾಢ ಮಾಸದ ಪೌರ್ಣಿಮೆಯಂದು ಆಚರಿಸಲಾಗುವ ಗುರುಪೂರ್ಣಿಮೆ ಇದೇ ಗುರುತತ್ವವನ್ನು ಸ್ಮರಿಸುವ ಅತ್ಯಂತ ಪವಿತ್ರ ದಿನವಾಗಿದೆ.

ಈ ದಿನವನ್ನು ವ್ಯಾಸ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ಏಕೆಂದರೆ ಮಹರ್ಷಿ ವೇದವ್ಯಾಸರು ಇದೇ ದಿನ ಜನಿಸಿದರೆಂದು ಪುರಾಣಗಳಲ್ಲಿ ಉಲ್ಲೇಖವಿದೆ.

ವೇದವ್ಯಾಸರು ಭಾರತೀಯ ಜ್ಞಾನಸಂಪ್ರದಾಯದ ಮಹಾನ್ ಶಿಲ್ಪಿ. ವೇದಗಳ ಅಪಾರ ಜ್ಞಾನವನ್ನು ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಅವರು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳಾಗಿ ವಿಂಗಡಿಸಿದರು. ಈ ಕಾರಣಕ್ಕಾಗಿ ಅವರಿಗೆ “ವೇದವ್ಯಾಸ” ಎಂಬ ಹೆಸರು ಬಂದಿತು.”ವ್ಯಾಸ” ಎಂದರೆ ವಿಂಗಡಿಸಿದವನು ಅಥವಾ ಸಂಗ್ರಹಿಸಿದವನು ಎಂಬ ಅರ್ಥ ಇದೆ.

ವೇದಗಳಷ್ಟೇ ಅಲ್ಲದೆ, ವಿಶ್ವದ ಅತಿದೊಡ್ಡ ಮಹಾಕಾವ್ಯವಾದ ಮಹಾಭಾರತವನ್ನು ರಚಿಸಿದ ಕೀರ್ತಿಯೂ ವೇದವ್ಯಾಸರಿಗೆ ಸಲ್ಲುತ್ತದೆ. ಮಹಾಭಾರತವನ್ನು “ಪಂಚಮ ವೇದ” ಎಂದು ಕರೆಯಲಾಗುತ್ತದೆ. ಏಕೆಂದರೆ ವೇದಗಳಲ್ಲಿ ಅಡಗಿರುವ ಧರ್ಮ, ನೀತಿ, ಸತ್ಯ, ಕರ್ತವ್ಯ ಮತ್ತು ಜೀವನ ಮೌಲ್ಯಗಳನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಕಥಾರೂಪದಲ್ಲಿ ಅವರು ನಿರೂಪಿಸಿದರು. ಇದೇ ಮಹಾಭಾರತದಲ್ಲಿ ಅಡಕವಾಗಿರುವ ಶ್ರೀ ಮದ್ಭಗವದ್ಗೀತೆ ಇಂದಿಗೂ ಮಾನವ ಕುಲಕ್ಕೆ ಜೀವನದ ದಾರಿದೀಪವಾಗಿದೆ.

ಪುರಾಣಗಳ ಪ್ರಕಾರ ವೇದವ್ಯಾಸರು 18 ಮಹಾ ಪುರಾಣಗಳು, ಉಪ ಪುರಾಣಗಳು ಹಾಗೂ ಬ್ರಹ್ಮಸೂತ್ರಗಳನ್ನು ರಚಿಸಿದ ಮಹರ್ಷಿ. ಆದ್ದರಿಂದ ಅವರನ್ನು “ಜ್ಞಾನಸಾಗರ”, “ಮಹಾಮುನಿ”, “ಭಾರತೀಯ ಸಂಸ್ಕೃತಿಯ ಶಿಲ್ಪಿ” ಮತ್ತು “ಗುರುಗಳ ಗುರು” ಎಂದು ಗೌರವಿಸಲಾಗುತ್ತದೆ.

ವ್ಯಾಸ ಮುನಿಯ ಜನ್ಮದಿನವಾದ ಈ ಪವಿತ್ರ ದಿನದಲ್ಲಿ ಗುರುಗಳನ್ನು ಪೂಜಿಸುವ ಸಂಪ್ರದಾಯ ಆರಂಭವಾಯಿತು ಎಂಬ ನಂಬಿಕೆಯಿದೆ. ಆದ್ದರಿಂದ ಭಾರತದ ಅನೇಕ ಆಶ್ರಮಗಳಲ್ಲಿ ಗುರುಪೂರ್ಣಿಮೆಯನ್ನು ವ್ಯಾಸ ಪೂಜೆಯ ಮೂಲಕ ಆಚರಿಸಲಾಗುತ್ತದೆ. ಶಿಷ್ಯರು ತಮ್ಮ ಗುರುಗಳಿಗೆ ಪುಷ್ಪಾರ್ಚನೆ, ಪಾದಪೂಜೆ ಮಾಡಿ ಆಶೀರ್ವಾದ ಪಡೆಯುತ್ತಾರೆ. ಈ ಆಚರಣೆಯ ಹಿಂದಿನ ಸಂದೇಶವೆಂದರೆ ಜ್ಞಾನಕ್ಕೆ ನಮಸ್ಕಾರ, ಗುರುವಿಗೆ ಕೃತಜ್ಞತೆ ಮತ್ತು ಜೀವನದಲ್ಲಿ ಧರ್ಮದ ಅನುಸರಣೆ.

ಆದಿಯೋಗಿಯ ಅಮರ ಸಂದೇಶ

ಯೋಗಶಾಸ್ತ್ರ ಮತ್ತು ಶೈವ ಪರಂಪರೆಯ ಪ್ರಕಾರ, ಗುರುಪೂರ್ಣಿಮೆಯ ಮೂಲವು ವೇದವ್ಯಾಸರ ಕಾಲಕ್ಕೂ ಹಿಂದಿನದು. ಅದು ಆದಿಯೋಗಿ ಶಿವನ ಕಾಲಕ್ಕೆ ಸಂಬಂಧಿಸಿದೆ. ಹಿಂದೂ ಪುರಾಣಗಳಲ್ಲಿ ಭಗವಾನ್ ಶಿವನನ್ನು ಆದಿಯೋಗಿ (ಮೊದಲ ಯೋಗಿ) ಹಾಗೂ ಆದಿಗುರು (ಮೊದಲ ಗುರು) ಎಂದು ಕರೆಯಲಾಗಿದೆ. ಹಿಮಾಲಯದ ಕೈಲಾಸ ಪರ್ವತದಲ್ಲಿ ಸಾವಿರಾರು ವರ್ಷಗಳ ಕಾಲ ಶಿವನು ಆಳವಾದ ಧ್ಯಾನದಲ್ಲಿ ಲೀನನಾಗಿದ್ದನು. ಅವನ ದಿವ್ಯತೆಯನ್ನು ಕಂಡು ಅನೇಕ ಋಷಿಗಳು ಯೋಗದರ ರಹಸ್ಯವನ್ನು ತಿಳಿದುಕೊಳ್ಳಲು ಬಯಸಿದರು. ಆದರೆ ಶಿವನು ಅವರ ಮನಸ್ಸಿನ ಏಕಾಗ್ರತೆ, ತಾಳ್ಮೆ ಮತ್ತು ಅರ್ಹತೆಯನ್ನು ಪರೀಕ್ಷಿಸಲು ದೀರ್ಘಕಾಲ ಮೌನದಲ್ಲೇ ಇದ್ದನು.

ಏಳು ಸಾಧಕರು ನಿರಂತರ ತಪಸ್ಸು, ಭಕ್ತಿ ಮತ್ತು ಶ್ರದ್ಧೆಯಿಂದ ಶಿವನ ಕೃಪೆಗೆ ಪಾತ್ರರಾದರು. ಅವರ ಭಕ್ತಿ ಮತ್ತು ಸಮರ್ಪಣೆಯಿಂದ ಸಂತುಷ್ಟನಾದ ಶಿವನು ಆಷಾಢ ಮಾಸದ ಪೌರ್ಣಿಮೆಯಂದು ದಕ್ಷಿಣ ದಿಕ್ಕಿನತ್ತ ಮುಖಮಾಡಿ ಅವರಿಗೆ ಯೋಗ, ಧ್ಯಾನ, ಪ್ರಾಣಾಯಾಮ, ಆತ್ಮಜ್ಞಾನ ಮತ್ತು ಜೀವನದ ಪರಮ ಸತ್ಯವನ್ನು ಉಪದೇಶಿಸಿದನು.

ಈ ಏಳು ಮಹಾನ್ ಶಿಷ್ಯರೇ ಸಪ್ತರ್ಷಿಗಳು:

  1. ಅತ್ರಿ
  2. ಭೃಗು
  3. ವಶಿಷ್ಠ
  4. ವಿಶ್ವಾಮಿತ್ರ
  5. ಗೌತಮ
  6. ಕಶ್ಯಪ
  7. ಜಮದಗ್ನಿ

ಶಿವನು ದಕ್ಷಿಣದತ್ತ ಮುಖಮಾಡಿ ಜ್ಞಾನೋಪದೇಶ ಮಾಡಿದ ಕಾರಣ ಅವರಿಗೆ “ದಕ್ಷಿಣಾಮೂರ್ತಿ” ಎಂಬ ಹೆಸರು ಬಂದಿದೆ. ದಕ್ಷಿಣಾಮೂರ್ತಿ ಶಿವನ ಗುರುಸ್ವರೂಪ. ಮಾತಿಲ್ಲದೆ ಮೌನದ ಮೂಲಕವೇ ಪರಮ ಜ್ಞಾನವನ್ನು ನೀಡುವ ದಿವ್ಯ ಗುರುವೆಂದು ಅವರನ್ನು ಆರಾಧಿಸಲಾಗುತ್ತದೆ. ಸಪ್ತರ್ಷಿಗಳು ಶಿವನಿಂದ ಪಡೆದ ಯೋಗಜ್ಞಾನವನ್ನು ಭಾರತದ ವಿವಿಧ ಭಾಗಗಳಿಗೆ ಹಾಗೂ ನಂತರ ವಿಶ್ವದ ಅನೇಕ ನಾಗರಿಕತೆಗಳಿಗೆ ಹರಡಿದರು. ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ಆತ್ಮಸಾಕ್ಷಾತ್ಕಾರದ ತತ್ವಗಳು ಹೀಗೆ ಗುರು–ಶಿಷ್ಯ ಪರಂಪರೆಯ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಸಾಗಿದವು.

ಆದಿ ಯೋಗಿಯ ಈ ಘಟನೆಯು ಕೇವಲ ಪೌರಾಣಿಕ ಕಥೆಯಲ್ಲ. ಅದು ಒಂದು ಆಳವಾದ ಸಂದೇಶವನ್ನು ಸಾರುತ್ತದೆ. ನಿಜವಾದ ಜ್ಞಾನವು ಪುಸ್ತಕಗಳಿಂದ ಮಾತ್ರ ದೊರೆಯುವುದಿಲ್ಲ. ಅದು ಗುರುವಿನ ಅನುಗ್ರಹ, ಶಿಷ್ಯನ ವಿನಯ, ಶ್ರದ್ಧೆ, ತಪಸ್ಸು ಮತ್ತು ಸಾಧನೆಯ ಮೂಲಕವೇ ದೊರೆಯುತ್ತದೆ. ಆದ್ದರಿಂದ ಗುರು ಪೂರ್ಣಿಮೆ ಎನ್ನುವುದು ಕೇವಲ ಒಬ್ಬ ವ್ಯಕ್ತಿಯನ್ನು ಪೂಜಿಸುವ ದಿನವಲ್ಲ. ಜ್ಞಾನಪರಂಪರೆ, ಆತ್ಮೋನ್ನತಿ ಮತ್ತು ಗುರುತತ್ತ್ವವನ್ನು ಸ್ಮರಿಸುವ ಮಹಾ ಪರ್ವವಾಗಿದೆ.

ಭಾರತೀಯ ದರ್ಶನದಲ್ಲಿ ಗುರು ಎಂದರೆ ಬೆಳಕಿನ ಮೂಲ. ಹೇಗೆ ಸೂರ್ಯನು ಲೋಕಕ್ಕೆ ಬೆಳಕು ನೀಡುತ್ತಾನೋ, ಹಾಗೆಯೇ ಗುರು ಕೂಡ ಆತ್ಮಕ್ಕೆ ಜ್ಞಾನದ ಬೆಳಕನ್ನು ನೀಡುತ್ತಾನೆ. ಆದ್ದರಿಂದಲೇ ಉಪನಿಷತ್ತುಗಳು “ಆಚಾರ್ಯದೇವೋ ಭವ” ಎಂದು ಘೋಷಿಸಿ, ಗುರುವನ್ನು ದೇವರ ಸಮಾನ ಸ್ಥಾನದಲ್ಲಿ ಪ್ರತಿಷ್ಠಪಿಸಿವೆ. ಗುರು ಪೂರ್ಣಿಮೆಯು ಇದೇ ದಿವ್ಯ ಸತ್ಯವನ್ನು ಪ್ರತಿ ವರ್ಷ ನಮ್ಮ ಮನಸ್ಸಿನಲ್ಲಿ ಮರುಜಾಗೃತಿಗೊಳಿಸುವ ಪವಿತ್ರ ಹಬ್ಬವಾಗಿದೆ.

ಗುರು ಎಂದರೆ ಕೇವಲ ಶಿಕ್ಷಕರಲ್ಲ

ಭಾರತೀಯ ದರ್ಶನದಲ್ಲಿ ಗುರು ಎಂದರೆ ಕೇವಲ ಪಾಠ ಹೇಳುವ ಶಿಕ್ಷಕರಲ್ಲ. ಬದುಕಿನ ದಾರಿತೋರಿಸುವ ಪ್ರತಿಯೊಬ್ಬರೂ ಗುರುಗಳೇ. ತಾಯಿ ಮೊದಲ ಗುರು, ತಂದೆ ಜೀವನಗುರು, ಶಿಕ್ಷಕರು ವಿದ್ಯಾಗುರು, ಪ್ರಕೃತಿ ಮೌನಗುರು, ಅನುಭವ ಜೀವನ ಗುರು. ಕಬೀರದಾಸರು ಹೇಳಿರುವ ಮಾತು ಇಂದಿಗೂ ಸ್ಮರಣೀಯ:

“ಗುರು ಗೋವಿಂದದೋ ಊಖಡೆ, ಕಾಕೇ ಲಾಗೂ ಪಾಯ್?

ಬಲಿ ಹಾರಿಗುರು ಆಪನೇ, ಗೋವಿಂದ ದಿಯೋ ಬತಾಯ್.”

ಅಂದರೆ, ಗುರು ಮತ್ತು ದೇವರು ಇಬ್ಬರೂ ಎದುರು ನಿಂತಾಗ ಮೊದಲು ಗುರುವಿಗೆ ನಮಸ್ಕರಿಸಬೇಕು. ಏಕೆಂದರೆ ದೇವರನ್ನು ಪರಿಚಯಿಸಿದವರೇ ಗುರು.

ಆಧುನಿಕ ಜೀವನದಲ್ಲಿ ಗುರು ಪೂರ್ಣಿಮೆಯ ಸಂದೇಶ

ಇಂದಿನ ಯುಗವು ಮಾಹಿತಿಯ ಮಹಾಸಾಗರ. ಆದರೆ ಮಾಹಿತಿಗಿಂತ ವಿವೇಕ, ವಿದ್ಯೆಗಿಂತ ಮೌಲ್ಯ, ಸಾಧನೆಗಿಂತ ಸಂಸ್ಕಾರ ಮುಖ್ಯ. ಇವುಗಳನ್ನು ನೀಡುವವರು ಗುರುಗಳು. ತಂತ್ರಜ್ಞಾನ ಸಾವಿರಾರು ಉತ್ತರಗಳನ್ನು ಕೊಡಬಹುದು; ಆದರೆ ಜೀವನದ ಸರಿಯಾದ ಪ್ರಶ್ನೆಯನ್ನು ಕಲಿಸುವವರು ಮಾತ್ರ ಗುರು. ಇಂದು ನಮ್ಮ ಗುರುಗಳು ಶಾಲಾ ಶಿಕ್ಷಕರು ಮಾತ್ರವಲ್ಲ. ಪೋಷಕರು, ಸಂಶೋಧಕರು, ಸಾಹಿತ್ಯಕಾರರು, ಜೀವನ ಮಾರ್ಗದರ್ಶಕರು, ಸಮಾಜ ಸೇವಕರು, ನಮ್ಮ ವ್ಯಕ್ತಿತ್ವವನ್ನು ರೂಪಿಸಿದ ಪ್ರತಿಯೊಬ್ಬರೂ ಗುರುಗಳೇ.

ಭಾರತೀಯ ಸಾಹಿತ್ಯದಲ್ಲಿಗುರುವಿನ ಮಹಿಮೆ

ಭಾರತೀಯ ಸಾಹಿತ್ಯವು ಗುರುವಿನ ಸ್ಥಾನವನ್ನು ಪರಬ್ರಹ್ಮನ ಸ್ಥಾನಕ್ಕೆ ಏರಿಸಿದೆ. “ವಿದ್ಯಾದದಾತಿ ವಿನಯಂ, ವಿನಯಾದ್ಯಾತಿ ಪಾತ್ರತಾಂ” ಎಂಬ ಸುಭಾಷಿತವು ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಯಶಸ್ಸು ದೊರೆಯುತ್ತದೆ ಎಂದು ಸಾರುತ್ತದೆ.

ಕನ್ನಡ ಸಾಹಿತ್ಯದಲ್ಲಿಯೂ ಗುರು ಭಕ್ತಿಯ ಅನೇಕ ಉದಾಹರಣೆಗಳಿವೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಕನಕದಾಸರು ಮತ್ತು ಪುರಂದರದಾಸರು ತಮ್ಮ ಗುರುಗಳ ಕೃಪೆಯನ್ನೇಜೀವನದ ಶ್ರೇಷ್ಠ ಸಂಪತ್ತೆAದು ಕೊಂಡಾಡಿದ್ದಾರೆ.

ಗುರು ಪೂರ್ಣಿಮೆಯ ಆಚರಣೆ

ಈ ದಿನ ಭಕ್ತರು ತಮ್ಮ ಗುರುಗಳಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಗೌರವ ಸಮರ್ಪಿಸುತ್ತಾರೆ. ಅನೇಕ ಆಶ್ರಮಗಳಲ್ಲಿ ವೇದ ಪಾರಾಯಣ, ಧ್ಯಾನ, ಸತ್ಸಂಗ, ಭಜನೆ ಮತ್ತುಅನ್ನದಾನ ಕಾರ್ಯಕ್ರಮಗಳು ನಡೆಯುತ್ತವೆ. ಈ ಆಚರಣೆಗಳ ಹಿಂದಿರುವ ನಿಜವಾದ ಸಂದೇಶವೆAದರೆ ಗುರುವಿನ ಉಪದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಗುರುಪೂರ್ಣಿಮೆ ಎನ್ನುವುದು ಕೇವಲ ಚಂದ್ರನ ಪೂರ್ಣತೆಯ ಹಬ್ಬವಲ್ಲ; ಅದು ಮಾನವನ ಅಂತರAಗದ ಪೂರ್ಣತೆಯ ಹಬ್ಬ. ಜ್ಞಾನ, ವಿನಯ, ಕೃತಜ್ಞತೆ ಮತ್ತು ಆತ್ಮೋನ್ನತಿಯ ದಿವ್ಯ ಸಂಗಮ. ಗುರುವಿನ ಒಂದು ಮಾತು ಬದುಕನ್ನು ಬದಲಾಯಿಸಬಲ್ಲದು. ಗುರುವಿನ ಒಂದು ಆಶೀರ್ವಾದ ಜೀವನಕ್ಕೆ ಹೊಸ ದಿಕ್ಕನ್ನು ನೀಡಬಲ್ಲದು.

ಇಂದು ನಾವು ನಮ್ಮ ಗುರುಗಳಿಗೆ ಶಿರಸಾ ವಂದಿಸಿ, ಅವರು ಬೆಳಗಿಸಿದ ಜ್ಞಾನಜ್ಯೋತಿಯನ್ನು ನಮ್ಮ ಬದುಕಿನಲ್ಲಿ ಉಳಿಸಿಕೊಂಡು, ಮತ್ತೊಬ್ಬರ ಬದುಕಿಗೂ ಬೆಳಕಾಗುವ ಸಂಕಲ್ಪ ಮಾಡೋಣ.

“ಗುರುವಿನ ಕರುಣೆಯೇಜ್ಞಾನದಗಂಗೆಯ ಹರಿವು;

ಗುರುವಿನ ಆಶೀರ್ವಾದವೇ ಬದುಕಿನಅಮೃತವರ್ಷೆ.

ಗುರು ಇರುವೆ ಡೆಅಜ್ಞಾನಕರಗುತ್ತದೆ,

ಜ್ಞಾನೋದಯದ ಸೂರ್ಯಉದಯಿಸುತ್ತಾನೆ.”

ಗುರುಪೂರ್ಣಿಮೆಯ ಈ ಪುಣ್ಯ ಸಂದರ್ಭದಲ್ಲಿ ಸಕಲ ಗುರುಗಳಿಗೆ ಭಕ್ತಿಪೂರ್ವಕ ನಮನಗಳು.ಅವರಕೃಪಾಕಟಾಕ್ಷವುಎಲ್ಲರ ಬದುಕಿನಲ್ಲಿಜ್ಞಾನ, ಸದ್ಬುದ್ಧಿ, ಶಾಂತಿ ಹಾಗೂ ಸತ್ಮಾರ್ಗದ ಬೆಳಕನ್ನು ಸದಾ ಹರಡಲಿ.

ನಮ್ಮ ಪರಂಪರೆಯಲ್ಲಿ ಪ್ರಾತಃಸ್ಮರಣೀಯರಾಗಿ ರಾಷ್ಟ್ರ ಹಿತಕ್ಕಾಗಿಯೇ ಬದುಕಿದ ನೂರಾರು ಗುರು-ಶಿಷ್ಯರ ಉದಾಹರಣೆಗಳು ದೊರೆಯುತ್ತವೆ.

  1. ರಾಮನಿಗೆ – ವಸಿಷ್ಠ, ವಿಶ್ವಾಮಿತ್ರರು
  2. ಕೃಷ್ಣನಿಗೆ- ಸಾಂದೀಪನಿ
  3. ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರು
  4. ವಿಜಯನಗರ ಸಾಮ್ರಾಜ್ಯದ ಉದಯಕ್ಕೆ ಕಾರಣರಾದ ಹಕ್ಕ ಬುಕ್ಕರಿಗೆ -ವಿದ್ಯಾರಣ್ಯರು
  5. ಶಿವಾಜಿಗೆ ಸಮರ್ಥರಾಮದಾಸರು,ದಾದಾಜಿ ಕೊಂಡದೇವರು
  6. ಜೈನರಿಗೆ ತೀರ್ಥಂಕರರ ಪರಂಪರೆ
  7. ಬೌದ್ಧರಿಗೆ ಬುದ್ಧ
  8. ಸಿಖ್ಖರಿಗೆ ಗುರುಗ್ರಂಥಸಾಹಿಬ್  ಗುರುವಾಗಿದ್ದಾರೆ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *