Kargil vijay diwas 2026: Kargil Vijay Diwas: A story of sacrifice, a symbol of victoryಕಾರ್ಗಿಲ್‌ ವಿಜಯ ದಿವಸ್‌

26 ಜುಲೈ – ಭಾರತದ ಶೌರ್ಯಕ್ಕೆ ಸೆಲ್ಯೂಟ್:  “ಯೇ ದಿಲ್ ಮಾಂಗೆ ಮೋರ್” – ಈ ಒಂದು ವಾಕ್ಯ 1999 ರ ಬೇಸಿಗೆಯಲ್ಲಿ ಇಡೀ ದೇಶದ ನಾಡಿಮಿಡಿತವಾಯಿತು. ಪ್ರತಿ ವರ್ಷ ಜುಲೈ 26 ರಂದು ನಾವು ಆಚರಿಸುವ “ಕಾರ್ಗಿಲ್ ವಿಜಯ್ ದಿವಸ್” ಕೇವಲ ಒಂದು ದಿನವಲ್ಲ. ಅದು 527 ಯೋಧರ ತ್ಯಾಗದ ಕಥೆ, ಲಡಾಕ್‌ನ -10 ಡಿಗ್ರಿ ಸೆಲ್ಸಿಯಸ್‌ ಚಳಿಯಲ್ಲಿ ನಡೆದ ಯುದ್ಧದ ನೆನಪು, ಮತ್ತು “ಭಾರತ ಸೋಲಲ್ಲ” ಎಂಬ ವಿಶ್ವಾಸದ ಗೆಲುವಿನ ಸಂಕೇತ. 1999 ರಲ್ಲಿ ಪಾಕಿಸ್ತಾನದ ಸೈನಿಕರು ಮತ್ತು ಉಗ್ರರು ಭಾರತದ ಗಡಿ ದಾಟಿ ಕಾರ್ಗಿಲ್, ದ್ರಾಸ್, ಬಟಾಲಿಕ್ ಬೆಟ್ಟಗಳ ಮೇಲೆ ಅಕ್ರಮವಾಗಿ ಕಬ್ಜಾ ಮಾಡಿದ್ದರು. ಎತ್ತರದ ಬೆಟ್ಟಗಳಿಂದ ಅವರು ನಮ್ಮ NH-1 (ರಾಷ್ಟ್ರೀಯ ಹೆದ್ದಾರಿ-1)ರ ಮೇಲೆ ಕಣ್ಣಿಟ್ಟಿದ್ದರು. ಇದು ಕೇವಲ ಯುದ್ಧವಾಗಿರಲಿಲ್ಲ. ಇದು ನಮ್ಮ ರಾಷ್ಟ್ರದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿತ್ತು.

ಕಾರ್ಗಿಲ್ ಯುಧ್ಧದ ಹಿನ್ನಲೆ

1999 ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಪ್ರಧಾನಿಗಳು ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದರು. “ಶಾಂತಿ” ಯ ಮಾತುಗಳು ಇನ್ನೂ ಮಾಸಿರಲಿಲ್ಲ. ಆದರೆ ಮೇ ತಿಂಗಳಿನಲ್ಲಿ ಲಡಾಕ್‌ನ ಕುರುಬರು ತಮ್ಮ ಕುರಿಗಳನ್ನು ಮೇಯಿಸಲು ಹೋದಾಗ ಬೆಟ್ಟದ ಮೇಲೆ ಪಾಕ್ ಸೈನಿಕರನ್ನು ನೋಡಿದರು. ಪಾಕಿಸ್ತಾನ ನೇರವಾಗಿ ಯುದ್ಧ ಘೋಷಿಸದೆ, “ಉಗ್ರರು” ಎಂಬ ಸೋಗಿನಲ್ಲಿ 5000 ಕ್ಕೂ ಹೆಚ್ಚು ಸೈನಿಕರನ್ನು 140 ಕಿ.ಮೀ ವ್ಯಾಪ್ತಿಯ ಭಾರತದ ಗಡಿಯೊಳಗೆ ನುಸುಳಿಸಿತ್ತು. 16000 ರಿಂದ 18000 ಅಡಿ ಎತ್ತರದ ಬೆಟ್ಟಗಳನ್ನು ಅವರು ಕಬ್ಜಾ ಮಾಡಿದ್ದರು. ಚಳಿಗಾಲದಲ್ಲಿ ಭಾರತೀಯ ಸೇನೆ ಕೆಳಗೆ ಇಳಿದಿದ್ದ ಸಮಯದಲ್ಲಿ ಈ ದಾಳಿ ನಡೆದಿತ್ತು. ಈ ಸುದ್ದಿ ತಿಳಿದ ತಕ್ಷಣ ಭಾರತೀಯ ಸೇನೆ “ಆಪರೇಷನ್ ವಿಜಯ್” ಪ್ರಾರಂಭಿಸಿತು. ವಾಯುಸೇನೆ “ಆಪರೇಷನ್ ಸಫೇದ್ ಸಾಗರ್” ಮೂಲಕ ಶತ್ರುಗಳ ನೆಲೆಗಳ ಮೇಲೆ ಬಾಂಬ್ ದಾಳಿ ಮಾಡಿತು.

ದುರ್ಗಮವಾದ ಯುಧ್ಧ – ಬೆಟ್ಟವೇ ಶತ್ರು

ಕಾರ್ಗಿಲ್ ಯುದ್ಧ ಸಾಮಾನ್ಯ ಯುದ್ಧವಾಗಿರಲಿಲ್ಲ. ಇಲ್ಲಿ ಶತ್ರುವಿನ ಗುಂಡಿಗಿಂತ ಎತ್ತರ, ಚಳಿ ಮತ್ತು ಆಮ್ಲಜನಕದ ಕೊರತೆಯೇ ದೊಡ್ಡ ಶತ್ರು. ಸೈನಿಕರು 70 ಡಿಗ್ರಿ ಕಡಿದಾದ ಬೆಟ್ಟ ಹತ್ತಬೇಕಿತ್ತು. ಬೆನ್ನಿಗೆ 25 ಕೆಜಿ ಲಗೇಜ್. ಕೈಯಲ್ಲಿ ರೈಫಲ್. ಮುಂದೆ ಗುಂಡಿನ ಸುರಿಮಳೆ. ಕೆಳಗೆ 1000 ಅಡಿ ಕಂದಕ. ತೋಲೋಲಿಂಗ್, ಟೈಗರ್ ಹಿಲ್, ಬಟಾಲಿಕ್, ದ್ರಾಸ್ – ಪ್ರತಿ ಬೆಟ್ಟವೂ ಒಂದು ಕೋಟೆ. ಪಾಕ್ ಸೈನಿಕರು ಮೇಲೆ ಇದ್ದು ಕೆಳಗೆ ನೋಡುತ್ತಿದ್ದರು. ನಮ್ಮ ಸೈನಿಕರು ಕೆಳಗಿಂದ ಮೇಲೆ ಹತ್ತಬೇಕಿತ್ತು. ಇದನ್ನ ಮಿಲಿಟರಿ ಭಾಷೆಯಲ್ಲಿ “Uphill Task” ಎನ್ನುತ್ತಾರೆ. ಅಂದರೆ ಅಸಾಧ್ಯವಾದ ಕೆಲಸ.ಆದರೂ ನಮ್ಮ ಯೋಧರು ಹಿಂದೆ ಸರಿಯಲಿಲ್ಲ. “ಜಾನ್ ದೇ ದೇಂಗೆ, ಲೇಕಿನ್ ವತನ್ ನಹಿ ದೇಂಗೆ” – ಈ ಮಾತನ್ನು ಅವರು ನಿಜ ಮಾಡಿ ತೋರಿಸಿದರು.

ಕಾರ್ಗಿಲ್ ನ ಪರಮವೀರರು ಮತ್ತು ಯಶೋಗಾಥೆ

ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ 18 GRENADIERS – ಕಾರ್ಗಿಲ್‌ನ ಕಿರಿಯ ಪರಮವೀರ: ಪರಮವೀರ ಚಕ್ರ ಪುರಸ್ಕೃತ ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್  ಅವರು 1980ರ ಜುಲೈ 10 ರಂದು ಹರಿಯಾಣದಲ್ಲಿ ಜನಿಸಿದರು. 1999 ರ ಕಾರ್ಗಿಲ್ ಯುದ್ಧದಲ್ಲಿ ತೋಲೋಲಿಂಗ್ ಬೆಟ್ಟದ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಯುದ್ಧದ ಸಮಯದಲ್ಲಿ ಅವರ ವಯಸ್ಸು ಕೇವಲ 19 ವರ್ಷವಾಗಿತ್ತು. ಗಂಭೀರವಾಗಿ ಗಾಯಗೊಂಡರೂ 3 ಶತ್ರು ಬಂಕರ್‌ಗಳನ್ನು ನಾಶ ಮಾಡಿದರು. ದೇಹದೊಳಗೆ 17 ಗುಂಡುಗಳು ನುಗ್ಗಿದರೂ ಹಿಂಜರಿಯದೆ ಮುನ್ನುಗ್ಗಿ ಶತ್ರುಗಳ ರುಂಡ ಚಂಡಾಡಿದರು. ಗ್ರೆನೇಡಿಯರ್‌ ಯೋಗೇಂದ್ರ ಸಿಂಗ್‌ ಯಾದವ್‌ ಅವರ ಅಪರಮಿತ ಸಾಹಸಕ್ಕೆ ಭಾರತ ಸರ್ಕಾರ ಪರಮವೀರ ಚಕ್ರ ನೀಡಿ ಗೌರವಿಸಿತು. ಹಾಗೇ, ಪರಮವೀರ ಚಕ್ರ ಪಡೆದ ಅತ್ಯಂತ ಕಿರಿಯ ಯೋಧ ಎಂಬ ಹೆಗ್ಗಳಿಕೆ ಪಾತ್ರರಾದರು. ಇಂದು ಅವರು ಸೇನೆಯಲ್ಲಿ ಸಬೇದಾರ್ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. “ಜಾನ್ ದೇ ದೇಂಗೆ, ವತನ್ ನಹಿ ದೇಂಗೆ” ಎಂಬ ಅವರ ಮಾತು ಇಂದಿನ ಯುವಕರಿಗೆ ಸ್ಫೂರ್ತಿ.

ಕ್ಯಾಪ್ಟನ್ ವಿಕ್ರಮ್ ಬಾತ್ರಾ – “ಶೇರ್ ಶಾ” 13 JAK RIFLES

ಪರಮವೀರ ಚಕ್ರ ಪುರಸ್ಕೃತ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು 1974 ರ ಸೆಪ್ಟೆಂಬರ್ 9 ರಂದು ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಜನಿಸಿದರು. ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರು 13 ಜಮ್ಮು-ಕಾಶ್ಮೀರ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸಿದರು.1999 ರ ಕಾರ್ಗಿಲ್ ಯುದ್ಧದಲ್ಲಿ “ಆಪರೇಷನ್ ವಿಜಯ್” ನ ನಾಯಕರಲ್ಲಿ ಒಬ್ಬರು. ಪಾಯಿಂಟ್ 5140 ಮತ್ತು ಟೈಗರ್ ಹಿಲ್ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದರು. “ಯೇ ದಿಲ್ ಮಾಂಗೆ ಮೋರ್” ಎಂಬ ಅವರ ಮಾತು ಇಡೀ ದೇಶದ ಘೋಷವಾಕ್ಯವಾಯಿತು.ಜುಲೈ 7, 1999 ರಂದು ಟೈಗರ್ ಹಿಲ್ ಕಾರ್ಯಾಚರಣೆಯಲ್ಲಿ ಗಾಯಗೊಂಡ ಸೈನಿಕನನ್ನು ರಕ್ಷಿಸಲು ಹೋಗಿ ವೀರಗತಿ ಹೊಂದಿದರು. ಅಸಾಧಾರಣ ಧೈರ್ಯಕ್ಕೆ ಮರಣೋತ್ತರವಾಗಿ “ಪರಮವೀರ ಚಕ್ರ” ನೀಡಲಾಯಿತು.”ನಾನು ಹಿಂತಿರುಗುತ್ತೇನೆ, ತಿರಂಗಾದಲ್ಲಿ ಅಥವಾ ತಿರಂಗಾ ಹೊದ್ದು”-ಇದುಅವರ ಪ್ರತಿಜ್ಞೆ ಆಗಿತ್ತು

ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ – 1/11 GORKHA RIFLES

ಪರಮವೀರ ಚಕ್ರ ಪುರಸ್ಕೃತ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಅವರು 1975 ಜೂನ್ 25, ರಂದು ಉತ್ತರ ಪ್ರದೇಶದಲ್ಲಿ ಜನಿಸಿದರು. 1999 ರ ಕಾರ್ಗಿಲ್ ಯುದ್ಧದಲ್ಲಿ ಬಟಾಲಿಕ್‌ನ ಜುಬರ್ ಹಿಲ್ ವಶಪಡಿಸಿಕೊಳ್ಳುವ ಜವಾಬ್ದಾರಿ ಅವರದ್ದಾಗಿತ್ತು. 16000 ಅಡಿ ಎತ್ತರದ ಕಡಿದಾದ ಬೆಟ್ಟ ಏರಿ ಮೊದಲು ಶತ್ರು ಬಂಕರ್‌ಗೆ ನುಗ್ಗಿ ನಾಲ್ವರು ಪಾಕಿ ಸೈನಿಕರನ್ನು ಕೊಂದರು. ಗುಂಡು ತಗುಲಿದರೂ ಕೊನೆಯವರೆಗೂ ಹೋರಾಡಿ ವೀರಗತಿ ಹೊಂದಿದರು. ಆಗ ಅವರ ವಯಸ್ಸು ಕೇವಲ 24 ಆಗಿತ್ತು. ಅಸಾಧಾರಣ ಧೈರ್ಯಕ್ಕೆ ಮರಣೋತ್ತರವಾಗಿ “ಪರಮವೀರ ಚಕ್ರ” ನೀಡಿ ಗೌರವಿಸಲಾಯಿತು.

ರೈಫಲ್‌ಮ್ಯಾನ್ ಸಂಜಯ್ ಕುಮಾರ್ – 13 JAK RIFLES

ಪರಮವೀರ ಚಕ್ರ ಪುರಸ್ಕೃತ ರೈಫಲ್‌ಮ್ಯಾನ್ ಸಂಜಯ್ ಕುಮಾರ್ ಅವರು 1976 ರ ಮಾರ್ಚ್ 3 ರಂದು ಹಿಮಾಚಲ ಪ್ರದೇಶದಲ್ಲಿ ಜನಿಸಿದರು. 1999 ರ ಕಾರ್ಗಿಲ್ ಯುದ್ಧದಲ್ಲಿ ಫ್ಲಾಟ್ ಟಾಪ್ ಬೆಟ್ಟ ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಇದ್ದರು. ಗುಂಡು ತಗುಲಿದರೂ ಹಿಂದೆ ಸರಿಯದೆ ಶತ್ರು ಬಂಕರ್‌ಗೆ ನುಗ್ಗಿದರು. ಚಾಕುವಿನಿಂದ ಮೂವರು ಪಾಕ್ ಸೈನಿಕರನ್ನು ಕೊಂದರು. ಅವರ ಧೈರ್ಯದಿಂದ ಇಡೀ ಬೆಟ್ಟವನ್ನು ವಶಪಡಿಸಿಕೊಳ್ಳಲು ಸಾಧ್ಯವಾಯಿತು. ಅಸಾಧಾರಣ ಶೌರ್ಯಕ್ಕೆ “ಪರಮವೀರ ಚಕ್ರ” ನೀಡಿ ಗೌರವಿಸಲಾಯಿತು.

ಇವರ ಜೊತೆಗೆ ಕಾರ್ಗಿಲ್‌ನಲ್ಲಿ 527 ಯೋಧರು ವೀರಗತಿ ಹೊಂದಿದರು. 1300 ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಪ್ರತಿ ಹೆಸರಿನ ಹಿಂದೆ ಒಂದು ಕುಟುಂಬದ ಕನಸು, ಒಂದು ಊರಿನ ಹೆಮ್ಮೆ ಇದೆ.

ಭಾರತದ ರಾಜತಾಂತ್ರಿಕ ಮತ್ತು ಸೈನಿಕ ಗೆಲುವು

ಕಾರ್ಗಿಲ್ ಯುದ್ಧ ಕೇವಲ ಗುಂಡಿನ ಯುದ್ಧವಾಗಿರಲಿಲ್ಲ. ಇದು ರಾಜತಾಂತ್ರಿಕ ಯುದ್ಧವೂ ಆಗಿತ್ತು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಭಾರತ ವಿಶ್ವದ ಮುಂದೆ ಪಾಕಿಸ್ತಾನದ ಸುಳ್ಳನ್ನು ಬಯಲು ಮಾಡಿತು. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಕೂಡ ಪಾಕಿಸ್ತಾನದ ಮೇಲೆ ಒತ್ತಡ ತಂದರು. ಕೊನೆಗೆ ಜುಲೈ 26, 1999 ರಂದು ಭಾರತೀಯ ಸೇನೆ ಕೊನೆಯ ಬೆಟ್ಟವಾದ ಟೈಗರ್ ಹಿಲ್ ಅನ್ನು ವಶಪಡಿಸಿಕೊಂಡಿತು. ಪಾಕಿಸ್ತಾನ ತನ್ನ ಸೈನಿಕರನ್ನು ವಾಪಸ್ ಕರೆಸಿಕೊಂಡಿತು. 53 ದಿನಗಳ “ಆಪರೇಷನ್ ವಿಜಯ್” ಯಶಸ್ವಿಯಾಯಿತು. ಭಾರತ ಗೆದ್ದಿತು.

ಕಾರ್ಗಿಲ್ ನಮಗೆ ಕಲಿಸಿದ 3 ದೊಡ್ಡ ಪಾಠ

  • ಗಡಿ ಭದ್ರತೆ ಅತ್ಯಂತ ಮುಖ್ಯ

      ಚಳಿಗಾಲದಲ್ಲಿ ಗಡಿಯನ್ನು ಖಾಲಿ ಬಿಡಬಾರದು ಎಂಬ ಪಾಠವನ್ನು ನಾವು ಕಲಿತೆವು. ಇಂದಿಗೂ ಲಡಾಕ್‌ನಲ್ಲಿ ವರ್ಷ ಪೂರ್ತಿ ಸೈನಿಕರು ಕಾವಲು ಕಾಯುತ್ತಿದ್ದಾರೆ.

      • ಆಧುನಿಕ ಯುದ್ಧಕ್ಕೆ ಆಧುನಿಕ ಶಸ್ತ್ರಾಸ್ತ್ರ ಬೇಕು

       ಕಾರ್ಗಿಲ್ ನಂತರ ಭಾರತ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿತು. ಡ್ರೋನ್, ಉಪಗ್ರಹ, ಆಧುನಿಕ ಫಿರಂಗಿ – ಎಲ್ಲದಕ್ಕೂ ಒತ್ತು ಕೊಡಲಾಯಿತು.

      • ರಾಷ್ಟ್ರ ಮೊದಲು

       ಜಾತಿ, ಧರ್ಮ, ಭಾಷೆ ಮರೆತು ಇಡೀ ದೇಶ ಒಂದಾಯಿತು. ಜನರು ರಕ್ತದಾನ ಮಾಡಿದರು. ಕಾರ್ಗಿಲ್ ಫಂಡ್‌ಗೆ ಹಣ ಕಳುಹಿಸಿದರು. ಮಾಧ್ಯಮಗಳು ಮೊದಲ ಬಾರಿಗೆ ಯುದ್ಧವನ್ನು ನೇರ ಪ್ರಸಾರ ಮಾಡಿದವು. ಜನರಿಗೆ ಸೈನಿಕರ ಕಷ್ಟ ಅರ್ಥವಾಯಿತು.

      ಇಂದಿನ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

      ಪ್ರತಿ ವರ್ಷ ಜುಲೈ 26 ರಂದು ದೆಹಲಿಯ ಇಂಡಿಯಾ ಗೇಟ್ ಬಳಿಯ “ನ್ಯಾಷನಲ್ ವಾರ್ ಮೆಮೋರಿಯಲ್” ನಲ್ಲಿ ಪ್ರಧಾನಿಗಳು ವೀರ ಯೋಧರಿಗೆ ನಮನ ಸಲ್ಲಿಸುತ್ತಾರೆ. ದ್ರಾಸ್‌ನಲ್ಲಿರುವ “ಕಾರ್ಗಿಲ್ ವಾರ್ ಮೆಮೋರಿಯಲ್” ನಲ್ಲಿ ದೇಶದ ಮೂಲೆ ಮೂಲೆಯಿಂದ ಜನರು ಬಂದು ಮೇಣದಬತ್ತಿ ಹಚ್ಚುತ್ತಾರೆ. ಶಾಲೆಗಳಲ್ಲಿ ಮಕ್ಕಳಿಗೆ ಕಾರ್ಗಿಲ್ ಕಥೆ ಹೇಳಲಾಗುತ್ತದೆ. ಸೈನಿಕರ ಕುಟುಂಬಗಳಿಗೆ ಗೌರವ ನೀಡಲಾಗುತ್ತದೆ. “ಕಾರ್ಗಿಲ್ ವಿಜಯ್ ದಿವಸ್” ಎಂದರೆ ನೆನಪು ಮಾತ್ರವಲ್ಲ. ಇದು ಹೊಸ ತಲೆಮಾರಿಗೆ ದೇಶಭಕ್ತಿಯ ಪಾಠ.

      ಕಾರ್ಗಿಲ್‌ನಲ್ಲಿ ಪ್ರಾಣ ತೆತ್ತ ಯೋಧರು ನಮ್ಮಿಂದ ಏನನ್ನೂ ಕೇಳಲಿಲ್ಲ. ಅವರು ಕೇಳಿದ್ದು ಒಂದೇ – “ನೀವು ಸುರಕ್ಷಿತವಾಗಿ ಇರಿ”. “ಸೈನಿಕನು ಗಡಿಯಲ್ಲಿ ನಿಂತಿರುವುದರಿಂದಲೇ ನಾವು ಇಲ್ಲಿ ನೆಮ್ಮದಿಯಾಗಿ ನಿದ್ರಿಸುತ್ತೇವೆ” – ಈ ಸತ್ಯವನ್ನು ನಾವು ಎಂದಿಗೂ ಮರೆಯಬಾರದು.

      ಜೈ ಹಿಂದ್! ಭಾರತ್ ಮಾತಾ ಕಿ ಜೈ!

      ಕಾರ್ಗಿಲ್‌ನ ವೀರಿಗೆ ಸಾವಿರ ಸಲಾಂ.

      ಲೇಖಕರು: ಪ್ರಶಾಂತ ಸುತಾರ

      ಉಪನ್ಯಾಸಕರು ಜಿ.ಟಿ.ಟಿ.ಸಿ ಧಾರವಾಡ.

      8884327155

      Leave a Reply

      Your email address will not be published. Required fields are marked *