Story of Angirasa Maharshi in Kannada: The Great Vedic Sage and Son of Brahmaಅಂಗಿರಸ ಮಹರ್ಷಿ

ಭಾರತೀಯ ಸನಾತನ ಪರಂಪರೆಯಲ್ಲಿ ಹತ್ತುಹಲವು ಕಡೆ ಕೇಳಿಬರುವ ಹೆಸರು ಅಂಗಿರಸರದು. ವೇದಗಳ ಕಾಲದಿಂದಲೂ ಈ ಮಹರ್ಷಿಗಳು ಪ್ರಖ್ಯಾತರು. ಯಜ್ಞಯಾಗಾದಿಗಳನ್ನು ಪ್ರಥಮತಃ ಪ್ರಾರಂಭಿಸಿ ಪ್ರಖ್ಯಾತಿಗೆ ತಂದ ಕೀರ್ತಿಯು ಈ ಮಹರ್ಷಿಗಳಿಗೆ ಸಲ್ಲಬೇಕು. ಯಶ್ವೇಶ್ವರನಂತೆಯೇ ಪ್ರಭಾವಶಾಲಿಗಳಾಗಿದ್ದವರು, ಅಂಗಿರಸರು.

ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬರಾದ ಇವರನ್ನು ಕೆಲವು ಕಡೆ ಯಜ್ಞವೇದಿಯಿಂದ ಉದ್ಭವಿಸಿದವರೆಂದು ಹೇಳುವುದುಂಟು. ಪ್ರಥಮ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬರಾದ ಅಂಗಿರಸರು ಗೋತ್ರಪ್ರವರ್ತಕರೂ ಆಗಿದ್ದಾರೆ.

ಒಮ್ಮೆ ಅಂಗಿರಸರು ಕಠಿಣ ತಪಸ್ಸಿನಲ್ಲಿ ನಿರತರಾದರು. ಅವರ ತೇಜಸ್ಸು ಯಶ್ವೇಶ್ವರನಿಗಿಂತಲೂ ಮಿಗಿಲಾಗಿದ್ದಿತು. ಅವರ ತಪಃಪ್ರಭಾವವನ್ನು ಕಂಡು ಅಗ್ನಿಯು ಬೆದರಿದನು. ಆ ಸಮಯದಲ್ಲಿ ಅಗ್ನಿಯೂ ನೀರಿನಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದನು. ತಾನು ತಪಸ್ಸು ಮಾಡುತ್ತಿರುವಾಗ ಬ್ರಹ್ಮನು ಬೇರೆಯೇ ಅಗ್ನಿಯನ್ನು ಸೃಷ್ಟಿಸಿರಬಹುದೆಂದು ಅವನು ಭಾವಿಸಿದನು. ನೀರಿನಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ ಅಗ್ನಿಯ ಹೆಸರು ‘ಸಹ’, ಇವನು ಯಜ್ಞಕಾರ್ಯಗಳ ಸಮಯಕ್ಕೆ ಸರಿಯಾಗಿ ಸಿಗದೆ ತಪ್ಪಿಸಿಕೊಂಡು ತಿರುಗುತ್ತಿದ್ದನು.

ದೇವತೆಗಳಿಗೆ ಇದರಿಂದಾಗಿ ಹವ್ಯಕವ್ಯಗಳು ಸರಿಯಾಗಿ ದೊರೆಯುತ್ತಿರಲಿಲ್ಲ. ಆಗ ಅವರೆಲ್ಲರ ಬೇಡಿಕೆಯಂತೆ ಅಂಗಿರಸ ಮಹಾಮುನಿಗಳೇ ಅಗ್ನಿಯ ಕಾರ್ಯವನ್ನು ನಿರ್ವಹಿಸತೊಡಗಿದರು. ಆಗ ‘ಸಹ’ ತನ್ನ ತೇಜೋಮಯವಾದ ಶರೀರದಿಂದ ಭೂಮಿಯ ಮಧ್ಯಭಾಗವನ್ನು ಪ್ರವೇಶಿಸಿದನು. ಅವನ ಶರೀರದಿಂದ ಗಂಧಕ, ಸ್ಪಟಿಕ, ಮರಕತ, ಕಬ್ಬಿಣ ಮುಂತಾದ ಅನೇಕ ಧಾತುಗಳು ಉತ್ಪನ್ನವಾದವು. ಹೀಗೆ ಅಗ್ನಿಯು ತನ್ನ ದೇಹವನ್ನು ತ್ಯಜಿಸಿ ಕೇವಲ ಜ್ಯೋತಿಸ್ವರೂಪದಿಂದ ತಪಸ್ಸಿನಲ್ಲಿ ನಿರತನಾದನು.

ಅಂಗಿರಸರು ಭ್ರಗು ಮುಂತಾದ ಉಳಿದ ಮಹರ್ಷಿಗಳ ಜೊತೆಯಲ್ಲಿ ಹೋಗಿ, ಅಗ್ನಿಯನ್ನು ತಪಸ್ಸಿನಿಂದ ಎಚ್ಚರಗೊಳಿಸಿದರು. ತಪಃಶಕ್ತಿಯಿಂದ ಮಹಾತೇಜಸ್ವಿಯಾಗಿದ್ದ ಅಗ್ನಿಯನ್ನು ಕುರಿತು ಅಂಗಿರಸರು, “ಸರ್ವಕಾಲದಲ್ಲಿಯೂ ಅಗ್ನಿಯಾಗಿ ನಿನ್ನ ಕಾರ್ಯವನ್ನು ಮಾಡುವ ಇಚ್ಛೆ ನನಗಿಲ್ಲ. ನೀನು ನಿನ್ನ ಸ್ವಸ್ಥಾನಕ್ಕೆ ಬಂದು ನಿನ್ನ ಕೆಲಸವನ್ನು ವಹಿಸಿಕೋ” ಎಂದು ಹೇಳಿದರು. ಆದರೆ ಹವ್ಯವನ್ನು ಒಯ್ಯುವ ಕಾರ್ಯವನ್ನು ವಹಿಸಿಕೊಳ್ಳಲು ಇಷ್ಟವಿಲ್ಲದೆ ಅಗ್ನಿಯು ಸಮುದ್ರಕ್ಕೆ ಹೋಗಿ ಬಚ್ಚಿಟ್ಟುಕೊಂಡನು. ತಾತ್ಕಾಲಿಕವಾಗಿ ಅಂಗಿರಸರೂ ಹವ್ಯವನ್ನು ಒಯ್ಯುವ ಕಾರ್ಯವನ್ನು ನಿಲ್ಲಿಸಿದರು. ಇದರಿಂದಾಗಿ ಲೋಕವೇ ತಲ್ಲಣಿಸಿತು.

ದೇವತೆಗಳೆಲ್ಲ ಮತ್ತೆ ಅಥರ್ವಾಂಗಿರಸರನ್ನೇ ಮೊರೆಹೊಕ್ಕರು. ಮಹರ್ಷಿಗಳು ದೇವತೆಗಳ ಸಮಕ್ಷಮದಲ್ಲಿಯೇ ಸಮುದ್ರವನ್ನು ಕಲಕಿ ‘ಸಹ’ನು ಹೊರಬರುವಂತೆ ಮಾಡಿದರು. ಹೊರಬಂದ ಅಗ್ನಿಯು ಮಹರ್ಷಿಗಳನ್ನು ಕುರಿತು, “ಮಹರ್ಷಿಗಳೇ! ನಾನು ಕಳೆದುಹೋದ ಕೀರ್ತಿಯುಳ್ಳವನಾಗಿದ್ದೇನೆ. ನೀವೇ ಇಂದು ಮಹಾತೇಜಸ್ಸಿನಿಂದ ಅಗ್ನಿಯ ರೂಪವನ್ನು ಪಡೆದುಬಿಟ್ಟಿರುವಿರಿ. ಜನರು ನಿಮ್ಮನ್ನೇ ಪರಮಪವಿತ್ರನಾದ ಪಾವಕನೆಂದು ತಿಳಿದುಬಿಟ್ಟಿದ್ದಾರೆ, ನನ್ನನ್ನು ನಿರ್ಲಕ್ಷಿಸಿರುತ್ತಾರೆ.

ನಾನೂ ನಿಮ್ಮನ್ನು ಅಗ್ನಿಯೆಂದೇ ಭಾವಿಸಿ ನಿಮಗೇ ಎಲ್ಲವನ್ನೂ ವಹಿಸಿಬಿಡುತ್ತೇನೆ” ಎಂದನು. ಆಗ ಅಂಗಿರಸರು, “ಅಗ್ನಿದೇವ! ನಿನ್ನ ಕಾರ್ಯಗಳನ್ನು ವಹಿಸಿಕೊಂಡು ಸರಿಯಾಗಿ ಮಾಡಿದರೆ ಹಿಂದಿನ ಗೌರವವನ್ನು ಮತ್ತೆ ಪಡೆಯುವೆ. ಪ್ರಜೆಗಳಿಗೆ ಸ್ವರ್ಗದಾಯಕ ಯಜ್ಞಗಳಲ್ಲಿ ಆಶ್ರಯಪಡೆದು, ಲೋಕದ ಕತ್ತಲೆಯನ್ನು ಕಳೆದು ಮತ್ತೆ ಮೊದಲಿನಂತೆ ಕಾರ್ಯತತ್ಪರನಾಗು” ಎಂದು ಆದೇಶಿಸಿದರು. ‘ಸಹ’ನಿಗೆ ಸಹಾಯಕರಾಗಿ ಬೇರೆ ಬೇರೆ ಅಗ್ನಿಗಳನ್ನು ಅಂಗಿರಸರು ಸೃಷ್ಟಿಸಿದರು. ಈ ಎಲ್ಲ ಅಗ್ನಿಗಳೂ ಇಂದಿಗೂ ಲೋಕವನ್ನು ಧರಿಸುತ್ತಿವೆ. ಅಗ್ನಿಯು ಅಂಗಿರಸರಿಗೆ ಕೃತಜ್ಞತಾಪೂರ್ವಕವಾಗಿ ಪುತ್ರನೊಬ್ಬನನ್ನು ಅನುಗ್ರಹಿಸಿದನು. ಅವನೇ ದೇವತೆಗಳ ಗುರುವಾದ ಬೃಹಸ್ಪತಿ.

ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *