Arishtanemi Maharishi, the son of Sage Kashyapa Story in KannadaAI ಚಿತ್ರ

ಅರಿಷ್ಟನೇಮಿ ಕಶ್ಯಪಮಹಾಮುನಿಗಳ ಪುತ್ರರು. ಇವರ ತಾಯಿ ವಿನತೆ, ತಾರ್ಕ್ಷ್ಯಮುನಿ ಅರಿಷ್ಟನೇಮಿ, ಗರುಡ, ಅರುಣ ಮತ್ತು ಆರುಣಿಗಳೆಂಬ ಐವರು ವಿನತೆಯ ಪುತರೆಂದು ಹರಿವಂಶದಲ್ಲಿ ಹೇಳಿದೆ.

ಅರಿಷ್ಟನೇಮಿಗಳು ಹಿಮಾಲಯದ ದಟ್ಟವಾದ ಅರಣ್ಯದಲ್ಲಿ ಆಶ್ರಮವನ್ನು ನಿರ್ಮಿಸಿಕೊಂಡು ತಪಸ್ಸು ಮಾಡುತ್ತಿದ್ದರು. ಆಗ ಹೈಹಯರೆಂಬ ರಾಜವಂಶದವರು ರಾಜ್ಯಭಾರ ಮಾಡುತ್ತಿದ್ದರು. ಹೈಹಯರು ಸಾಕ್ಷಾತ್ ವಿಷ್ಣುಪುತ್ರನಾದ ಏಕವೀರ ನೆಂಬವನ ಸಂತತಿಯವರು. ಕಾರ್ತವೀರ್ಯಾರ್ಜುನನು ಇವರಲ್ಲಿ ಬಹು ಪ್ರಸಿದ್ಧ ನಾದ ಅರಸ. ಅವನು ದತ್ತಾತ್ರೇಯನ ಭಕ್ತನೂ ಆಗಿದ್ದನು.

ಇಂತಹ ಹೈಹಯಕುಲೋತ್ಪನ್ನನಾದ, ಶತ್ರುಮರ್ದನನೂ ರೂಪಸಂಪನ್ನನೂ ಆದ ರಾಜಕುಮಾರನೊಬ್ಬನು ಬೇಟೆಯ ಸಲುವಾಗಿ ಕಾಡಿಗೆ ಬಂದಿದ್ದನು. ಹರಿಣ ಸಾರಂಗಾದಿ ಮೃಗಗಳನ್ನು ಬೇಟೆಯಾಡುತ್ತ ಕಾಡಿನಲ್ಲಿ ಸಂಚರಿಸುತ್ತಿದ್ದ ಈ ರಾಜ ಕುಮಾರನು ಜಿಂಕೆಯ ಚರ್ಮವನ್ನು ಹೊದೆದಿದ್ದ ಋಷಿಯೊಬ್ಬನನ್ನು ದೂರದಿಂದಲೇ ಕಂಡು, ಮೃಗವೆಂದು ಭಾವಿಸಿ, ಬಾಣಪ್ರಯೋಗ ಮಾಡಿಬಿಟ್ಟನು. ನಿಶಿತವಾದ ಬಾಣ ದಿಂದ ತಾಡಿತನಾದ ಋಷಿಯು ‘ಅಯ್ಯೋ ಸತ್ತೆ’ ಎಂಬ ಆಕ್ರಂದನದೊಂದಿಗೆ ಕೆಳಗೆ ಬಿದ್ದುಬಿಟ್ಟನು. ರಾಜಕುಮಾರನು ಋಷಿಯ ಸಮೀಪಕ್ಕೆ ಹೋಗಿ, ತಾನು ಮಾಡಿದ ತಪ್ಪನ್ನು ಅರಿತವನಾಗಿ, ಪಶ್ಚಾತ್ತಾಪದಿಂದ ದಗ್ಧನಾದನು.

ಅಲ್ಲಿ ಹೆಚ್ಚು ಕಾಲ ನಿಲ್ಲದೇ ತನ್ನ ಪಾಪಕ್ಕೆ ಪ್ರಾಯಶ್ಚಿತ್ತವನ್ನು ತಿಳಿಯಲು ಹೈಹಯ ಪ್ರಮುಖರ ಬಳಿಗೆ ಹೋಗಿ, ಕಾಡಿನಲ್ಲಿ ನಡೆದ ವಿದ್ಯಮಾನಗಳನ್ನೆಲ್ಲ ವಿಶದವಾಗಿ ತಿಳಿಸಿದನು. ಅವರೆಲ್ಲರೂ ರಾಜಕುಮಾರನೊಂದಿಗೆ ಅರಣ್ಯಕ್ಕೆ ಬಂದು, ಕಂದಮೂಲಗಳನ್ನು ತಿನ್ನುತ್ತ ಸರ್ವದಾ ತಪಸ್ಸಿನಲ್ಲಿ ನಿರತನಾಗಿ ಜೀವಿಸುತ್ತಿರುವ ಋಷಿಯು ರಾಜಕುಮಾರನ ಬಾಣದ ಆಘಾತಕ್ಕೆ ಸಿಕ್ಕಿ ಕೆಳಗೆ ಬಿದ್ದಿರುವುದನ್ನು ನೋಡಿ ಅತ್ಯಂತ ದುಃಖಿತರಾದರು.

ಆ ಋಷಿಯ ಆಶ್ರಮಕ್ಕೆ ಹೋಗಿ ವಿಷಯವನ್ನು ತಿಳಿಸಬೇಕೆಂದೂ ಆ ಋಷಿಯು ಯಾರೆಂಬುದನ್ನು ತಿಳಿಯಬೇಕೆಂದೂ ಹಾಗೂ ತಮ್ಮ ಅಪರಾಧಕ್ಕೆ ಪ್ರಾಯಶ್ಚಿತ್ತವನ್ನು ಕಂಡುಕೊಳ್ಳಬೇಕೆಂದೂ ಉದ್ದೇಶಿಸಿ ಅವರೆಲ್ಲ ಅರಣ್ಯದಲ್ಲಿ ಆಶ್ರಮವನ್ನು ಹುಡುಕತೊಡಗಿದರು. ಹಾಗೆ ಹುಡುಕುತ್ತ ಕಶ್ಯಪರ ಪುತ್ರರೂ ಅಮಿತತೇಜೋವಂತರೂ ಆದ ಮಹರ್ಷಿ ಅರಿಷ್ಟನೇಮಿಗಳ ಆಶ್ರಮಕ್ಕೆ ಬಂದರು. ಮಹಾತ್ಮರಾದ ಅರಿಷ್ಟನೇಮಿಗಳಿಗೆ ಅವರೆಲ್ಲ ನಮಸ್ಕರಿಸಿ, ವಿನೀತರಾಗಿ ನಿಂತುಕೊಂಡರು. ಅತಿಥಿಗಳನ್ನು ಕಂಡು ಮಹರ್ಷಿಗಳು ಆನಂದದಿಂದ ಅವರನ್ನು ಯಥಾಯೋಗ್ಯವಾಗಿ ಸತ್ಕರಿಸಲು ಸಾಮಗ್ರಿಗಳನ್ನು ಸಿದ್ದಪಡಿಸತೊಡಗಿದರು,

ಹೈಹಯ ಪ್ರಮುಖರು ಬದ್ಧಾಂಜಲಿಗಳಾಗಿ ಋಷಿಗಳನ್ನು ಕುರಿತು, ‘ಮಹರ್ಷಿಗಳೇ! ನಾವು ನಿಮ್ಮ ಆತಿಥ್ಯವನ್ನು ಸ್ವೀಕರಿಸಲು ಯೋಗ್ಯರಲ್ಲ. ಬ್ರಾಹ್ಮಣನೂ ಋಷಿಯೂ ಆದ ಒಬ್ಬನನ್ನು ವಧೆ ಮಾಡಿದ ಕಾರಣ ನಾವೆಲ್ಲರೂ ದೋಷಿ ಗಳಾಗಿರುತ್ತೇವೆ” ಎಂದು ಹೇಳಿದರು. ಅದಕ್ಕೆ ಮಹರ್ಷಿಯು, “ರಾಜಪುತ್ರರೇ, ನೀವು ನೀವು ಬ್ರಾಹ್ಮಣನನ್ನು ಏತಕ್ಕಾಗಿ ವಧೆ ಮಾಡಿದಿರಿ? ಅವನು ಯಾರು? ಎಲ್ಲಿ ಆ ಘಟನೆಯು ಸಂಭವಿಸಿತು? ವಿಶದವಾಗಿ ತಿಳಿಸಿರಿ” ಎಂದು ಕೇಳಿದರು. ಹೈಹಯಮುಖ್ಯರು ನಡೆದುದೆಲ್ಲವನ್ನೂ ಋಷಿಗೆ ತಿಳಿಸಿ.

ತಾವೆಲ್ಲರೂ ಪ್ರಾಯಶ್ಚಿತ್ತವನ್ನು ತಿಳಿಯಲು ಇಲ್ಲಿಗೆ ಬಂದಿರುವುದಾಗಿ ಹೇಳಿದರು. ಋಷಿಯು ಮೃತನಾದ ಬ್ರಾಹ್ಮಣನನ್ನು ತೋರಿಸಲು ಹೇಳಿದರು. ಎಲ್ಲರೂ ಋಷಿಯನ್ನು ಕರೆದುಕೊಂಡು ಘಟನೆ ನಡೆದ ಸ್ಥಳಕ್ಕೆ ಧಾವಿಸಿದರು. ಆದರೆ ಅಲ್ಲಿ ಮೃತನ ಶವ ಇರಲಿಲ್ಲ. ಮೃತನ ಕಳೇಬರವನ್ನು ಯಾವುದೋ ಪ್ರಾಣಿಯು ಒಯ್ದಿರಬಹುದೆಂದು ಅಲ್ಲೆಲ್ಲ ಹುಡುಕಾಡಿದರು. ಆದರೆ ಶರೀರವಾಗಲೀ ಅಂತಹ ಘಟನೆಯು ನಡೆದ ಕುರುಹುಗಳಾಗಲೀ ಅಲ್ಲಿರಲಿಲ್ಲ. ಎಲ್ಲರೂ ಹುಡುಕಿ ದಣಿದು ಮತ್ತೆ ಅರಿಷ್ಟನೇಮಿಗಳ ಆಶ್ರಮಕ್ಕೇ ಹಿಂದಿರುಗಿದರು. ಮಹರ್ಷಿಗಳಿಗೆ ವಂದಿಸಿ ನಿಂತರು. ಇದೇನು ಸ್ವಪ್ನವೋ ಎಂಬ ಭ್ರಮೆ ಅವರಿಗೆ ಉಂಟಾಯಿತು.

ಭಯ ಮತ್ತು ನಾಚಿಕೆಗಳಿಂದ ಕೂಡಿ ತಲೆತಗ್ಗಿಸಿ ನಿಂತಿದ್ದ ಅವರನ್ನು ನೋಡಿ ಮಹರ್ಷಿಗಳು ನಸುನಕ್ಕು ತಮ್ಮ ಪುತ್ರನನ್ನು ಒಳಗಿನಿಂದ ಕೂಗಿದರು. ಅವನನ್ನು ಅತಿಥಿಗಳಿಗೆ ತೋರಿಸಿ, “ನೀವು ಬಾಣದಿಂದ ಸಂಹಾರ ಮಾಡಿದೆವೆಂದುಕೊಂಡಿರುವ ಬ್ರಾಹ್ಮಣಕುಮಾರನು ಇವನೇ ಆಗಿರಬಹುದಲ್ಲವೆ?” ಎಂದು ಕೇಳಿದರು.

ಅವರೆಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದರು. ನಿಜವಾಗಿಯೂ ಸತ್ತನೆಂದು ಭಾವಿಸಿದ್ದ ಬ್ರಾಹ್ಮಣ ಕುಮಾರನು ಆ ಮಹರ್ಷಿಗಳ ಪುತ್ರನೇ ಆಗಿದ್ದನು. ಎಲ್ಲರೂ ವಿಸ್ಮಿತರಾಗಿ, “ನಿಜ ವಾಗಿಯೂ ನಾವೇ ನೋಡಿದಂತೆ ಸತ್ತುಬಿದ್ದಿದ್ದ ಈ ತಾಪಸಕುಮಾರನು ಪುನಃ ಜೀವಂತನಾಗಲು ಹೇಗೆ ಸಾಧ್ಯವಾಯಿತು? ಈ ವಿಷಯವು ರಹಸ್ಯವಲ್ಲದಿದ್ದರೆ ನಮಗೆ ತಿಳಿಸಿಕೊಡಿ” ಎಂದು ಪ್ರಾರ್ಥಿಸಿದರು.

ಆಗ ಮಹರ್ಷಿಗಳು “ಮೃತ್ಯುದೇವತೆಗೂ ನಮ್ಮ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ, ಸತ್ಯಭಾಷಿಗಳೂ ಸ್ವಧರ್ಮನಿರತರೂ ಆದ ನಾವು ಇದುವರೆಗೆ ಯಾರನ್ನೂ ನಿಂದಿಸಿರುವುದಿಲ್ಲ. ಅತಿಥಿಸತ್ಕಾರ, ಸಹನಶೀಲತೆ, ಜಿತೇಂದ್ರಿಯತ್ವ, ಕ್ಷಮೆ, ತೀರ್ಥಸ್ನಾನ ಮುಂತಾದ ಪುಣ್ಯಕರ್ಮಗಳಿಂದ ನಾವು ಅಪಮೃತ್ಯುವನ್ನು ಜಯಿಸಬಲ್ಲೆವು. ಪ್ರಸಕ್ತ ಸಂದರ್ಭದಲ್ಲಿ ನಿಮ್ಮಿಂದ ಬ್ರಾಹ್ಮಣವಧೆಯು ಘಟಿಸಿಲ್ಲವಾಗಿ ನಿಮಗೆ ಬ್ರಹ್ಮಹತ್ಯಾದೋಷವಿಲ್ಲ. ನೀವು ನಿರ್ಭಯರಾಗಿ ನಿಮ್ಮ ದೇಶಕ್ಕೆ ಪ್ರಯಾಣ ಬೆಳೆಸಬಹುದು” ಎಂದು ಹೇಳಿ ಅವರನ್ನೆಲ್ಲ ಸತ್ಕರಿಸಿ ಬೀಳ್ಕೊಟ್ಟರು.

ಗಳು ಅಂತಹ ತಪಃಸಿದ್ದರು. ಅವರ ಸಹೋದರರಾದ ತಾರ್ಕ್ಷಮುನಿಗಳು ಕೂಡಾ ಹೀಗೆ ಧರ್ಮನಿಷ್ಠರಾದ ತಪಸ್ವಿಗಳಿಗೆ ಮೃತ್ಯುವೂ ಅಂಜುತ್ತಿದ್ದನು. ಅರಿಷ್ಟನೇಮಿ ಸಾಕ್ಷಾತ್ ಸರಸ್ವತೀದೇವಿಯ ಬಳಿಗೆ ಹೋಗಿ ಧರ್ಮರಹಸ್ಯವನ್ನೆಲ್ಲ ತಿಳಿದು ಐಹಿಕ ಮತ್ತು ಆಮುಷ್ಟಿಕ ಪುಣ್ಯಫಲಗಳನ್ನೆಲ್ಲ ಪಡೆದವರು. ಆತ್ಮಸ್ವರೂಪಳೇ ಆದ ಸರಸ್ವತಿಯೊಡನೆ ನಡೆದ ಅವರ ಸಂಭಾಷಣೆಯು ಮಹಾಭಾರತದಲ್ಲಿ ಉಕ್ತವಾಗಿದೆ.

ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *