ಮುಂಬೈ, ಏಪ್ರಿಲ್ 25: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ನೀಡಲಾದ ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ತಿಳಿಸಿದೆ.ಬ್ಯಾಂಕ್ ಮತ್ತು ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾದ ರೀತಿಯಲ್ಲಿ ವ್ಯವಹಾರಗಳನ್ನು ನಡೆಸಿದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕ್‌ನ ಆಡಳಿತ ಮಂಡಳಿಯ ವರ್ತನೆಯು ಠೇವಣಿದಾರರು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ. ಇದರ ಪರಿಣಾಮವಾಗಿ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಭವಿಷ್ಯದಲ್ಲಿ ಯಾವುದೇ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸದಂತೆ ನಿಷೇಧಿಸಲಾಗಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಸೆಕ್ಷನ್ 22(4) ರ ಅಡಿಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಗ್ರಾಹಕರ ಹಣ ಸುರಕ್ಷಿತವೇ? ಪೇಟಿಎಂ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವ ಗ್ರಾಹಕರಿಗೆ ಆರ್‌ಬಿಐ ಅಭಯ ನೀಡಿದೆ. ಠೇವಣಿದಾರರಿಗೆ ನೀಡಬೇಕಾದ ಪೂರ್ಣ ಹಣವನ್ನು ಹಿಂತಿರುಗಿಸಲು ಬ್ಯಾಂಕ್ ಬಳಿ ಸಾಕಷ್ಟು ನಗದು ಹಣ (Liquidity) ಲಭ್ಯವಿದೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ. ಆದ್ದರಿಂದ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಪೇಟಿಎಂ ಕಂಪನಿಗೆ 2015ರಲ್ಲಿ ಬ್ಯಾಂಕಿಂಗ್ ಲೈಸೆನ್ಸ್ ಸಿಕ್ಕಿತ್ತು. 2017ರಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರಂಭವಾಯಿತು. ಬಹಳ ಬೇಗ ಅದು ಜನಪ್ರಿಯವಾಗಿತ್ತು. 3 ಕೋಟಿ ಬ್ಯಾಂಕ್ ಅಕೌಂಟ್ಗಳು, 10 ಕೋಟಿ ಕೆವೈಸಿಯುಕ್ತ ಗ್ರಾಹಕರು, ಮತ್ತು 30 ಕೋಟಿ ವ್ಯಾಲಟ್ ಬಳಕೆದಾರರನ್ನು ಅದು ಹೊಂದಿತ್ತು. ಹಾಗೆಯೇ, 80 ಲಕ್ಷ ಫಾಸ್ಟ್ಯಾಗ್ ಗ್ರಾಹಕರ ಬಳಗವೂ ಅದಕ್ಕಿತ್ತು. ಆದರೆ, ಕೆವೈಸಿ ಸರಿಯಾಗಿ ಪಡೆಯದೆಯೇ ಅಕೌಂಟ್ಗಳನ್ನು ನೀಡಲಾಗಿದೆ ಎಂಬಿತ್ಯಾದಿ ಹಲವು ನಿಯಮಗಳ ಉಲ್ಲಂಘನೆ ಆಗಿರುವ ಆರೋಪ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಕೇಳಿಬಂದಿತು. ಈ ಸಂಬಂಧ ಆರ್ಬಿಐ ಹಲವು ಬಾರಿ ಆ ಸಂಸ್ಥೆಗೆ ನೋಟೀಸ್ ಕೊಟ್ಟಿತ್ತು. ಆದರೂ ಉಲ್ಲಂಘನೆ ಮುಂದುವರಿದಿತ್ತು. 2022ರಲ್ಲಿ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ ವಿಧಿಸಿತು. 2024ರಲ್ಲಿ ಇರುವ ಗ್ರಾಹಕರಿಂದಲೇ ಹೊಸ ಡೆಪಾಸಿಟ್, ಕ್ರೆಡಿಟ್ ಟ್ರಾನ್ಸಾಕ್ಷನ್ಸ್, ಟಾಪಪ್, ವ್ಯಾಲಟ್ಸ್, ಫಾಸ್ಟ್ಯಾಗ್ ಇತ್ಯಾದಿಯನ್ನು ಪಡೆಯದಂತೆಯೂ ನಿರ್ಬಂಧಿಸಲಾಯಿತು. ಈಗ ಅಂತಿಮವಾಗಿ ಪರವಾನಗಿಯನ್ನೇ ರದ್ದುಗೊಳಿಸುವ ಮೂಲಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಬ್ಯಾಂಕಿಂಗ್ ಅಧ್ಯಾಯ ಕೊನೆಗೊಂಡಂತಾಗಿದೆ. ಆದರೆ, ಪೇಟಿಎಂನ ಇತರ ಯುಪಿಐ (UPI) ಮತ್ತು ಪೇಮೆಂಟ್ ಅಗ್ರಿಗೇಟರ್ ಸೇವೆಗಳು ಸಾಮಾನ್ಯದಂತೆ ಮುಂದುವರಿಯಲಿವೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಧರ್ಮ ಕೇಳಿ ನಡೆಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ 1 ವರ್ಷ: ಮಾಸದ ಗಾಯ ಭಾರತದಲ್ಲಿ ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ಸಂಗ್ರಹಣಾ ಘಟಕ ನಿರ್ಮಾಣ