India to Build world Largest Underground Crude Oil Storage Facility in Odishaಕಚ್ಚಾ ತೈಲ ಸಂಗ್ರಹಣಾ ಘಟಕ

ನವದೆಹಲಿ, ಏಪ್ರಿಲ್‌ 26: ಇರಾನ್‌, ಅಮೆರಿಕ ಮತ್ತು ಇಸ್ರೇಲ್‌ ಯುದ್ಧ ಪರಿಣಾಮ ಭಾರತಕ್ಕೆ ತೈಲ ಆಮದಿನಲ್ಲಿ ಸ್ವಲ್ಪ ಅಡತಡೆ ಉಂಟಾಯಿತು. ಆದರೆ, ಭಾರತದ ಚಾಣಾಕ್ಷ ರಾಜತಾಂತ್ರಿಕ ನಡೆಯಿಂದ ಭಾರತಕ್ಕೆ ತೈಲನ್ನು ಹೊತ್ತ ಹಡಗುಗಳು ಸುಗಮವಾಗಿ ಬಂದವು. ಆದರೆ, ಭವಿಷ್ಯದ ದಿನಗಳಲ್ಲಿ ಈ ಪರಿಸ್ಥಿತಿ ಮತ್ತೆ ಉದ್ಭವವಾಗಬಾರದು ಎಂಬ ಕಾರಣದಿಂದ ಭಾರತ ಸರ್ಕಾರ ಓಡಿಶಾದಲ್ಲಿ ವಿಶ್ವದ ಅತಿ ದೊಡ್ಡ ಭೂಗರ್ಭ ಕಚ್ಚಾ ತೈಲ ಸಂಗ್ರಹಣಾ ಘಟಕವನ್ನು ನಿರ್ಮಿಸುತ್ತಿದೆ.

ಒಡಿಶಾದ ಜಾಜ್ಪುರ್ ಜಿಲ್ಲೆಯ ಚಾಂದಿಖೋಲ್‌ನಲ್ಲಿ ಭೂಗರ್ಭ ಕಚ್ಚಾ ತೈಲ ಸಂಗ್ರಹಣಾ ಘಟಕ ನಿರ್ಮಾಣವಾಗುತ್ತಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಗೆ ಅಂದಾಜು ₹8,743 ಕೋಟಿ ವೆಚ್ಚವಾಗಲಿದೆ.

ಯೋಜನೆ ಕುರಿತು ಸಂಪೂರ್ಣ ಮಾಹಿತಿ

ಈ ಸಂಗ್ರಹಣಾ ಕೇಂದ್ರವನ್ನು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ಅಭಿವೃದ್ಧಿಪಡಿಸುತ್ತಿದೆ. ಏಳು ವರ್ಷಗಳಿಗಿಂತ ಹೆಚ್ಚು ಕಾಲ ಆಡಳಿತಾತ್ಮಕ ವಿಳಂಬಗಳ ನಂತರ, ಒಡಿಶಾ ಸರ್ಕಾರವು ಜಾಜ್ಪುರ್ ಜಿಲ್ಲೆಯ ಚಾಂದಿಖೋಲ್‌ನಲ್ಲಿ ಭೂಗರ್ಭ ತೈಲ ಸಂಗ್ರಹಣಾ ಯೋಜನೆಗೆ ಅಗತ್ಯ ಭೂಮಿಯನ್ನು ಅಂತಿಮವಾಗಿ ಹಸ್ತಾಂತರಿಸಿದೆ.

2018ರ ಡಿಸೆಂಬರ್‌ನಲ್ಲಿ ಯೋಜನೆಗೆ ಅನುಮೋದನೆ ದೊರೆಯಿತು. 4 ಮಿಲಿಯನ್ ಟನ್ ಸಾಮರ್ಥ್ಯದ ಭೂಗರ್ಭ ಶಿಲಾ ಗುಹೆ (Rock Cavern) ನಿರ್ಮಿಸಲಾಗುತ್ತಿದೆ. ಇದರಿಂದ ದೊಡ್ಡ ಪ್ರಮಾಣದ ಕಚ್ಚಾ ತೈಲವನ್ನು ಭೂಗರ್ಭದಲ್ಲಿ ಸಂಗ್ರಹಿಸಬಹುದಾಗಿದೆ.

ಭೂಮಿ ಹಸ್ತಾಂತರ ಸಮಸ್ಯೆಗಳು ಹಾಗೂ ಸುತ್ತಮುತ್ತಲಿನ ಬೆಟ್ಟ ಪ್ರದೇಶಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಕಾರಣ, ಯೋಜನೆಗೆ ಸ್ಥಳದ ಭದ್ರತೆ ಬಗ್ಗೆ ಆತಂಕ ವ್ಯಕ್ತವಾಗಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು.

ಈ ಯೋಜನೆ ಕಾರ್ಯಾರಂಭವಾದ ಬಳಿಕ, ಭಾರತದಲ್ಲಿನ ತುರ್ತು ತೈಲ ಸಂಗ್ರಹ ಸಾಮರ್ಥ್ಯವು ದ್ವಿಗುಣವಾಗಲಿದೆ. ಪ್ರಸ್ತುತ ಸಂಗ್ರಹ ಘಟಗಳಲ್ಲಿನ ತೈಲವನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 9.5 ದಿನಗಳು ಮಾತ್ರ ಬಳಕೆ ಮಾಡಿಕೊಳ್ಳಬಹುದು. ಈ ಯೋಜನೆ ಪೂರ್ಣಗೊಂಡ ಬಳಿಕ 17 ದಿನಗಳಿಗೆ ಹೆಚ್ಚಲಿದೆ.

ಒಡಿಶಾ ಸರ್ಕಾರವು ಇಂಡಸ್ಟ್ರಿಯಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಮೂಲಕ 400 ರಿಂದ 600 ಎಕರೆ ಭೂಮಿಯನ್ನು ಈ ಯೋಜನೆಗೆ ಮೀಸಲಿಟ್ಟಿದ್ದು, ಕಾಮಗಾರಿಗೆ ದಾರಿ ಸುಗಮವಾಗಿದೆ.

ಭೂಮಿ ಸಂಬಂಧಿತ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಗುತ್ತಿಗೆದಾರರ ಆಯ್ಕೆ ಬಳಿಕ, ನಿರ್ಮಾಣ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.

ಯೋಜನೆಯ ನಿರ್ಮಾಣ ಹಂತದಲ್ಲಿ ಸುಮಾರು 4,000 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಕಾರ್ಯಾರಂಭವಾದ ಬಳಿಕ 150 ಶಾಶ್ವತ ಉದ್ಯೋಗಗಳು ಲಭ್ಯವಾಗಲಿವೆ.

ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು, ಈ ಯೋಜನೆ ರಾಜ್ಯವು ಭಾರತದ ಇಂಧನ ಕ್ಷೇತ್ರಕ್ಕೆ ಕೊಡುಗೆ ನೀಡುವುದರ ಜೊತೆಗೆ ಉದ್ಯೋಗ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಮಹತ್ವದ ಅವಕಾಶಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಹಿಂದಿನ ಪೆಟ್ರೋಲಿಯಂ ಸಚಿವ ಧರ್ಮೆಂದ್ರ ಪ್ರಧಾನ್‌ ಅವರು, ಜಾಗತಿಕ ಸರಬರಾಜು ವ್ಯತ್ಯಯಗಳು ಹಾಗೂ ಬೆಲೆ ಏರಿಳಿತಗಳ ಸಂದರ್ಭಗಳಲ್ಲಿ ಸ್ಥಿರ ಕಚ್ಚಾ ತೈಲ ಲಭ್ಯತೆಗಾಗಿ ತುರ್ತು ಸಂಗ್ರಹಣೆಯನ್ನು ವಿಸ್ತರಿಸುವುದು ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ.

ಚಾಂದಿಖೋಲ್ ಘಟಕವನ್ನು ಪಾರಾದೀಪ್ ಬಂದರು ಸೇರಿದಂತೆ ಪ್ರಮುಖ ರಿಫೈನರಿಗಳು ಹಾಗೂ ಪೈಪ್‌ಲೈನ್‌ಗಳಿಗೆ ಸಂಪರ್ಕಿಸಲಾಗುತ್ತದೆ. ಇದರಿಂದ ಪೂರ್ವ ಭಾರತದ ವಿವಿಧ ಪ್ರದೇಶಗಳಿಗೆ ತೈಲ ವಿತರಣೆ ಸುಗಮವಾಗಲಿದೆ.

ಈ ಯೋಜನೆ ಪೂರ್ಣಗೊಂಡ ಬಳಿಕ, ಇದು ಭಾರತದಲ್ಲಿನ ಅತಿ ದೊಡ್ಡ ಭೂಗರ್ಭ ಕಚ್ಚಾ ತೈಲ ಸಂಗ್ರಹಣಾ ಕೇಂದ್ರವಾಗುವುದರ ಜೊತೆಗೆ, ವಿಶ್ವದ ಅತಿದೊಡ್ಡ ಸಂಗ್ರಹಣಾ ಘಟಕಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *