ನವದೆಹಲಿ, ಮಾರ್ಚ್ 31: ಕೇಂದ್ರ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯವು ‘ಭಾರತದ ಜನಗಣತಿ 2027’ರ (India Census 2027) ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಕರ್ನಾಟಕದಲ್ಲಿ (Karnataka) ಈ ಬೃಹತ್ ಪ್ರಕ್ರಿಯೆಯು ಶೀಘ್ರದಲ್ಲೇ ಶುರುವಾಗಲಿದೆ. ಇದು 1872 ರಿಂದ ನಡೆಯುತ್ತಿರುವ 16ನೇ ಜನಗಣತಿ ಹಾಗೂ ಸ್ವಾತಂತ್ರ್ಯಾನಂತರದ 8ನೇ ಜನಗಣತಿಯಾಗಿದೆ. ವಿಶ್ವದ ಅತ್ಯಂತ ಸಂಕೀರ್ಣ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕಾರ್ಯವೆಂದು ಪರಿಗಣಿಸಲ್ಪಟ್ಟಿರುವ ಈ ಪ್ರಕ್ರಿಯೆಯು ಕೇವಲ ಜನರ ಎಣಿಕೆಯಷ್ಟೇ ಆಗಿರದೆ, ದೇಶದ ಜನಸಾಂಖ್ಯಿಕ, ಆರ್ಥಿಕ ಮತ್ತು ಸಾಮಾಜಿಕ ಲಕ್ಷಣಗಳ ಸಮಗ್ರ ದತ್ತಾಂಶವನ್ನು ಒದಗಿಸುವ ಪ್ರಮುಖ ಆಧಾರಸ್ತಂಭವಾಗಿದೆ. ಎರಡು ಹಂತಗಳಲ್ಲಿ ಗಣತಿ ಈ ಬಾರಿಯ ಜನಗಣತಿಯನ್ನು ಎರಡು ವಿಭಿನ್ನ ಹಂತಗಳಲ್ಲಿ ಯೋಜಿಸಲಾಗಿದೆ. ಮೊದಲ ಹಂತದಲ್ಲಿ ‘ಮನೆಪಟ್ಟಿ ಮತ್ತು ಮನೆ ಗಣತಿ (HLO)’ ಕಾರ್ಯವು ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ 2026ರ ಏಪ್ರಿಲ್ 16 ರಿಂದ ಮೇ 15ರ ವರೆಗೆ ನಡೆಯಲಿದೆ. ಈ ಹಂತದಲ್ಲಿ ವಾಸಸ್ಥಳದ ಸ್ಥಿತಿ, ಕುಟುಂಬದ ಸೌಲಭ್ಯಗಳು ಮತ್ತು ಸ್ವತ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಎರಡನೇ ಹಂತವಾದ ‘ಜನಸಂಖ್ಯೆ ಗಣತಿ (PE)’ ಫೆಬ್ರವರಿ 2027ರಲ್ಲಿ ನಡೆಯಲಿದ್ದು, ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಡಿಜಿಟಲ್ ಕ್ರಾಂತಿ ಮತ್ತು ಸ್ವಯಂ-ಗಣತಿ ಜನಗಣತಿ 2027 ಭಾರತದ ಇತಿಹಾಸದಲ್ಲೇ ಮೊದಲ ‘ಸಂಪೂರ್ಣ ಡಿಜಿಟಲ್ ಜನಗಣತಿ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾಂಪ್ರದಾಯಿಕ ಕಾಗದ ರಹಿತವಾಗಿ, ‘Bring Your Own Device (BYOD)’ ಮಾದರಿಯಲ್ಲಿ ವಿಶೇಷ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಗಣತಿದಾರರು ಮಾಹಿತಿ ಸಂಗ್ರಹಿಸಲಿದ್ದಾರೆ. ವಿಶೇಷವಾಗಿ, ಸಾರ್ವಜನಿಕರಿಗೆ “se.census.gov.in” ಪೋರ್ಟಲ್ ಮೂಲಕ ಸ್ವಯಂ-ಗಣತಿ (Self-Enumeration) ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದ ನಾಗರಿಕರು 2026ರ ಏಪ್ರಿಲ್ 1 ರಿಂದ ಏಪ್ರಿಲ್ 15ರ ವರೆಗೆ ತಮ್ಮ ಮಾಹಿತಿಯನ್ನು ತಾವೇ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ. ನಂತರ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಈ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಮಾಹಿತಿ ಸಂಗ್ರಹ ಮತ್ತು ಅಭಿವೃದ್ಧಿ ಮನೆಪಟ್ಟಿ ಕಾರ್ಯಾಚರಣೆಯ ಸಮಯದಲ್ಲಿ ವಾಸಸ್ಥಳದ ಲಕ್ಷಣಗಳು, ಕುಡಿಯುವ ನೀರು, ವಿದ್ಯುತ್, ಅಡುಗೆ ಇಂಧನ, ಇಂಟರ್ನೆಟ್ ಲಭ್ಯತೆ ಮತ್ತು ಕುಟುಂಬದ ಸ್ವತ್ತುಗಳ ವಿವರಗಳನ್ನು ಪಡೆಯಲಾಗುತ್ತದೆ. ಈ ದತ್ತಾಂಶವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಕ್ಷಾಧಾರಿತ ನೀತಿ ರೂಪಿಸಲು, ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ಮತ್ತು ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಸಮುದಾಯಗಳ ಅಭಿವೃದ್ಧಿಗೆ ಸಂಪನ್ಮೂಲಗಳನ್ನು ಹಂಚಿಕೆ ಮಾಡಲು ಅತ್ಯಗತ್ಯವಾಗಿದೆ. ಗೌಪ್ಯತೆಯ ಭರವಸೆ ಜನಗಣತಿ ಕಾಯ್ದೆ 1948ರ ಅಡಿಯಲ್ಲಿ ಸಾರ್ವಜನಿಕರು ನೀಡುವ ಎಲ್ಲಾ ವೈಯಕ್ತಿಕ ಮಾಹಿತಿಯು ಅತ್ಯಂತ ಸುರಕ್ಷಿತ ಮತ್ತು ಗೌಪ್ಯವಾಗಿರುತ್ತದೆ. ಈ ಮಾಹಿತಿಯನ್ನು ಯಾವುದೇ ನ್ಯಾಯಾಲಯ ಅಥವಾ ಇತರ ಇಲಾಖೆಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಕೇವಲ ಒಟ್ಟಾರೆ ಸಂಖ್ಯಾಶಾಸ್ತ್ರೀಯ ಅಂಕಿಅಂಶಗಳನ್ನು ಮಾತ್ರ ಪ್ರಕಟಿಸಲಾಗುತ್ತದೆ, ಇದರಿಂದ ವೈಯಕ್ತಿಕ ಗುರುತು ಬಹಿರಂಗವಾಗುವುದಿಲ್ಲ. ಜನಗಣತಿ 2027, ಸುಧಾರಿತ ಡಿಜಿಟಲ್ ತಂತ್ರಜ್ಞಾನ ಮತ್ತು ದೃಢ ಆಡಳಿತಾತ್ಮಕ ಕ್ರಮಗಳನ್ನು ಏಕೀಕರಿಸುವ ಮೂಲಕ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಮೈಲುಗಲ್ಲಾಗುತ್ತದೆ. ದೇಶದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿಯಾಗಿ, ಇದು ನಿಖರತೆ, ಪಾರದರ್ಶಕತೆ ಮತ್ತು ಮಾಹಿತಿ ಭದ್ರತೆಯತ್ತ, ಬದ್ಧತೆಯನ್ನು ಬಲಪಡಿಸುತ್ತದೆ ಹಾಗೂ ಗೌಪ್ಯತೆಯ ಅತ್ಯುನ್ನತ ಮಾನದಂಡಗಳನ್ನು ಖಚಿತಪಡಿಸುತ್ತದೆ. ಈ ಮಾಹಿತಿಯು ಡೇಟಾ ಆಧಾರಿತ ನಿರ್ಧಾರಗಳಿಗೆ ಅತ್ಯಂತ ಪ್ರಾಮಾಣಿಕ ಆಧಾರವಾಗಿದ್ದು, ವಿವಿಧ ಇಲಾಖೆಗಳಲ್ಲಿ ಸಂಪನ್ಮೂಲಗಳ ಸಮರ್ಪಕ ಹಂಚಿಕೆಗೆ ಸಹಕಾರಿಯಾಗುತ್ತದೆ. ಇದು ಸರ್ಕಾರ ಮತ್ತು ಇತರ ಹಿತಾಸಕ್ತಿಗಳಿಗೆ ಅಂತರ್ಗತ ನೀತಿಗಳನ್ನು ರೂಪಿಸಲು ಮತ್ತು ಸ್ಥಿರ ರಾಷ್ಟ್ರೀಯ ಅಭಿವೃದ್ಧಿಯನ್ನು ಸಾಧಿಸಲು ನೆರವಾಗುತ್ತದೆ. ನಿಖರತೆ, ಪಾರದರ್ಶಕತೆ ಮತ್ತು ದತ್ತಾಂಶ ಭದ್ರತೆಯೊಂದಿಗೆ ದೇಶದ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಲಿರುವ ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಸಹಕರಿಸಬೇಕೆಂದು ನಿರ್ದೇಶನಾಲಯವು ಕೋರಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಐಎಸ್ಐ ಜೊತೆ ನಂಟು ಹೊಂದಿದ್ದ ಉಗ್ರ ದೆಹಲಿಯಲ್ಲಿ ಬಂಧನ ಜನಗಣತಿ: ಸ್ವಯಂ-ಗಣತಿ ಆನ್‌ಲೈನ್‌ನಲ್ಲಿ ಮಾಹಿತಿ ಸಲ್ಲಿಸುವುದು ಹೇಗೆ? ಇಲ್ಲಿದೆ ಹಂತಗಳು