Central government approves rename of kerala to keralamಕೇರಳ

ನವದೆಹಲಿ, ಫೆಬ್ರವರಿ 24: ಕೇರಳ (Kerala) ರಾಜ್ಯದ ಹೆಸರನ್ನು ಕೇರಳಂ (Keralam) ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ (Union Cabinet Meeting) ಅನುಮೋದನೆ ನೀಡಿದೆ. ರಾಜ್ಯಕ್ಕೆ ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಕೇರಳ ವಿಧಾನಸಭೆ 2024ರ ಜೂ.24 ರಂದು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿ, ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು (Central Government) ಒತ್ತಾಯಿಸಿತ್ತು.  

ಕೇರಳ ರಾಜ್ಯದ ಹೆಸರನ್ನು ಬದಲಾವಣೆ ಮಾಡುವ ಕೇರಳ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ‘ಕೇರಳ’ರಾಜ್ಯದ ಹೆಸರನ್ನು ‘ಕೇರಳಂ’ಎಂದು ಬದಲಾಯಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿತು.

ಕೇಂದ್ರ ಸಚಿವ ಸಂಪುಟದ ಅನುಮೋದನೆಯ ನಂತರ ರಾಷ್ಟ್ರಪತಿಗಳು ಕೇರಳ (ಹೆಸರಿನ ಬದಲಾವಣೆ) ಮಸೂದೆ 2026 ಅನ್ನು ಭಾರತದ ಸಂವಿಧಾನದ 3 ನೇ ವಿಧಿಯ ನಿಬಂಧನೆಯಡಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಕೇರಳ ರಾಜ್ಯ ವಿಧಾನಸಭೆಗೆ ಕಳುಹಿಸುತ್ತಾರೆ.

ಕೇರಳ ರಾಜ್ಯ ವಿಧಾನಸಭೆ ಅಭಿಪ್ರಾಯ ಸ್ವೀಕರಿಸಿದ ಬಳಿಕ ಭಾರತ ಸರ್ಕಾರವು ಮುಂದಿನ ಕ್ರಮ ಕೈಗೊಳ್ಳುತ್ತದೆ ಮತ್ತು ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸಲು 2026ರ ಕೇರಳ (ಹೆಸರಿನ ಬದಲಾವಣೆ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ರಾಷ್ಟ್ರಪತಿಗಳ ಶಿಫಾರಸನ್ನು ಪಡೆಯಲಾಗುತ್ತದೆ.

ಹೆಸರು ಬದಲಿಸಲು ಸಂವಿಧಾನ ಏನು ಹೇಳುತ್ತದೆ?  

ಸಂವಿಧಾನದ 3ನೇ ಕಲಂ ಅಸ್ತಿತ್ವದಲ್ಲಿರುವ ರಾಜ್ಯಗಳ ಹೆಸರುಗಳನ್ನು ಬದಲಾಯಿಸಲು ಅವಕಾಶ ನೀಡುತ್ತದೆ. 3 ನೇ ವಿಧಿಯ ಪ್ರಕಾರ, ಸಂಸತ್ತಿನ ಕಾನೂನಿನ ಮೂಲಕ ಯಾವುದೇ ರಾಜ್ಯದ ಹೆಸರನ್ನು ಬದಲಾಯಿಸಬಹುದು. 3ನೇ ವಿಧಿಯ ಮತ್ತಷ್ಟು ನಿಬಂಧನೆಯು, ರಾಷ್ಟ್ರಪತಿಗಳ ಶಿಫಾರಸ್ಸು ಇಲ್ಲದೆ  ಯಾವುದೇ ಮಸೂದೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸುವಂತಿಲ್ಲ ಮತ್ತು ಮಸೂದೆಯಲ್ಲಿರುವ ಪ್ರಸ್ತಾವನೆಯು ಯಾವುದೇ ರಾಜ್ಯಗಳ ಪ್ರದೇಶ, ಗಡಿಗಳು ಅಥವಾ ಹೆಸರಿನ ಮೇಲೆ ಪರಿಣಾಮ ಬೀರಿರುವಂತಿದ್ದರೆ ಅಂತಹ ಸಂದರ್ಭದಲ್ಲಿ ನಿರ್ದಿಷ್ಟಪಡಿಸಬಹುದಾದ ಅವಧಿಯೊಳಗೆ ಅಥವಾ ರಾಷ್ಟ್ರಪತಿಗಳು ಅನುಮತಿಸಬಹುದಾದ ಮುಂದಿನ ಅವಧಿಯೊಳಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ರಾಷ್ಟ್ರಪತಿಗಳು ಆ ರಾಜ್ಯದ ವಿಧಾನಸಭೆಗೆ ಮಸೂದೆಯನ್ನು ಕಳುಹಿಸಿದ್ದರೆ ಮತ್ತು ನಿರ್ದಿಷ್ಟಪಡಿಸಿದ ಅಥವಾ ಅನುಮತಿಸಲಾದ ಅವಧಿ ಮುಗಿದಿದ್ದರೆ ಎಂದು ಹೇಳುತ್ತದೆ.

‘ಕೇರಳ’ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವ ವಿಷಯವನ್ನು ಭಾರತ ಸರ್ಕಾರದ ಗೃಹ ಸಚಿವಾಲಯದಲ್ಲಿ ಪರಿಗಣಿಸಲಾಗಿತ್ತು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಹಕಾರ ಸಚಿವರ ಅನುಮೋದನೆಯೊಂದಿಗೆ, ‘ಕೇರಳ’ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವ ಸಂಪುಟದ ಕರಡು ಟಿಪ್ಪಣಿಯನ್ನು ಕಾನೂನು ವ್ಯವಹಾರಗಳು ಮತ್ತು ಶಾಸಕಾಂಗ ಇಲಾಖೆ, ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಅವುಗಳ ಅಭಿಪ್ರಾಯಕ್ಕಾಗಿ ರವಾನಿಸಲಾಗಿತ್ತು.

‘ಕೇರಳ’ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವ ಪ್ರಸ್ತಾವನೆಗೆ ಕಾನೂನು ವ್ಯವಹಾರಗಳು ಮತ್ತು ಶಾಸಕಾಂಗ ಇಲಾಖೆ, ಕಾನೂನು ಮತ್ತು ನ್ಯಾಯ ಸಚಿವಾಲಯವು ಒಪ್ಪಿಗೆ ಸೂಚಿಸಿವೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *