ಬೆಂಗಳೂರು, ಏಪ್ರಿಲ್ 09: ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ (International Human Trafficking) ಪ್ರಕರಣದಲ್ಲಿ ತೊಡಗಿದ್ದ ನಾಲ್ವರು ಬಾಂಗ್ಲಾದೇಶದ ಪ್ರಜೆಗಳನ್ನು ದೋಷಿಗಳೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಿಶೇಷ ನ್ಯಾಯಾಲಯವು ತೀರ್ಪು ನೀಡಿ ಶಿಕ್ಷೆ ವಿಧಿಸಿದೆ. ಆರೋಪಿಗಳಾದ ಜಾಕಿರ್ ಖಾನ್, ಬದಲ್ ಹೌಲಾದಾರ್, ಕಬೀರ್ ತಾಲುಕ್ದಾರ್ ಮತ್ತು ಮೊಹಮ್ಮದ್ ಬಚ್ಚು ಘಾರಾಮಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ತಲಾ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಜೊತೆಗೆ ತಲಾ 20,000 ರೂ. ದಂಡ ವಿಧಿಸಲಾಗಿದ್ದು, ದಂಡವನ್ನು ಪಾವತಿಸಲು ವಿಫಲರಾದಲ್ಲಿ ಇನ್ನೂ ಒಂದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಶಿಕ್ಷೆಯನ್ನು ವಿದೇಶಿಯರ ಕಾಯ್ದೆ ಮತ್ತು ಭಾರತ ಪ್ರವೇಶ ಪಾಸ್‌ಪೋರ್ಟ್ ಕಾಯ್ದೆ ಅನ್ವಯ ವಿಧಿಸಲಾಗಿದೆ. ಆರೋಪಿಗಳು ಬಾಂಗ್ಲಾದೇಶದಿಂದ ಬೆನಾಪೋಲ್, ಜಶೋರ್ ಮತ್ತು ಅಖೌರಾ ಮಾರ್ಗವಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿರುವುದಾಗಿ ಈ ಮೊದಲು ಒಪ್ಪಿಕೊಂಡಿದ್ದರು. ಅವರು ಅಕ್ರಮವಾಗಿ ಭಾರತೀಯ ಗುರುತಿನ ದಾಖಲೆಗಳನ್ನು ಪಡೆದುಕೊಂಡು, ಬೆಂಗಳೂರಿನ ಹೊರವಲಯಗಳಲ್ಲಿ ತ್ಯಾಜ್ಯ ವಿಂಗಡಣೆ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ತಮ್ಮ ವ್ಯವಹಾರ ಘಟಕದಲ್ಲಿ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನೂ ಉದ್ಯೋಗಕ್ಕೆ ತೆಗೆದುಕೊಂಡಿದ್ದರು ಎಂದು ಎನ್‌ಐಎ ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಗಳು ಬೆಂಗಳೂರಿನಲ್ಲಿ ಜಮೀನು ಬಾಡಿಗೆಗೆ ಪಡೆದು, ಬಾಂಗ್ಲಾದೇಶದ ಜನರು ವಾಸಿಸಲು ಶೆಡ್‌ಗಳನ್ನು ನಿರ್ಮಿಸಿದ್ದರೆಂಬುದು ತಿಳಿದುಬಂದಿದೆ. ಎನ್‌ಐಎ ಈ ಪ್ರಕರಣವನ್ನು 2023ರ ನವೆಂಬರ್‌ನಲ್ಲಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದು, ಗುಪ್ತಚರ ಮಾಹಿತಿ ಆಧಾರದ ಮೇಲೆ ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲವನ್ನು ಬಯಲಿಗೆ ಎಳೆಯಿತು. ನಂತರ ದೇಶವ್ಯಾಪಿ ಶೋಧ ಕಾರ್ಯಾಚರಣೆ ನಡೆಸಿ, ಒಟ್ಟು 12 ಆರೋಪಿಗಳನ್ನು ಬಂಧಿಸಲಾಯಿತು. ಅವರಿಂದ ಬಾಂಗ್ಲಾದೇಶದ ಗುರುತಿನ ದಾಖಲೆಗಳು, ಡಿಜಿಟಲ್ ಸಾಧನಗಳು, ಅಕ್ರಮವಾಗಿ ಪಡೆದ ಭಾರತೀಯ ಗುರುತಿನ ದಾಖಲೆಗಳು ಹಾಗೂ ಹಣವನ್ನು ಜಪ್ತಿ ಮಾಡಿದ್ದಾರೆ. ಎನ್‌ಐಎ 2024ರ ಫೆಬ್ರವರಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, 2024ರ ಮೇನಲ್ಲಿ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ವಿಜಯಪುರದ ಕೆಜಿ ಮಾವಿಗೆ 1 ಲಕ್ಷ ರೂ. Karnataka 2nd PUC Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!