16,087 crore Rs sugarcane payment pending in the country including Karnatakaಸಾಂದರ್ಭಿಕ ಚಿತ್ರ

ನವದೆಹಲಿ, ಏಪ್ರಿಲ್‌ 11: ಪ್ರಸಕ್ತ 2025–26ರ ಕಬ್ಬು ನುರಿಸುವಿಕೆ ಋತುವಿನಲ್ಲಿ ದೇಶದ ಸಕ್ಕರೆ ಕಾರ್ಖಾನೆಗಳು ರೈತರಿಗೆ 16,087 ಕೋಟಿ ರೂ. ಬಾಕಿ ಹಣ ಪಾವತಿಸಬೇಕಿವೆ. ಹಿಂದಿನ ಋತುವಿಗಿಂತ 2,049 ಕೋಟಿ ರೂ. ಹೆಚ್ಚಾಗಿದೆ. ಕರ್ನಾಟಕದಲ್ಲಿ ಕಬ್ಬಿನ ಪಾವತಿ ಬಾಕಿ 4,956 ಕೋಟಿ ರೂ. ಇದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘ (ISMA) ಆಯೋಜಿಸಿದ್ದ ಎರಡು ದಿನದ ಸಭೆಯಲ್ಲಿ ತಜ್ಞರು ತಿಳಿಸಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ರಾಜ್ಯವಾರು ನೋಡಿದರೆ, ಉತ್ತರ ಪ್ರದೇಶವು ಬಾಕಿ ಪಾವತಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಫೆಬ್ರವರಿ 16ರ ತನಕ 121 ಸಕ್ಕರೆ ಕಾರ್ಖಾನೆಗಳು ರೈತರಿಗೆ 3,287 ಕೋಟಿ ರೂ. ಪಾವತಿಸಬೇಕಾಗಿದೆ. ಮಹಾರಾಷ್ಟ್ರದಲ್ಲಿ 4,252 ಕೋಟಿ ರೂ. ಮತ್ತು ಕರ್ನಾಟಕದಲ್ಲಿ 4,956 ಕೋಟಿ ರೂ. ಬಾಕಿ ಉಳಿದಿದೆ. ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಆಗದಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ ಎಂದು

2026ರ ಮಾರ್ಚ್ 31ರ ತನಕ ದೇಶದಲ್ಲಿ 272.31 ಲಕ್ಷ ಟನ್‌ ಒಟ್ಟು ಸಕ್ಕರೆ ಉತ್ಪಾದನೆಯಾಗಿದೆ. ಕಳೆದ ವರ್ಷ ಇದೇ ಅವಧಿಯ 248.78 ಲಕ್ಷ ಟನ್‌ ಮಾತ್ರ ಸಕ್ಕರೆ ಉತ್ಪಾದನೆಯಾಗಿತ್ತು. ಈ ವರ್ಷದಲ್ಲಿ ಶೇ 9 ರಷ್ಟು ಹೆಚ್ಚು ಸಕ್ಕರೆ ಉತ್ಪಾದನೆಯಾಗಿದೆ. ಪ್ರಸ್ತುತ ದೇಶದಾದ್ಯಂತ 56 ಕಾರ್ಖಾನೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ 95 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದವು.

ಉತ್ತರ ಪ್ರದೇಶದಲ್ಲಿ ಈವರೆಗೆ 87.5 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದ್ದು, ಇದು ಕಳೆದ ವರ್ಷದಷ್ಟೇ ಇದೆ. ಆದರೆ ಈಗ ಕೇವಲ 28 ಕಾರ್ಖಾನೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 48 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದವು.

ಮಹಾರಾಷ್ಟ್ರದಲ್ಲಿ 99.3 ಲಕ್ಷ ಟನ್ ಮತ್ತು ಕರ್ನಾಟಕದಲ್ಲಿ 47.90 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದೆ. ಕಳೆದ ಕಬ್ಬು ನುರಿಯುವ ಋತುವಿನಲ್ಲಿ ಕರ್ನಾಟಕದಲ್ಲಿ 39.94 ಲಕ್ಷ ಟನ್‌ ಮತ್ತು ಮಹಾರಾಷ್ಟ್ರದಲ್ಲಿ 80.26 ಲಕ್ಷ ಟನ್ ಮಾತ್ರ ಸಕ್ಕರೆ ಉತ್ಪಾದನೆಯಾಗಿತ್ತು. ಕಬ್ಬು ನುರಿಯುವ ಋತು ಮುಕ್ತಾಯದ ಹಂತದಲ್ಲಿದ್ದು, ಪ್ರಸ್ತುತ ಮಹರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕೇವಲ ನಾಲ್ಕು ಕಾರ್ಖಾನೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಈ ಸಂಬಂಧ ಐಎಸ್‌ಎಮ್‌ಎ ನಿರ್ದೇಶಕ ದೀಪಕ್ ಬಲ್ಲಾನಿ ಮಾತನಾಡಿ, ಸಕ್ಕರೆ ಬೆಲೆಗಳು ಮತ್ತು ಕಬ್ಬಿನ ವೆಚ್ಚಗಳ ನಡುವೆ ಇರುವ ಅಸಮತೋಲನದಿಂದ ಕಾರ್ಖಾನೆಗಳು ಹಣಕಾಸು ಪರಿಸ್ಥಿತಿ ಒತ್ತಡಕ್ಕೆ ಒಳಗಾಗಿದೆ.

“2019ರಿಂದ ಸಕ್ಕರೆಯ ಕನಿಷ್ಠ ಬೆಲೆ ಕೆಜಿಗೆ (MSP) 31 ರೂ. ಯಷ್ಟೇ ಉಳಿದಿದ್ದು, ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ (FRP) 355 ರೂ. ಪ್ರತಿ ಕ್ವಿಂಟಲ್‌ಗೆ ಏರಿಕೆಯಾಗಿದೆ. ಈ ಅಂತರದಿಂದ ನಷ್ಟಗಳು ಹೆಚ್ಚಾಗಿ, ರೈತರಿಗೆ ಪಾವತಿಗಳು ವಿಳಂಬವಾಗುತ್ತಿವೆ,” ಎಂದು ಅವರು ತಿಳಿಸಿದ್ದಾರೆ.

ಉತ್ಪಾದನಾ ವೆಚ್ಚವು ಪ್ರತಿ ಕೆ.ಜಿ.ಗೆ ಸುಮಾರು 40 ರೂ. ಆಗಿದೆ. ಮಾರಾಟ ಬೆಲೆಗಿಂತ ಉತ್ಪಾದನೆ ವೆಚ್ಚ ಹೆಚ್ಚಾಗಿದೆ. “ಉದ್ಯಮವನ್ನು ಉಳಿಸಿಕೊಳ್ಳಲು ಮತ್ತು ಸುಮಾರು ಐದು ಕೋಟಿ ಕಬ್ಬು ಬೆಳೆಗಾರರನ್ನು ರಕ್ಷಿಸಲು, ವೆಚ್ಚಕ್ಕೆ ಅನುಗುಣವಾಗಿ MSP ಪರಿಷ್ಕರಣೆ ಮಾಡಲು ಸರ್ಕಾರವನ್ನು ನಾವು ಮನವಿ ಮಾಡಿದ್ದೇವೆ,” ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ನಿಗದಿಪಡಿಸುವ FRP ಹೊರತಾಗಿ, ರಾಜ್ಯಗಳು ತಮ್ಮದೇ ಆದ ಹೆಚ್ಚುವರಿ ಬೆಲೆ (SAP) ಪ್ರಕಟಿಸುತ್ತವೆ. ಉತ್ತರ ಪ್ರದೇಶದಲ್ಲಿ SAP ಪ್ರತಿ ಕ್ವಿಂಟಲ್‌ಗೆ 390 ರೂ. ಇದ್ದು, ಇದು FRPಗಿಂತ 35 ರೂ. ಹೆಚ್ಚಾಗಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *