ಈ ವರ್ಷದ ಕರ್ನಾಟಕ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಚುಟುಕು ಭಾಷಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಹಾಗಿದ್ದರೆ ಈ ಹಿಂದೆ ನಮ್ಮ ರಾಜ್ಯದಲ್ಲಿ ರಾಜ್ಯಪಾಲರು ಚುಟುಕು ಭಾಷಣ ಮಾಡಿಲ್ಲವೇ? ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಲಿಲ್ಲವೇಕೆ? ಸರ್ಕಾರ ಬರೆದುಕೊಟ್ಟ ಭಾಷಣವನ್ನು ರಾಜ್ಯಪಾಲರ ಓದುವುದು ಕಡ್ಡಾಯವೇ, ಕಾನೂನು ಏನು ಹೇಳುತ್ತದೆ? ಏನಿದು ವಿಬಿ ಜಿ ರಾಮ್ ಜಿ ಯೋಜನೆ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಎಲ್ಲದರ ಕುರಿತು ತಿಳಿಯುವ ಪ್ರಯತ್ನ ಈ ಲೇಖನ. ನಿನ್ನೆಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ನಂತರ ದೊಡ್ಡ ಹೈಡ್ರಾಮಾ ಸೃಷ್ಟಿಯಾಯಿತು. ರಾಜ್ಯಪಾಲರ ಚುಟುಕು ಭಾಷಣವನ್ನು ವಿರೋಧಿಸಿ ಆಡಳಿತ ಪಕ್ಷದ ನಾಯಕರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೇ, ಕಾಂಗ್ರೆಸ್ನ ಹಿರಿಯ ನಾಯಕ, ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ ರಾಜ್ಯಪಾಲರ ಎದುರು ಹೋಗಿ ತಡೆಯಲು ಮುಂದಾದರು. ವಿರೋಧ ಪಕ್ಷದ ನಾಯಕರು ರಾಜ್ಯಪಾಲರನ್ನು ರಕ್ಷಣೆಗೆ ನಿಂತರು. ಆದ್ರೆ, ಇದಕ್ಕೆ ಆಸ್ಪದ ನೀಡದ ಮಾರ್ಷಲ್ಗಳು ರಾಜ್ಯಪಾಲರು ಸುರಕ್ಷಿತವಾಗಿ ತೆರಳುವಂತೆ ನೋಡಿಕೊಂಡರು. ಈ ಹಿಂದೆ ರಾಜ್ಯಪಾಲರು ಚುಟುಕು ಮಾಡಿದ್ರೆ? ಕರ್ನಾಟಕ ಮತ್ತು ದೇಶದ ಇತರ ರಾಜ್ಯಗಳಲ್ಲಿ ರಾಜ್ಯಪಾಲರು ಭಾಷಣವನ್ನು ಮೊಟಕುಗೊಳಿಸಿದ ಅಥವಾ ಭಾಗಶಃ ಓದಿದ ಉದಾಹರಣೆಗಳು ಇವೆ. ಕರ್ನಾಟಕದಲ್ಲಿ ನೋಡುವುದಾದರೇ ಜೆ.ಹೆಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅಂದಿನ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರು ಭಾಷಣದ ಆರಂಭ ಮತ್ತು ಅಂತ್ಯದ ಪ್ಯಾರಾಗಳನ್ನು ಮಾತ್ರ ಓದಿದ್ದರು. ಅದೇ ರೀತಿ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ, ರಾಜ್ಯಪಾಲ ಹೆಚ್.ಆರ್. ಭಾರದ್ವಾಜ್ ಅವರು ಕೇವಲ ಎರಡು ನಿಮಿಷ ಭಾಷಣ ಓದಿ, ಉಳಿದದ್ದನ್ನು “ಓದಲಾಗಿದೆ ಎಂದು ಪರಿಗಣಿಸಿ” ಎಂದು ಹೇಳಿ ನಿರ್ಗಮಿಸಿದ್ದರು. ಆದರೆ, ಈ ಎರಡೂ ಸನ್ನಿವೇಶಗಳಲ್ಲೂ ರಾಜ್ಯಪಾಲರು ಭಾಷಣವನ್ನು ಓದಿರಲಿಲ್ಲ ಅಷ್ಟೆ. ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ರಾಜ್ಯಪಾಲರು ಸದನದಲ್ಲಿ ಮಂಡಿಸಿದ್ದರು; ಅಥವಾ ಓದಲಾಗಿದೆ ಎಂದು ಹೇಳುವ ಮೂಲಕ ಭಾಷಣಕ್ಕೆ ಸಹಮತವ ವ್ಯಕ್ತಪಡಿಸಿದ್ದರು. ಹಾಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಕೂಡ ಕೇವಲ ಎರಡು ನಿಮಿಷ ಭಾಷಣ ಮಾಡಿದರು. ಆದರೆ, ಅದನ್ನು ಸದನದಲ್ಲಿ ಮಂಡಿಸುವ ಅಥವಾ ಓದಲಾಗಿದೆ ಎಂದು ಪರಿಗಣಿಸಿ ಎಂಬುದಾಗಿ ಏನನ್ನೂ ಹೇಳಿಲ್ಲ. ಭಾಷಣವನ್ನು ರಾಜ್ಯಪಾಲರು ಓದಲಿಲ್ಲವೇಕೆ? ರಾಜ್ಯ ಸರ್ಕಾರ ರಾಜ್ಯಪಾಲರಿಗೆ 46 ಪುಟಗಳ 122 ಪ್ಯಾರಗಳು ಇದ್ದ ಭಾಷಣವನ್ನು ಬರೆದುಕೊಟ್ಟಿತ್ತು. ಈ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕೆ ಜೊತೆಗೆ ರಾಜ್ಯ ಸರ್ಕಾರಗಳ ಯೋಜನೆ, ಸಾಧನೆಗಳ ಪ್ರಸ್ತಾಪ ಮಾಡಲಾಗಿದೆ. ಮನರೇಗಾ ಯೋಜನೆಯನ್ನು ಮರುಸ್ಥಾಪಿಸುವವರೆಗೆ ರೈತ ಹೋರಾಟದ ಮಾದರಿಯಲ್ಲಿ ಹೋರಾಟ ಮಾಡುತ್ತೇವೆ,” ಎಂಬ ಸರ್ಕಾರದ ನಿಲುವನ್ನು ಭಾಷಣದಲ್ಲಿ ಸೇರಿಸಲಾಗಿತ್ತು. ಅಲ್ಲದೆ, ಕೇಂದ್ರ ಸರ್ಕಾರವು ರಾಜ್ಯದ ಹಣಕಾಸಿನ ಹಕ್ಕುಗಳನ್ನು ಕಡೆಗಣಿಸುತ್ತಿದೆ ಮತ್ತು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಎಂಬರ್ಥದ ಸುಮಾರು 11 ಪ್ಯಾರಾಗಳನ್ನು ಭಾಷಣದಲ್ಲಿ ಸೇರಿಸಲಾಗಿತ್ತು. ಜೊತೆಗೆ ವಿಕಸಿತ್ ಭಾರತ್-ರೋಜಗಾರ್ ಅಜೀ ವಿಕಾ ಮಿಷನ್ (ಗ್ರಾಮೀಣ) ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂದು ಬಳಕೆ ಮಾಡಲಾಗುತ್ತಿದೆ. ಆದರೆ, ರಾಜ್ಯಪಾಲರ ಭಾಷಣದಲ್ಲಿ ಯೋಜನೆಯ ಹೆಸರನ್ನು ಎಲ್ಲಾ ಕಡೆಗಳಲ್ಲೂ ವಿಬಿ ಗ್ರಾಮ್ ಜಿ ಎಂದು ಬಳಕೆ ಮಾಡಲಾಗಿದೆ. ಈ ಎಲ್ಲ ಕಾರಣದಿಂದ ಓದಲು ರಾಜ್ಯಪಾಲರು ನಿರಾಕರಿಸಿ ಕೇವಲ ಎರಡು ನಿಮಿಷದಲ್ಲೇ ಭಾಷಣ ಮುಗಿಸಿ ತೆರಳಿದರು. ರಾಜ್ಯಪಾಲರ ಭಾಷಣದ ಕುರಿತು ಕಾನೂನು ಏನು ಹೇಳುತ್ತದೆ? ಭಾರತೀಯ ಸಂವಿಧಾನದ ವಿಧಿ 176(1)ರ ಪ್ರಕಾರ, ಪ್ರತಿ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದು ಕಡ್ಡಾಯವಾಗಿದೆ. ಈ ಭಾಷಣವು ರಾಜ್ಯಪಾಲರ ವೈಯಕ್ತಿಕ ಅಭಿಪ್ರಾಯವಲ್ಲ. ಇದನ್ನು ರಾಜ್ಯ ಸಚಿವ ಸಂಪುಟ ಸಿದ್ಧಪಡಿಸುತ್ತದೆ. ಇದು ಸರ್ಕಾರದ ನೀತಿಗಳು, ಸಾಧನೆಗಳು ಮತ್ತು ಮುಂದಿನ ನಡೆಗಳ ದಿಕ್ಸೂಚಿಯಾಗಿರುತ್ತದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿ ರಾಜ್ಯಪಾಲರು ಮಂತ್ರಿಮಂಡಲದ ಸಲಹೆಯಂತೆ ನಡೆಯಬೇಕು. ಅವರು ಸರ್ಕಾರದ ಧ್ವನಿಯಾಗಿ ಈ ಭಾಷಣವನ್ನು ಓದಬೇಕು ಎಂಬುದು ನಿಯಮವಿದೆ. ಏನಿದು ವಿಬಿ ಜಿ ರಾಮ್ ಜಿ ಯೋಜನೆ? 2005ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಮರುರೂಪಿಸಿ ಜಾರಿಗೆ ತರಲಾದ ಈ ಹೊಸ ಕಾಯ್ದೆಯಾಗಿದೆ. ಈ ಕಾಯ್ದೆಯು ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 125 ದಿನಗಳ ಕಾಲ ಖಚಿತವಾದ ಉದ್ಯೋಗವನ್ನು ನೀಡುತ್ತದೆ. ಈ ಮೊದಲು ನರೇಗಾ ಅಡಿಯಲ್ಲಿ ಕೇವಲ 100 ದಿನಗಳ ಮಿತಿ ಇತ್ತು. ಕೇವಲ ಗುಂಡಿ ತೆಗೆಯುವ ಕೆಲಸಗಳಿಗೆ ಸೀಮಿತವಾಗದೆ, ಈ ಯೋಜನೆಯು ಜಲ ಸಂರಕ್ಷಣೆ, ಗ್ರಾಮದ ರಸ್ತೆಗಳು, ಗೋದಾಮುಗಳು ಮತ್ತು ಮಾರುಕಟ್ಟೆಗಳಂತಹ ದೀರ್ಘಕಾಲ ಬಾಳಿಕೆ ಬರುವ ಉಪಯುಕ್ತ ಆಸ್ತಿಗಳ ನಿರ್ಮಾಣಕ್ಕೆ ಆದ್ಯತೆ ನೀಡುತ್ತದೆ. ರೈತರಿಗೆ ಬಿತ್ತನೆ ಮತ್ತು ಸುಗ್ಗಿಯ ಕಾಲದಲ್ಲಿ ಕೆಲಸಗಾರರ ಕೊರತೆಯಾಗದಂತೆ ತಡೆಯಲು, ಕೃಷಿ ಅವಧಿಯಲ್ಲಿ ವರ್ಷಕ್ಕೆ ಒಟ್ಟು 60 ದಿನಗಳ ಕಾಲ ಯೋಜನೆಯ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ಈ ಯೋಜನೆಯು ಈಗ ‘ಕೇಂದ್ರ ಪುರಸ್ಕೃತ ಯೋಜನೆ’ ಆಗಿ ಬದಲಾಗಿದ್ದು, ಸಾಮಾನ್ಯ ರಾಜ್ಯಗಳಲ್ಲಿ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಹಂಚಿಕೊಳ್ಳುತ್ತವೆ (ಈಶಾನ್ಯ ರಾಜ್ಯಗಳಲ್ಲಿ 90:10 ಅನುಪಾತ ಇರಲಿದೆ). ಯೋಜನೆಯಲ್ಲಿ ಪಾರದರ್ಶಕತೆ ತರಲು ಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ, ಕೆಲಸದ ಸ್ಥಳದ ನಿಗಾ ಇಡಲು ಜಿಪಿಎಸ್ ಮತ್ತು ಅಕ್ರಮಗಳನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಒಬ್ಬ ಕಾರ್ಮಿಕ ಕೆಲಸಕ್ಕಾಗಿ ಬೇಡಿಕೆ ಇಟ್ಟ 15 ದಿನಗಳ ಒಳಗಾಗಿ ಸರ್ಕಾರ ಕೆಲಸ ನೀಡದಿದ್ದಲ್ಲಿ, ಆ ಕಾರ್ಮಿಕನಿಗೆ ರಾಜ್ಯ ಸರ್ಕಾರವು ನಿಯಮಾನುಸಾರ ನಿರುದ್ಯೋಗ ಭತ್ಯೆಯನ್ನು ಪಾವತಿಸಬೇಕಾಗುತ್ತದೆ. ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಬೇಕಾದ ಪ್ರವಾಹ ನಿಯಂತ್ರಣ ಕ್ರಮಗಳು, ಮಣ್ಣಿನ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಕಾಮಗಾರಿಗಳಿಗೆ ಈ ಕಾಯ್ದೆಯಲ್ಲಿ ವಿಶೇಷ ಒತ್ತು ನೀಡಲಾಗಿದೆ. ಕೊನೆಯದಾಗಿ ಇವರುಗಳ ರಾಜಕೀಯ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವದ ದೇಗುಲ ಎನಿಸಿಕೊಂಡಿರುವ ವಿಧಾನಸೌದದಲ್ಲಿ ಇಂತಹ ಬೆಳವಣಿಗೆಗಳು ಶೋಭೆಯಲ್ಲ. ಯುವಕರು ರಾಜಕೀಯಕ್ಕೆ ಬರಬೇಕು ದೇಶ ಬದಲಾಗಬೇಕು ಎಂದು ಪುಂಕಾನು ಪುಂಕವಾಗಿ ಭಾಷಣ, ಚರ್ಚೆ ಮಾಡ್ತಾರೆ. ಆದ್ರೆ, ಇಂತಹ ಘಟನೆಗಳನ್ನು ನೋಡಿ ಯುವಕರು ರಾಜಕೀಯಕ್ಕೆ ಬರಲು ಹೇಗೆ ಮನಸ್ಸು ಮಾಡ್ತಾರೆ? Post navigation ದೆಹಲಿಯ ಕೆಂಪು ಕೋಟೆ ಬಳಿ ನಡೆದ ಸ್ಫೋಟದ ಹಿಂದಿದೆ ಜೈಶ್ ಉಗ್ರ ಸಂಘಟನೆ ಕೈವಾಡ ಕರ್ನಾಟಕ ರೈತನ ಎಐ ಆಧರಿತ ಕೃಷಿ: ₹214 ಕೋಟಿ ಹೂಡಿಕೆ! ಕೇಂದ್ರದಿಂದ ಆಹ್ವಾನ