ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನ ಇಂದು. ಬಾಬಾಸಾಹೇಬರು ಕೇವಲ ಒಂದು ಸಮುದಾಯ ಅಥವಾ ಪಂಗಡಕ್ಕೆ ಸೀಮಿತರಾದವರಲ್ಲ. ಇಡೀ ಮನುಕುಲಕ್ಕೆ ಬೇಕಾದವರು. ಅಂಬೇಡ್ಕರ್ ಅವರು ಸಂವಿಧಾನ ರಚನಾ ಶಿಲ್ಪಿ, ದಲಿತರಿಗಾಗಿ ಮಾತ್ರ ಶ್ರಮಿಸಿದ ವ್ಯಕ್ತಿ ಎಂಬುವುದಷ್ಟೇ ಗೊತ್ತಿದೆ. ಆದ್ರೆ, ಬಾಬಾಸಾಹೇಬರು ಇದರ ಹೊರತಾಗಿಯೂ ರಾಷ್ಟ್ರದ ಏಕತೆ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸಿದ ಚೇತನ ಎಂಬ ವಿಚಾರ ತಿಳಿಯದು. ಬಾಬಾಸಾಹೇಬ ಅಂಬೇಡ್ಕರ್ ಅವರು ಆರ್ಥಿಕ, ರಾಜಕೀಯ ಮತ್ತು ಸಮಾಜಶಾಸ್ತ್ರಜ್ಞರಾಗಿದ್ದರು. ಶೋಶಣೆಗೆ ಒಳಗಾದ ಸರ್ವರ ಏಳಿಗೆಗಾಗಿ ಶ್ರಮಿಸಿದವರು. ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತಾವು ಅವಿರತವಾಗಿ ತೊಡಗಿಸಿಕೊಂಡಿದ್ದ ಬಾಬಾಸಾಹೇಬರು ಎಂತಹ ವಿರೋಧಗಳು ಬಂದರು ಪ್ರಭಲವಾಗಿ ಎದುರಿಸುತ್ತಿದ್ದರು. ಮತ್ತು ರಾಷ್ಟ್ರ ವಿರೋಧಿಗಳಿಗೆ ಲೇಖನಗಳ ಮೂಲಕ ತೀಕ್ಷಣವಾಗಿ ಉತ್ತರ ನೀಡುತ್ತಿದ್ದರು. “ತನ್ನ ಯಾವುದೇ ಮೂಲಭೂತ ಹಕ್ಕುಗಳನ್ನು ಕುರಿತು ಯೋಚಿಸುವಾಗ ಪ್ರತಿಯೊಬ್ಬ ಭಾರತೀಯನೂ ಅಂಬೇಡ್ಕರ್‌ರ ಹೆಸರನ್ನು ಕೃತಜ್ಞತೆಯಿಂದ ನೆನೆಯಬೇಕಾಗಿದೆ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ನಾಯಕ ಮಾತ್ರ ಅಲ್ಲ, ಇಡೀ ರಾಷ್ಟ್ರದ ನಾಯಕಪ್ರಮುಖರು” ಎಂದು 1950ರ ಏಪ್ರಿಲ್ ತಿಂಗಳಲ್ಲಿ ಮುಂಬೈನಲ್ಲಿ ನಡೆದ ಅಂಬೇಡ್ಕರ್ ಜನ್ಮದಿನ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಎಂ. ಸಿ ಛಗಲಾ ಹೇಳಿದರು. ಮುಸ್ಲಿಂ, ಕ್ರೀಶ್ಚಿಯನ್ ಮತಕ್ಕೆ ಸ್ವೀಕರಿಸದಿರಲು ಕಾರಣ ಬಾಬಾಸಾಹೇಬರು ತಮ್ಮ ಕೊನೆದಿನಗಳಲ್ಲಿ 1956ರ ಅಕ್ಟೋಬರ್ 14 ರಂದು ಬೌದ್ಧ ಧರ್ಮ ಸ್ವೀಕರಿಸಿದರು. ಬಾಬಾಸೇಹಬರು ಮತ್ತೊಂದು ಧರ್ಮಕ್ಕೆ ಮತಾಂತರವಾಗಲು ನಿಶ್ಚಯಿಸಿದಾಗ ಕ್ರೈಸ್ತ ಪಾದರಿ, ಮುಸಲ್ಮಾನ ಮೌಲ್ವಿ, ಬೌದ್ಧ ಭಿಕ್ಷು ಇತ್ಯಾದಿ ಮಂದಿ ಮೇಲಿನಿಂದ ಮೇಲೆ ಅವರನ್ನು ಕಾಣಲಾರಂಭಿಸಿದ್ದರು. ಪಾದರಿ ಮತ್ತು ಮೌಲ್ವಿಗಳಂತೂ ದೇಶವಿದೇಶಗಳಿಂದ ಹಲವು ವಿಧದ ಒತ್ತಡ ತಂದರು. ಆದರೆ, ಅಂಬೇಡ್ಕರ್ ಅವರು ಇವರ ಯಾವ ಒತ್ತಡಕ್ಕೂ ಮಣಿಯದೆ ಬೌದ್ಧ ಧರ್ಮ ಸ್ವೀಕರಿಸಲು ಕಾರಣವೂ ಇದೆ. “ಕೆಲವು ಚಾರಿತ್ರಿಕ ಹಾಗೂ ವಿಶ್ವರಾಜಕೀಯದ ಕಾರಣದಿಂದಲೂ, ಕ್ರೈಸ್ತ ಯಾ ಮುಸಲ್ಮಾನರಾಗಿ ಮತಾಂತರಗೊಳ್ಳುವ ಭಾರತೀಯರಲ್ಲೂ ಬುದ್ಧಿ-ಮನಗಳ ಮೇಲೆ ಭಾರೀ ಪರಿಣಾಮವಾಗುವುದು. ಅಂತಹವರು ಭಾರತ, ಭಾರತೀಯತೆ, ಇಲ್ಲಿನ ಇತಿಹಾಸ ಭಾರತೀಯರು ಎನ್ನಿಸಿಕೊಳ್ಳಲು ಸಹ ಅವರು ಹಿಂದೇಟು ಹಾಕುತ್ತಾರೆ. ಆದರೆ ಹಾಗೂ ಇಲ್ಲಿನ ಪದ್ಧತಿ ಪರಂಪರೆಗಳಿಗೂ ವಿರೋಧಿಗಳಾಗುತ್ತಾರೆ” “ತಾವು ಬೌದ್ಧರಾದಲ್ಲಿ ಅವರ ಉಪಾಸನೆಯ ಪದ್ಧತಿಯಷ್ಟೇ ಬದಲಾಗಬಹುದು. ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಗಳು ಸಹ ಕೊಂಚಮಟ್ಟಿಗೆ ಬದಲಾಗಬಹುದು. ಆದರೂ ಅವರ ರಾಷ್ಟ್ರೀಯತೆ, ರಾಷ್ಟ್ರಭಕ್ತಿ – ಇವುಗಳಿಗೆ ಯಾವುದೇ ಬದಲಾವಣೆ ಬರದು. ಇಸ್ಲಾಂ ಅಥವಾ ಕ್ರೈಸ್ತಮತ ಸ್ವೀಕರಿಸಿದಲ್ಲಿ ವ್ಯಕ್ತಿ ಒಂದು ರೀತಿಯಲ್ಲಿ ತನ್ನ ರಾಷ್ಟ್ರೀಯತೆಯನ್ನೇ ಕಳೆದು ಕೊಂಡುಬಿಡುತ್ತಾನೆ. ಆತನ ರಾಷ್ಟ್ರೀಯತೆಯ ಬೇರುಗಳೇ ಕಡಿಯಲ್ಪಡುತ್ತವೆ.” ಎಂದು ಸ್ವತಃ ಬಾಬಾಸಾಹೇಬ ಅಂಬೇಡ್ಕರ ಅವರು ಹೇಳಿದ ಮಾತಿದು. ವಿದೇಶಿ ನಿಷ್ಠೆಯುಳ್ಳವರನ್ನು ದೇಶದಿಂದ ಹೊರ ಹಾಕಿ ರಾಷ್ಟ್ರೀಯತೆ ಮತ್ತು ದೇಶಭಕ್ತಿಯನ್ನು ಬಾಬಾಸಾಹೇಬರಿಂದ ಕಲಿಯಬೇಕು. ದೇಶಪ್ರೇಮ ಏನು ಎಂಬುವುದನ್ನು ಯುವಪೀಳಿಗೆಗೆ ತಿಳಿಸಬೇಕೆಂದರೆ ಒಂದು ಬಾರಿಯಾದ್ರೂ ಬಾಬಾಸಾಹೇಬರ ಪುಸ್ತಕಗಳನ್ನು ಯುವಪೀಳಿಗೆ ಓದಬೇಕು. ನಮ್ಮ ದೇಶದಲ್ಲಿದ್ದು ವಿದೇಶಿನಿಷ್ಠೆ ತೋರುವ ಪೆಂಗಗಳಿಗೆ ಬಾಬಾಸಾಹೇಬರು ಕಟು ಮಾತುಗಳಿಂದ ತಿವಿದಿದ್ದಾರೆ. ವಿದೇಶನಿಷ್ಠೆಯುಳ್ಳವರನ್ನು ದೇಶದೊಳಗೆ ಇಟ್ಟುಕೊಳ್ಳುವುದಕ್ಕಿಂತ ಅವರನ್ನು ಹೊರಗಟ್ಟುವುದೇ ಹೆಚ್ಚು ಹಿತಕರ ಎನ್ನುವುದು ಡಾ. ಅಂಬೇಡ್ಕರರ ಖಚಿತ ಅಭಿಪ್ರಾಯವಾಗಿತ್ತು. ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಅನುಭವದಿಂದ ನನಗೆ ಚೆನ್ನಾಗಿ ಗೊತ್ತು. ಆದರೆ ನಿಮಗಾದರೋ ಚಪ್ಪಲಿ ಕಚ್ಚುತ್ತಿದ್ದರೂ ಅದರ ಗೊಡವೆಯೇ ಇಲ್ಲ. ಕಾಶ್ಮೀರದಲ್ಲಿದ್ದ ವಿದೇಶಿ ನಿಷ್ಠೆ ಹೊಂದಿದ್ದ ಮುಸ್ಲಿಮರ ಬಗ್ಗೆ ಅಂಬೇಡ್ಕರರು ಖಾರವಾಗಿಯೇ ಹೇಳಿದ್ದರು. ಕಾಶ್ಮೀರ ಕಣಿವೆಯನ್ನು ಭಾರತದೊಂದಿಗೆ ಸೇರಿಸಿಕೊಳ್ಳುವುದೇ ಆದಲ್ಲಿ, ಮೊದಲು ಅಲ್ಲಿನ ಎಲ್ಲ ಮುಸಲ್ಮಾನರನ್ನು ಹಿಂದೂ ಸಮಾಜ ತನ್ನಲ್ಲಿ ಆರಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅದೊಂದು ಮುಳ್ಳಿನಂತೆ ಸದಾಕಾಲ ನಮ್ಮನ್ನು ಚುಚ್ಚುತ್ತಲೇ ಇರುವುದು.” “ಈ ಸಮಸ್ಯೆ ನಮ್ಮ ರಾಷ್ಟ್ರದ ತಲೆಯ ಮೇಲೆ ಸದಾ ತೂಗುಗತ್ತಿಯಂತೆ ಇರುತ್ತದೆ. ನಾನು, ಎಂದರೆ ‘ಹರಿಜನರು’ ಹಿಂದೂ ಸಮಾಜದ ಒಂದು ಅಂಗ. ಇಷ್ಟಾದರೂ ಇನ್ನೂ ಹರಿಜನರನ್ನು ಸಮರಸಗೊಳಿಸಲು ಹಿಂದೂ ಸಮಾಜಕ್ಕೆ ಸಾಧ್ಯವಾಗಿಲ್ಲ ಎಂದ ಮೇಲೆ ಮೇಲೆ ಕಾಶ್ಮೀರದ ಎಲ್ಲ ಮುಸಲ್ಮಾನ ರನ್ನು ಜೀರ್ಣಿಸಿಕೊಳ್ಳುವ ಶಕ್ತಿ ಹಿಂದೂ ಸಮಾಜಕ್ಕೆ ಇದೆಯೆ? ನಿಮ್ಮ (ಸವರ್ಣ ಹಿಂದೂ ಸಮಾಜದ) ಜೀರ್ಣಶಕ್ತಿಯ ಕಲ್ಪನೆ ನನಗಿರುವ ಕಾರಣವೇ. ವಿದೇಶ ನಿಷ್ಠೆಯುಳ್ಳವರನ್ನು ರಾಷ್ಟ್ರಶರೀರದ ಒಳಗೆ ಉಳಿಸಿಕೊಳ್ಳುವುದಕ್ಕಿಂತ ಅವರನ್ನು ಹೊರಗಟ್ಟುವುದು ಶ್ರೇಯಸ್ಕರ ಎಂಬುದು ನನ್ನ ಅಭಿಪ್ರಾಯವಾಗಿದೆ” ಎಂದಿದ್ದರು. ಅಂಬೇಡ್ಕರರು ಹಿಂದೂ ಧರ್ಮ ವಿರೋಧಿಯೇ? ಅಕ್ಷರಶಃ ಇಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಎಂದಿಗೂ ಹಿಂದೂ ಧರ್ಮದ ವಿರೋಧಿಯಾಗಿರಲಿಲ್ಲ. ಆಧಾರಶಿಲೆಯಂತಿದ್ದ ಧರ್ಮಪತ್ನಿ ರಾಮಾಬಾಯಿಯವರು ತೀರಿಕೊಂಡಾಗ ಅವರ ಉತ್ತರಕ್ರಿಯೆಗಳನ್ನಯ ಹಿಂದೂ ಸಂಪ್ರದಾಯ ರೀತಿಯಲ್ಲೇ ಮಾಡಿದರು. ಅಂಬೇಡ್ಕರ್ ಅವರು ಎಂದಿಗೂ ಹಿಂದೂ ಧರ್ಮವನ್ನು ವಿರೋಧಿಸಿಲ್ಲ. ಆದರೆ, ಸ್ಪೃಶ್ಯ ಅಸ್ಪೃಶ್ಯ ಸೇರಿದಂತೆ ಆಚರಣೆಗೆ ಬಂದಿದ್ದ ಕೆಲ ಅನಿಷ್ಠ ಪದ್ಧತಿಗಳನ್ನು ವಿರೋಧಿಸಿದ್ದರೆ ಹೊರತು ಹಿಂದೂ ಧರ್ಮ ವಿರೋಧಿಯಾಗಿರಲಿಲ್ಲ, ಹೊರತಾಗಿ ಹಿಂದೂ ಸಮಾಜದ ಚಿಕಿತ್ಸಕರಾಗಿದ್ದರು. “ಧರ್ಮವೇ ಸಮಾಜಕ್ಕೆ ಆಧಾರವಾಗಿದೆ. ಜಾತಿ ವ್ಯವಸ್ಥೆ ಹಿಂದೂ ಸಮಾಜವನ್ನು ದುರ್ಬಲಗೊಳಿಸಿದೆ. ಹೀಗೆ ಬಿಟ್ಟರೆ ಹಿಂದೂ ಸಮಾಜ ನಾಶವಾಗುತ್ತದೆ. ಜಾತೀಯತೆ, ರಾಷ್ಟ್ರೀಯತೆ ಜೊತೆ ಇರಲು ಸಾಧ್ಯವಿಲ್ಲ. ಜಾತೀಯತೆ ಇದ್ರೆ, ರಾಷ್ಟ್ರೀಯತೆ ಇರಲು ಸಾಧ್ಯವಿಲ್ಲ. ಹಿಂದೂಗಳ ಪತನಕ್ಕೆ ಜಾತೀಯತೆಯೇ ಕಾರಣವಾಗುತ್ತದೆ” ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರು ಹಿಂದೂ ಧರ್ಮದಲ್ಲಿ ಜ್ಯಾತಿಯತೆಯನ್ನು ವಿರೋಧಿಸಿದ್ದರು ಹೊರತು ಹಿಂದೂ ಧರ್ಮವನ್ನಲ್ಲ. ಭಾರತದಲ್ಲಿನ ಬ್ರಹ್ಮವಾದವೇ ಪ್ರಜಾಸತ್ತಾತ್ಮಕದ ತಳಹದಿ ಎಂದೂ ಅಂಬೇಡ್ಕರರು ಹೇಳಿದ್ದಾರೆ. ಅಂಬೇಡ್ಕರರು ಹಿಂದೂ ಧರ್ಮದಲ್ಲಿನ ಅನಿಷ್ಠ ಪದ್ಧತಿಗಳನ್ನು ವಿರೋಧಿಸಿದ್ದರೆ ಹೊರತು, ಹಿಂದೂ ಧರ್ಮವನ್ನು ಅಲ್ಲ. ಹಿಂದೂ ಧರ್ಮವನ್ನು ವಿರೋಧಿಸುತ್ತಿದ್ದರೆ, ತಾವು ಬೌದ್ಧ ಮತ ಸ್ವೀಕರಿಸುತ್ತೇನೆ ಎಂದು ಘೋಷಿಸಿ ಆ ಮತಕ್ಕೆ ಸೇರಲು 21 ವರ್ಷ ಸಮಯ ತೆಗೆದುಕೊಳ್ಳುತ್ತಿರಲಿಲ್ಲ. ಹಿಂದೂ ಧರ್ಮದಲ್ಲಿ ಬದಲಾವಣೆಯಾಗುತ್ತದೆ ಎಂದು ಈ 21 ವರ್ಷಗಳ ಕಾಲ ಅಂಬೇಡ್ಕರ್ ಕಾಯ್ದರು. ಅಂಬೇಡ್ಕರ್ ಅವರು ಹಿಂದೂ ಧರ್ಮ ವಿರೋಧಿ ಅಲ್ಲ ಎಂಬುವುದಕ್ಕೆ ಅವರ ಜೀವನದಲ್ಲಿ ನಡೆದ ಒಂದು ಪ್ರಸಂಗವನ್ನು ಇಲ್ಲಿ ಹೇಳಲೇಬೇಕು. ಅದು, ಒಮ್ಮೆ ವಯಸ್ಸಾದ ಅನುಯಾಯಿಯೊಬ್ಬ ಅಂಬೇಡ್ಕರರ ಬಳಿಗೆ ಬಂದ ಕೇಳಿದ: “ದಯವಿಟ್ಟು ಗಣಪತಿ ಮೂರ್ತಿಯನ್ನು ತಂದು ಪೂಜೆ ಮಾಡಲ ನನಗೆ ಅನುಮತಿ ಕೊಡಿ. ನಾನು ಹರಕೆಯೊಂದನ್ನು ತೀರಿಸಬೇಕಾಗಿದೆ.” ಅಂಬೇಡ್ಕರರು ಕೂಡಲೇ ಗಟ್ಟಿಸ್ವರದಲ್ಲಿ ಉತ್ತರಿಸಿದರು: “ನಾನು ದೇವರನ್ನು ನಂಬುವುದಿಲ್ಲವೆಂದು ನಿನಗೆ ಯಾರು ಹೇಳಿದರು? ನಿನಗೆ ತೋರಿದಂತೆ ಧಾರಾಳವಾಗಿ ನೀನು ಪೂಜೆ ಮಾಡು.” ಎಂದಿದ್ದರು. ಒಮ್ಮೆ ಕಾರಿನಲ್ಲಿ ಸೇತುವೆಯೊಂದರ ಮೇಲೆ ಹೋಗುತ್ತಿದ್ದಾಗ ಕಾರು ಅನಿರೀಕ್ಷಿತವಾಗಿ ಪಕ್ಕಕ್ಕೆ ತಿರುಗಿಬಿಟ್ಟಿತು. ಕಾರು ಸೇತುವೆಯಿಂದ ಕೆಳಗೆ ಬೀಳದಂತೆ ಒಂದು ಕಲ್ಲುಗುಂಡು ಹಿಂದಿನ ಚಕ್ರಕ್ಕೆ ತಡೆಯಿತು. ಕಾರು ಏತದಂತೆ ತೂಗಾಡಿತು. ಮನೆಗೆ ಬಂದವರೇ ಅಂಬೇಡ್ಕರರು ಮಗನನ್ನು ತಬ್ಬಿಹಿಡಿದು ಎಳೆಮಗುವಿನಂತೆ ಅತ್ತು “ಇಂದು ನನ್ನನ್ನು ಉಳಿಸಿದುದು ದೈವವೇ ಹೊರತು ಬೇರೆಯಲ್ಲ” ಎಂದರು. ಹಿಡಿಸದ ಹರಿಜನ ಶಬ್ದ ಬಾಬಾಸೇಹಬ ಅಂಬೇಡ್ಕರ್ ಅವರು ಹರಿಜನ ಶಬ್ದವನ್ನು ವಿರೋಧಿಸಿದ್ದರು. ಅಂಬೇಡ್ಕರರು ‘ಹರಿಜನ’ ಎಂಬ ಪದಪ್ರಯೋಗಕ್ಕೆ ಸಹ ವಿರೋಧಿಯಾಗಿದ್ದರು. ಮಹಾತ್ಮಾ ಗಾಂಧಿಜಿಯವರ ಸದಿಚ್ಛೆಯನ್ನು ಗೌರವಿಸಿಯೂ ‘ಹರಿಜನ’ ಎಂಬ ಪದವು ಕೀಳರಿಮೆಯ ಸೂಚಕ ಎನ್ನುವುದೇ ಅವರ ಅನುಭವವಾಗಿತ್ತು. ‘ಹರಿಜನ’ ಎನ್ನುವುದರ ಮೂಲಕ ತಾವು ಏನೇ ಉಪಕಾರ ಮಾಡುತ್ತಿರುವುದಾಗಿ ಸವರ್ಣೀಯರು ತಿಳಿದಕೊಳ್ಳುವುದಾದಲ್ಲಿ, ಪರಸ್ಪರರಲ್ಲಿ ಭೇದಭಾವ ಹಾಗೂ ಮೇಲು-ಕೀಳು ಎಂಬ ನಡವಳಿಕೆಗಳು ಉಳಿಯುವಂತಹವೇ. ಇಂತಹ ವ್ಯವಹಾರ ಅಪಮಾನಕಾರಕವಾಗಿರುವುದರಿಂದ ಬಾಬಾಸಾಹೇಬರಿಗೆ ‘ಹರಿಜನ’ ಎಂಬ ಶಬ್ದ ಪ್ರಯೋಗ ಹಿಡಿಸದಾಯಿತು. ರೈತ-ಕಾರ್ಮಿಕ ನಾಯಕ ಬಾಬಾಸಾಹೇಬ ಅಂಬೇಡ್ಕರ್ ಅವರು ಪಿಎಚ್‌ಡಿ, ಲಂಡನ್ನಿನ ಡಾಕ್ಟರ್ ಆಫ್ ಸೈನ್ಸ್ ಪದವಿಗಳನ್ನುಗಳಿಸಿ ಬ್ಯಾರಿಸ್ಟರ್ ಅಂಬೇಡ್ಕರ್ ಲಂಡನ್‌ನಿಂದ ತಾಯ್ನಾಡಿಗೆ ಮರಳಿದ ಬಳಿಕ ಅನೇಕ ಸಾಮಾಜಿಕ ಸುಧಾರಣೆಯನ್ನು ಕೈಗೊಂಡರು. ಹಿಂದುಳಿದವರ ಶೈಕ್ಷಣಿಕ ಮತ್ತು ಆರ್ಥಿಕ ಏಳೆಗಾಗಿ 1924ರಲ್ಲಿ ಸ್ಥಾಪಿಸಿದ ‘ಬಹಿಷ್ಕೃತ ಹಿತಕಾರಿಣಿ ಸಭಾ’. ಸೊಲ್ಲಾಪುರದಲ್ಲಿ ನಿಮ್ನಜಾತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಸತಿಗೃಹ, ಮುಂಬೈ ಶಹರಿನಲ್ಲಿ ಒಂದು ವಾಚನಾಲಯ, ಮಹಾರ ಜಾತಿಯವರ ಹಾಕಿ ತಂಡ ಇಂಥ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ಬಹಿಷ್ಕೃತ ಹಿತಕಾರಿಣಿ ಸಭೆ ನಡೆಸಿತು. ಅವರ ಹೆಚ್ಚು ಸಮಯ ಅಸ್ಪೃಶ್ಯ ಬಾಂಧವರಿಗೆ ಕಾನೂನು ಸಲಹೆ ನೀಡುವುದು. ಅವರ ಮೊಕದ್ದಮೆಗಳನ್ನು ನಡೆಸಲು ವಿನಿಯೋಗವಾಗುತ್ತಿತ್ತು. ಈ ವರ್ಗದ ಕಕ್ಷಿಗಾರರಲ್ಲಿ ಲಾಯರ್ ಶುಲ್ಕ ಕೊಡಬಲ್ಲವರಾಗಿದ್ದವರು ವಿರಳ. ‘ಬಡವರ ಬ್ಯಾರಿಸ್ಟರ್’ ಎಂಬ ಅಭಿಧಾನವನ್ನು ಅಂಬೇಡ್ಕರ್ ಪಡೆದರು. 1937ರ ಸೆಪ್ಟೆಂಬರ್ ತಿಂಗಳಲ್ಲಿ ಕೊಂಕಣ ಭಾಗದ ಗೇಣಿದಾರ (ಖೋಟಿ) ಪದ್ಧತಿಯ ನಿರ್ಮೂಲನಕ್ಕಾಗಿ ಮಸೂದೆಯೊಂದನ್ನು ಸಿದ್ದಪಡಿಸಿ ಅಂಬೇಡ್ಕರ ವಿಧಾನಸಭೆಯಲ್ಲಿ ಮಂಡಿಸಿದರು. ರೈತವಾರಿ ಪದ್ಧತಿಯನ್ನು ಜಾರಿಗೆ ತರಬಯಸಿದರು. ದೀರ್ಘಕಾಲದಿಂದ ಒಕ್ಕಲತನ ಮಾಡಿಕೊಂಡಿದ್ದವರಿಗೆ ಸಾಗುವಳಿ ಹಕ್ಕನ್ನು ನೀಡಬೇಕೆಂದು ಪ್ರತಿಪಾದಿಸಿದರು. ಅದೇ ಸಮಯದಲ್ಲಿ ಮಹಾರ ಜಾತಿಯವರನ್ನು ಕೀಳಾಗಿ ನಡೆಸಿಕೊಳ್ಳುವ ರೂಢಿಯ ನಿರ್ಮೂಲನಕ್ಕಾಗಿಯೂ ಮಸೂದೆಯೊಂದನ್ನು ಮಂಡಿಸಿದರು. ಹತ್ತಿರ ಹತ್ತಿರ ಎರಡು ದಶಕಗಳ ನಂತರ ಅದು ಶಾಸನರೂಪ ಪಡೆಯಿತು. ಮೊಟ್ಟಮೊದಲಿಗೆ ರೈತರ ಪರವಾಗಿ ದನಿಯೆತ್ತಿದುದಕ್ಕಾಗಿ ಅಂಬೇಡ್ಕರರ ಜನಪ್ರಿಯತೆ ಮತ್ತಷ್ಟು ಮೇಲೇರಿತು ಶೋಷಣೆಯ ನಿಜವಾದ ಮೂಲ ಕಾರಣಗಳನ್ನರಿತು ಅದರ ವಿರುದ್ಧ ಸಂಘಟಿತರಾಗುವುದೊಂದೇ ರೈತರಿಗೂ ಕಾರ್ಮಿಕರಿಗೂ ಇರುವ ಮಾರ್ಗವೆಂಬುದನ್ನು ಅಂಬೇಡ್ಕರ್ ಒತ್ತಿಹೇಳಿದರು. ತಮ್ಮ ಹಿತವನ್ನು ಪ್ರತಿನಿಧಿಸುವಂಥವರನ್ನೇ ಶಾಸನಸಭೆಗಳಿಗೆ ಆಯ್ಕೆ ಮಾಡಬೇಕೆಂದರು. ದುರಾದೃಷ್ಟಕರ ಸಂಗತಿಯಂದರೆ ಕ್ರಾಂತದರ್ಶಿ ಅಂಬೇಡ್ಕರ್ ಅವರನ್ನು ನಾವು ಸಂಪೂರ್ಣವಾಗಿ ಅರಿಯದೆ ಹೋದೆವು. ಅಂಬೇಡ್ಕರ ಅವರು ಕಾಲವಾಗಿ ವರ್ಷಗಳೇ ಕಳೆದರೂ ಅವರ ವಿಚಾರಧಾರೆಗಳನ್ನು ಇನ್ನೂವರೆಗೂ ಪ್ರಯತ್ನ ಮಾಡುತ್ತಿಲ್ಲವೆಂಬುವುದು ದುರಾದೃಷ್ಟ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಸಮಾಜ ಸುಧಾರಕರು ಡಾ. ಅಂಬೇಡ್ಕರ್ ಭೃಗುಮಹರ್ಷಿಗಳ ಪುತ್ರ ಚ್ಯವನ ಮಹರ್ಷಿಗಳು ಶರ್ಯಾತಿ ಮಹಾರಾಜನ ಪುತ್ರಿಯನ್ನು ವರಸಿದ ಪ್ರಸಂಗ