ಮಹಾಪರಾಕ್ರಮಿಯೆನಿಸಿದ್ದ ಬೃಹದ್ರಥನೆಂಬುವವನು ಮಗಧದೇಶಕ್ಕೆ ಅಧಿಪತಿಯಾಗಿದ್ದನು. ಕಾಶೀರಾಜನ ಅವಳಿ ಹೆಣ್ಣುಮಕ್ಕಳು ಅವನ ಮಡದಿಯರಾಗಿದ್ದರು. ಮದುವೆಯಾಗಿ ಅನೇಕ ವರ್ಷಗಳು ಕಳೆದರೂ ರಾಜನಿಗೆ ಸಂತಾನವಾಗಲಿಲ್ಲ. ಅದಕ್ಕಾಗಿ ರಾಜ ಮತ್ತು ರಾಣಿಯರು ಎಲ್ಲ ವ್ರತೋಪವಾಸಗಳನ್ನೂ ಆಚರಿಸಿದ್ದರು. ಒಂದು ದಿನ ರಾಜನು ಸಭೆಯಲ್ಲಿ ಕುಳಿತಿರುವಾಗ ರಾಜಸೇವಕನು ಬಂದು ‘ಕಾಕ್ಷೀವಂತನಾದ ಗೌತಮವಂಶ ಪ್ರದೀಪನಾದ ಚಂಡಕೌಶಿಕನೆಂಬ ಮುನಿಯು ಸ್ವಲ್ಪಕಾಲ ತಪಸ್ಸಿನಿಂದ ಉಪರತನಾಗಿ ತೀರ್ಥಯಾತ್ರೆ ನಡೆಸುತ್ತಿರುವನೆಂದೂ ಅವನು ದೇಶಸಂಚಾರ ಮಾಡುತ್ತ ಮಗಧರಾಜ್ಯಕ್ಕೆ ಬಂದು ನಗರದ ಸಮೀಪದಲ್ಲಿರುವ ವೃಕ್ಷವೊಂದರ ಕೆಳಗೆ ಆಸೀನರಾಗಿರುವರೆಂದೂ’ ನಿವೇದಿಸಿದನು. ಅಂತಹ ತಪಸ್ವಿಗಳ ದರ್ಶನಕ್ಕಾಗಿ ರಾಜಮಹಾರಾಜರೂ ಹಾತೊರೆಯುತ್ತಿದ್ದರು. ಅದರಂತೆಯೇ ಬೃಹದ್ರಥರಾಜನೂ ಸೇವಕನ ಮಾತನ್ನು ಕೇಳಿದ ಕೂಡಲೇ ಮುನಿಯ ದರ್ಶನಕ್ಕಾಗಿ ಹೊರಟನು. ಚಂಡಕೌಶಿಕ ಮುನಿಯು ದೀರ್ಘತಮಸನೆಂಬ ಮುನಿಯ ವಂಶದವನು. ದೀರ್ಘತಮಸನು ಹುಟ್ಟುಕುರುಡನಾದರೂ ತನ್ನ ತಂದೆಯ ವರದಿಂದ ಸರ್ವಜ್ಞತ್ವವನ್ನು ಪಡೆದಿದ್ದನು. ಇಂತಹ ಮಹರ್ಷಿಯ ಪುತ್ರನು ಕಕ್ಷೀವಂತ. ಇವನ ವಂಶದವರು ಕಾಕ್ಷೀವಂತರು. ಚಂಡಕೌಶಿಕ ಮುನಿಯು ಈ ವಂಶದ ಓರ್ವ ಪ್ರಖ್ಯಾತ ಮಹರ್ಷಿ. ಬೃಹದ್ರಥ ಮಹಾರಾಜನು ತನ್ನ ಪತ್ನಿಯರು ಮತ್ತು ರಾಜಪರಿವಾರದ ಸಮೇತ ಚಂಡಕೌಶಿಕಮುನಿ ಕುಳಿತಿದ್ದ ವೃಕ್ಷದ ಬಳಿಗೆ ಹೋದನು. ಭಕ್ತಿಪೂರ್ವಕವಾಗಿ ರಾಜ ಮತ್ತು ಮಹಾರಾಣಿಯರು ಮುನಿಯನ್ನು ಪೂಜಿಸಿದರು. ಮಹಾರಾಜನ ಸೇವೆಯಿಂದ ಸಂತುಷ್ಟನಾದ ಚಂಡಕೌಶಿಕನು ಅವನಿಗೆ ಬೇಕಾದ ಇಷ್ಟಾರ್ಥವನ್ನು ವರವಾಗಿ ಕರುಣಿಸಲು ಸಿದ್ಧನಾದನು. ರಾಜನನ್ನು ಕುರಿತು, “ನಿನ್ನ ವಿನಯ ಮತ್ತು ಸೇವೆಯಿಂದ ನಾನು ಸಂತುಷ್ಟನಾಗಿದ್ದೇನೆ. ನಿನ್ನ ಮನೋಭಿಲಾಷೆಯನ್ನು ಹೇಳು, ನಿನಗೆ ಬೇಕಾದ ಒಂದು ವರವನ್ನು ನಾನು ಅನುಗ್ರಹಿಸುವೆನು” ಎಂದನು. ಮಹರ್ಷಿಯ ಮಾತನ್ನು ಕೇಳಿ ರಾಜನಿಗೆ ಬಹಳ ಸಂತೋಷವಾಯಿತು. ಮಹರ್ಷಿಗಳಿಗೆ ಪುನಃ ಪುನಃ ಪ್ರಣಾಮ ಮಾಡುತ್ತ, “ಭಗವನ್! ನಾನು ರಾಜ್ಯವನ್ನು ತೊರೆದು ಕಾಡಿಗೆ ಹೊರಡಲು ಸಿದ್ದನಾಗಿದ್ದೇನೆ. ಸಂತಾನವಿಲ್ಲದೆ ನನಗೆ ಜೀವನವೇ ಬೇಸರವಾಗಿದೆ. ಹೀಗಿರುವಾಗ ನೀನು ಕೊಡುವ ವರದಿಂದ ನಿರ್ಭಾಗ್ಯನಾದ ನನಗೆ ಕೇಳಿ ಮಹರ್ಷಿಯು ನಕ್ಕು, ಸ್ವಲ್ಪಕಾಲ ಧ್ಯಾನಾಸಕ್ತನಾದನು. ಅವನು ಕುಳಿತಿದ್ದುದು ಏನು ಪ್ರಯೋಜನ?” ಎಂದು ಕೇಳಿದನು. ಮಹಾರಾಜನ ದೈನ್ಯದ ಮಾತುಗಳನ್ನು ಮಾವಿನ ಮರದ ಕೆಳಗೆ. ಮಹರ್ಷಿಯ ಸತ್ಯನಿಷ್ಠೆಯಿಂದ. ಮರದ ಮೇಲಿನಿಂದ ಒಂದು ಮಾವಿನಹಣ್ಣು ಅಂತರ್ಮುಖಿಯಾಗಿದ್ದ ಮುನಿಯ ತೊಡೆಯ ಮೇಲೆ ಬಿದ್ದಿತು. ಆಗ ಮರದಲ್ಲಿ ಹಣ್ಣುಗಳೂ ಇರಲಿಲ್ಲ. ಗಾಳಿಯೂ ಬೀಸುತ್ತಿರಲಿಲ್ಲ. ಕೇವಲ ಮಹರ್ಷಿಯ ಇಚ್ಛಾಶಕ್ತಿಯಿಂದಾಗಿ ಹಣ್ಣೆಂದು ಸೃಷ್ಟಿಯಾಗಿ ಮಹರ್ಷಿಯ ಮಡಿಲಿಗೆ ಬಿದ್ದಿತು. ಮಹರ್ಷಿಯು ಅದನ್ನು ಕೈಗೆ ತೆಗೆದುಕೊಂಡು ಅಭಿಮಂತ್ರಿಸಿ, ರಾಜನ ಕೈಗೆ ಕೊಡುತ್ತ, “ಈ ಹಣ್ಣನ್ನು ತೆಗೆದುಕೋ. ಇನ್ನು ನೀನು ಜೀವನದಲ್ಲಿ ಬೇಸರಪಡುವ ಕಾರಣವಿಲ್ಲ. ಸಂತಾನಪ್ರಾಪ್ತಿಯಿಲ್ಲವೆಂದು ದುಃಖಿಸುತ್ತ ಈಗಲೇ ಅರಣ್ಯವಾಸವನ್ನು ಕೈಗೊಳ್ಳಬೇಕಾಗಿಲ್ಲ. ನಿನ್ನ ಇಷ್ಟಾರ್ಥವು ಇದರಿಂದ ನೆರವೇರುವುದು. ಈ ಫಲವನ್ನು ಮಹಾರಾಣಿಗೆ ಕೊಡು” ಎಂದು ಹೇಳಿದನು. ಅವನ ಮಾತಿನಿಂದ ಸಂತೋಷಭರಿತನಾದ ಮಹಾರಾಜನು ಹಣ್ಣನ್ನು ಸ್ವೀಕರಿಸಿ ಪರಿವಾರದೊಡನೆ ಅರಮನೆಗೆ ಮರಳಿದನು. ರಾಜನಿಗೆ ಇಬ್ಬರು ರಾಣಿಯರು ಇದ್ದರಷ್ಟೆ! ಅವರಲ್ಲಿ ಯಾರಿಗೆ ಈ ಹಣ್ಣನ್ನು ಕೊಡುವುದೆಂದು ರಾಜನಿಗೆ ಸಮಸ್ಯೆಯಾಯಿತು. ರಾಜನು ಇಬ್ಬರನ್ನೂ ಸಮಾನವಾಗಿ ಪ್ರೀತಿಸುತ್ತಿದ್ದನು. ಒಬ್ಬಳಿಗೆ ಹಣ್ಣನ್ನು ಕೊಟ್ಟರೆ ಇನ್ನೊಬ್ಬಳಿಗೆ ಅಸಮಾಧಾನವಾಗುತ್ತದೆ. ಆದ್ದರಿಂದ ರಾಜನು ಆ ಹಣ್ಣನ್ನು ಸಮನಾಗಿ ಅರ್ಧಕ್ಕೆ ಕತ್ತರಿಸಿ, ಇಬ್ಬರು ರಾಣಿಯರಿಗೂ ಕೊಟ್ಟನು. ಆ ರಾಣಿಯರೂ ಹಣ್ಣನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಿದರು. ಚಂಡಕೌಶಿಕನ ಸತ್ಯವಚನದಂತೆ ಆಮ್ರಫಲಭಕ್ಷಣದ ನಂತರ ಇಬ್ಬರೂ ರಾಣಿಯರೂ ಗರ್ಭವತಿಯರಾದರು. ನವಮಾಸಗಳ ನಂತರ ಇಬ್ಬರೂ ಏಕಕಾಲದಲ್ಲಿ ಪ್ರಸವಿಸಿದರು. ಮಹರ್ಷಿಗಳು ಕೊಟ್ಟ ಪೂರ್ಣಫಲವನ್ನು ಅರ್ಧ ಮಾಡಿ ತಿಂದುದರ ಫಲವಾಗಿ ಇಬ್ಬರೂ ರಾಣಿಯರಿಗೂ ಅರ್ಧದೇಹದ ಶಿಶುಗಳು ಜನಿಸಿದವು. ಎರಡೂ ಭಾಗಗಳಲ್ಲಿ ತಲಾ ಒಂದು ಕಣ್ಣು ಒಂದು ಕಿವಿ ನೋಡಿ ರಾಣಿಯರು ಗಾಬರಿಯಾದರು. ಅವರಿಬ್ಬರೂ ಪರಸ್ಪರ ಸಮಾಲೋಚಿಸಿ ಹೀಗಿದ್ದ ಶಿಶುಭಾಗಗಳನ್ನು ಆ ಶಿಶುಭಾಗಗಳನ್ನು ದಾಸಿಯರ ಮೂಲಕ ಹಿಂದಿನ ಬಾಗಿಲಿನಿಂದ ಆಚೆಗೆ ಎಸೆಯಿಸಿಬಿಟ್ಟರು. ಈ ವಿಷಯವು ರಾಜನಿಗೆ ಇನ್ನೂ ತಿಳಿದಿರಲಿಲ್ಲ. ರಾತ್ರಿಯಲ್ಲಿ ಈ ರೀತಿ ಮಗುವಿನ ದೇಹದ ಭಾಗಗಳನ್ನು ಆಚೆಗೆ ಎಸೆಯಲಾಯಿತು. ಅದೇ ರಾತ್ರಿ ಜರಾ ಎಂಬ ರಾಕ್ಷಸಿಯು ಆಹಾರವನ್ನು ಹುಡುಕಿಕೊಂಡು ಅಲ್ಲಿಗೆ ಬಂದಳು. ಮಾಂಸದ ಆಸೆಯಿಂದ ಅಲ್ಲಿ ದೊರೆತ ಶಿಶುವಿನ ಭಾಗಗಳನ್ನು ಹೆಕ್ಕಿ ಒಟ್ಟಿಗೆ ಸೇರಿಸಿಕೊಂಡು ಹೊರಟಳು. ಒಂದಾಗಿ ಸೇರಿಸಲ್ಪಟ್ಟ ಆ ಭಾಗಗಳು ಕೂಡಿಕೊಂಡು ಮಗು ಜೀವಂತವಾಗಿ ಜೋರಾಗಿ ಅಳತೊಡಗಿತು. ಮಗುವಿನ ರೋದನವನ್ನು ಕೇಳಿ ರಾಜರಾಣಿಯರೆಲ್ಲ ಹೊರಗೆ ಓಡಿ ಬಂದರು. ಜರೆಯು ರಾಜನ ಬಳಿಗೆ ಬಂದು ವಿಷಯವನ್ನೆಲ್ಲ ತಿಳಿಸಿ, ಮಗುವನ್ನು ಕೊಟ್ಟುಬಿಟ್ಟಳು. ರಾಜ ಮತ್ತು ರಾಣಿಯರಿಗೆ ಪರಮಾನಂದವಾಯಿತು. ಜರೆಯಿಂದ ಸೇರಿಸಲ್ಪಟ್ಟ ಮಗುವು ಜರಾಸಂಧನೆಂಬ ಹೆಸರಿನಿಂದಲೇ ಪ್ರಖ್ಯಾತವಾಯಿತು. ಕೆಲವು ವರ್ಷಗಳ ನಂತರ ಚಂಡಕೌಶಿಕ ಮುನಿಯು ಮತ್ತೆ ಮಗಧರಾಜ್ಯಕ್ಕೆ ಬಂದನು. ರಾಜನು ಆತನ ಆಗಮನದ ವಿಷಯವನ್ನು ತಿಳಿದು ಪತ್ನಿಯರು, ಮಗ, ಮಂತ್ರಿಗಳು ಮತ್ತು ಪುರೋಹಿತರ ಸಹಿತ ಮುನಿಯ ಬಳಿಗೆ ಬಂದು ಅವನನ್ನು ಸತ್ಕರಿಸಿ ಮಗನನ್ನು ಅವನ ಪದತಲದಲ್ಲಿ ಅರ್ಪಿಸಿದನು. ಚಂಡಕೌಶಿಕನಿಗೆ ನಡೆದ ವಿಷಯವೆಲ್ಲವೂ ಮೊದಲೇ ತಿಳಿದಿತ್ತು. ಅವನು ಮುಂದೆ ಏನಾಗುವನೆಂಬುದನ್ನೂ ರಾಜನಿಗೆ ತಿಳಿಸಿದನು: “ಈ ಬಾಲಕನು ಮುಂದೆ ಅತ್ಯಂತ ಪರಾಕ್ರಮಶಾಲಿಯಾಗಿ ಎಲ್ಲ ರಾಜರನ್ನೂ ಜಯಿಸುವನು. ಸೂರ್ಯಪ್ರಕಾಶದಲ್ಲಿ ಇತರ ತೇಜಸ್ಸುಗಳು ವಿಲೀನವಾಗುವಂತೆ ಇವನ ಕೀರ್ತಿಯು ಎಲ್ಲ ರಾಜರ ಕೀರ್ತಿಯನ್ನೂ ಅಪಹರಿಸುವುದು. ಇವನು ನಾಲ್ಕೂ ವರ್ಣದವರನ್ನು ನಿಷ್ಪಕ್ಷಪಾತವಾಗಿ ಕಾಣುತ್ತ ರಾಜ್ಯವಾಳುವನು. ಇಂತಹ ಮಗನನ್ನು ಪಡೆದ ನೀನು ಧನ್ಯನು” ಎಂದು ಹೇಳಿ ಹೊರಟುಹೋದನು. ಅಂತೆಯೇ ಮುಂದೆ ಜರಾಸಂಧನು ಪರಾಕ್ರಮಶಾಲಿಯಾಗಿ ಬೆಳೆದನು. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಶಿವನ ಪಂಚಮುಖಗಳಲ್ಲಿ ಒಬ್ಬರಾದ, ಸಾಕ್ಷಾತ್ ಈಶ್ವರನ ಸ್ವರೂಪವಾದ ವಾಮದೇವ ಮಹರ್ಷಿ ಗಂಗೆಯ ಅಹಂಕಾರ ಅಡಗಿಸಿದ ಜಹ್ನು ಮಹರ್ಷಿಗಳು