Story of River ganga and Sage Jahnu hid the ArroganceAI ಚಿತ್ರ

ಇಕ್ಷಾಕುವಂಶದಲ್ಲಿ ಸಗರನೆಂಬ ಪ್ರಸಿದ್ಧನಾದ ಮಹಾರಾಜನಿದ್ದನು. ಅವನು ಅಶ್ವಮೇಧ ಯಾಗವನ್ನು ಮಾಡಲು ಭೂಪ್ರದಕ್ಷಿಣೆಗಾಗಿ ಕುದುರೆಯನ್ನು ಸಂಚಾರದಲ್ಲಿ ಬಿಟ್ಟನು. ಆ ಯಜ್ಞಾಶ್ವವನ್ನು ಯಾರೋ ಅಪಹರಿಸಿದರು. ಯಜ್ಞಾಶ್ವವನ್ನು ಅನುಸರಿಸಿ ಬರುತ್ತಿದ್ದ ಸಗರನ ಅರವತ್ತುಸಾವಿರ ಪುತ್ರರು ಭೂಮಿಯಲ್ಲೆಲ್ಲ ಹುಡುಕಿ, ಕುದುರೆಯನ್ನು ಕಾಣದೆ, ಭೂಮಿಯನ್ನು ಅಗೆದು ಪಾತಾಳಕ್ಕೆ ಹೋದರು.

ಅಲ್ಲಿ ಕಪಿಲ ಮಹಾಮುನಿಗಳ ಆಶ್ರಮದ ಬಳಿ ಯಜ್ಞಾಶ್ವವು ಮೇಯುತ್ತಿತ್ತು. ಸಗರಪುತ್ರರು ಕಪಿಲಮುನಿಗಳೇ ಕುದುರೆಯನ್ನು ಅಪಹರಿಸಿರಬೇಕು ಎಂದು ಭಾವಿಸಿ ಅವರನ್ನು ನಿಂದಿಸಿದರು. ಕೂಡಲೇ ಅವರೆಲ್ಲ ಕಪಿಲರ ಕೋಪಾಗ್ನಿಯಲ್ಲಿ ಸುಟ್ಟು ಬೂದಿಯಾದರು. ಸಗರನ ಮೊಮ್ಮಗನಾದ ಅಂಶುಮಂತನು ಚಿಕ್ಕಪ್ಪಂದಿರನ್ನು ಹುಡುಕುತ್ತ ಬಂದು, ಅವರ ದುಃಸ್ಥಿತಿಯನ್ನು ಅರಿತನು.

ಲೋಕಪಾವನೆಯಾದ ಗಂಗೆಯು ಆ ಬೂದಿರಾಶಿಯ ಮೇಲೆ ಪ್ರವಹಿಸಿದರೆ ಅವರಿಗೆ ಸದ್ಗತಿಯಾಗುವುದೆಂದು ಗರುಡನಿಂದ ತಿಳಿದನು. ಆದರೆ ಅಂಶುಮಂತನಿಗಾಗಲಿ ಅವನ ಮಗ ದಿಲೀಪನಿಗಾಗಲಿ ಗಂಗೆಯನ್ನು ಸ್ವರ್ಗದಿಂದ ಭೂಲೋಕಕ್ಕೆ ತರಲು ಆಗಲಿಲ್ಲ. ದಿಲೀಪನ ಪುತ್ರನಾದ ಭಗೀರಥನು ಗಂಗೆಯನ್ನು ಭೂಲೋಕಕ್ಕೆ ತಂದು ಪಿತೃಗಳಿಗೆ ಸದ್ಗತಿಯನ್ನುಂಟುಮಾಡಬೇಕೆಂದು ನಿಶ್ಚಯಿಸಿದನು.

ಅದರಂತೆ ಗೋಕರ್ಣಕ್ಷೇತ್ರದಲ್ಲಿ ದೀರ್ಘವಾದ ತಪಸ್ಸನ್ನು ಆಚರಿಸಲು ಬ್ರಹ್ಮನು ಪ್ರತ್ಯಕ್ಷನಾಗಿ ಭಗೀರಥನ ಇಚ್ಛೆಯಂತೆ ಗಂಗೆಯನ್ನು ಕಳುಹಿಸುವುದಾಗಿಯೂ ಆದರೆ ಅವಳ ರಭಸವನ್ನು ತಡೆಯಲು ಈಶ್ವರನು ಮಾತ್ರ ಸಮರ್ಥನೆಂದೂ ಅವನನ್ನು ಮೆಚ್ಚಿಸಿದರೆ ಗಂಗೆ ಸ್ವರ್ಗದಿಂದ ಭೂಲೋಕಕ್ಕೆ ದುಮುಕಬಲ್ಲಳೆಂದೂ ಹೇಳಿದನು.

ಭಗೀರಥನು ಮಹೇಶ್ವರನನ್ನು ಕುರಿತು ತಪಸ್ಸು ಮಾಡಿದನು. ಪರಮೇಶ್ವರನು ಸುಪ್ರೀತನಾಗಿ ಗಂಗೆಯನ್ನು ಶಿರದಲ್ಲಿ ಧರಿಸಲು ಒಪ್ಪಿದನು. ಗಂಗೆಯು ಆಕಾಶದಿಂದ ಶಿವನ ತಲೆಯ ಮೇಲಕ್ಕೆ ದುಮುಕಿದಳು. ಗಂಗೆಗೆ ತಾನು ಬಹಳ ರಭಸವುಳ್ಳವಳೆಂಬ ಜಂಭವಿದ್ದಿತು. ಅದನ್ನು ಅರಿತ ಶಿವನು ಅವಳನ್ನು ಜಟೆಯಲ್ಲಿಯೇ ಬಂಧಿಸಿಬಿಟ್ಟನು.

ಗಂಗೆಗೆ ಭೂಮಿಗಿಳಿಯಲು ಆಗಲೇ ಇಲ್ಲ. ಆಗ ಭಗೀರಥನು ಮತ್ತೆ ಶಿವನನ್ನು ಪ್ರಾರ್ಥಿಸಿದನು. ಶಿವನು ಭಗೀರಥನ ಶ್ರದ್ಧೆಯನ್ನು ಮೆಚ್ಚಿ ಗಂಗೆಯ ಒಂದು ಧಾರೆಯನ್ನು ಜಟೆಯಿಂದ ಕೆಳಗೆ ಬಿಟ್ಟನು. ಗಂಗೆಯು ನೆಲದ ಮೇಲೆ ಹರಿಯುತ್ತ ರಥದಲ್ಲಿ ಹೋಗುತ್ತಿದ್ದ ಭಗೀರಥನನ್ನು ಅನುಸರಿಸಿದಳು; ಭಾಗೀರಥಿಯೆಂಬ ಹೆಸರನ್ನು ಪಡೆದಳು.

ಗಂಗೆಯು ಹೀಗೆ ಹರಿಯುತ್ತಿರುವಾಗ ಮಾರ್ಗ ಮಧ್ಯದಲ್ಲಿ ಜಹ್ನು ಮಹರ್ಷಿಗಳ ಆಶ್ರಮವು ಎದುರಾಯಿತು. ಅಲ್ಲಿ ಮಹಾತ್ಮರಾದ ಮಹರ್ಷಿಗಳು ಯಾಗವೊಂದನ್ನು ಮಾಡುತ್ತಿದ್ದರು. ಗಂಗೆಯು ರಭಸದಿಂದ ಆ ಯಜ್ಞಶಾಲೆಯನ್ನು ಕೊಚ್ಚಿಕೊಂಡು ಹೋದಳು. ಗಂಗೆಯ ಅಹಂಕಾರವನ್ನು ಕಂಡು ಮಹರ್ಷಿಗಳಿಗೆ ಅಪಾರವಾದ ಕೋಪ ಬಂದಿತು.

ಕೂಡಲೇ ಅವರು ಗಂಗೆಯ ಜಲವನ್ನೆಲ್ಲ ಕುಡಿದುಬಿಟ್ಟರು! ಭಗೀರಥನಿಗೆ ಬಹಳ ದುಃಖವಾಯಿತು. ಅವನು ಜಹ್ನು ಮಹರ್ಷಿಗಳನ್ನು ಸ್ತೋತ್ರ ಮಾಡಿದನು. ಗಂಗೆಯ ಅವತರಣವನ್ನು ನೋಡಲು ಬಂದಿದ್ದ ದೇವತೆಗಳು ಮತ್ತು ಗಂಧರ್ವರೂ ಕೂಡಾ ಜಹ್ನು ಮಹರ್ಷಿಗಳನ್ನು ಶಾಂತರಾಗುವಂತೆಯೂ ಗಂಗೆಯ ತಪ್ಪನ್ನು ಕ್ಷಮಿಸಿ ಅವಳನ್ನು ಮಗಳಂತೆ ಕಾಣಬೇಕೆಂದೂ ಪ್ರಾರ್ಥಿಸಿದರು. ಪ್ರಸನ್ನರಾದ ಮಹರ್ಷಿಗಳು ತಮ್ಮ ಕಿವಿಗಳ ಮೂಲಕ ಗಂಗಾಜಲವನ್ನು ಹೊರಗೆ ಬಿಟ್ಟರು.

ಅಂದಿನಿಂದ ಗಂಗೆಯು ಜಹ್ನುವಿನ ಮಗಳೆನಿಸಿ ಜಾಹ್ನವಿಯೆಂಬ ಹೆಸರು ಪಡೆದಳು. ಮುಂದೆ ಮತ್ತೆ ಭಗೀರಥನನ್ನು ಅನುಸರಿಸಿ ಪಾತಾಳದಲ್ಲಿ ಹರಿದು ಭಗೀರಥನ ಪಿತೃಗಳಿಗೆ ಸದ್ಗತಿಯನ್ನುಂಟು ಮಾಡಿದಳು.

ವಿಷ್ಣುಪುರಾಣದಲ್ಲಿ ಜಹ್ನುವು ಚಂದ್ರವಂಶದ ಸುಹೋತ್ರರಾಜನ ಮಗನೆಂದು ಹೇಳಲಾಗಿದೆ. ಹರಿವಂಶದಲ್ಲಿ ಅಜಮೀಢ ಮತ್ತು ಕೇಶಿನಿಯರ ಮಗನೆಂದು ಉಲ್ಲೇಖಿಸಲಾಗಿದೆ. ಜಹ್ನುವಿನ ಮಗ ಅಜನೆಂದೂ, ಅವನ ಮಗ ಬಲಕಾಶ್ವ, ಬಲಕಾಶ್ವನ ಮಗ ಕುಶಿಯೆಂದೂ ಅಲ್ಲಿ ಹೇಳಲ್ಪಟ್ಟಿದೆ. ಆದರೆ ಮಹರ್ಷಿಯಾದ ಜಹ್ನುವು ಈತನಾಗಿರಲಿಕ್ಕಿಲ್ಲ, ಬೇರೆಯಾಗಿದ್ದಿರಬಹುದು ಎಂಬ ಅಭಿಪ್ರಾಯವೂ ಇದೆ.

ಜಹ್ನು ಮಹರ್ಷಿಗಳು ಲೋಕಕಲ್ಯಾಣಾರ್ಥ ಗಂಗೆಯ ವೇಗವನ್ನು ನಿಯಂತ್ರಿಸಿ, ಭೂಲೋಕಕ್ಕೆ ಮಹದುಪಕಾರ ಮಾಡಿ, ಕೀರ್ತಿವಂತರಾದರು

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *