Vamadeva Maharshi is regarded as one of the five Faces of Lord Shiva and divine embodiment of Ishvaraವಾಮದೇವ ಮಹರ್ಷಿ

ವಾಮದೇವರು ವಸಿಷ್ಠರಿಗೆ ಸಮಾನರಾದ ಮಹರ್ಷಿಗಳು. ಇವರನ್ನು ಸಾಕ್ಷಾತ್ ಈಶ್ವರನ ಸ್ವರೂಪವೆಂದು ಹೇಳುತ್ತಾರೆ. ‘ವಾಮ’ ಎಂಬ ಪದಕ್ಕೆ ಸಂಪತ್ತು ಸೌಂದರ್ಯ, ಎಡಭಾಗ, ಪ್ರತಿಕೂಲ ಮುಂತಾದ ಅನೇಕ ಅರ್ಥಗಳಿವೆ. ಮೋಕ್ಷವೆಂಬ ಸಂಪತ್ತಿಗೆ ಒಡೆಯನೂ ಆತ್ಮಸೌಂದರ್ಯವನ್ನು ಪಡೆದಿರುವವನೂ ಪ್ರತಿಕೂಲಗಳೆಂಬ ಎಘ್ನಗಳನ್ನು ನಿವಾರಿಸುವವನೂ ಆದವನು ವಾಮದೇವನು. ಈಶ್ವರನಿಗೂ ವಾಮದೇವನೆಂಬ ಹೆಸರಿದೆ. ‘ವಾಮಯತಿ’ ಎಂದರೆ ದುಷ್ಟರ ಮದವನ್ನು ನಿಗ್ರಹಿಸುವವನು ಎಂದರ್ಥ.

ವಾಮದೇವ ಮಹರ್ಷಿಗಳು ಋಗೈದಮಂತ್ರಗಳ ದ್ರಷ್ಟಾರರು. ವಸಿಷ್ಠರ ತರುವಾಯ ಅತಿಹೆಚ್ಚು ಮಂತ್ರಗಳು ವಾಮದೇವರೇ ಕಂಡುಕೊಂಡವುಗಳು. ವಸಿಷ್ಠರು 860 ಮಂತ್ರಗಳಿಗೆ ದ್ರಷ್ಟಾರರಾದರೆ, ಎರಡನೆಯ ಸ್ಥಾನ ವಾಮದೇವರಿಗೆ. ಅವರು ದರ್ಶಿಸಿದ ಮಂತ್ರಗಳ ಸಂಖ್ಯೆ 560. ಋಗ್ವದದ ಚತುರ್ಥ ಮಂಡಲದ 41 ಸೂಕ್ತಗಳು ಅವರ ಹೆಸರಿನಲ್ಲಿವೆ. ಇವು ಅಗ್ನಿ, ಇಂದ್ರ, ಋಭುಗಳು, ದ್ಯಾವಾಪೃಥಿವೀ ಮೊದಲಾದ ದೇವತೆಗಳಿಗೆ ಸಂಬಂಧಿಸಿದ ಸೂಕ್ತಗಳು. ನಲವತ್ತೈದನೆಯ ಸೂಕ್ತದಿಂದ ಅಶ್ವಿನೀದೇವತೆಗಳನ್ನೂ ಅನಂತರ ಇಂದ್ರ, ವಾಯು, ಬೃಹಸ್ಪತಿ, ಉಷಸ್, ಸವಿತೃ, ವಿಶ್ವೇದೇವತೆಗಳನ್ನೂ ಪ್ರಾರ್ಥಿಸಿರುತ್ತಾರೆ.

ಉಪನಿಷತ್ತುಗಳೂ ವಾಮದೇವ ಋಷಿಗಳನ್ನು ಬಹಳವಾಗಿ ಕೊಂಡಾಡುತ್ತವೆ. ಐತರೇಯ ಉಪನಿಷತ್ತಿನಲ್ಲಿ ‘ಜನ್ಮ-ಮರಣರೂಪವಾದ ಸಂಸಾರಪರಂಪರೆಯಿಂದ ಮುಕ್ತನಾಗಬೇಕಾದರೆ ಆತ್ಮಜ್ಞಾನವೇ ಮಾರ್ಗ’ ಎಂದು ಹೇಳುತ್ತ, ವಾಮದೇವ ಮಹರ್ಷಿಗಳ ಉದಾಹರಣೆಯನ್ನು ಕೊಡಲಾಗಿದೆ. ವಾಮದೇವರು ತಾಯಿಯ ಗರ್ಭದಲ್ಲಿರುವಾಗಲೇ ಆತ್ಮಜ್ಞಾನವನ್ನು ಪಡೆದಿದ್ದರೆಂದೂ ‘ನಾನು ಹುಟ್ಟುವ ಮೊದಲೇ ದೇವತೆಗಳಿಂದ ಹಿಡಿದು, ಇಡೀ ವಿಶ್ವದ ಜನ್ಮವನ್ನು ತಿಳಿದಿದ್ದೇನೆ. ನನ್ನನ್ನು ನೂರಾರು ಲೋಹಮಯವಾದ ಶರೀರಗಳು ರಕ್ಷಿಸುತ್ತಿದ್ದವು. ಅವುಗಳನ್ನು ಸೀಳಿ, ಶೈನ ಪಕ್ಷಿಯಂತೆ ಹೊರಗೆ ಬಂದಿರುತ್ತೇನೆ’ ಎಂದು ಹೇಳಿದರೆಂದೂ ಅಲ್ಲಿ ಹೇಳಿದೆ. ಹೀಗೆ ಅವರು ಈ ಶರೀರದಿಂದ ಬಿಡುಗಡೆ ಹೊಂದಿ ಅಮರತ್ವವನ್ನು ಪಡೆದಿದ್ದರು.

ಬೃಹದಾರಣ್ಯಕೋಪನಿಷತ್ತಿನಲ್ಲಿಯೂ ಇದೇ ಅರ್ಥ ಬರುವ ವಾಕ್ಯವನ್ನು ಕಾಣುತ್ತೇವೆ. ಬ್ರಹ್ಮವು ಸರ್ವಾತ್ಮಕವಾದುದು ಎಂದು ಉಪನಿಷತ್ತು ಉದ್ಯೋಷಿಸುತ್ತಾ ಸೃಷ್ಟಿಗೆ ಮೊದಲು ಎಲ್ಲವೂ ಬ್ರಹ್ಮವೇ ಆಗಿತ್ತು. ಅನಂತರವೂ ಅದೇ ಎಲ್ಲವೂ ಆಯಿತು. ದೇವತೆಗಳು ಮತ್ತು ಋಷಿಗಳಲ್ಲಿ ಯಾರು ಯಾರು ಇದನ್ನು ಅರಿತುಕೊಂಡರೋ ಅವರೆಲ್ಲ ಬ್ರಹ್ಮಸ್ವರೂಪರೇ ಆದರು’ ಎಂದು ಹೇಳಲಾಗಿದೆ. ಈ ವಿಷಯಕ್ಕೆ ಉದಾಹರಣೆಯಾಗಿ ಅಲ್ಲಿ ವಾಮದೇವ ಮಹರ್ಷಿಗಳನ್ನು ತೆಗೆದುಕೊಳ್ಳಲಾಗಿದೆ: ‘ಅವರು ತಾವೇ ಮನುಗಳೂ ಸೂರ್ಯರೂಪರೂ ಆಗಿರುತ್ತೇನೆಂದು ತಿಳಿದುಕೊಂಡರು. ಆದ್ದರಿಂದ ಅವರು ಬಹಸ್ವರೂಪವನ್ನು ಅರಿತವರಾದರು. ಅವರ ಹಾಗೆ ತಿಳಿದುಕೊಳ್ಳಲು ಶಕ್ತರಾದವರೆಲ್ಲರೂ ಬ್ರಹ್ಮಜ್ಞರಾಗುತ್ತಾರೆ.’

ರಾಮಪೂರ್ವತಾಪಿನೀ ಉಪನಿಷತ್ತಿನಲ್ಲಿ ರಾಮನನ್ನು ವಸಿಷ್ಠ ಮತ್ತು ವಾಮದೇವರು ಪೂಜಿಸಿದ ವೃತ್ತಾಂತವು ಬರುತ್ತದೆ. ಶಿವಪುರಾಣದ ಕೈಲಾಸಖಂಡದಲ್ಲಿ ಷಣ್ಮುಖನು ವಾಮದೇವರಿಗೆ ಓಂಕಾರದ ತತ್ತ್ವವನ್ನು ಬೋಧಿಸುತ್ತಾನೆ. ಅದನ್ನು ವಾಮದೇವ ಮಹರ್ಷಿಗಳು ಅನುಷ್ಠಾನ ಮಾಡುವುದರ ಜೊತೆಗೆ ಉಳಿದ ಮಹರ್ಷಿಗಳಿಗೂ ಓಂಕಾರವೆಂಬ ಪ್ರಣವಸ್ವರೂಪವನ್ನು ಬೋಧಿಸುತ್ತಾರೆ.

ವಾಮದೇವ ಮಹರ್ಷಿಗಳು ಗೌತಮರ ಪುತ್ರರೆಂದು ಹೇಳುತ್ತಾರೆ. ಶಿವನ ಪಂಚಮುಖಗಳಲ್ಲಿ ಒಂದಕ್ಕೆ ವಾಮದೇವ ಎಂಬ ಹೆಸರಿದೆ. ಇದು ಉತ್ತರದ ಕಡೆಗೆ ಇರುವ ಮುಖ. ವಾಮದೇವರ ಮಹತ್ವವನ್ನು ತಿಳಿಸುವ ಕಥೆಯೊಂದು ಮಹಾಭಾರತದ ವನಪರ್ವದಲ್ಲಿ ಬರುತ್ತದೆ.

ಅಯೋಧ್ಯೆಯಲ್ಲಿ ಇಕ್ಷಾಕುವಂಶಕ್ಕೆ ಸೇರಿದ ಪರೀಕ್ಷಿತನೆಂಬ ರಾಜನಿದ್ದನು. ಅವನಿಗೆ ಶಲ, ದಲ ಮತ್ತು ಬಲ ಎಂಬ ಮೂವರು ಪುತ್ರರಿದ್ದರು. ಶಲನು ಒಂದು ದಿನ ಕಾಡಿಗೆ ಬೇಟೆಗಾಗಿ ಹೋದನು. ಅಲ್ಲಿ ಒಂದು ಜಿಂಕೆಯನ್ನು ಅನುಸರಿಸಿ ರಥವನ್ನು ಓಡಿಸುವಂತೆ ಸಾರಥಿಗೆ ಹೇಳಿದನು. ಸಾರಥಿಯು “ನಮ್ಮ ರಥದ ಕುದುರೆಗಳು ಜಿಂಕೆಯಷ್ಟು ವೇಗವಾಗಿ ಓಡಲು ಸಮರ್ಥವಲ್ಲ. ವಾಮ್ಯಶ್ವಗಳು ಮಾತ್ರ ಜಿಂಕೆಯನ್ನು ಹಿಡಿಯಬಲ್ಲವು” ಎಂದು ಹೇಳಿದನು.

ಶಲನು “ವಾಮ್ಯಶ್ವಗಳೆಂದರೆ ಯಾವುವು? ಅವು ಎಲ್ಲಿ ಸಿಕ್ಕುವುವು?” ಎಂದು ಸಾರಥಿಯನ್ನು ಕೇಳಿದುದಲ್ಲದೆ, ‘ಅದನ್ನು ತೋರಿಸಿಕೊಡದಿದ್ದರೆ ಕೊಂದುಬಿಡುವುದಾಗಿ’ ಹೆದರಿಸಿದನು. ಸಾರಥಿಯು “ಅಂತಹ ಕುದುರೆಗಳು ವಾಮದೇವರ ಬಳಿಯಿವೆ. ಅವು ಮನೋವೇಗದಲ್ಲಿ ಓಡುತ್ತವೆ” ಎಂದು ಹೇಳಿದನು. ಶಲರಾಜನ ಆಜ್ಞೆಯಂತೆ ಅವನನ್ನು ಸಾರಥಿಯು ವಾಮದೇವ ಮುನಿಗಳ ಆಶ್ರಮಕ್ಕೆ ಕರೆದುಕೊಂಡು ಹೋದನು. ಶಲನು ವಾಮದೇವರಿಗೆ ನಮಸ್ಕರಿಸಿ, “ಮಹರ್ಷಿಗಳೇ! ನನ್ನ ಬಾಣದ ಏಟಿಗೆ ಸಿಕ್ಕಿದ ಜಿಂಕೆಯೊಂದು ತಪ್ಪಿಸಿಕೊಂಡಿದೆ.

ಅದನ್ನು ಹಿಡಿಯಲು ನಿಮ್ಮಲ್ಲಿರುವ ಕುದುರೆಗಳಿಂದ ಮಾತ್ರ ಸಾಧ್ಯವೆಂದು ಕೇಳಿದೆ. ದಯವಿಟ್ಟು ಒಂದು ಜೊತೆ ಕುದುರೆಗಳನ್ನು ಕೊಡಬೇಕು” ಎಂದು ಕೇಳಿದನು. ವಾಮದೇವ ಮುನಿಗಳು ‘ಕಾರ್ಯವು ಪೂರೈಸಿದೊಡನೆಯೇ ಅವುಗಳನ್ನು ಹಿಂದಿರುಗಿ ಕೊಡಬೇಕೆಂಬ’ ನಿಬಂಧನೆಯನ್ನು ವಿಧಿಸಿ ಕುದುರೆಗಳನ್ನು ರಾಜನಿಗೆ ಕೊಟ್ಟರು. ಶಲನು ಅವುಗಳ ಸಹಾಯದಿಂದ ಜಿಂಕೆಯನ್ನು ಹಿಡಿದನು. ಅನಂತರ ‘ಇಂತಹ ಅಶ್ವರತ್ನಗಳು ಬ್ರಾಹ್ಮಣನ ಬಳಿ ಇರಲು ಯೋಗ್ಯವಾದವುಗಳಲ್ಲವೆಂದು ತೀರ್ಮಾನಿಸಿ ಅವುಗಳೊಡನೆ ಅರಮನೆಗೆ ಹೊರಟುಹೋದನು.

ವಾಮದೇವ ಮಹರ್ಷಿಗಳು ಒಂದು ತಿಂಗಳು ಕಾದು ನೋಡಿದರು. ಅನಂತರ ತಮ್ಮ ಶಿಷ್ಯನಾದ ಆತ್ರೇಯನನ್ನು ಶಲರಾಜನ ಬಳಿಗೆ ಕಳುಹಿಸಿದರು. ಆತ್ರೇಯನು ಗುರುಗಳ ಅಪ್ಪಣೆಯಂತೆ ಶಲರಾಜನನ್ನು ಕಂಡು ಕುದುರೆಗಳನ್ನು ಹಿಂದಿರುಗಿಸುವಂತೆ ಕೇಳಿದಾಗ ಶಲನು, “ಬ್ರಾಹ್ಮಣರು ಇಂತಹ ಕುದುರೆಗಳನ್ನಿಟ್ಟುಕೊಳ್ಳಲು ಅರ್ಹರಲ್ಲ. ಅವರಿಗೆ ಇದರಿಂದ ಪ್ರಯೋಜನವಾದರೂ ಏನಿದೆ? ಅವರಿಗೆ ಸಮಿತ್ತು, ದರ್ಭೆಗಳು ಸಾಕು. ಅವುಗಳನ್ನು ತೆಗೆದುಕೊಂಡು ಹೋಗಿ ಕೊಡು. ಕುದುರೆಗಳು ಇನ್ನು ಅವರಿಗೆ ಸಿಗಲಾರವು ಎಂದು ಹೇಳು” ಎಂದು ಹೇಳಿ ಕಳುಹಿಸಿದನು. ಆತ್ರೇಯನು ಗುರುಗಳ ಬಳಿ ಬಂದು ಶಲನ ಮಾತುಗಳನ್ನು ತಿಳಿಸಿದನು.

ವಾಮದೇವ ಋಷಿಗಳು ತಾವೇ ಸ್ವತಃ ರಾಜನ ಬಳಿಗೆ ಬಂದರು. ಆದರೂ ಶಲನು ಕುದುರೆಗಳನ್ನು ಕೊಡಲಿಲ್ಲ. ವಾಮದೇವರು ಅವು ವರುಣನ ಕುದುರೆಗಳೆಂದೂ ಬ್ರಾಹ್ಮಣರ ಬಳಿ ಇರುವ ಸ್ವತ್ತನ್ನು ಅಪಹರಿಸುವುದು ಸರಿಯಲ್ಲವೆಂದೂ ಎಚ್ಚರಿಸಿದರೂ ಆತನು ಕುದುರೆಗಳನ್ನು ಹಿಂದಿರುಗಿಸಲಿಲ್ಲ.

“ಬ್ರಾಹ್ಮಣರಿಗೆ ಎತ್ತುಗಳೇ ಸಾಕು, ಅಥವಾ ಎತ್ತಾದರೂ ಏಕೆ ಬೇಕು? ಹೋಗಲಿ ಎಂದು ನಾಲ್ಕು ಕತ್ತೆಗಳನ್ನೋ ಅಥವಾ ಬೇರೆ ಕುದುರೆಗಳನ್ನೋ ಕೊಡುತ್ತೇನೆ. ವಾಮ್ಯಶ್ವಗಳನ್ನು ಮಾತ್ರ ಖಂಡಿತ ಕೊಡುವುದಿಲ್ಲ” ಎಂದು ಹೇಳಿಬಿಟ್ಟನು. ವಾಮದೇವರು ಪರಿ ಪರಿಯಾಗಿ ಹೇಳಿದರೂ ಶಲನು ತನ್ನ ಹಟವನ್ನು ಬಿಡಲಿಲ್ಲ. ವಾಮದೇವರು ತಮ್ಮ ತಪಃಶಕ್ತಿಯಿಂದ ನಾಲ್ಕು ಜನ ರಾಕ್ಷಸರನ್ನು ಸೃಷ್ಟಿಸಿದರು. ಅವರು ಶಲನನ್ನು ಕ್ಷಣಮಾತ್ರದಲ್ಲಿ ಕೊಂದುಹಾಕಿದರು.

ಶಲನು ಈ ರೀತಿ ಪ್ರಾಣತೊರೆದ ನಂತರ ದಲನು ರಾಜನಾದನು. ವಾಮದೇವ ಋಷಿಗಳು ದಲನನ್ನು ಸಂಧಿಸಿ, “ಬ್ರಾಹ್ಮಣರ ಸ್ವತ್ತನ್ನು ಅಪಹರಿಸುವುದು ನ್ಯಾಯವಲ್ಲ. ನಿನಗೆ ಪಾಪದ ಭಯವಿರುವುದಾದರೆ ನನ್ನ ಕುದುರೆಗಳನ್ನು ಹಿಂದಿರುಗಿಸು” ಎಂದು ಕೇಳಿದರು. ದಲನು ಶಲನಿಗಿಂತ ದುಷ್ಟನಾಗಿದ್ದನು. ಸಾರಥಿಯನ್ನು ಕರೆದು, “ನಾನು ಸಿದ್ಧಪಡಿಸಿರುವ ವಿಷಲಿಪ್ತ ಬಾಣಗಳಲ್ಲಿ ಒಂದನ್ನು ತೆಗೆದುಕೊಂಡು ಬಾ. ಈ ಬ್ರಾಹ್ಮಣನನ್ನು ಕೆಡವಿ, ಇವನ ಶರೀರವನ್ನು ನಾಯಿಗಳು ಎಳೆದಾಡುವಂತೆ ಮಾಡುವೆನು” ಎಂದನು.

ವಾಮದೇವರು ಅಂತಹ ಸಾಹಸ ಬೇಡವೆಂದು ತಡೆದರೂ ದಲನು ಬಾಣಪ್ರಯೋಗ ಮಾಡಿದನು. ಆ ಬಾಣವು ವಾಮದೇವರಿಗೆ ತಗಲುವ ಬದಲು, ಹತ್ತುವರ್ಷದ ರಾಜಕುಮಾರ ಶ್ವೇನಜಿತನ ಪ್ರಾಣವನ್ನು ಅಪಹರಿಸಿತು. ರಾಜನು ಕುಪಿತನಾಗಿ ಮತ್ತೊಮ್ಮೆ ಬಾಣವನ್ನು ಹೂಡಲು ತೊಡಗಿದಾಗ ವಾಮದೇವರ ಪ್ರಭಾವದಿಂದ ರಾಜನ ಕೈಗಳು ಹಾಗೆಯೇ ನಿಂತುಬಿಟ್ಟವು.

ಆಗ ದಲನು ವಾಮದೇವರಿಗೆ ಶರಣಾದನು. ಮಹಾರಾಣಿಯು, ತನ್ನ ಪತಿಯು ಮುನಿಯ ವಿಷಯದಲ್ಲಿ ಮಾಡಿದ ಅಪಚಾರದಿಂದ ಪಶ್ಚಾತ್ತಾಪಗೊಂಡು, ತಮ್ಮನ್ನು ಕ್ಷಮಿಸುವಂತೆ ಮಹರ್ಷಿಗಳಿಗೆ ಬಿನ್ನವಿಸಿದಳು. ಮಹಾರಾಣಿಯ ಸದಾಚಾರದಿಂದ ಸಂತುಷ್ಟರಾದ ಮಹರ್ಷಿಗಳು ತಮ್ಮ ತಪಃಶಕ್ತಿಯಿಂದ ರಾಜಕುಮಾರನನ್ನು ಬದುಕಿಸಿಕೊಟ್ಟರು. ದಲನ ಕೈಗಳೂ ಸರಿಯಾದವು. ದಲನು ವಾಮ್ಯಶ್ವಗಳನ್ನು ಋಷಿಗಳಿಗೆ ಒಪ್ಪಿಸಿ ತನ್ನ ಅಪರಾಧಗಳನ್ನು ಕ್ಷಮಿಸಬೇಕೆಂದು ಬೇಡಿಕೊಂಡನು. ವಾಮದೇವರು ಎಲ್ಲರನ್ನೂ ಹರಸಿ ಕುದುರೆಗಳೊಡನೆ ಆಶ್ರಮಕ್ಕೆ ಮರಳಿದರು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *