Veer Savarkar's First War of Independence book was banned before it was published.ವೀರ್‌ ಸಾವರ್ಕರ್‌, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ

ಕ್ರೂರಿ ಬ್ರಿಟಿಷ್‌ ಅಧಿಕಾರಿ ಕರ್ಜನ್‌ ವೈಲಿಯನ್ನು ಹತ್ಯೆಗೈದ ದೇಶಭಕ್ತ ಮದನಲಾಲ್‌ ದಿಂಗ್ರಾ ಅವರನ್ನು ಬ್ರಿಟಿಷರು ನೇಣಿಗೇರಿಸಿದರು. ದೇಶಕ್ಕಾಗಿ ಪ್ರಾಣಬಿಟ್ಟ ಭಾರತ ಮಾತೆಯ ವೀರಪುತ್ರನಿಗೆ ನಮನ. ಮದನ್‌ಲಾಲ ದಿಂಗ್ರಾ ಅವರ ರೀತಿ ಅನೇಕ ಯುವಕರು ವೀರ್‌ ಸಾವರ್ಕರ್‌ ಅವರ ಪ್ರೇರಣೆ ಪಡೆದಿದ್ದಾರೆ. ಲಂಡನ್‌ನಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ ಸಾವರ್ಕರ್‌ ಮುಂದೆ, ಭಾರತದಲ್ಲಿ ಹೊಗೆಯಾಡುತ್ತಿದ್ದ ಸ್ವಾತಂತ್ರ್ಯದ ಕಿಚ್ಚನ್ನು ಜ್ವಾಲೆಯಾಗಿಸುವ ಯೋಜನೆಗೆ ನಾಂದಿಹಾಡಿದರು. ಲಾರ್ಡ್‌ ಡಾಲ್‌ ಹೌಸಿಯು ಜಾರಿಗೆ ತಂದಿದ್ದ “ದತ್ತು ಮಕ್ಕಳಿಗೆ ಹಕ್ಕಿಲ್ಲ” ಕಾಯ್ದೆಯಿಂದ ಭಾರತದ ಹಲವಾರು ಸಂಸ್ಥಾನಗಳು ಉತ್ತಾರಾಧಿಕಾರಿಗಳಿಲ್ಲದೆ ಬ್ರಿಟಿಷರ ವಶವಾದವು.

ಇದರಿಂದ ದೇಶಿಯ ಸಂಸ್ಥಾನಗಳು ಅಸಮಾಧಾನಗೊಂಡು ಬ್ರಿಟಿಷರ ಆಳ್ವಿಕೆಯ ವಿರುದ್ಧ ಬಂಡಾಯವೆದ್ದರು. ಹಾಗೂ ಮಂಗಲ್‌ ಪಾಂಡೆ ಎಂಬ ಸೈನಿಕ ನಾಡತೋಪಗಳಿಗೆ ಹಸುವಿನ ಮತ್ತು ಹಂದಿಯ ಕೊಬ್ಬನ್ನು ಸವರಿದ ವಿಷಯ ತಿಳಿದು ನಾಡತೋಪನ್ನು ಬಾಯಿಯಿಂದ ಕಚ್ಚಿ ಬಿಸಾಡಲು ನಿರಾಕರಿಸಿದ.

ಇದರಿಂದ ಕ್ರೋಧಗೊಂಡ ಬ್ರಿಟಿಷರು ಹಲವಾರು ಸೈನಿಕರನ್ನು ಜೈಲಿಗೆ ಕಳುಹಿಸಿದರು. ಇದರಿಂದ ಆಕ್ರೋಶಗೊಂಡಿದ್ದ ಮಂಗಲ್‌ ಪಾಂಡೆಯು ಇಬ್ಬರು ಬ್ರಿಟಿಷ್‌ ಅಧಿಕಾರಿಗಳನ್ನು ಕೊಂದನು. ಈ ಘಟನೆಯು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಲು ಪ್ರಮುಖ ಕಾರಣವಾಯ್ತು. ಬ್ರಿಟಿಷರು ಈ ಸಂಗ್ರಾಮವನ್ನು ಸಿಪಾಯಿ ದಂಗೆ ಎಂದು ಕರೆದರೇ, ವೀರ್‌ ಸಾವರ್ಕರ್‌ ಅವರು ಈ “ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಎಂದರು.

ಈ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಭಾರತೀಯರಿಗೆ ತಿಳಿಸುವ ಅಗತ್ಯವನ್ನು ಸಾವರ್ಕರ್‌ ಅವರು ಮನಗಂಡರು.ಇದರಿಂದಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಭಾರತೀಯರಿಗೆ ಪ್ರೇರಣೆ ನೀಡುವ ಯೋಚನೆ ಮಾಡಿದರು. ತರವಾಯ ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ಕೃತಿಯ ಮೂಲಕ ಭಾರತೀಯರಿಗೆ ತಿಳಿಸುವ ಕಾರ್ಯಕ್ಕೆ ಮುಂದಾದರು.

ಆದರೆ, ಬ್ರಿಟಿಷ್‌ ಸರ್ಕಾರವು ಸಾವರ್ಕರ್‌ ಅವರ ಕೃತಿಯನ್ನು ಮುದ್ರಣಕ್ಕೆ ಮುಂಚೆಯೇ ನಿಷೇಧಿಸಿದರು. ಭಾರತದ ಮುದ್ರಣಾಲಯಗಳ ಮೇಲೆ ಪೊಲೀಸ್‌ ನಿಗಾ ಇಟ್ಟು ಸಾವರ್ಕರ್‌ ಅವರು ಬರೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕೃತಿ ಮುದ್ರಣವಾಗದಂತೆ ತಡೆದರು.

ಆದರೆ, ಸಾವರ್ಕರ್‌ ಅವರು ಫ್ರಾನ್ಸ್‌ನಲ್ಲಿ ಮುದ್ರಿಸುತ್ತೇವೆ ಎಂದು ಘೋಷಿಸಿದರು. ಇಲ್ಲಿಯೂ ಕೂಡ ಬ್ರಿಟಿಷ್‌ ಪೊಲೀಸರು ಮುದ್ರಣಗೊಳ್ಳದಂತೆ ನೋಡಿಕೊಂಡರು. ಆದರೆ, ಸಾವರ್ಕರ್‌ ಅವರು ಪುಸ್ತಕವನ್ನು ಮೇಡಂ ಕಾಮಾ ಅವರ ಸಹಾಯದಿಂದ ಹಾಲೆಂಡ್‌ನಲ್ಲಿ ಮುದ್ರಿಸಿದರು.

ಈ ಪುಸ್ತಕಗಳನ್ನು ಭಾರತಕ್ಕೆ ಕಳುಹಿಸಲು ಸಾವರ್ಕರ್‌ ಅವರು ಒಂದು ಉಪಾಯ ಕಂಡುಕೊಂಡರು. ಅದು, ಬಾಕ್ಸ್‌ನಲ್ಲಿ ಕೆಳಗಡೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಮೇಲೆ ಬೈಬಲ್‌ ಇಟ್ಟು ಪ್ಯಾಕ್‌ ಮಾಡಿದರು. ಈ ಬಾಕ್ಸ್‌ಗಳನ್ನು ಹಡಗುಗಳಲ್ಲಿ ಇಟ್ಟು ಕಳುಹಿಸಿದರು. ಬ್ರಿಟಿಷ್‌ ಪೊಲೀಸರು ಮೇಲೆಗಡೆ ಮಾತ್ರ ಪರಿಶೀಲಿಸುತ್ತಿದ್ದರು, ಬೈಬಲ್‌ ಕಂಡು ಕೈಮುಗಿದು ಕಳುಹಿಸುತ್ತಿದ್ದರು.

ಈ ಕೃತಿಯು ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ವೇಗ ನೀಡಿತು. ಸಾರ್ವಜನಿಕ ಕಾರ್ಯಕ್ರಮ ಮತ್ತು ಗಣೇಶ ಮೆರವಣಿಗೆಯಲ್ಲಿ ಗೌಪ್ಯವಾಗಿ ಹಂಚಲಾಯಿತು. ಈ ಪುಸ್ತಕಗಳನ್ನು ಓದಿದ ಯುವಕ-ಯುವತಿಯರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

ಹಿಂದಿನ ಸಂಚಿಕೆ: ವೀರ ಸಾವರ್ಕರ್‌ ಸ್ಮರಣ ಸಂಚಿಕೆ 3: ಸಾವರ್ಕರ್‌ ಪ್ರೇರಣೆಯಿಂದ ಹೊತ್ತಿದ ಜ್ವಾಲೆಯಲ್ಲಿ ಭಸ್ಮವಾದ ಕರ್ಜನ್‌

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *