ಜುಲೈ 7, 1999 ಕಾರ್ಗಿಲ್‌ನ ಮುಷ್ಕೋ ಕಣಿವೆಯ ದುರ್ಗಮ ಬೆಟ್ಟಗಳ ಕಣಿವೆ. ನಟ್ಟ ನಡುರಾತ್ರಿ ಎಲುಬುಗಳನ್ನೂ ಕೊರೆಯುವಂತಿದ್ದ ಚಳಿಗಾಳಿ. ಅಲ್ಲಿನ ಪಾಯಿಂಟ್ 4875ರ ಕಡಿದಾದ ಶಿಖರಗಳ ನಡುವೆ ಬೀಸುತ್ತಿದ್ದ ಆ ಗಾಳಿ, ಅಗೋಚರ ಶಕ್ತಿಯ ಅಳುವಿನಂತೆ ಮಾರ್ದನಿಸುತ್ತಿತ್ತು. ಕತ್ತು ಹಿಸುಕಲು ಹೊಂಚುಹಾಕಿ ಬಂದಿದ್ದ ಪಾತಕಿಗಳು ಮರೆಯಲ್ಲಿಂದ್ದುಕೊಂಡು ದಾಳಿ ಆರಂಭಿಸಿದ್ದರು. ಆದರೆ ಅದೇ ಹಿಮನೆಲದಲ್ಲಿ 24ರ ತುಂಬು ಹರೆಯದ ಯುವಕನೊಬ್ಬ, ಶತ್ರುವಿನ ಎದೆ ಸೀಳಿ ಸಿಂಹದಂತೆ ಗರ್ಜಿಸಲು ಸಿದ್ಧನಾಗಿದ್ದ. ಆತನ ಹೆಸರು ಕ್ಯಾಪ್ಟನ್ ವಿಕ್ರಮ್ ಬಾತ್ರಾ. ಎತ್ತರದ ನಿಲುವು, ಹೊಳೆಹೊಳೆವ ಕಡುಗಪ್ಪು ಕಣ್ಣುಗಳು, ಹಾಲುಬಿಳುಪಿನ ಮೈಬಣ್ಣ, ಸ್ಲೈಲ್ ಮಾಡ್ತಾ ಪೋಸ್ ಕೊಟ್ಟರೆ ಒಂದಷ್ಟು ಬಾಲಿವುಡ್ ಹೀರೋಗಳನ್ನೆಲ್ಲಾ ಅವನ ಮುಂದೆ ನಿವಾಳಿಸಿಹಾಕಬಹುದು. ಉಕ್ಕಿನ ತೋಳು, ಮಿಂಚಿನ ಜಾಣ್ಮೆ, ಹಿಮಾಲಯದಂಥಾ ಅಚಲ ಇಚ್ಛಾಶಕ್ತಿ, ಅದೆಲ್ಲದರ ಒಟ್ಟು ರೂಪ, ನಮ್ಮ ಪರಮ ವೀರ ಚಕ್ರ ವಿಜೇತ ಕ್ಯಾಪ್ಟನ್ ವಿಕ್ರಮ್ ಬಾತ್ರಾ. ಹಿಮಾಚಲ ಪ್ರದೇಶದ ಪಾಲಂಪುರದ ಮಣ್ಣಿನ ಮಗ. 13 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ಹೆಮ್ಮೆಯ ಪುತ್ರ. ಅಂದು ಆತನ ಉಸಿರು, ತಂಪು ಗಾಳಿಯಲ್ಲಿ ಆವಿಯಂತೆ ಹರಡುತ್ತಿತ್ತು, ಆದರೆ ಆತನ ಕಣ್ಣುಗಳಲ್ಲಿ ಮಾತ್ರ ರಾಷ್ಟ್ರಪ್ರೇಮದ ಜ್ವಾಲೆ ಕುದಿಯುತ್ತಿತ್ತು. ಕೆಲವು ದಿನಗಳ ಹಿಂದಷ್ಟೇ ಪಾಯಿಂಟ್ 5140ನ್ನು ವಶಪಡಿಸಿಕೊಂಡು, ಇಡೀ ಭಾರತದ ಮನಗೆದ್ದಿದ್ದ ‘ಶೇರ್ ಷಾ’ ಆತ. ಜೂನ್ 18, 1999. ಮಧ್ಯರಾತ್ರಿಯಲ್ಲಿ, ಬಂಡೆಗಳ ನಡುವೆ ಹಾದಿ ಮಾಡಿಕೊಂಡು, ಫಿರಂಗಿಗಳ ಆರ್ಭಟದ ನಡುವೆ ವಿಕ್ರಮ್ ಬಾತ್ರಾ ಮತ್ತು ಅವರ ತಂಡ ಮೇಲೆತ್ತರಕ್ಕೆ ಏರುತ್ತಿತ್ತು. ಅಚಾನಕ್ ಆಗಿ, ಪಾಕಿಸ್ತಾನಿ ಪಡೆಗಳು ಇವರ ರೇಡಿಯೋ ತರಂಗಗಳನ್ನು ಅಡ್ಡಗಟ್ಟಿದವು. ಆ ಕಡೆಯಿಂದ ವ್ಯಂಗ್ಯದ ಧ್ವನಿ ಕೇಳಿಬಂತು, “ಮೇಲಕ್ಕೆ ಬರುವ ಪ್ರಯತ್ನ ಮಾಡಬೇಡಿ, ಕಷ್ಟ ಪಡಬೇಕಾಗುತ್ತದೆ.” ಆ ಸವಾಲು ಬಾತ್ರಾ ರಕ್ತವನ್ನು ಕುದಿಸಿತ್ತು. ತಕ್ಕ ಉತ್ತರ ಕೊಡಲು ವೀರಪಡೆ ಸನ್ನದ್ಧವಾಯ್ತು. ವಿಕ್ರಮ್ ಬಾತ್ರಾ ಮತ್ತು ಅವರ ಧೀರ ಸೈನಿಕರು ಬಂಕರ್‌ಗಳನ್ನ ಧ್ವಂಸ ಮಾಡುತ್ತಾ ಮುಂದೆ ನುಗ್ಗಿದರು. ಜೂನ್ 20, 1999. ಸಮಯ ಬೆಳಿಗ್ಗೆ 4:35. ಸೂರ್ಯನ ಮೊದಲ ಕಿರಣಗಳು ಶಿಖರದ ಮೇಲೆ ಬೀಳುವ ಹೊತ್ತಿಗೆ, ವಿಕ್ರಮ್ ಬಾತ್ರಾ ಆ ಎತ್ತರದ ತುದಿಯಲ್ಲಿ ನಿಂತಿದ್ದರು. ಕೈಯಲ್ಲಿ ರೇಡಿಯೋ ಸೆಟ್ ಹಿಡಿದು, ತಮ್ಮ ಕಮಾಂಡಿಂಗ್ ಆಫೀಸರ್‌ಗೆ ಐತಿಹಾಸಿಕ ಸಂದೇಶ ರವಾನಿಸಿದರು. “ಯೇ ದಿಲ್ ಮಾಂಗೆ ಮೋರ್!” ಆ ಧ್ವನಿಯಲ್ಲಿ ಗೆಲುವಿನ ಉನ್ಮಾದವಿತ್ತು. ದೇಶಭಕ್ತಿಯ ಕಾವಿತ್ತು. ವೀರಯೋಧನ ಕಂಠದಿಂದ ಹೊಮ್ಮಿದ ಜಾಹೀರಾತಿನ ಸಾಲು ರಾಷ್ಟ್ರೀಯ ಹೆಮ್ಮೆಯ ಘೋಷವಾಕ್ಯವನ್ನಾಗಿಸಿತ್ತು. ಆ ಮಾತೇ ಸೈನಿಕರಲ್ಲಿ ಆತ್ಮವಿಶ್ವಾಸ ತುಂಬಿತು. ದೇಶದ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿತು. ಅದಾಗಿ ಕೆಲವೇ ದಿನಗಳಲ್ಲಿ ಪಾಯಿಂಟ್ 4875ರ ಅಂತಿಮ ಹೋರಾಟಕ್ಕೆ ನಿಂತಿದ್ದ. ಪಾಯಿಂಟ್ 5140ರ ವಿಜಯದ ನಂತರ, ತೀವ್ರ ಜ್ವರ ಮತ್ತು ದಣಿವಿನಿಂದ ಬಳಲುತ್ತಿದ್ದರೂ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರಲ್ಲಿನ ದೇಶಪ್ರೇಮದ ಕಿಚ್ಚು ಮಾತ್ರ ಇಂದಿನಿತೂ ತಣ್ಣಗಾಗಿರಲಿಲ್ಲ. ನಾನು ಹೋಗಲೇಬೇಕು ಎಂದು ಪಟ್ಟುಹಿಡಿದು ನಿಂತವರು, ತಮ್ಮ 13 JAK RIF ತುಕಡಿಯೊಂದಿಗೆ ಆ ನಿರ್ಣಾಯಕ ಕಾರ್ಯಾಚರಣೆಗೆ ಅಣಿಯಾದರು. ಜುಲೈ 6 ಮತ್ತು 7ರ ಮಧ್ಯರಾತ್ರಿ. ಸುತ್ತಲೂ ಕತ್ತಲೆ ಕವಿದಿತ್ತು, ಮಂಜು ಆವರಿಸಿತ್ತು. ಶತ್ರುಗಳ ಫಿರಂಗಿಗಳ ದಾಳಿ ಬಿರುಸಾಗಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲೂ, ವಿಕ್ರಮ್ ಬಾತ್ರಾ ಮತ್ತು ಅವರ ತಂಡ ಎತ್ತರದ, ಹಿಮಾವೃತ ಬಂಡೆಗಳನ್ನು ಹತ್ತುತ್ತಿದ್ದರು. ಶತ್ರುಗಳು ‘ಏರಿಯಾ ಫ್ಲ್ಯಾಟ್ ಟಾಪ್’ ಎಂಬ ಎತ್ತರದ ಪ್ರದೇಶದಲ್ಲಿ ಭದ್ರವಾಗಿ ನೆಲೆಸಿದ್ದರು. ಬಾತ್ರಾ ಅವರಿಗೆ ಗೊತ್ತಿತ್ತು, ನೇರ ದಾಳಿ ಮಾಡಿದರೆ ಸಾವು ಖಚಿತ! ಅವರು ಚಾಣಾಕ್ಷತನದಿಂದ ಪಕ್ಕದ ದಾರಿಯಲ್ಲಿ ಹೋಗಿ ಶತ್ರುಗಳನ್ನು ಅಚ್ಚರಿಗೊಳಿಸಲು ನಿರ್ಧರಿಸಿದರು!! ಕತ್ತಲೆಯಲ್ಲಿ ಮಿಂಚಿನಂತೆ ನುಗ್ಗಿದ ಅವರು, ಶತ್ರುಗಳ ಮೆಷಿನ್ ಗನ್ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರು. ಮೊದಲ ಬಂಕರ್ ಬಳಿ ಮುಖಾಮುಖಿ ಕಾಳಗ ನಡೆಯಿತು. ಬಾತ್ರಾ ಏಕಾಂಗಿಯಾಗಿ ಐವರು ಶತ್ರು ಸೈನಿಕರನ್ನು ಸದೆಬಡಿದರು.. ಅವರ ಕಾಲಿಗೆ ಶೆಲ್‌ನ ತುಣುಕೊಂದು ಬಡಿದು ತೀವ್ರ ರಕ್ತಸ್ರಾವವಾಗುತ್ತಿದ್ದರೂ, ನೋವನ್ನು ಮೆಟ್ಟಿ ನಿಂತು ಮುಂದಿನ ಎರಡು ಬಂಕರ್‌ಗಳನ್ನು ಧ್ವಂಸ ಮಾಡಿದರು. ಜುಲೈ 7ರ ಮುಂಜಾನೆ. ನಸುಕಿನ ಬೆಳಕು ಹರಿಯುತ್ತಿದ್ದಂತೆಯೇ ಭಾರತೀಯ ಪಡೆಗಳು ಬಹುತೇಕ ಮೇಲುಗೈ ಸಾಧಿಸಿದ್ದವು. ಆದರೆ, ಅಡಗಿ ಕುಳಿತಿದ್ದ ಶತ್ರುಗಳ ಸ್ನೈಪರ್ ಮತ್ತು ಮೆಷಿನ್ ಗನ್ ಸೈನಿಕರು ಅಡೆತಡೆಯಾಗಿದ್ದರು. ಅಷ್ಟರಲ್ಲಿ, ಲೆಫ್ಟಿನೆಂಟ್ ಒಬ್ಬರಿಗೆ ಶೆಲ್ ದಾಳಿಯಿಂದ ಗಂಭೀರವಾಗಿ ಗಾಯವಾಗಿ ಕಂದಕವೊಂದರಲ್ಲಿ ಸಿಲುಕಿಕೊಂಡಿದ್ದು ಬಾತ್ರಾ ಕಣ್ಣಿಗೆ ಬಿತ್ತು. ಅವರನ್ನು ರಕ್ಷಿಸಲು ಒಬ್ಬ ಸುಬೇದಾರ್ ಮುಂದಾದಾಗ, ಬಾತ್ರಾ ಅವರನ್ನು ಹಿಂದಕ್ಕೆ ತಳ್ಳಿ, “ನೀನು ಮಕ್ಕಳಿರುವ ತಂದೆ, ಹಿಂದೆ ಹೋಗು. ನಾನು ಹೋಗುತ್ತೇನೆ” ಎಂದು ಘರ್ಜಿಸಿದರು. ಅದು ಆ ಮನುಷ್ಯನ ದೊಡ್ಡತನ!! ಗಾಯಾಳು ಅಧಿಕಾರಿಯನ್ನು ರಕ್ಷಿಸಲು ತೆರೆದ ಮೈದಾನಕ್ಕೆ ಬಂದು ಅವರನ್ನು ಎಳೆಯುತ್ತಿದ್ದಾಗ, ದುರ್ವಿಧಿಯ ಕೈವಾಡ, ಶತ್ರುಗಳ ಸ್ನೈಪರ್ ಗುರಿ ತಪ್ಪಲಿಲ್ಲ..! ಒಂದು ಗುಂಡು ನೇರವಾಗಿ ಬಾತ್ರಾ ಎದೆಗೆ ಬಡಿಯಿತು, ಅದೇ ಹೊತ್ತಿಗೆ RPG ಚೂರುಗಳು ಅವರ ದೇಹವನ್ನು ಸೀಳಿದವು. ಆ ವೀರ ಪುರುಷ ಮಣ್ಣಿಗೆ ಕುಸಿಯುತ್ತಿದ್ದಾಗಲೂ ಅವರ ಬಾಯಲ್ಲಿ ಬಂದ ಮಾತುಗಳು ದೇಶದ ಸೈನಿಕರಿಗೆ ಅಗ್ನಿದೀಕ್ಷೆಯ ಮಂತ್ರಗಳಾದವು.. ತಮ್ಮ ಅಂತಿಮ ಉಸಿರಿನಲ್ಲೂ “ಮುಂದಕ್ಕೆ ಹೋಗಿ, ಬಿಡಬೇಡಿ” ಎಂದು ಹುರಿದುಂಬಿಸಿದರು. ನಾಯಕನನ್ನು ಕಳೆದುಕೊಂಡ ಸಿಟ್ಟಿನಲ್ಲಿ 13 ಜೆಎಕೆ ಆರ್‌ಐಎಫ್ ಪಡೆ ರಣಚಂಡಿಯಂತೆ ಅಬ್ಬರಿಸಿತು. ಪಾಕಿಸ್ತಾನಿ ಸೈನ್ಯದ ಅಸ್ತಿತ್ವವನ್ನೇ ಅಳಿಸಿ ಹಾಕಿದರು. ಸೂರ್ಯ ಉದಯಿಸಿದಾಗ, ಪಾಯಿಂಟ್ 4875ರ ಮೇಲೆ ಭಾರತದ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಾಡುತ್ತಿತ್ತು. ಆ ಶಿಖರವನ್ನು ಇಂದಿಗೂ ‘ಬಾತ್ರಾ ಟಾಪ್’ ಎಂದೇ ಕರೆಯಲಾಗುತ್ತದೆ. ಒಬ್ಬ ಯೋಧನ ಬಲಿದಾನ ಆ ನೆಲವನ್ನು ಅಮರವಾಗಿಸಿತು, ಆದರೆ ಆ ರಾತ್ರಿಯ ಕತ್ತಲೆಯಲ್ಲಿ ನಡೆದ ಆ ಮಹಾತ್ಯಾಗದ ನೆನಪು ಇಂದಿಗೂ ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ಶಾಶ್ವತ.. ಶೇರ್ ಷಾ… ಅಮರ್ ರಹೇ… ಜೈ ಹಿಂದ್ ಲೇಖನ: ನಾಗಾರ್ಜುನ್ ದಿಕ್ಷಿತ್ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ವೀರ ಸಾವರ್ಕರ್ ಸ್ಮರಣ ಸಂಚಿಕೆ 4: ಮುದ್ರಣಕ್ಕೂ ಮುನ್ನ ಬ್ಯಾನ್ ಆಗಿದ್ದ ಸಾವರ್ಕರ್ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಸ್ವಾತಂತ್ರ್ಯ ಲಕ್ಷ್ಮೀ ಕಿ ಜೈ ಎನ್ನುತ್ತ ಸಮುದ್ರಕ್ಕೆ ಹಾರಿದ ವೀರ: ರಕ್ತದ ಮಡುವಿನಲ್ಲೂ 7 ಕಿಮೀ ಈಜಿದ ಸಾವರ್ಕರ್