Vedavyasa Student Sage Vaishampayana Maharshi Story in Kannadaಸಾಂದರ್ಭಿಕ ಚಿತ್ರ

ಹಿಂದೆ ವೇದವು ಒಂದೇ ಆಗಿತ್ತು. ಅದು ಬಹಳ ವಿಸ್ತಾರವಾಗಿದ್ದು ಶಿಷ್ಯರಿಗೆ ಅಷ್ಟನ್ನೂ ಕಲಿಯಲು ಕಷ್ಟಕರವಾಗಿತ್ತು. ದ್ವಾಪರಯುಗದಲ್ಲಿ ಕೃಷ್ಣದೈಪಾಯನರು ಈ ಅನಂತವೇದವನ್ನು ಒಂದು ಕ್ರಮದಲ್ಲಿ ವಿಭಜನೆ ಮಾಡಿದರು. ಪ್ರಾರ್ಥನಾಭಾಗವನ್ನು ಋಕ್ಕುಗಳೆಂದೂ, ಯಜ್ಞಭಾಗವನ್ನು ಯಜುರ್ವೇದವೆಂದೂ, ಸ್ತೋತ್ರಗಳನ್ನು ಸಾಮವೆಂದೂ ಉಳಿದ ಭಾಗವನ್ನು ಅಥರ್ವವೆಂದೂ ವಿಭಾಗಿಸಿದರು. ಅವುಗಳಲ್ಲಿ ಋಗ್ವೇದವನ್ನು ಪೈಲನೆಂಬ ಶಿಷ್ಯನಿಗೂ, ಯಜುರ್ವೇದವನ್ನು ವೈಶಂಪಾಯನನಿಗೂ ಜೈಮಿನಿಗೆ ಸಾಮವೇದವನ್ನೂ ಮತ್ತು ಸುಮಂತುವೆಂಬ ಶಿಷ್ಯನಿಗೆ ಅಥರ್ವವೇದವನ್ನೂ ಉಪದೇಶಿದರು.

ಹೀಗೆ ಯಜುರ್ವೇದವೆಂಬ ವಿಸ್ತಾರವಾದ ಮಂತ್ರ-ಬ್ರಾಹ್ಮಣ ಸಮೇತವಾದ ವೇದಭಾಗವನ್ನು ಸಾಕ್ಷಾತ್ ವ್ಯಾಸರಿಂದಲೇ ಅಧ್ಯಯನ ಮಾಡಿದವರು ವೈಶಂಪಾಯನರು. ಧನುರ್ವೇದವನ್ನು ಉಪವೇದವನ್ನಾಗಿಯೂ ರುದ್ರನನ್ನು ಅಧಿದೈವತವಾಗಿಯೂ ಉಳ್ಳ ಯಜುರ್ವೇದವು ವೈಶಂಪಾಯನರಿಂದ ಮುಂದೆ ಗುರುಶಿಷ್ಯಕ್ರಮದಲ್ಲಿ ಅಭಿವೃದ್ಧಿ ಹೊಂದಿತು. ಅವರಿಗೆ ಚರಕರೆಂದೂ ಅಧ್ವರ್ಯುಗಳೆಂದೂ ಎರಡು ಶಿಷ್ಯವರ್ಗವಿತ್ತು. ಈ ವಿಷಯವು ವಿಷ್ಣುಪುರಾಣವೇ ಮುಂತಾದ ಅನೇಕ ಪುರಾಣಗಳಲ್ಲಿ ಉಕ್ತವಾಗಿದೆ. ವ್ಯಾಸರ ಉಳಿದ ಮೂವರು ಶಿಷ್ಯರಿಗಿಂತಲೂ ವೈಶಂಪಾಯನರೇ ಹೆಚ್ಚು ಪ್ರಸಿದ್ಧರು.

ಯಾಜ್ಞವಲ್ಕರು ಶುಕ್ಲಯಜುರ್ವೇದವನ್ನು ದರ್ಶಿಸಿದುದರಲ್ಲಿಯೂ ವೈಶಂಪಾಯನರ ಪಾತ್ರ ತುಂಬ ಪ್ರಮುಖವಾದುದು. ಯಾಜ್ಞವಲ್ಕರು ವೈಶಂಪಾಯನರ ಶಿಷ್ಯರು. ವೈಶಂಪಾಯನರ ಗುರುಕುಲದಲ್ಲಿ ಯಜುರ್ವೇದವನ್ನು ಅಭ್ಯಾಸ ಮಾಡಿದವರು. ವೈಶಂಪಾಯನರು ಆ ಕಾಲಕ್ಕೆ ಸಾಕಷ್ಟು ದೊಡ್ಡದಾದ ಗುರುಕುಲವನ್ನು ನಡೆಸುತ್ತಿದ್ದರು.

ಅಲ್ಲಿ ನೂರಾರುಜನ ವಿದ್ಯಾಭ್ಯಾಸ ಮಾಡುತ್ತಿದ್ದರು. ಗುರುಗಳು ಎಲ್ಲರನ್ನೂ ತಮ್ಮ ಸ್ವಂತ ಮಕ್ಕಳಂತೆ ಕಾಣುತ್ತಿದ್ದರು. ಯಾಜ್ಞವಲ್ಕರಿಂದ ವಿಶಿಷ್ಟ ಕಾರ್ಯವೊಂದು ನಡೆಯಬೇಕೆಂಬ ಅಂಶ ಅವರಿಗೆ ಗೊತ್ತಿತ್ತು. ಆದ್ದರಿಂದಲೇ ಮೊದಲು ಕ್ರಮವಾಗಿ ಯಜುರ್ವೇದವನ್ನು ಅವರಿಗೆ ಅಭ್ಯಾಸ ಮಾಡಿಸಿದರು.

ಅಂದಿನ ಕಾಲದಲ್ಲಿ ಯಜುರ್ವೇದದಲ್ಲಿ ಕೃಷ್ಣ-ಶುಕ್ಲಗಳೆಂಬ ಭೇದವೇನೂ ಇರಲಿಲ್ಲ. ಋಗೈದವು ಪೂರ್ಣ ಛಂದೋರೂಪದಲ್ಲಿದ್ದರೆ ಯಜುರ್ವೇದದಲ್ಲಿ ಮಂತ್ರಪ್ರಯೋಗಸಂಬಂಧವಾಗಿ ಅನೇಕ ಅಡಚಣೆಗಳಿದ್ದವು. ಅವುಗಳನ್ನು ಸರಿಪಡಿಸಲು ವೈಶಂಪಾಯನರಿಗೆ ಸರಿಯಾದ ಶಿಷ್ಯನೊಬ್ಬನ ಅಗತ್ಯವಿತ್ತು. ಅಂತಹ ಪ್ರತಿಭೆಯನ್ನು ಯಾಜ್ಞವಲ್ಕರಲ್ಲಿ ಗುರುತಿಸಿದ ಕೀರ್ತಿ ವೈಶಂಪಾಯನರಿಗೆ ಸೇರಬೇಕು. ಶಿಷ್ಯನಿಗೆ ಬೇಕಾಗಿದ್ದುದನ್ನು ಕಲಿಸಿ, ಮುಂದೆ ಅವನು ಸ್ವತಂತ್ರವಾಗಿ ಯೋಚಿಸಿ ವೇದಭಾಗವನ್ನು ದರ್ಶಿಸಲು ಅನುಕೂಲವಾಗುವಂತೆ ಭೂಮಿಕೆಯನ್ನು ಅವರು ಸಿದ್ಧಪಡಿಸಿದರು.

ಒಮ್ಮೆ ಕುಲಪತಿಗಳೆಲ್ಲರ ಸಭೆಯೊಂದು ಹಿಮಾಲಯದಲ್ಲಿ ಏರ್ಪಾಡಾಗಿತ್ತು. ಅದಕ್ಕೆ ಎಲ್ಲರೂ ಬರಲೇಬೇಕೆಂದೂ, ಬಾರದೆ ಇದ್ದವರಿಗೆ ಬ್ರಹ್ಮಹತ್ಯಾದೋಷ ಪ್ರಾಪ್ತವಾಗುವುದೆಂದೂ ತೀರ್ಮಾನಿಸಲಾಗಿತ್ತು. ಅಂದು ವೈಶಂಪಾಯನರ ತಂದೆಯ ಶ್ರಾದ್ಧವಿದ್ದುದರಿಂದ ಅವರಿಗೆ ಸಭೆಗೆ ಹೋಗಲು ಆಗಲಿಲ್ಲ. ಅದರಿಂದಾಗಿ ಅವರಿಗೆ ಬ್ರಹ್ಮಹತ್ಯಾದೋಷವು ಪ್ರಾಪ್ತವಾಯಿತು. ಉದ್ದೇಶಪೂರ್ವಕವಾಗಿ ಮಾಡಿದ ಅಥವಾ ನಿಜವಾದ ಬ್ರಹ್ಮ ಹತ್ಯೆಯಲ್ಲದ ಕಾರಣ ಆ ದೋಷವನ್ನು ಪ್ರಾಯಶ್ಚಿತ್ತದಿಂದ ಪರಿಹರಿಸಿಕೊಳ್ಳಲು ಸಾಧ್ಯವಿತ್ತು.

ಆದರೆ ವೈಶಂಪಾಯನರು ವೃದ್ಧರಾಗಿದ್ದರು. ಪ್ರಾಯಶ್ಚಿತ್ತವ್ರತಗಳು ಬಹಳ ಶ್ರಮಸಾಧ್ಯವಾದವು. ಅಷ್ಟು ಶ್ರಮವನ್ನು ತಾವು ತಡೆದುಕೊಳ್ಳಲು ಅಸಮರ್ಥರೆಂದು ಅವರು ಭಾವಿಸಿದರು. ಪ್ರಾಯಶ್ಚಿತ್ತವನ್ನು ಶಿಷ್ಯರ ಮೂಲಕ ಮಾಡಿಸಿ ತಮ್ಮ ಪಾಪವನ್ನು ಕಳೆದುಕೊಳ್ಳಲು ಅವರು ನಿಶ್ಚಯಿಸಿದರು.

ಅದಕ್ಕಾಗಿ ಸಮರ್ಥರಾದ ಶಿಷ್ಯರನ್ನೆಲ್ಲ ಒಂದುಗೂಡಿಸಿ ಎಲ್ಲರೂ ಸೇರಿ ವ್ರತಾಚರಣೆಗಳನ್ನು ನಡೆಸಿ ತಮ್ಮನ್ನು ಪಾಪವಿಮುಕ್ತರನ್ನಾಗಿ ಮಾಡಬೇಕೆಂದು ಹೇಳಿದರು. ಅವರಲ್ಲಿ ಒಬ್ಬನಾದ ಶಿಷ್ಯ ಯಾಜ್ಞವಲ್ಯನು ತಾನೊಬ್ಬನೇ ಪ್ರಾಯಶ್ಚಿತ್ತವಿಧಾನವನ್ನು ನೆರವೇರಿಸಿ, ಗುರುಗಳನ್ನು ಪಾಪದಿಂದ ವಿಮುಕ್ತರನ್ನಾಗಿಸಲು ಸಮರ್ಥನೆಂದು ಹೇಳಿದನು.

ಅವನ ಅಹಂಕಾರವಚನವನ್ನು ಕೇಳಿ ಕ್ರುದ್ಧರಾದ ವೈಶಂಪಾಯನರು ಅವನನ್ನು ತಮ್ಮ ಶಿಷ್ಯನನ್ನಾಗಿ ಉಳಿಸಿಕೊಳ್ಳಲು ಇಷ್ಟಪಡದೆ ಅಲ್ಲಿಂದ ಹೊರಟುಹೋಗಲು ಅವನಿಗೆ ಹೇಳಿದರು. ಜೊತೆಗೆ ತಾವು ಅದುವರೆಗೆ ಕಲಿಸಿದ ವೇದಭಾಗವನ್ನು ಬಿಟ್ಟುಹೋಗಲು ತಿಳಿಸಿದರು.

ಅದರಂತೆ ಯಾಜ್ಞವಲ್ಕರು ಅದುವರೆಗೆ ಪ್ರಸಿದ್ಧವಾಗಿದ್ದ ಕೃಷ್ಣಯಜುರ್ವೇದವನ್ನು ಬಿಟ್ಟುಕೊಟ್ಟರು. ಸೂರ್ಯನನ್ನು ಆರಾಧಿಸಿ, ಅವನ ಕೃಪೆಯಿಂದ ಶುಕ್ಲಯಜುರ್ವೇದವನ್ನು ಪಡೆದುಕೊಂಡರು. ಹೀಗೆ ವೈಶಂಪಾಯನರ ಕಾರಣದಿಂದ ಯಾಜ್ಞವಲ್ಲರು ನೂತನ ವೇದಶಾಖೆಯನ್ನು ದರ್ಶಿಸುವಂತೆ ಆಯಿತು. ವೇದಸಾಹಿತ್ಯ ಸಮೃದ್ಧವಾಯಿತು.

ವೈಶಂಪಾಯನರಿಗೆ ಬ್ರಹ್ಮಹತ್ಯಾದೋಷ ಪ್ರಾಪ್ತವಾದುದನ್ನೂ ಮತ್ತು ಯಾಜ್ಞವಲ್ಕರು ಅಲ್ಲಿಂದ ಹೊರಟ ಕಾರಣವನ್ನೂ ಕುರಿತು ಅನೇಕ ಕಥಾಭೇದಗಳಿವೆ. ಆದರೆ ವೈಶಂಪಾಯನರು ಕೃಷ್ಣಯಜುರ್ವೇದವನ್ನು ಬಹಳ ಕಾಲ ಅಧ್ಯಯನ, ಅಧ್ಯಾಪನ ಮಾಡಿ ಅದರ ಲೋಪದೋಷಗಳನ್ನು ಮನಗಂಡಿದ್ದರು.

ಅವುಗಳಿಗೆ ಸರಿಯಾದ ಪ್ರತಿಕ್ರಿಯೆಗಳನ್ನು ಕೈಗೊಳ್ಳಲು ಯಾಜ್ಞವಲ್ಕರಿಗೆ ಅವರು ವೇದಿಕೆಯನ್ನು ಸಿದ್ದಗೊಳಿಸಿದರು. ಮುಂದೆ ಯಾಜ್ಞವಲ್ಯರು ಕರ್ಮ ಮತ್ತು ಜ್ಞಾನಕಾಂಡಗಳೆರಡರಲ್ಲಿಯ ಅದ್ವಿತೀಯ ಸ್ಥಾನಗಳಿಸಿದುದು ಗುರುಗಳಾದ ವೈಶಂಪಾಯನರಿಗೆ ಸೇರಬೇಕಾದ ಗೌರವವಾಗಿದೆ.

ಮಹಾಭಾರತವು ವ್ಯಾಸರಿಂದ ರಚಿತವಾದ ಒಂದು ಅನರ್ಥ್ಯ ರತ್ನಸಮಾನ ಕೃತಿ. ಈ ಕೃತಿಯನ್ನು ಮೊದಲು ವಾಚನಮಾಡೊದವರು ವೈಶಂಪಾಯನರು. ಜನಮೇಜಯನು ಸರ್ಪಯಾಗವನ್ನು ಮಾಡುವ ವೃತ್ತಾಂತ ತಿಳಿದು ಮಹಾಪ್ರಾಜ್ಞರಾದ ವೇದವ್ಯಾಸರು ಶಿಷ್ಯರಸಮೇತವಾಗಿ ಹಸ್ತಿನಾವತಿಗೆ ಆಗಮಿಸಿದರು.

ವ್ಯಾಸರನ್ನು ಕಂಡಕೂಡಲೇ ಜನಮೇಜಯನು ಆದರದಿಂದ ಅವರನ್ನು ಸ್ವಾಗತಿಸಿದನು. ತಮ್ಮ ಮುತ್ತಾತಂದಿರ ಚರಿತ್ರೆಯಾದ ಮಹಾಭಾರತವನ್ನು ಆಮೂಲಾಗ್ರವಾಗಿ ವ್ಯಾಸರಿಂದಲೇ ಕೇಳಲು ಜನಮೇಜಯನು ಇಷ್ಟಪಟ್ಟು, ಎಲ್ಲ ವೃತ್ತಾಂತವನ್ನೂ ಸಂಪೂರ್ಣ ವಿವರಗಳೊಡನೆ ತಿಳಿಸಬೇಕೆಂದು ವ್ಯಾಸರನ್ನು ಪ್ರಾರ್ಥಿಸಿದನು.

ಜನಮೇಜಯನ ಆಕಾಂಕ್ಷೆಯನ್ನು ಮನ್ನಿಸಿ, ತಮ್ಮ ಸಮೀಪದಲ್ಲಿಯೇ ಇದ್ದ ವೈಶಂಪಾಯನರಿಗೆ “ಎಲೈ ಶಿಷೋತ್ತಮ! ಮಹಾಭಾರತದ ಕಥೆಯನ್ನು ನೀನು ನನ್ನಿಂದ ಸಂಪೂರ್ಣವಾಗಿ ಕೇಳಿ ತಿಳಿದಿರುತ್ತಿ. ಈಗ ಅದೇ ಕಥೆಯನ್ನು ಬಹಳ ಪ್ರೀತಿಯಿಂದ ಕೇಳುತ್ತಿರುವ ಜನಮೇಜಯನಿಗೆ ಹೇಳು” ಎಂದು ಅಪ್ಪಣೆ ಮಾಡಿದರು.

ವ್ಯಾಸರು ಭಾಗವತವನ್ನು ತಮ್ಮ ಪುತ್ರರಾದ ಶುಕಮಹರ್ಷಿಗಳಿಗೆ ಉಪದೇಶಿಸಿದ್ದಂತೆ, ಮಹಾಭಾರತವನ್ನು ತಮ್ಮ ಪ್ರಿಯಶಿಷ್ಯನಾದ ವೈಶಂಪಾಯನರಿಗೆ ಪಾಠಮಾಡಿಸಿದ್ದರು ಇದರಿಂದ ತಿಳಿದುಬರುತ್ತದೆ.

ವೈಶಂಪಾಯನರು ಅದನ್ನು ಆಮೂಲಾಗ್ರವಾಗಿ ಮನಸ್ಸಿನಲ್ಲಿ ಧಾರಣೆ ಮಾಡಿಕೊಂಡಿದ್ದರು. ಈಗ ಗುರುಗಳ ನಿರ್ದೇಶದಂತೆ ತಮ್ಮ ಗುರುಗಳನ್ನು ಮನಸ್ಸಿನಲ್ಲಿ ಸ್ಮರಿಸಿ, ಮನಸ್ಸು ಬುದ್ದಿಗಳನ್ನು ಏಕೀಕರಿಸಿ, ಮಹಾತ್ಮರಾದ ವ್ಯಾಸರ ವಾಣಿಯನ್ನು ಎಲ್ಲರಿಗೂ ಶ್ರುತಪಡಿಸಿದರು. ಅವರು ಈ ಕಥೆಯನ್ನು ಉತ್ಸಾಹದಿಂದ ಎಲ್ಲರಿಗೂ ಹೇಳಲು ತವಕಿಸುತ್ತಿದ್ದರೆಂದು ಮಹಾಭಾರತದಲ್ಲಿಯೇ ಹೇಳಿದೆ. ಗುರುಗಳು ತಮ್ಮಲ್ಲಿ ಇಟ್ಟಿದ್ದ ವಿಶ್ವಾಸವನ್ನು ಅವರು ಸಾರ್ಥಕಗೊಳಿಸಿ ಭಾರತವನ್ನು ಜಗತ್ತಿನಲ್ಲಿ ಪ್ರಚುರಪಡಿಸಿದರು.

ವೈಶಂಪಾಯನರು ಮೊದಲು ಭಾರತದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ಅನಂತರ ಜನಮೇಜಯನ ಅಪೇಕ್ಷೆಯಂತೆ ಎಲ್ಲವನ್ನೂ ವಿಸ್ತಾರವಾಗಿ ನಿರೂಪಿಸಿದರು. ಮಧ್ಯೆಮಧ್ಯೆ ಜನಮೇಜಯನು ಕೇಳುತ್ತಿದ್ದ ಪ್ರಶ್ನೆಗಳಿಗೆಲ್ಲ ಸೂಕ್ತ ಸಮಾಧಾನವನ್ನು ಹೇಳುತ್ತಿದ್ದರು.

ಮೊದಲು ಮಹಾಭಾರತದ ಮಹಿಮೆಯನ್ನು ವಿಸ್ತರಿಸಿ ಆನಂತರ ಕಥಾಪ್ರವಚನಕ್ಕಾಗಿಯೇ ಒಂದು ಕಾಲವನ್ನು ನಿಯಮನ ಮಾಡಿಕೊಂಡು, ಕೃಷ್ಣ ಪಾಯನರು ಹೇಳಿರುವಂತೆಯೇ ಅದನ್ನು ಪ್ರವಚನಮಾಡಿದರು. ಕೊನೆಯಲ್ಲಿ ಮಹಾಭಾರತದ ಮಹಿಮೆ, ಅದನ್ನು ಶ್ರವಣಮಾಡಲು ಅನುಸರಿಸಬೇಕಾದ ನಿಯಮಗಳು, ಅದರ ಶ್ರವಣದಿಂದ ಪ್ರಾಪ್ತವಾಗುವ ಫಲ ಎಲ್ಲವನ್ನೂ ತಿಳಿಸಿರುತ್ತಾರೆ. ಹೀಗೆ ವೈಶಂಪಾಯನರು ತಮ್ಮ ಗುರುಗಳಾದ ವ್ಯಾಸರಿಗೆ ತಕ್ಕ ಶಿಷ್ಯರೆನಿಸಿ ಅವರ ಮತವನ್ನು ಲೋಕವಿಶ್ರುತವನ್ನಾಗಿ ಮಾಡಿದರು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *