Uttanka Maharishi and Krishna story after mahabhartಸಾಂದರ್ಭಿಕ ಚಿತ್ರ

ಉತ್ತಂಕರು ಕುಲಪತಿಗಳಾದ ಗೌತಮರ ಬಳಿಯಲ್ಲಿ ಅಧ್ಯಯನ ಮಾಡುತ್ತಿದ್ದರು. ಅವರು ಮಹಾತಪಸ್ವಿಯೂ ತೇಜಸ್ವಿಯೂ ಆಗಿದ್ದರು. ಅವನ ಗುರುಭಕ್ತಿಯೂ ಅಪ್ರತಿಮವಾಗಿದ್ದಿತು. ಅವರು ಗುರುವನ್ನಲ್ಲದೆ ಬೇರೆ ಯಾವ ದೇವರನ್ನೂ ಆರಾಧಿಸುತ್ತಿರಲಿಲ್ಲ.

ಉಳಿದ ಶಿಷ್ಯರೆಲ್ಲರೂ ಅವರ ಗುರುಭಕ್ತಿಯನ್ನು ಕಂಡು ಆಶ್ಚರ್ಯಪಡುತ್ತಿದ್ದರು. ಗುರುಗಳಾದ ಗೌತಮರೂ ಉತ್ತಂಕನಲ್ಲಿ ವಿಶೇಷವಾದ ಅಭಿಮಾನವನ್ನು ಇಟ್ಟಿದ್ದು, ಉತ್ತಂಕರ ಇಂದ್ರಿಯಸಂಯಮ, ಅಂತಃಶುದ್ಧಿ, ಶ್ರದ್ಧೆಗಳನ್ನು ಕಂಡು ಅವರು ಬಹಳ ಪ್ರೀತರಾಗಿದ್ದರು. ವಿದ್ಯಾಭ್ಯಾಸ ಮುಗಿಸಿ ಅನೇಕ ಶಿಷ್ಯರು ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರೂ ಗೌತಮರು ಉತ್ತಂಕರಿಗೆ ಮಾತ್ರ ಮನೆಗೆ ತೆರಳಲು ಅನುಮತಿಯನ್ನು ಕೊಡಲಿಲ್ಲ. ಉತ್ತಂಕನನ್ನು ಬಿಟ್ಟುಕೊಡಲು ಅವರಿಗೆ ಇಷ್ಟವಿರಲಿಲ್ಲ.

ಹೀಗೆಯೇ ಅನೇಕ ವರ್ಷಗಳು ಕಳೆದುಹೋದವು. ಉತ್ತಂಕನನ್ನು ಮುಪ್ಪು ಆವರಿಸತೊಡಗಿತು. ಆದರೆ ಗುರುಸೇವೆಯಲ್ಲಿಯೇ ಮಗ್ನನಾಗಿದ್ದ ಅವನಿಗೆ ತನಗೆ ವಯಸ್ಸಾದ ಬಗ್ಗೆಯೂ ಯೋಚನೆಯಿರಲಿಲ್ಲ.

ಒಮ್ಮೆ ಅವನು ಕಟ್ಟಿಗೆಯನ್ನು ತರಲು ಕಾಡಿಗೆ ಹೋಗಿದ್ದನು. ಅಲ್ಲಿ ಅವರು ಸಂಗ್ರಹಿಸಿದ ಕಟ್ಟಿಗೆಯ ಹೊರೆಯು ಬಹಳ ಭಾರವಾಯಿತು. ಆದರೂ ಅದನ್ನು ಹೊತ್ತುಕೊಂಡು ಆಶ್ರಮದ ಕಡೆಗೆ ಹೊರಟರು. ಆದರೆ ವಯಸ್ಸಿನ ಕಾರಣದಿಂದ ಅವರಿಗೆ ಅಷ್ಟು ಭಾರವನ್ನು ಹೊತ್ತು ನಡೆಯಲು ಆಗಲೇ ಇಲ್ಲ. ಸೌದೆಯ ಹೊರೆಯನ್ನು ಮೈಮೇಲೆ ಕೆಡವಿಕೊಂಡು ಅವರು ನೆಲದ ಮೇಲೆ ಬಿದ್ದುಬಿಟ್ಟರು.

ಅವರ ಜಟೆಯ ಕೂದಲೂ ಸೌದೆ ಹೊರೆಯ ಮಧ್ಯೆ ಸಿಲುಕಿಕೊಂಡಿತ್ತು. ಅವರು ನೋವಿನಿಂದ ಜೋರಾಗಿ ಅಳತೊಡಗಿದನು. ಆ ಸಮಯದಲ್ಲಿ ಅಲ್ಲಿಗೆ ಗುರುಗಳು ಪುತ್ರೀಸಮೇತರಾಗಿ ಬಂದರು. ಗುರುಗಳು ಉತ್ತಂಕರ ಕಣ್ಣೀರನ್ನು ಕೈಗಳಲ್ಲಿ ಹಿಡಿಯುವಂತೆ ಮಗಳಿಗೆ ಹೇಳಿದರು. ಗೌತಮರ ಪುತ್ರಿಯು ಅದರಂತೆ ಉತ್ತಂಕರ ಕಣ್ಣೀರಿಗೆ ಬೊಗಸೆಯನ್ನು ಒಡ್ಡಿದಳು. ಕೂಡಲೇ ಅವಳ ಕೈಗಳು ಸುಟ್ಟು ಕಣ್ಣೀರು ಕೆಳಗೆ ಬಿದ್ದಿತು. ಕೆಳಗೆ ಬಿದ್ದ ಅಶ್ರುಬಿಂದುಗಳನ್ನು ಧರಿಸಲು ಭೂದೇವಿಗೂ ಸಾಧ್ಯವಾಗಲಿಲ್ಲ.

ಆಗ ಗೌತಮರು ಉತ್ತಂಕರನ್ನು ಅವರ ಶೋಕದ ಕಾರಣವನ್ನು ಕೇಳಿದರು. ಆಗ ಉತ್ತಂಕರು “ಗುರುದೇವನೇ! ನಾನು ನಿಮ್ಮ ಸೇವೆಯಲ್ಲಿಯೇ ನನ್ನ ಜೀವನವನ್ನು ಕಳೆದೆ. ನನ್ನ ಮನಸ್ಸಿನಲ್ಲಿ ಬೇರೆ ಭಾವನೆಗಳೇ ಇಲ್ಲದುದರಿಂದ ನೂರು ವರ್ಷಗಳನ್ನು ಇಲ್ಲಿ ಕಳೆದುದಾಗಲೀ ನನ್ನನ್ನು ಮುಪ್ಪು ಆವರಿಸಿದುದಾಗಲೀ ನನಗೆ ತಿಳಿಯಲೇ ಇಲ್ಲ. ನನ್ನ ನಂತರ ಬಂದ ಸಾವಿರಾರು ಶಿಷ್ಯರು ತಮ್ಮ ಅನುಜ್ಞೆಯನ್ನು ಪಡೆದು ಊರಿಗೆ ಹಿಂತಿರುಗಿದರೂ ತಾವು ನನಗೆ ಅಪ್ಪಣೆಯನ್ನೇ ಕೊಡಲಿಲ್ಲ” ಎಂದರು.

ಗೌತಮರು, “ಮಗು! ಅನವರತ ನೀನು ಮಾಡುತ್ತಿರುವ ಸೇವೆಯಿಂದ ನನಗೆ ಅತ್ಯಂತ ಪ್ರೀತಿಯುಕ್ತನಾಗಿದ್ದ ನಿನ್ನನ್ನು ಅಗಲಲು ಮನಸ್ಸು ಬರಲೇ ಇಲ್ಲ. ಈಗ ನಿನಗೆ ನಿನ್ನ ಊರಿಗೆ ಹೋಗುವ ಶ್ರದ್ದೆಯಿದ್ದರೆ ನೀನು ಹೋಗಬಹುದು” ಎಂದು ಹೇಳಿದರು. ಆಗ ಉತ್ತಂಕರು ತಾನು ಗುರುದಕ್ಷಿಣೆಯನ್ನು ಕೊಟ್ಟು ಅಲ್ಲಿಂದ ಹೋಗಲು ಬಯಸುವುದಾಗಿ ಹೇಳಿದರು.

ಗೌತಮರು ‘ಶುಶೂಷೆಯಿಂದ ಗುರುಗಳನ್ನು ತೃಪ್ತಿಗೊಳಿಸುವುದೇ ಪರಮೋತ್ಕೃಷ್ಟ ಗುರುದಕ್ಷಿಣೆಯೆಂದೂ ಅದು ತನಗೆ ಸಂದಿದೆಯೆಂದೂ’ ಹೇಳಿ ಉತ್ತಂಕರಿಗೆ ಮತ್ತೆ ಹದಿನಾರರ ಯೌವನವನ್ನು ಕರುಣಿಸಿ ತಮ್ಮ ಮಗಳನ್ನೇ ವಿವಾಹಮಾಡಿಕೊಟ್ಟರು.

ಶ್ರೀಕೃಷ್ಣನು ಕುರುಕ್ಷೇತ್ರ ಯುದ್ಧದ ತರುವಾಯ ಪಾಂಡವರಿಂದ ಬೀಳ್ಕೊಂಡು ದ್ವಾರಕೆಗೆ ಪ್ರಯಾಣ ಮಾಡುತ್ತಿದ್ದನು. ದಾರಿಯಲ್ಲಿ ಉತ್ತಂಕ ಮಹಾಮುನಿಯನ್ನು ಅವನು ಕಂಡನು. ಶ್ರೀಕೃಷ್ಣನು ಉತ್ತಂಕರನ್ನು ಯಥೋಚಿತವಾಗಿ ಪೂಜಿಸಿದನು. ಕುಶಲಪ್ರಶ್ನೆಗಳಾದ ನಂತರ ಉತ್ತಂಕರು ಶ್ರೀಕೃಷ್ಣನು ಹಸ್ತಿನಾವತಿಯಿಂದ ಹಿಂದಿರುಗುತ್ತಿರುವನೆಂದು ತಿಳಿದು, ಪಾಂಡವ-ಕೌರವರ ಯೋಗಕ್ಷೇಮವನ್ನು ವಿಚಾರಿಸಿದನು. ಅವನಿಗೆ ಯುದ್ಧದ ವಿಷಯವು ತಿಳಿದಿರಲಿಲ್ಲ.

ಶ್ರೀಕೃಷ್ಣನು, ಹಿಂದೆ ಸಂಧಿಗಾಗಿ ಹೋಗಿದ್ದ ವಿಷಯ ಮಾತ್ರ ಗೊತ್ತಿತ್ತು. ಹಾಗಾಗಿ ಶ್ರೀಕೃಷ್ಣನು ಸಂಧಾನವನ್ನು ಯಶಸ್ವಿಯಾಗಿ ನೆರವೇರಿಸಿರುವನೆಂದು ಅವರು ಭಾವಿಸಿದ್ದರು. ಆದರೆ ಕೃಷ್ಣನು ಸಂಧಿಯ ಪ್ರಯತ್ನ ಮುರಿದುಬಿತ್ತೆಂದೂ ಯುದ್ಧವು ಅನಿವಾರ್ಯವಾಯಿತೆಂದೂ ಹೇಳಿ, ಯುದ್ಧದಲ್ಲಿ ಕೌರವರೆಲ್ಲರೂ ನಾಶವಾದರೆಂಬ ವಾರ್ತೆಯನ್ನು ಉತ್ತಂಕನಿಗೆ ತಿಳಿಸಿದರು.

ಭೀಷ್ಮವಿದುರಾದಿಗಳ ಉಪದೇಶವೂ ವ್ಯರ್ಥವಾಯಿತೆಂದೂ, ವಿಧಿನಿಯಮವನ್ನು ಉಲ್ಲಂಘಿಸಲು ಯಾರಿಗೂ ಸಾಧ್ಯವಿಲ್ಲವೆಂದೂ ಅವರು ಹೇಳುತ್ತ ಪಾಂಡವರೂ ಮಿತ್ರರು-ಪುತ್ರರನ್ನೆಲ್ಲ ಕಳೆದುಕೊಳ್ಳಬೇಕಾಯಿತೆಂದು ಹೇಳಿದನು. ಕೃಷ್ಣನು ಹೀಗೆ ಹೇಳುತ್ತಲೂ ಉತ್ತಂಕನಿಗೆ ಬಹಳ ಕೋಪಬಂದಿತು. ಕೃಷ್ಣನು ಶಕ್ತನಾಗಿದ್ದರೂ ಸಂಬಂಧಿಗಳನ್ನೇ ಉಪೇಕ್ಷಿಸಿದನೆಂದು ಅವನು ಭಾವಿಸಿದರು.

ಅವನು ಕೃಷ್ಣನನ್ನೇ ಶಪಿಸಲು ಮುಂದಾದರು. ಆಗ ಕೃಷ್ಣನು ಅವರನ್ನು ಸಮಾಧಾನ ಮಾಡುತ್ತ, ತನ್ನನ್ನು ಶಪಿಸುವುದರಿಂದ ಮಹರ್ಷಿಯ ತಪೋಬಲ ನಷ್ಟವಾಗುವುದೆಂದು ಎಚ್ಚರಿಸಿದರು. ಬಾಲ್ಯಾವಸ್ಥೆಯಿಂದಲೇ ಗುರುಸೇವೆ ಮತ್ತು ಬ್ರಹ್ಮಚರ್ಯದಿಂದ ಬಹಳ ಕಷ್ಟಪಟ್ಟು ಸಂಪಾದಿಸಿದ ತಪಸ್ಸಿನ ಫಲವನ್ನು ಹಾಳುಮಾಡಿಕೊಳ್ಳುವುದು ಸರಿಯಲ್ಲವೆಂದು ಹೇಳುತ್ತ, ಉತ್ತಂಕನಿಗೆ ಅಧ್ಯಾತ್ಮತತ್ತ್ವವನ್ನು ಉಪದೇಶಿಸಿದನು.

ತನ್ನ ವಿಶ್ವರೂಪವನ್ನು ಅವರಿಗೆ ಪರಿಚಯ ಮಾಡಿಕೊಡುತ್ತ ಭಗವದ್ಗೀತೆಯ ವಿಭೂತಿಯೋಗದಲ್ಲಿ ಹೇಳಿರುವಂತೆ ಈ ಎಲ್ಲ ವಿಶ್ವವಸ್ತುಗಳೂ ತಾನೇ ಎಂಬುದನ್ನು ಶ್ರುತಪಡಿಸಿದರು. ಆಗ ಉತ್ತಂಕನು ಪರಮಪ್ರೀತನಾಗಿ ತನಗೆ ಯೋಗ್ಯತೆಯಿದ್ದರೆ ಪರಮಾತ್ಮನ ವಿಶ್ವರೂಪವನ್ನು ತೋರಿಸಬೇಕೆಂದು ಕೇಳಿಕೊಂಡನು. ಆಗ ಶ್ರೀಕೃಷ್ಣನು ಹಿಂದೆ ಅರ್ಜುನನಿಗೆ ತೋರಿಸಿದ್ದ ವಿಶ್ವರೂಪವನ್ನು ಉತ್ತಂಕನಿಗೂ ತೋರಿಸಿದನು. ಸಮಸ್ತವನ್ನೂ ಆವರಿಸಿಕೊಂಡಂತಿದ್ದ ಆ ರೂಪವನ್ನು ಕಂಡು ಉತ್ತಂಕನು ಧನ್ಯನಾದನು. ಶ್ರೀಕೃಷ್ಣನನ್ನು ನಾನಾ ವಿಧವಾಗಿ ಸ್ತೋತ್ರಮಾಡಿದನು.

ಕೃಷ್ಣನು ತನಗೆ ದಿವ್ಯದರ್ಶನವೇ ಸಾಕೆಂದು ಹೇಳಿದನು. ಆದರೂ ಕೃಷ್ಣನು ಮತ್ತೆ ಮತೆ ಅವನಿಗೆ ಬೇಕಾದ ಯಾವುದೇ ವರಗಳನ್ನು ಕೇಳುವಂತೆ ಹೇಳಿದರೂ ಉತ್ತಂಕನು ಹೇಳಲು ಉತ್ತಂಕನು ‘ತಾನು ಈಗ ಮರುಭೂಮಿಯಲ್ಲಿ ಇರುವುದಾಗಿಯೂ ಇಲ್ಲಿನ ಜನರು ನೀರಿಗಾಗಿ ಬಹಳ ಕಷ್ಟಪಡುತ್ತಿರುವುದಾಗಿಯೂ’ ಹೇಳಿ, ‘ತಾನು ಬಯಸಿದ ಜಾಗದಲ್ಲಿ ನೀರನ್ನು ಪಡೆಯುವಂತೆ ಅನುಗ್ರಹಿಸಬೇಕೆಂದು’ ಬೇಡಿಕೊಂಡರು. ಕೃಷ್ಣನು ತನ್ನ ವಿಶ್ವರೂಪವನ್ನು ಉಪಸಂಹರಿಸುತ್ತ, ನೀರಿನ ಬಯಕೆಯುಂಟಾದಾಗ ತನ್ನನ್ನು ಸ್ಮರಿಸುವಂತೆ ಹೇಳಿ ಅಲ್ಲಿಂದ ಮುಂದಕ್ಕೆ ಪ್ರಯಾಣ ಮಾಡಿದನು.

ಕೆಲವು ದಿನಗಳ ತರುವಾಯ ಉತ್ತಂಕರು ಆ ಮರುಭೂಮಿಯಲ್ಲಿ ನೀರಿಗಾಗಿ ಪರದಾಡುತ್ತ ಕೃಷ್ಣನನ್ನು ಸ್ಮರಿಸಿದನು. ಕೂಡಲೇ ಅಲ್ಲಿ ಒಬ್ಬ ಮಾತಂಗನು ನಾಯಿಯೊಡನೆ ಕಾಣಿಸಿಕೊಂಡನು. ಅವನು ನೋಡಲು ಭಯಂಕರನಾಗಿದ್ದು, ಧನುರ್ಬಾಣಗಳನ್ನು ಧರಿಸಿದ್ದರು. ಅವನು ನಿಂತಿದ್ದ ಜಾಗದಲ್ಲಿ ಚಿಲುಮೆಯಂತೆ ನೀರು ಹೊರಬರುತ್ತಿತ್ತು.

ಮಾತಂಗನು “ಭೈಗುಶ್ರೇಷ್ಠನೇ! ಇಲ್ಲಿ ಬಂದು ನಾನು ಕೊಡುತ್ತಿರುವ ನೀರನ್ನು ಸ್ವೀಕರಿಸು” ಎಂದು ಕರೆದನು. ಉತ್ತಂಕರು ಮಾತಂಗನಿಂದ ನೀರನ್ನು ಸ್ವೀಕರಿಸಲು ಒಪ್ಪದೆ, ತನಗೆ ನೀರು ಸಿಕ್ಕುವಂತೆ ವರವನ್ನು ಕೊಟ್ಟು ಈಗ ಹೀಗೆ ಮೋಸಮಾಡುತ್ತಿರುವ ಕೃಷ್ಣನನ್ನು ಕಠೋರವಾಗಿ ನಿಂದಿಸತೊಡಗಿದನು. ಮಾತಂಗನು ಮತ್ತೆ ಮತ್ತೆ ಕರೆದರೂ ಉತ್ತಂಕರು ಅವನು ಕೊಟ್ಟ ನೀರನ್ನು ಕುಡಿಯಲು ನಿರಾಕರಿಸಿದರು.

ಕೂಡಲೇ ಮಾತಂಗನು ಅಲ್ಲಿಂದ ಮಾಯವಾದನು; ಅದೇ ಜಾಗದಲ್ಲಿ ಶ್ರೀಕೃಷ್ಣನು ಕಾಣಿಸಿಕೊಂಡನು. ಕೃಷ್ಣನನ್ನು ಕಂಡು ಉತ್ತಂಕನು “ಚಾಂಡಾಲನಿಂದ ಅಪವಿತ್ರಗೊಳಿಸಲ್ಪಟ್ಟ ನೀರನ್ನು ಬ್ರಾಹ್ಮಣಶ್ರೇಷ್ಠರಿಗೆ ಕೊಡಿಸುವುದು ಯುಕ್ತವೇ?” ಎಂದು ಕೇಳಿದರು.

ಆಗ ಕೃಷ್ಣನು ಚಾಂಡಾಲರೂಪದಲ್ಲಿ ಬಂದಿದ್ದವನು ಇಂದ್ರನೆಂದೂ ನೀರಿನರೂಪದಲ್ಲಿ ಅಮೃತವನ್ನೇ ಕೊಡುತ್ತಿದ್ದನೆಂದೂ ಹೇಳಿದನು. “ನಿನ್ನ ಸಲುವಾಗಿಯೇ ನಾನು ಇಂದ್ರನನ್ನು ಅಮೃತಕ್ಕಾಗಿ ಪ್ರಾರ್ಥಿಸಿದೆನು. ಆಗ ಇಂದ್ರನು ಮನುಷ್ಯರಿಗೆ ಅಮೃತವನ್ನು ಕೊಡಲು ಒಪ್ಪಲಿಲ್ಲ. ನಾನು ಮತ್ತೆ ಮತ್ತೆ ಹೇಳಿದ ಮೇಲೆ, ತಾನು ಮಾತಂಗನ ರೂಪದಲ್ಲಿ ಹೋಗುವುದಾಗಿಯೂ ಉತ್ತಂಕರು ತನ್ನಿಂದ ಅಮೃತವನ್ನು ಸ್ವೀಕರಿಸಿದರೆ ಮಾತ್ರ ಕೊಡುವುದಾಗಿಯೂ ಹೇಳಿ ಇಲ್ಲಿಗೆ ಬಂದನು” ಎಂದು ವಿವರಿಸಿದನು.

ಆಗ ಉತ್ತಂಕರಿಗೆ ದುಃಖವಾಯಿತು. ಕೃಷ್ಣನೇ ಅವನನ್ನು ಸಮಾಧಾನಗೊಳಿಸುತ್ತ, “ನೀನು ನೀರಿಗಾಗಿ ಅಪೇಕ್ಷಿಸಿದ ದಿನ ಮರುಭೂಮಿಯಲ್ಲಿ ಜಲಪೂರ್ಣವಾದ ಮೋಡಗಳು ಕವಿಯುತ್ತವೆ. ಅವು ಮಳೆ ಸುರಿಸಿ ಶುದ್ಧವಾದ ನೀರನ್ನು ಕೊಡುತ್ತವೆ. ಅವು ಇನ್ನು ಮೇಲೆ ಉತ್ತಂಕಮೇಘಗಳೆಂದೇ ಪ್ರಸಿದ್ಧವಾಗುತ್ತವೆ” ಎಂದು ವರವನ್ನು ಕೊಟ್ಟನು. ಇಂದಿಗೂ ಮರುಭೂಮಿಯಲ್ಲಿ ಮಳೆಯನ್ನು ಸುರಿಸುವುವು ಈ ಉತ್ತಂಕಮೇಘಗಳೇ. ಹೀಗೆ ಉತ್ತಂಕನು ಇಡಿಯ ವಿಶ್ವಕ್ಕೆ ಉಪಕಾರವೆಸಗಿದ ಮಹಾಮಹಿಮರು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *