Great sage Sri Dattatreya the incarnation of Lord Bhrama, Vishnu, Maheswaraಶ್ರೀಗುರು ದತ್ತಾತ್ರೇಯ

ದತ್ತಾತ್ರೇಯರು ಪ್ರಸಿದ್ಧ ಮಹರ್ಷಿಗಳು, ಸ್ವಾರೋಚಿಷ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬರು. ಊರ್ಜಸ್ತಂಭ, ಪ್ರಾಣ, ದತ್ತ, ಋಷಣ, ನಿಶ್ಚರ, ಅಳಿ ಮತ್ತು ‘ಅರ್ವವೀರರು ಈ ಮನ್ವಂತರದ ಸಪ್ತರ್ಷಿಗಳು.

ಸೋಮಲತೆಯನ್ನು ಸೃಷ್ಟಿಸಿದವರು ದತ್ತಾತ್ರೇಯರೆಂದು ಹೇಳುತ್ತಾರೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ದತ್ತ ಸಂಪ್ರದಾಯವೆಂಬ ಒಂದು ಪಂಥವೇ ಪ್ರಚಲಿತವಾಗಿದೆ. ಅವರು ಅಲ್ಲಿ ದತ್ತ ಮಂದಿರಗಳನ್ನು ಸ್ಥಾಪಿಸಿ, ಅದರಲ್ಲಿ ದತ್ತ ಪಾದುಕೆಗಳನ್ನು ಪ್ರತಿಷ್ಠಾಪಿಸಿ ಭಜನೆ, ಅಭಿಷೇಕ ಮತ್ತು ಪೂಜೆಗಳನ್ನು ನೆರವೇರಿಸುತ್ತಾರೆ. ಗುರುಪಾದಗಳಲ್ಲಿ ಶರಣಾಗತಿಯನ್ನು ಇದು ಸೂಚಿಸುತ್ತದೆ.

ದತ್ತಾತ್ರೇಯರ ಪ್ರಸ್ತಾವವನ್ನು ಅನೇಕ ಪುರಾಣಗಳಲ್ಲಿಯೂ ಕಾಣು ತ್ತೇವೆ. ಅಲರ್ಕನೆಂಬೊಬ್ಬ ರಾಜನು ಬ್ರಾಹ್ಮಣನೊಬ್ಬನಿಗೆ ತನ್ನ ಕಣ್ಣುಗಳನ್ನೇ ದಾನ ಮಾಡಿದನೆಂಬ ವಿಷಯವು ರಾಮಾಯಣದಲ್ಲಿ ಬರುತ್ತದೆ. ಅವನ ದಾನಕ್ಕೆ ಮೆಚ್ಚಿ ದತ್ತಾತ್ರೇಯರು ‘ಆನ್ವಿಕ್ಷಿಕೀ’ ಎಂಬ ವಿದ್ಯೆಯನ್ನು ಉಪದೇಶಿಸಿದರು. ಇದು ಅಧ್ಯಾತ್ಮವಿದ್ಯೆಯಾಗಿದ್ದು ‘ಆನ್ವಿಕ್ಷಿಕಾಖ್ಯಾ ಆತ್ಮವಿದ್ಯಾ ಸ್ಯಾದೀಕ್ಷಣಾತ್ ಸುಖದುಃಖಯೋಃ’ ಎಂದು ಕಾಮಂದಕನೀತಿಸಾರ ಹೇಳುತ್ತದೆ. ಇದೇ ವಿದ್ಯೆಯನ್ನು ದತ್ತಾತ್ರೇಯರು ಪ್ರಹ್ಲಾದನಿಗೂ ಉಪದೇಶಿಸಿದರೆಂದು ಭಾಗವತ ಹೇಳುತ್ತದೆ.

ಮಾರ್ಕಂಡೇಯಪುರಾಣದಲ್ಲಿ ದತ್ತಗುರುಗಳ ಮಹಾತ್ಮ ವಿಸ್ತಾರವಾಗಿ ಉಕ್ತವಾಗಿದೆ. ಸುಮತಿಯೆಂಬ ಮಹಾಪ್ರಾಜ್ಞನು ಬೃಗುವಂಶ ಸಂಭೂತನು. ಅವನು ತನ್ನ ತಂದೆಗೆ ಸಂಸಾರದ ಅಸಾರತೆಯ ಬಗ್ಗೆ ಉಪದೇಶ ನೀಡುತ್ತಾನೆ. ಆ ಸಂದರ್ಭಲ್ಲಿ ದತ್ತಾತ್ರೇಯರು ಅಲರ್ಕನಿಗೆ ನೀಡಿದ ಯೋಗೋಪದೇಶವನ್ನೂ ವಿವರಿಸುತ್ತಾರೆ.

ದತ್ತಾತ್ರೇಯರ ಜನ್ಮವೃತ್ತಾಂತವೂ ಅಲ್ಲಿಯೇ ಬರುತ್ತದೆ. ಅನಸೂಯೆಯು ತನ್ನ ಪಾತಿವ್ರತ್ಯಮಹಿಮೆಯಿಂದ ದೇವತೆಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಪ್ರಸನ್ನೀಕರಿಸಿಕೊಂಡು, ಅವರೇ ತನ್ನಲ್ಲಿ ಪುತ್ರತ್ವವನ್ನು ಹೊಂದಬೇಕೆಂಬ ವರವನ್ನು ಪಡೆದಿದ್ದಳೆಂದು ಅಲ್ಲಿ ಹೇಳಲಾಗಿದೆ.

ಕೌಶಿಕನೆಂಬ ವಿಪ್ರನ ಭಾರ್ಯೆಯು ಕುಷ್ಠರೋಗ ಪೀಡಿತನಾದ ತನ್ನ ಪತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಳು. ಆಗ ಅವಳ ಪತಿಯ ಪಾದವು ಮಾಂಡವನೆಂಬ ಋಷಿಯ ದೇಹಕ್ಕೆ ತಗುಲಿತು. ಆ ಋಷಿಯನ್ನು ರಾಜನು ಕಳ್ಳನೆಂದು ಭಾವಿಸಿ ಶೂಲಕ್ಕೆ ಏರಿಸಿದ್ದನು. ನೋವಿನಿಂದ ಬಾಧೆಪಡುತ್ತಿದ್ದ ಮುನಿಗೆ ಹೀಗೆ ಕಾಲು ತಗುಲಿ ಯಾತನೆ ಹೆಚ್ಚಾಯಿತು.

ಅವನು ತನ್ನನ್ನು ಕಾಲಿನಿಂದ ಒದ್ದವನು ಸೂರ್ಯೋದಯದ ಸಮಯಕ್ಕೆ ಮೃತನಾಗುವಂತೆ ಶಾಪಕೊಟ್ಟನು. ವಿಪ್ರನ ಪತ್ನಿಯು ತನ್ನ ಪತಿಯ ಮರಣವನ್ನು ತಪ್ಪಿಸಲು ಸೂರ್ಯೋದಯವನ್ನೇ ತಡೆದಳು. ಸೂರ್ಯನ ಉದಯವಾಗದೆ ಭೂಮಿಯಲ್ಲಿ ಜನರು ಮತ್ತು ದಿವಿಯಲ್ಲಿ ದೇವತೆಗಳು ಕಂಗಾಲಾದರು.

ಅವರೆಲ್ಲ ಅನಸೂಯೆಯ ಬಳಿ ಬಂದು ಪರಿಹಾರಕ್ಕಾಗಿ ಪ್ರಾರ್ಥಿಸಿದರು. ಅನಸೂಯೆಯು ಕೌಶಿಕನ ಮಡದಿಯನ್ನು ಸಮಾಧಾನಗೊಳಿಸಿ, ಸೂರ್ಯೋದಯವಾಗುವಂತೆ ಮಾಡಿ, ತನ್ನ ಪಾತಿವ್ರತ್ಯದಿಂದ ಕೌಶಿಕನಿಗೂ ಜೀವದಾನ ಮಾಡಿದಳು. ಇಂತಹ ಪತಿವ್ರತೆಯ ಪುತ್ರರಾಗುವುದು ಪುಣ್ಯಫಲವೆಂದು ದೇವತೆಗಳು ಭಾವಿಸಿದರು. ಅದರಂತೆ ತ್ರಿಮೂರ್ತಿಗಳು ಅತ್ರಿಮಹರ್ಷಿಗಳ ಆಶ್ರಮಕ್ಕೆ ಒಂದು ದಿನ ಬಂದರು. ಆಗ ಮಹರ್ಷಿಗಳು ಆಶ್ರಮದಲ್ಲಿ ಇರಲಿಲ್ಲ. ಅನಸೂಯೆಯು ಅತಿಥಿಗಳನ್ನು ಅರ್ಥ್ಯಪಾದ್ಯಾದಿಗಳಿಂದ ಸತ್ಕರಿಸಿದಳು. ಅತಿಥಿಗಳನ್ನು ತನ್ನ ಮಕ್ಕಳಂತೆ ಭಾವಿಸಿ, ಅವರಿಗೆ ಇಚ್ಛಾಭೋಜನ ನೀಡಿದಳು.

ಅವಳ ಮನೋಭಿಲಾಷೆಯಂತೆ ಬ್ರಹ್ಮನ ಅಂಶದಿಂದ ಚಂದ್ರನೂ ವಿಷ್ಣುವಿನ ಅಂಶದಿಂದ ದತ್ತನೂ ಶಿವನ ಅಂಶದಿಂದ ದುರ್ವಾಸನೂ ಅವಳ ಮಕ್ಕಳಾದರು. ಚಂದ್ರನು ತಾಯಿಯ ಅಪ್ಪಣೆಯನ್ನು ಪಡೆದು ಚಂದ್ರಲೋಕವನ್ನು ಸೇರಿದನು. ದುರ್ವಾಸನು ತಪಸ್ಸಿಗೆ ತೆರಳಿದನು.

ಅವರಿಬ್ಬರೂ ನಿರ್ಗಮಿಸುವಾಗ ತಮ್ಮ ತಮ್ಮ ಅಂಶಗಳನ್ನು ದತ್ತನಲ್ಲಿ ನೆಲೆಗೊಳಿಸಿದರು. ಹೀಗೆ ದತ್ತಾತ್ರೇಯರು ತ್ರಿಮೂರ್ತಿಗಳ ಅಂಶಾವತಾರವೆನಿಸಿದರು.

ಭಾಗವತದಲ್ಲಿ ದತ್ತಾವತಾರವು ಇನ್ನೊಂದು ರೀತಿಯಲ್ಲಿ ವರ್ಣಿಸಲ್ಪಟ್ಟಿದೆ. ಅತ್ರಿಮುನಿಯು ಪುತ್ರಾರ್ಥಿಯಾಗಿ ತಪಸ್ಸು ಮಾಡುತ್ತಿದ್ದನು. ಭಗವಂತನು ಅವನ ತಪಸ್ಸಿಗೆ ಮೆಚ್ಚಿ ತನ್ನನ್ನೇ ತಾನು ಪುತ್ರನನ್ನಾಗಿ ಅನುಗ್ರಹಿಸಿದನು. ಆದುದರಿಂದಲೇ ‘ಕೊಡಲ್ಪಟ್ಟವನು’ ಎಂಬ ಅರ್ಥದಲ್ಲಿ ಅವನಿಗೆ ದತ್ತನೆಂದು ಹೆಸರಾಯಿತು

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *