Vedavyasa Maharshiವೇದವ್ಯಾಸ ಮಹರ್ಷಿ

ವೇದವ್ಯಾಸರು ಪರಾಶರ ಮಹರ್ಷಿಗಳ ಸುಪುತ್ರರು, ಉಪರಿಚರ ವಸುವಿನ ಪುತ್ರಿಯಾದ ಸತ್ಯವತಿಯು ಅವರ ತಾಯಿ, ಕೃಷ್ಣದ್ವೈಪಾಯನರೆಂಬುದು ಅವರ ನಿಜನಾಮಧೇಯ. ದ್ವೀಪದಲ್ಲಿ ಹುಟ್ಟಿದುದರಿಂದ ಅವರನ್ನು ದೈಪಾಯನರೆಂದು ಕರೆಯುತ್ತಾರೆ. ಅವರ ವಂಶಾವಳಿಯನ್ನು ಸಾರುವ ಶ್ಲೋಕ ಹೀಗಿದೆ:

ವ್ಯಾಸಂ ವಸಿಷ್ಠನಪ್ತಾರಂ ಶಕೇ: ಪೌತ್ರಮಕಲ್ಮಶಮ್ । ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ।

ವ್ಯಾಸರ ಜನ್ಮವೃತ್ತಾಂತವನ್ನು ತಿಳಿಸುವ ಕಥೆಯೊಂದು ಪ್ರಚಲಿತದಲ್ಲಿದೆ.

ಪೂರ್ವದಲ್ಲಿ ಧರ್ಮಿಷ್ಟನಾದ ಉಪರಿಚರನೆಂಬ ರಾಜನಿದ್ದನು. ಚೇದಿರಾಜನಾದ ಅವನು ಘೋರವಾದ ತಪಸ್ಸಿನಿಂದ ದೇವತೆಗಳನ್ನು ಮೆಚ್ಚಿಸಿ ಈ ರಾಜ್ಯವನ್ನು ಪಡೆದಿದ್ದನು. ತಪೋಬಲದಿಂದ ಅವನು ಮೂರು ಲೋಕಗಳಲ್ಲಿ ಏನು ನಡೆಯುತ್ತದೆಯೋ ಅವೆಲ್ಲವನ್ನೂ ತಿಳಿಯಬಲ್ಲವನಾಗಿದ್ದನು. ದಿವ್ಯವಾದ ವಿಮಾನವನ್ನು ದೇವತೆಗಳು ಅವನಿಗೆ ಕೊಟ್ಟಿದ್ದರು. ಅವನು ಅದರಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದಿತ್ತು. ಆದ್ದರಿಂದಲೇ ಅವನಿಗೆ ‘ಉಪರಿಚರ’ (ಮೇಲೆ ಚಲಿಸುವವನು) ಎಂಬ ಹೆಸರು ಬಂದಿತೆಂದು ಹೇಳುತ್ತಾರೆ.

ಉಪರಿಚರನಿಗೆ ಮೀನಿನ ರೂಪದಲ್ಲಿದ್ದ ಅದ್ರಿಕೆಯೆಂಬ ಅಪ್ಸರೆಯಿಂದ ಇಬ್ಬರು ಮಕ್ಕಳು ಜನಿಸಿದರು. ಮೀನಿನ ರೂಪದಲ್ಲಿದ್ದ ಅಪ್ಸರೆಯನ್ನು ಬೆಸ್ತರು ಬಲೆಯಲ್ಲಿ ಹಿಡಿದರು. ಅದರ ಹೊಟ್ಟೆಯಲ್ಲಿದ್ದ ಮಾನವ ಶಿಶುಗಳನ್ನು ಬೆಸ್ತರು ರಾಜನಿಗೆ ಅರ್ಪಿಸಿದರು. ರಾಜನು ಗಂಡುಮಗುವನ್ನು ತಾನು ಸ್ವೀಕರಿಸಿ ಹೆಣ್ಣುಮಗುವನ್ನು ಸಾಕಿಕೊಳ್ಳುವಂತೆ ಬೆಸ್ತರಿಗೆ ಕೊಟ್ಟನು. ಆ ಹೆಣ್ಣುಮಗುವು ಸತ್ಯವತಿಯೆಂಬ ನಾಮಧೇಯದಿಂದ ಬೆಳೆಯುತ್ತಿದ್ದಳು. ಅವಳು ಜನರನ್ನು ದೋಣಿಯಲ್ಲಿ ಸಾಗಿಸಲು ತಂದೆಗೆ ಸಹಾಯ ಮಾಡುತ್ತಿದ್ದಳು.

ಪರಾಶರ ಮಹರ್ಷಿಗಳಿಗೆ ಒಮ್ಮೆ ಯಮುನೆಯನ್ನು ದಾಟಬೇಕಾಯಿತು. ಅವರು ಸತ್ಯವತಿಯ ದೋಣಿಯಲ್ಲಿ ಕುಳಿತರು. ಅವಳ ದೇಹವು ಅದುವರೆಗೆ ಮೀನಿನ ವಾಸನೆಯಿಂದ ಕೂಡಿದ್ದಿತು. ಮಹರ್ಷಿಗಳ ಪ್ರಭಾವದಿಂದ ಯೋಜನಗಳಷ್ಟು ದೂರ ಹರಡುವಂತೆ ಅದು ಸುಗಂಧಮಯವಾಗಿ, ‘ಯೋಜನಗಂಧಾ’ ಎಂಬ ಹೆಸರನ್ನು ಪಡೆದಳು. ಅಲ್ಲದೆ ಆ ದ್ವೀಪದಲ್ಲಿಯೇ ಪುತ್ರನಿಗೆ ಜನ್ಮವಿತ್ತಳು.

ಹುಟ್ಟಿದೊಡನೆ ಮಗುವು ಅಳಲಿಲ್ಲ. ತಾಯಿಗೆ ಸಾಷ್ಟಾಂಗ ಪ್ರಣಾಮ ಮಾಡಿ, ಅನುಜ್ಞೆಯನ್ನು ಪಡೆದು, ಸ್ಮರಿಸಿದಾಗ ಬರುವೆನೆಂದು ಹೇಳಿ ಹೊರಟುಹೋದರು. ಅವರೇ ಕೃಷ್ಣದ್ವೈಪಾಯನ, ವೇದವ್ಯಾಸ ಮುಂತಾದ ನಾಮಧೇಯಗಳಿಂದ ವ್ಯಾಸಮಹರ್ಷಿಗಳು ಪ್ರಸಿದ್ದರಾದರು.

ವ್ಯಾಸರು ‘ಕರೆದಾಗ ಬರುವೆ’ನೆಂದು ತಾಯಿ ಸತ್ಯವತಿಗೆ ವಾಗ್ದಾನ ಮಾಡಿದ್ದರಷ್ಟೆ. ಅನಂತರ ಸತ್ಯವತಿಯನ್ನು ಕುರುವಂಶದ ಶಂತನು ಮಹಾರಾಜನು ವರಿಸಿದನು.

ಶಂತನುವಿನ ಹಿರಿಯ ಮಗನೇ ಭೀಷನು. ಸತ್ಯವತಿಯ ತಂದೆಗೆ ಅವನು. ಸತ್ಯವತಿ ಯಲ್ಲಿಯೇ ಜನಿಸುವ ಮಕ್ಕಳಿಗೆ ರಾಜ್ಯವನ್ನು ಬಿಟ್ಟುಕೊಡುವುದಾಗಿಯೂ ತಾನು ಬ್ರಹ್ಮಚಾರಿಯಾಗಿಯೇ ಉಳಿಯುವುದಾಗಿಯೂ ವಾಗ್ದಾನ ಮಾಡಿದ್ದನು.

ಶಂತನುವಿಗೆ ಸತ್ಯವತಿಯಲ್ಲಿ ಚಿತ್ರವೀರ್ಯ ಮತ್ತು ವಿಚಿತ್ರವೀರ್ಯರೆಂಬ ಇಬ್ಬರು ಪುತ್ರರು ಜನಿಸಿದರು. ಹಿರಿಯವನಾದ ಚಿತ್ರವೀರ್ಯನು ಚಿಕ್ಕವಯಸ್ಸಿನಲ್ಲಿಯೇ ಗಂಧರ್ವರೊಡನೆ ನಡೆದ ಯುದ್ಧದಲ್ಲಿ ಮೃತನಾದನು. ವಿಚಿತ್ರವೀರ್ಯನು ಸಂತಾನಹೀನನಾಗಿಯೇ ಕ್ಷಯರೋಗದಿಂದ ಮುಂದೆ ಸ್ವಲ್ಪದಿನಗಳಲ್ಲಿಯೇ ಮೃತ ನಾದನು. ಮುಂದಿನ ರಾಜರಿಲ್ಲದೇ ಕುರುವಂಶವು ಅಂತ್ಯವಾಗುವ ಸ್ಥಿತಿ ಬಂದಿತು.

ಆಗ ಸತ್ಯವತಿಯು ವ್ಯಾಸರನ್ನು ಸ್ಮರಿಸಿದಳು. ಕೂಡಲೇ ಆಗಮಿಸಿದ ವ್ಯಾಸರಿಗೆ ಅರ್ಥ್ಯಪಾದ್ಯಾದಿಗಳನ್ನು ಕೊಟ್ಟು ಗೌರವಿಸಿ, ತಮ್ಮ ವಂಶವು ಮುಂದುವರಿಯಲು ವಿಚಿತ್ರವೀರ್ಯನ ಪತ್ನಿಯರಲ್ಲಿ ಸಂತಾನವನ್ನು ಅನುಗ್ರಹಿಸುವಂತೆ ಕೋರಿದಳು.

ವಿಚಿತ್ರವೀರ್ಯನ ಹಿರಿಯ ರಾಣಿಯಾದ ಅಂಬಿಕೆಯು ವ್ಯಾಸರ ಕಪ್ಪಾದ ಶರೀರ, ಜಟೆ, ನೀಳವಾದ ಗಡ್ಡ, ನಾರುಮಡಿಗಳನ್ನು ನೋಡಿ ಭಯದಿಂದ ಕಣ್ಣುಗಳನ್ನು ಮುಚ್ಚಿಕೊಂಡುಬಿಟ್ಟಿದ್ದರಿಂದ, ವ್ಯಾಸರ ಅನುಗ್ರಹದಿಂದ ಜನಿಸಿದ ಆಕೆಯ ಪುತ್ರ ಧೃತರಾಷ್ಟ್ರನು ಕುರುಡನಾದನು.

ಹಾಗೆಯೇ ಅಂಬಾಲಿಕೆಯೆಂಬ ಎರಡನೆಯ ರಾಣಿಯು ವ್ಯಾಸರ ರೂಪವನ್ನು ಕಂಡು ಹೆದರಿ ಬಿಳಿಚಿಕೊಂಡದ್ದರಿಂದ ಅವಳ ಪುತ್ರನಾದ ಪಾಂಡುವು ಬಿಳುಪು ಶರೀರದವನಾದನು. ಸತ್ಯವತಿಯು ಮೂರನೆಯ ಬಾರಿ ಮತ್ತೆ ಪ್ರಯತ್ನಿಸಲು ಆಗ್ರಹಿಸಿದಾಗ ಅಂಬಿಕೆಯು, ತನ್ನ ಬದಲಾಗಿ ತನ್ನ ದಾಸಿಯನ್ನು ವ್ಯಾಸರ ಬಳಿ ಕಳುಹಿಸಿದಳು. ದಾಸಿಯು ಭಕ್ತಿಯಿಂದ ವ್ಯಾಸರನ್ನು ಸೇವಿಸಿದುದರಿಂದ ಮಹಾಧರ್ಮಾತ್ಮನೂ ವಿದ್ವಾಂಸನೂ ಆದ ವಿದುರನನ್ನು ಮಗನನ್ನಾಗಿ ಪಡೆದಳು. ಹೀಗೆ ಕುರುವಂಶವು ವ್ಯಾಸರ ಸಂತಾನವೇ ಆಗಿದೆ. ಈ ವಿವರಗಳೆಲ್ಲವೂ ವ್ಯಾಸವಿರಚಿತ ಮಹಾಭಾರತದಲ್ಲಿಯೇ ದೊರೆಯುತ್ತದೆ.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-1

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *