Parashara Maharishi father of Veda Vyasaಪರಾಶರ ಮಹರ್ಷಿ

ಪರಾಶರರು ಶಕ್ತಿಮಹರ್ಷಿಗಳ ಪುತ್ರರು. ತಂದೆ ಮತ್ತು ಅಜ್ಜನ ಗುರುಪರಂಪರೆಯನ್ನು ಮುಂದುವರಿಸಿದ ಮಹಾನುಭಾವರು, ತಮ್ಮ ಪೂರ್ವಜ ರಂತೆಯೇ ಇವರೂ ಮಂತ್ರದ್ರಷ್ಟಾರರು, ಋಗ್ರೇದದ ಒಂದು ನೂರಾ ಐದು ಮಂತ್ರಗಳು ಪರಾಶರರ ಹೆಸರಿನಲ್ಲಿವೆ. ಒಂಬತ್ತನೇ ಮಂಡಲದ ಏಳನೆಯ ಅಷ್ಟಕದಲ್ಲಿ ನಾಲ್ಕನೆಯ ಅಧ್ಯಾಯದ ತೊಂಬತ್ತೇಳನೆಯ ಸೂಕ್ತದಲ್ಲಿ ಶಕ್ತಿಮಹರ್ಷಿಗಳು ಮೂರು ಮಂತ್ರಗಳನ್ನು ದರ್ಶಿಸಿದ್ದಾರೆ.

ಪರಾಶರರು ತಂದೆಯನ್ನು ಮೀರಿಸಿ ಮೂವತ್ತೊಂದರಿಂದ ನಲವತ್ನಾಲ್ಕರವರೆಗಿನ ಮಂತ್ರಗಳನ್ನು ಅಂದರೆ ಹದಿನಾಲ್ಕು ಮಂತ್ರಗಳ ದರ್ಶಕರಾಗಿರುತ್ತಾರೆ. ಈ ಸೂಕ್ತದಲ್ಲಿರುವ ಒಟ್ಟು ಮಂತ್ರಗಳ ಸಂಖ್ಯೆ ಐವತ್ತೆಂಟು. ಇವೆಲ್ಲವೂ ವಸಿಷ್ಠರ ವಂಶದವರಿಂದಲೇ ದರ್ಶಿಸಲ್ಪಟ್ಟಿವೆ. ತ್ರಿಷ್ಟುಷ್ ಛಂದಸ್ಸಿನಲ್ಲಿ ರಚಿತವಾಗಿರುವ ಈ ಎಲ್ಲ ಮಂತ್ರಗಳಿಗೆ ಪವಮಾನಸೋಮನು ದೇವತೆ. ಪವಿತ್ರವಾದ ಸೋಮರಸದಿಂದ ಇಂದ್ರಾದಿ ದೇವತೆಗಳು ತೃಪ್ತಿಪಡೆದು ಮಳೆಬೆಳೆಗಳಿಂದ ಜಗತ್ತನ್ನು ಸಮೃದ್ಧವಾಗಿಸಲಿ ಎಂದು ಪ್ರಾರ್ಥಿಸುವ ಮಂತ್ರಗಳಿವು.

‘ಸೋಮೋ ಅಸ್ಮಭ್ಯಂ ಕಾಮ್ಯಂ ಬೃಹಂತಂ ರಯಿಂ ದದಾತು ವೀರವಂತಮುಗ್ರಂಚ’

ಎಂದು ಪ್ರಾರಂಭವಾಗುವ ಪರಾಶರದ್ರಷ್ಟ ಮಂತ್ರಗಳು ‘ಸೋಮನು ನಮ್ಮ ಮನಸ್ಸಿನ ಅಭಿಲಾಷೆಗಳನ್ನು ಈಡೇರಿಸಿ ವೀರರನ್ನಾಗಿ ಮಾಡಲಿ, ಎಂಬ ಆಶಂಸನೆಯನ್ನು ಒಳಗೊಂಡಿವೆ.

ಪರಾಶರರು ಗೋತ್ರಪ್ರವರ್ತಕರೂ ಹೌದು. ವಾಸಿಷ್ಠ, ಶಾಕ್ಯ ಮತ್ತು ಪಾರಾಶರ್ಯ ರನ್ನು ಪರಾಶರಗೋತ್ರವು ಋಷಿಗಳನ್ನಾಗಿ ಒಳಗೊಂಡಿದೆ. ಇಲ್ಲಿ ವಾಸಿಷ್ಠರೆಂದರೆ ಶಕ್ತಿಮಹರ್ಷಿಗಳು, ಶಾಕ್ಯರು ಪರಾಶರರು. ಅವರ ಪುತ್ರರಾದ ವ್ಯಾಸರು ವಂಶವನ್ನು ಮುಂದುವರಿಸಿದ ಪಾರಾಶರ್ಯರು.

ಪರಾಶರರು ನಮ್ಮ ಪ್ರಾಚೀನ ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಹಲವು ಸಲ ಕಾಣಿಸಿಕೊಳ್ಳುತ್ತಾರೆ. ತಂದೆ ಶಕ್ತಿ ಮಹರ್ಷಿಗಳು ಕಲ್ಮಾಷಪಾದ ಮಹಾರಾಜನಿಂದ ಅಕಾಲಮರಣಕ್ಕೆ ತುತ್ತಾದಾಗ ತಾಯಿ ಅದೃಶ್ಯಂತಿಯು ಗರ್ಭವತಿಯಾಗಿದ್ದಳು. ಕೆಲವು ದಿನಗಳು ಕಳೆದ ನಂತರ ಆಶ್ರಮದಲ್ಲಿ ಗಂಡುಮಗುವನ್ನು ಪ್ರಸವಿಸಿದಳು.

ಮಗುವು ತೇಜಃಪುಂಜವಾಗಿದ್ದು ಶಕ್ತಿಮಹರ್ಷಿಗಳನ್ನು ಹೋಲುತ್ತಿದ್ದಿತು. ಪುತ್ರಮರಣ ದಿಂದ ನೊಂದಿದ್ದ ವಸಿಷ್ಠರು ವಂಶೋದ್ಧಾರಕನಾದ ಪೌತ್ರನು ಸೊಸೆಯ ಗರ್ಭಾಂಬುಧಿಯಲ್ಲಿರುವನೆಂದು ತಿಳಿದೇ ಪ್ರಾಣಧಾರಣೆ ಮಾಡಿಕೊಂಡಿದ್ದರಂತೆ. ವಸಿಷ್ಠರೇ ಮೊಮ್ಮಗನಿಗೆ ‘ಪರಾಶರ’ ಎಂದು ನಾಮಕರಣ ಮಾಡಿದರು.

ಪರಾಶರರ ಪುತ್ರ ವೇದವ್ಯಾಸರು

ಪರಾಶರರು ವೇದವ್ಯಾಸರನ್ನು ಪುತ್ರರನ್ನಾಗಿ ಪಡೆದುದೂ ಒಂದು ಸ್ವಾರಸ್ಯಕರ ಇತಿಹಾಸವಾಗಿದೆ. ಉಪರಿಚರನೆಂಬ ಪ್ರಸಿದ್ಧನಾದ ರಾಜನು ಇಂದ್ರನಿಂದ ಕೊಡಲಟ್ಟ ಚೇದಿರಾಜ್ಯದಲ್ಲಿ ರಾಜನಾಗಿದ್ದನು. ಈ ಮಹಾರಾಜನ ಪುತಿಯೇ ಸತ್ಯವತಿ. ಅವಳನ್ನು ಬೆಸ್ತರು ಸಾಕಿದ್ದರಿಂದ ‘ಮತ್ಸಗಂಧಾ’ ಎಂದು ಪ್ರಸಿದ್ದಳಾಗಿದ್ದಳು. ಅವಳು ಪ್ರಯಾಣಿಕರನ್ನು ದೋಣಿಯಲ್ಲಿ ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುತ್ತಿದ್ದಳು. ಒಮ್ಮೆ ಮಹರ್ಷಿಗಳಾದ ಪರಾಶರರು ಅಲ್ಲಿಗೆ ಬಂದರು. ದೋಣಿಯಲ್ಲಿದ್ದ ಸತ್ಯವತಿಯ ನಿಜಜನ್ಮ ವೃತ್ತಾಂತವನ್ನು ಅವರು ತಮ್ಮ ದಿವ್ಯಜ್ಞಾನದಿಂದ ಕಂಡುಕೊಂಡರು.

ಆ ದಿನವು ಅತ್ಯಂತ ಶ್ರೇಷ್ಠವಾಗಿದ್ದು ಅಂದು ಹುಟ್ಟುವ ಮಗುವು ಜಗದ್ವಿಖ್ಯಾತವಾಗುವುದೆಂದು ಅವರು ಬಲ್ಲವರಾಗಿದ್ದರು. ಆದ್ದರಿಂದ ಅವರು ಸತ್ಯವತಿಯಲ್ಲಿ ಆ ದೋಣಿಯಲ್ಲಿಯೇ ವೇದವ್ಯಾಸರೆಂಬ ಪುತ್ರರನ್ನು ಪಡೆದರು.

ಋಷಿಗಳ ಪ್ರಭಾವದಿಂದ ಸತ್ಯವತಿಯ ಶರೀರವು ಸುಗಂಧಮಯವಾಯಿತು. ಅವಳ ದೇಹದ ಸುಗಂಧವು ಯೋಜನದವರೆಗೂ ಹರಡುತ್ತಿದ್ದುದರಿಂದ ಮುಂದೆ ಅವಳು ‘ಯೋಜನಗಂಧಾ’ ಎಂದೇ ಪ್ರಸಿದ್ಧಳಾದಳು. ನದಿಯ ಮಧ್ಯದಲ್ಲಿ ಹುಟ್ಟಿದ ಬಾಲಕನು ದೈಪಾಯನನೆಂದೇ ಪ್ರಸಿದ್ಧನಾಗಿ ಹುಟ್ಟಿದೊಡನೆಯೇ ತಪಸ್ಸುಮಾಡಲು ಹೊರಟುಹೋದನು.

ಪರಾಶರರು ಬ್ರಹ್ಮಜ್ಞಾನಿಗಳು. ಅವರು ಜನಕನಂತಹ ಮಹಾರಾಜನಿಗೆ ಜ್ಞಾನವನ್ನು ಉಪದೇಶಿಸಿದರು. ಈ ಭಾಗವು ಮಹಾಭಾರತದಲ್ಲಿ ‘ಪರಾಶರ ಗೀತೆ’ ಎಂದೇ ಪ್ರಸಿದ್ಧವಾಗಿದ್ದು ಭಗವದ್ಗೀತೆಯಂತೆಯೇ ಜ್ಞಾನಬೋಧಕವಾಗಿದೆ. ಮಹಾಭಾರತದ ಶಾಂತಿಪರ್ವದಲ್ಲಿ ಇದು ಅಡಕವಾಗಿದೆ. ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು ಒಟ್ಟು 298 ಶ್ಲೋಕಗಳಿವೆ.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-1

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *