ಅಭಿಮನ್ಯುವಿನ ಪುತ್ರನಾದ ಪರೀಕ್ಷಿತನೆಂಬ ರಾಜನು ಹಸ್ತಿನಾಪುರದಲ್ಲಿ ರಾಜ್ಯ ಒಂದುಸಲ ಅವನು ಬೇಟೆಗಾಗಿ ಕಾಡಿಗೆ ಹೋಗಿದ್ದಾಗ, ಒಂದು ಜಿಂಕೆಗೆ ಗುರಿಯಿಟ್ಟು ವಾಳುತ್ತಿದ್ದನು. ಅವನು ಬೇಟೆಯಾಡುವುದರಲ್ಲಿ ಹೆಚ್ಚಿನ ಆಸಕ್ತಿಯುಳ್ಳವನಾಗಿದ್ದನು. ಬಾಣಪ್ರಯೋಗಿಸಿದನು. ಆ ಜಿಂಕೆಯು ಅಲ್ಲಿ ಬೀಳದೇ ತಪ್ಪಿಸಿಕೊಂಡು ಓಡಿಹೋಯಿತು. ರಾಜನು ಅದನ್ನು ಅಟ್ಟಿಸಿಕೊಂಡು ಹಿಂದೆಯೇ ಓಡಿದನು. ಪರೀಕ್ಷಿತನ ಬಾಣದಿಂದ ತಪ್ಪಿಸಿಕೊಂಡ ಪ್ರಾಣಿಯೇ ಅದುವರೆಗೆ ಇರಲಿಲ್ಲ. ಪರೀಕ್ಷಿತನ ಬಾಣಗಳು ‘ಸೊಯ್’ ಎಂದು ಶಬ್ದ ಮಾಡುತ್ತ ಬರುತ್ತಿದ್ದಂತೆಯೇ ಪ್ರಾಣಿಗಳು ಪ್ರಾಣ ತೊರೆಯುತ್ತಿದ್ದವು. ಅಂದು ಮಾತ್ರ ವಿಧಿವಶದಿಂದ ಜಿಂಕೆ ತಪ್ಪಿಸಿಕೊಂಡು ಓಡಿತು. ರಾಜನೂ ಅದರ ಹಿಂದೆ ಓಡಿದನು. ಆದರೆ ಜಿಂಕೆ ಸಿಗಲೇ ಇಲ್ಲ. ಜಿಂಕೆಯನ್ನು ಅಟ್ಟಿಸಿಕೊಂಡು ಬಂದ ರಾಜನು ಬಹಳ ಬಳಲಿದ್ದನು. ಬಾಯಾರಿಕೆಯಿಂದ ಆತನ ನಾಲಿಗೆಯು ಒಣಗಿಹೋಗಿದ್ದಿತು. ಅಲೆಯುತ್ತ ಅಲೆಯುತ್ತ ಅವನು ಶಮೀಕನೆಂಬ ಮಹರ್ಷಿಯ ಆಶ್ರಮದ ಬಳಿಗೆ ಬಂದನು. ಮಹರ್ಷಿಗಳು ಸಾಮಾನ್ಯರಲ್ಲ. ಕರುಗಳು ಹಸುಗಳ ಹಾಲು ಕುಡಿಯುತ್ತಿರುವಾಗ ಅವುಗಳ ಬಾಯಿಯಿಂದ ಹೊರಬರುತ್ತಿದ್ದ ಹಾಲಿನ ನೊರೆಯನ್ನಷ್ಟೇ ಸೇವಿಸುತ್ತಾ ತಪಸ್ಸಿನಲ್ಲಿ ನಿರತರಾಗಿದ್ದವರು. ರಾಜನು ಆಶ್ರಮಕ್ಕೆ ಬಂದ ವೇಳೆಯಲ್ಲಿ ಋಷಿಗಳು ಪದ್ಮಾಸನದಲ್ಲಿ ಕುಳಿತು ತಪೋಮಗ್ನರಾಗಿದ್ದರು. ಬಳಲಿಕೆ, ಜಿಂಕೆಯು ತಪ್ಪಿಸಿಕೊಂಡ ಬೇಸರಗಳಿಂದ ಸೈರಣೆಯನ್ನು ಕಳೆದುಕೊಂಡಿದ್ದ ರಾಜನು, ತಪೋನಿಷ್ಠರಾದ ಶಮೀಕ ಮಹರ್ಷಿಗಳನ್ನು ಉದ್ದೇಶಿಸಿ, “ಮಹರ್ಷಿಗಳೇ! ನಾನು ಅಭಿಮನ್ಯು ಪುತ್ರನಾದ ಪರೀಕ್ಷಿತ ರಾಜನಾಗಿರುತ್ತೇನೆ. ನಾನು ಬಾಣದಿಂದ ಪ್ರಹರಿಸಿದ ಜಿಂಕೆಯು ತಪ್ಪಿಸಿಕೊಂಡಿದೆ. ನೀವೇನಾದರೂ ಅದರ ಜಾಡನ್ನು ತಿಳಿದಿದ್ದೀರಾ?” ಎಂದು ಮತ್ತೆ ಮತ್ತೆ ಕೇಳಿದನು. ಶಮೀಕರು ಮೌನವ್ರತದಲ್ಲಿದ್ದ ಕಾರಣ ರಾಜನ ಪ್ರಶ್ನೆಗೆ ಯಾವ ಉತ್ತರವನ್ನೂ ನೀಡಲಿಲ್ಲ. ರಾಜನಿಗೆ ಬಹಳ ಕೋಪ ಬಂದಿತು. ಹತ್ತಿರದಲ್ಲಿಯೇ ಇದ್ದ ಸತ್ತ ಹಾವೊಂದನ್ನು ಶಮೀಕ ಮಹರ್ಷಿಯ ಕುತ್ತಿಗೆಗೆ ಹಾರದಂತೆ ಹಾಕಿಬಿಟ್ಟನು. ಕುತ್ತಿತವಾದ ಈ ಅಕಾರ್ಯವೂ ಶಮೀಕರ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಲಿಲ್ಲ. ಕುತ್ತಿಗೆಯಲ್ಲಿದ್ದ ಹಾವನ್ನು ತೆಗೆದುಹಾಕುವ ಶ್ರಮವನ್ನೂ ತೆಗೆದುಕೊಳ್ಳದೆ. ಅವರು ಮೊದಲಿನಂತೆಯೇ ಧ್ಯಾನಾಸ್ತರಾಗಿದ್ದರು. ರಾಜನನ್ನು ಶಪಿಸುವುದಾಗಲೀ ಕ್ಷಮಿಸುವುದಾಗಲೀ ಅವರು ಮಾಡಲಿಲ್ಲ. ಶಮೀಕರು ಪರೀಕ್ಷಿತನು ಧರ್ಮಾತ್ಮನೆಂದು ಅರಿತಿದ್ದರು. ಕ್ಷಮಾಶೀಲರಾದ ಅವರು ರಾಜನಿದ್ದ ಪರಿಸ್ಥಿತಿಯನ್ನೂ ಅರಿತಿದ್ದರು. ಆದ್ದರಿಂದ ತಾವು ಅವನಿಂದ ಆವಮಾನಿತರಾದರೂ ಶಪಿಸಲಿಲ್ಲ. ಆದರೆ ಶಮೀಕರ ಧರ್ಮಪರಾಯಣತೆ, ಕ್ಷಮೆ, ಕಠಿನ ತಿಳಿದೂ ಅವರು ತನ್ನನ್ನು ಕಡೆಗಣಿಸಿದರೆಂದು ಕೋಪಗೊಂಡಿದ್ದನು. ಶಮೀಕರಿಗೆ ಶೃಂಗಿಯೆಂಬ ಪುತ್ರನಿದ್ದನು. ಅವನೂ ತಂದೆಯಂತೆಯೇ ವ್ರತನಿಷ್ಠನಾದರೂ ತಂದೆಯ ಕ್ಷಮಾಗುಣ ಅವನಲ್ಲಿ ಇರಲಿಲ್ಲ. ಶೃಂಗಿಯು ಆಗ ಗುರುಕುಲದಲ್ಲಿದ್ದನು. ಅಂದು ಆಚಾರ್ಯರ ಅನುಮತಿಯನ್ನು ಪಡೆದು ಆಶ್ರಮಕ್ಕೆ ಹಿಂದಿರುಗುತ್ತಿದ್ದಾಗ, ಅವನ ಗೆಳೆಯನಾದ ಕೃಶನು ಶೃಂಗಿಯ ತಂದೆಯಿರುವ ಸ್ಥಿತಿಯನ್ನು ವರ್ಣಿಸಿ ಹಾಸ್ಯಮಾಡಿದನು. ಗೆಳೆಯನು ತನ್ನ ತಂದೆಯನ್ನು ಅವಮಾನಿಸಿದುದರಿಂದ ಶೃಂಗಿಗೆ ಬಹಳ ಕೋಪ ಬಂದಿತು. ಗೆಳೆಯನು ಹಾಸ್ಯಮಾಡುತ್ತ, ‘ನಿನ್ನ ತಂದೆಯು ಸತ್ತ ಹಾವಿನ ಶವವನ್ನು ಹೊತ್ತುಕೊಂಡು ಕುಳಿತಿದ್ದಾನೆ’ ಮುಂತಾಗಿ ವಿವರಿಸಿ ಹೇಳತೊಡಗಿದನು. ಕೃಶನಿಂದಲೇ ಈ ಕೆಲಸವನ್ನು ಮಾಡಿದವನು ಪರೀಕ್ಷಿತ ಮಹಾರಾಜನೆಂಬ ವಿಷಯವು ಶೃಂಗಿಗೆ ತಿಳಿಯಿತು. ಕೂಡಲೇ ಶೃಂಗಿಯು, “ವೃದ್ಧ ನಾದ, ಮೌನವ್ರತದಲ್ಲಿದ್ದ ನನ್ನ ತಂದೆಯನ್ನು ಅವಮಾನಿಸಿದ ರಾಜನು ಇನ್ನು ಏಳು ರಾತ್ರಿಗಳ ಅವಧಿಯಲ್ಲಿ ವಿಷಧರನಾದ ತಕ್ಷಕನ ದಂಶನದಿಂದ ಯಮನಾಲಯಕ್ಕೆ ಹೋಗಲಿ” ಎಂದು ಶಾಪವಿತ್ತನು. ಅನಂತರ ತಂದೆಯ ಬಳಿಗೆ ಹೋಗಿ, “ಅಪ್ಪಾ, ಆ ಕುರುಕುಲಾಧಮನು ನಿಮಗೆ ಮಾಡಿದ ಅವಮಾನಕ್ಕೆ ತಕ್ಕ ಶಾಸ್ತಿಯನ್ನು ಮಾಡಿದ್ದೇನೆ” ಎಂದನು. ಮಗನು ಕ್ರೋಧವಶನಾಗಿ ಮಾಡಿದ ಅಕಾರ್ಯವು ಶಮೀಕರಿಗೆ ಪ್ರಿಯವಾಗಲಿಲ್ಲ. ಅವರು “ಮಗು! ನೀನು ರಾಜನನ್ನು ಶಪಿಸಿದುದು ನನಗೆ ಪ್ರಿಯವಾಗಲಿಲ್ಲ. ಶಾಪ ಕೊಡುವುದು ತಪಸ್ವಿಗಳಿಗೆ ಶೋಭಿಸುವುದಿಲ್ಲ. ನಾವು ಆ ನರೇಂದ್ರನ ರಾಜ್ಯದಲ್ಲಿ ವಾಸಮಾಡುತ್ತಿದ್ದೇವೆ. ಅವನು ನಮ್ಮನ್ನು ರಕ್ಷಿಸುತ್ತಿದ್ದಾನೆ. ರಾಜನು ಧರ್ಮದ ಪರಿಪಾಲನೆ ಮಾಡತಕ್ಕವನು. ಅವನು ಏನಾದರೂ ತಪ್ಪು ಮಾಡಿದರೆ ನಾವು ಕ್ಷಮೆಯಿಂದ ತಿಳಿಹೇಳಿ, ಅವನನ್ನು ಧರ್ಮಮಾರ್ಗಕ್ಕೆ ತರಬೇಕೇ ಹೊರತು, ಅವನ ವಿನಾಶವನ್ನು ಬಯಸಬಾರದು. ರಾಜನೇನಾದರೂ ಇಲ್ಲವಾದರೆ ಧರ್ಮವೇ ನಾಶವಾಗುತ್ತದೆ. ಅರಣ್ಯವಾಸಿಗಳಾದ ನಮಗೆ ರಾಜನ ರಕ್ಷಣೆಯು ಅತ್ಯಂತ ಆವಶ್ಯಕವಾಗಿದೆ. ರಾಜನು ಬಲಿಷ್ಠನೂ ಧರ್ಮಾತ್ಮನೂ ಆಗಿದ್ದರೆ ನಾವು ಕಳ್ಳಕಾಕರಿಂದಾಗಲೀ ಅರಣ್ಯಮೃಗಗಳಿಂದಾಗಲೀ ಪೀಡೆಗೆ ಒಳಗಾಗದೆ ವಿಪುಲ ಧರ್ಮಕಾರ್ಯಗಳನ್ನು ಮಾಡಬಹುದು. ನಾವು ಮಾಡುವ ಧರ್ಮಕಾರ್ಯದಲ್ಲಿ ರಾಜನಿಗೂ ಒಂದು ಪಾಲು ಸಿಕ್ಕುತ್ತದೆ. ಪರೀಕ್ಷಿತನು ಸಕಲ ಪ್ರಜೆಗಳನ್ನೂ ಎಲ್ಲ ರೀತಿಯಿಂದಲೂ ಸರಿಯಾಗಿ ರಕ್ಷಿಸುತ್ತಿದ್ದಾನೆ. ಅವನು ಯಾವ ಸಮಯದಲ್ಲಿ ಇಂತಹ ಅಪರಾಧವನ್ನು ಮಾಡಿದನೆಂಬುದನ್ನು ಗಮನಿಸಬೇಕು. ಮೊದಲನೆಯದಾಗಿ, ರಾಜನು ಹಸಿವು ಬಾಯಾರಿಕೆಗಳಿಂದ ಪೀಡಿತನಾಗಿದ್ದನು. ಎರಡನೆಯದಾಗಿ, ತನ್ನ ಬಾಣವು ವಿಫಲವಾದುದು ಕ್ಷತ್ರಿಯರಿಗೆ ಅತಿ ಅವಮಾನದ ಸಂಗತಿ. ನಾನು ಯಾರೆಂಬುದಾಗಲೀ ಮೌನವ್ರತದಲ್ಲಿ ಇರುವೆನೆಂದಾಗಲೀ ಅವನಿಗೆ ತಿಳಿದಿರಲಿಲ್ಲ, ಇಂತಹ ಸಂದರ್ಭದಲ್ಲಿ ಮಾಡಿದ ಅಲ್ಪಾಪರಾಧಕ್ಕಾಗಿ ಅವನನ್ನು ನಾಶಮಾಡಿಬಿಟ್ಟೆಯಲ್ಲಾ” ಎಂದು ಪರಿ ತಪಿಸಿದರು. ಅನಂತರ ಶಮೀಕರು ಮಗನಿಗೆ ಹೇಳಿದ ಮಾತುಗಳು ಅವರ ರಾಜನೀತಿ ವೈಶಾರದ್ಯವನ್ನು ಸ್ಪಷ್ಟಪಡಿಸುತ್ತದೆ: “ರಾಜನಿಲ್ಲದ ರಾಜ್ಯದಲ್ಲಿ ಧರ್ಮದ ಮರ್ಯಾದ ಯನ್ನು ಮೀರಿ ಉದ್ಧತರಾಗಿ ನಡೆಯುವ ಜನರು ಪ್ರಮುಖರಾಗುತ್ತಾರೆ. ರಾಜದಂಡದ ಭಯವಿದ್ದರೆ ಮಾತ್ರ ಅವರ ಉಪಟಳ ಕಡಮೆಯಿರುತ್ತದೆ. ಲೋಕದಲ್ಲಿ ಶಾಂತಿ ಸ್ಥಾಪನೆಗೆ, ಪ್ರಜೆಗಳು ನಿಶ್ಚಿಂತರಾಗಿ ತಮ್ಮ ವ್ಯವಹಾರಗಳನ್ನು ನಡೆಸಲು ರಾಜದಂಡವೇ ಪ್ರಮುಖವಾದುದು. ರಾಜನು ತಾನೇ ಯಜ್ಞಯಾಗಾದಿಗಳನ್ನು ಮಾಡುತ್ತಾನೆ. ಮತ್ತು ಮಾಡುವವರನ್ನು ರಕ್ಷಿಸುತ್ತಾನೆ. ಅದರಿಂದ ದೇವತೆಗಳೂ ಸಂಪ್ರೀತರಾಗುತ್ತಾರೆ. ಕಾಲಕಾಲಕ್ಕೆ ಮಳೆ-ಬೆಳೆಗಳಾಗಿ ದೇಶ ಸುಭಿಕ್ಷವಾಗುತ್ತದೆ. ಈ ಕಾರಣದಿಂದಲೇ ರಾಜನು ಹತ್ತು ಮಂದಿ ಪ್ರೋತ್ರೀಯರಿಗೆ ಸಮನೆಂದು ಮನುವು ಹೇಳಿರುತ್ತಾನೆ.” ಹೀಗೆ ರಾಜನ ವಿಷಯವಾಗಿ ಹೇಳಿ ಶಮೀಕರು ಮಗನಿಗೂ ‘ಇನ್ನು ಮುಂದೆ ಕೋಪಕ್ಕೆ ವಶನಾಗಿ ಹೀಗೆ ಮಾಡಬೇಡ’ವೆಂದು ಬುದ್ದಿ ಹೇಳಿದರು. ಮಗನು ವಯಸ್ಸಿಗೆ ಬಂದಿದ್ದರೂ ತಂದೆಯಾದವನು ಅವನು ಗುಣಸಂಪನ್ನನೂ ಯಶೋವಂತನೂ ಆಗಲು ಸಹಾಯವಾಗುವಂತೆ ಬುದ್ಧಿ ಹೇಳುತ್ತಲೇ ಇರಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಹಾಗೆಯೇ ಪುತ್ರನೂ ಕೂಡಾ ತಾನು ಸರ್ವಜ್ಞನೇ ಆದರೂ ತಂದೆಯ ಮಾತುಗಳನ್ನು ವಿನಯದಿಂದ ಕೇಳಬೇಕು, ಶೃಂಗಿಯು ಶಾಪ ಕೊಟ್ಟಿದ್ದರಿಂದಾಗಿ ಅವನ ತಪಃಶಕ್ತಿಯು ಬಹಳವಾಗಿ ವ್ಯಯವಾಯಿತೆಂದು ಶಮೀಕರು ಎಚ್ಚರಿಸಿದರು. ಕೋಪವು ಎಷ್ಟು ಅನರ್ಥಕಾರಿಯೆಂಬುದನ್ನು ಅವರು ಇಲ್ಲಿ ಹೇಳುತ್ತಾರೆ. ಯತಿಗಳು ಬಹಳ ಕಷ್ಟದಿಂದ ಗಳಿಸಿದ ತಪಸ್ಸನ್ನು ಕೋಪವು ಕ್ಷಣಮಾತ್ರದಲ್ಲಿ ನಾಶಮಾಡುತ್ತದೆ. ಅವರಿಗೆ ಸದ್ಗತಿಯು ಸಿಕ್ಕುವುದಿಲ್ಲ. ಕ್ಷಮಾಶೀಲರಿಗೆ ಇಹ-ಪರಗಳೆರಡರಲ್ಲಿಯೂ ಸುಖವಿದೆ. ಹೀಗೆ ಮಗನನ್ನು ಉಪದೇಶಿಸಿ ದಯಾಮಯರಾದ ಶಮೀಕರು ಗೌರಮುಖನೆಂಬ ಶಿಷ್ಯನನ್ನು ಕರೆದು, ಕುಶಲಪ್ರಶ್ನೆಯ ಪುರಃಸರವಾಗಿ ‘ಅಲ್ಪಬುದ್ದಿಯವನಾದ ನನ್ನ ಮಗನು ನಿನಗೆ ಶಾಪವನ್ನು ಇತ್ತಿದ್ದಾನೆ’ ಎಂದು ಪರೀಕ್ಷಿತನಿಗೆ ಹೇಳಿ ಕಳುಹಿಸಿದರು. ಗೌರಮುಖನು ಅಂತೆಯೇ ರಾಜನ ಬಳಿಗೆ ತೆರಳಿ, “ಮಹಾರಾಜ, ನಿನ್ನ ರಾಜ್ಯದ ಅರಣ್ಯದಲ್ಲಿ ಶಾಂತರಾದ, ಪರಮಧಾರ್ಮಿಕರಾದ ಶಮೀಕರೆಂಬ ಋಷಿಯಿದ್ದಾರೆ. ನೀನು ಸತ್ತ ಸರ್ಪವನ್ನು ಅವರ ಕುತ್ತಿಗೆಗೆ ಹಾಕಿದೆ. ಶಮೀಕರು ನಿನ್ನನ್ನು ಕ್ಷಮಿಸಿದರೂ ಅವರ ಮಗನು ತಂದೆಗಾದ ಅಪಮಾನವನ್ನು ಕ್ಷಮಿಸಲಿಲ್ಲ. ತನ್ನ ತಂದೆಗೆ ತಿಳಿಯದಂತೆಯೇ ಅವನು ನಿನ್ನನ್ನು ಶಪಿಸಿದ್ದಾನೆ. ಅದರಿಂದಾಗಿ ತಕ್ಷಕನು ಏಳು ರಾತ್ರಿಗಳೊಳಗಾಗಿ ನಿನಗೆ ಮೃತ್ಯುವಾಗುತ್ತಾನೆ. ಆದ್ದರಿಂದ ನೀನು ಈಗಿಂದೀಗಲೇ ನಿನ್ನ ರಕ್ಷಣೆ ಮಾಡಿಕೊಳ್ಳುವುದು ಉಚಿತವಾಗಿದೆ. ಈ ಮಾತನ್ನು ಶಮೀಕರು ಒತ್ತಾಯ ಪೂರ್ವಕ ಹೇಳಿಕಳುಹಿಸಿರುತ್ತಾರೆ. ಈ ಸಮಯದಲ್ಲಿ ನಿನ್ನ ರಕ್ಷಣೆಯನ್ನು ನೀನೇ ಮಾಡಿಕೊಳ್ಳಬೇಕೇ ಹೊರತು ಬೇರೆಯವರಿಂದ ಏನೂ ಮಾಡಲು ಸಾಧ್ಯವಿಲ್ಲ. ಹಾಗೆ ಆಗುವುದಿದ್ದರೆ ಶಮೀಕರು ನಿನ್ನನ್ನು ರಕ್ಷಿಸುತ್ತಿದ್ದರು. ಆದ್ದರಿಂದಲೇ ಶಮೀಕರು ಈ ವಿಷಯವನ್ನು ನಿನಗೆ ತಿಳಿಸಲು ನನ್ನನ್ನು ಕಳುಹಿಸಿದರು” ಎಂದು ತಿಳಿಸಿದನು. ಅಪರಾಧವೆಸಗಿದವರ ವಿಷಯದಲ್ಲಿಯೂ ಕ್ಷಮಾವಂತರಾದ ಶಮೀಕ ಮಹರ್ಷಿಯು ತನ್ನ ವಿಷಯದಲ್ಲಿ ತೋರಿದ ಅನುತಾಪವನ್ನು ಕಂಡು ಪರೀಕ್ಷಿತರಾಜನು ತನ್ನ ತಪ್ಪಿಗಾಗಿ ಬಹುವಾಗಿ ಪರಿತಪಿಸಿದನು. ತನ್ನ ರಕ್ಷಣೆಗಾಗಿ ಅತಿಹೆಚ್ಚಿನ ವ್ಯವಸ್ಥೆಯನ್ನು ಮಾಡಿಕೊಂಡನು. ಆದರೂ ವಿಧಿಯನ್ನು ತಪ್ಪಿಸಲು ಆಗಲಿಲ್ಲ. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-1 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ವೇದವ್ಯಾಸ ಮಹರ್ಷಿಗಳ ಪೂರ್ವ ಹೆಸರು ಕೃಷ್ಣದ್ವೈಪಾಯನ ಹೇಮರೆಡ್ಡಿ ಮಲ್ಲಮ್ಮ ಜಯಂತಿ: ಭಕ್ತಿ, ಪತಿವ್ರತೆ, ಸಹನೆ ಮತ್ತು ಸ್ತ್ರೀಶಕ್ತಿಯ ಅಮರ ಜ್ಯೋತಿ