ಕೋಸಲರಾಜ್ಯದಲ್ಲಿ ಕ್ಷೇಮದರ್ಶಿಯೆಂಬ ಅರಸನಿದ್ದನು. ಅವನ ಆಸ್ಥಾನಕ್ಕೆ ಒಮ್ಮೆ ಕಾಲಕವೃಕ್ಷೀಯನೆಂಬ ಮುನಿಯು ಬಂದನು. ಈ ಮುನಿಯು ಕ್ಷೇಮದರ್ಶಿಯ ರಾಜ್ಯದ ಪರಿಸ್ಥಿತಿಯನ್ನು ತಿಳಿಯಲು ಒಂದು ಕಾಗೆಯನ್ನು ಪಂಜರದಲ್ಲಿಟ್ಟುಕೊಂಡು ರಾಜ್ಯದಾದ್ಯಂತ ಹಲವು ಬಾರಿ ಸಂಚರಿಸಿದ್ದನು. ಮುನಿಯು ದೇಶದಲ್ಲಿ ಸಂಚರಿಸುತ್ತಿದ್ದಾಗ, ಅಲ್ಲಿಯ ಜನರನ್ನು ಉದ್ದೇಶಿಸಿ, “ಸಜ್ಜನರೇ! ವಾಯಸೀವಿದ್ಯೆಯನ್ನು ಕಲಿಯಿರಿ. ಅದರಿಂದ ಕಾಗೆಗಳು ಏನು ಮಾತನಾಡುತ್ತವೆಯೆಂದು ತಿಳಿಯುತ್ತದೆ. ಅವು ಹಿಂದಿನ, ಇಂದಿನ ಮತ್ತು ಮುಂದೆ ನಡೆಯುವ ವಿಷಯಗಳನ್ನು ಯಥಾವತ್ತಾಗಿ ತಿಳಿಸುತ್ತವೆ” ಎಂದು ಹೇಳುತ್ತಿದ್ದನು. ಹೀಗೆ ಹೇಳುತ್ತ ಮುನಿಯು ಅನೇಕ ಜನರನ್ನು ಸಂದರ್ಶಿಸಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿದನು. ರಾಜಕಾರ್ಯದಲ್ಲಿ ನಿಯುಕ್ತರಾಗಿದ್ದ ಕರ್ಮಚಾರಿಗಳು ಮಾಡುತ್ತಿದ್ದ ದುಷ್ಕರ್ಮಗಳನ್ನು ಪ್ರತ್ಯಕ್ಷವಾಗಿ ನೋಡಿದನು. ರಾಷ್ಟ್ರದ ಪರಿಸ್ಥಿತಿಯನ್ನು ಸರ್ವಪ್ರಕಾರದಿಂದಲೂ ತಿಳಿದುಕೊಂಡವನಾಗಿ ರಾಜಧನವನ್ನು ಅಪಹರಿಸುತ್ತಿರುವ ಕರ್ಮಚಾರಿಗಳನ್ನೆಲ್ಲ ಪತ್ತೆಹಚ್ಚಿ, ಅನಂತರ ರಾಜನನ್ನು ನೋಡಲು ರಾಜಧಾನಿಗೆ ಆಗಮಿಸಿದನು. ಕಠೋರವ್ರತನಿಷ್ಠನಾದ ಮುನಿಯು ಅರಮನೆಗೆ ಬರುತ್ತಿರುವಾಗಲೇ ‘ಸರ್ವಜ್ಯೋಸ್ಟ್ರಿ’ – ‘ನಾನು ಎಲ್ಲವನ್ನೂ ತಿಳಿದುಕೊಂಡಿದ್ದೇನೆ’- ಎಂದು ಹೇಳುತ್ತಲೇ ಒಳಗೆ ಪ್ರವೇಶಿಸಿದನು. ಮುನಿಯು ನೇರವಾಗಿ ರಾಜಸಭೆಗೆ ಹೋಗಿ, ರಾಜಸಿಂಹಾಸನದ ಪಕ್ಕದಲ್ಲಿ ಠೀವಿಯಿಂದ ಕುಳಿತಿದ್ದ ಮಂತ್ರಿಯನ್ನು ಕುರಿತು, ಕಾಗೆಯ ಮಾತಿಗೆ ಅನುಸಾರವಾಗಿ ಹೀಗೆ ಹೇಳಿದನು̧”ಎಲೈ ಮಂತ್ರಿಯೇ, ನೀನು ಇಂಥ ಸ್ಥಳದಲ್ಲಿ ರಾಜಧನವನ್ನು ಅಪಹರಣ ಮಾಡಿರುವೆ. ನೀನು ಅಪಹರಿಸಿರುವುದನ್ನು ಇಂತಿಂಥ ಅಧಿಕಾರಿಗಳು ತಿಳಿದಿರುತ್ತಾರೆ. ನೀನು ರಾಜಕೋಶದ ಅಪಹಾರಕನೆಂದು ಕಾಗೆಯು ಹೇಳುತ್ತಿದೆ. ಈ ಅಪರಾಧವನ್ನು ನೀನೀಗಲೇ ಒಪ್ಪಿಕೊ ಎಂದು ಹೇಳಿದರು.” ಮಂತ್ರಿಯು ಮುನಿಯ ಮಾತನ್ನು ಕೇಳಿ ಅಪ್ರತಿಭನಾದನು. ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಆತನಿಗೆ ಬೇರೆ ದಾರಿ ಉಳಿದಿರಲಿಲ್ಲ. ಹೀಗೆಯೇ ಕಾಲಕವೃಕ್ಷೀಯ ಮುನಿಯು ರಾಜನಿಗೆ, ರಾಜ್ಯಕ್ಕೆ ಮೋಸಮಾಡುತ್ತಿರುವ ಹಲವಾರು ಅಧಿಕಾರಿಗಳನ್ನು ತೋರಿಸಿಕೊಟ್ಟನು. ಅವನು ಹೇಳಿದ ಯಾವ ಮಾತೂ ಸುಳ್ಳಾಗಲಿಲ್ಲ. ಇದರಿಂದ ಕರ್ಮಚಾರಿಗಳಿಗೆಲ್ಲ ಅಪಮಾನ ಉಂಟಾಯಿತು. ಅವರೆಲ್ಲ ಸೇರಿ ರಾತ್ರಿಯಲ್ಲಿ ಕಾಲಕವೃಕ್ಷೀಯ ಮುನಿಯು ಮಲಗಿದ್ದಾಗ ಅವನ ಕಾಗೆಯನ್ನು ಕೊಂದುಹಾಕಿದರು. ಮುನಿಯು ಬೆಳಗಿನಲ್ಲಿ ಎದ್ದಾಗ ಪಂಜರದಲ್ಲಿದ್ದ ಪಕ್ಷಿಯು ಅಲ್ಲಿಯೇ ಬಾಣದ ಏಟಿನಿಂದ ಸತ್ತುಬಿದ್ದಿರುವುದನ್ನು ಕಂಡನು. ಕೂಡಲೇ ರಾಜನಾದ ಕ್ಷೇಮದರ್ಶಿಯನ್ನು ಸಂಧಿಸಿ, “ಮಹಾರಾಜ! ನೀನು ಪ್ರಜೆಗಳ ಧನ, ಪ್ರಾಣ ಮತ್ತು ಆಸ್ತಿಗಳಿಗೆ ರಕ್ಷಕನಾಗಿರುವೆ. ಇಂದು ನನ್ನ ಪಕ್ಷಿಯನ್ನು ಕೊಂದರು. ನಾಳೆ ನನ್ನನ್ನೂ ಕೊಲ್ಲಬಹುದು. ನಾನು ನಿನ್ನಿಂದ ಅಭಯವನ್ನು ಯಾಚಿಸುತ್ತೇನೆ. ನೀನು ಅನುಜ್ಞೆ ನೀಡಿದರೆ ನಿನಗೆ ಹಿತವಾದ ಮಾತುಗಳನ್ನು ಹೇಳುತ್ತೇನೆ” ಎಂದು ಹೇಳುತ್ತ, “ಮಿತ್ರನಾದ ನಿನ್ನ ಹಿತಾರ್ಥವಾಗಿ ನಾನು ಆಗಮಿಸಿದ್ದೇನೆ. ನಿನ್ನ ಕಾರ್ಯಪಡೆಯವರ ಕೆಲಸದಿಂದ ನಾನು ದುಃಖಿತನಾಗಿದ್ದೇನೆ. ನಿನ್ನ ಐಶ್ವರ್ಯವು ಲೂಟಿಯಾಗುತ್ತಿದೆಯೆಂದು ನಿನ್ನನ್ನು ಎಚ್ಚರಿಸುತ್ತಿದ್ದೇನೆ” ಎಂದನು. ಆಗ ರಾಜನು “ಮುನಿಗಳೇ! ನೀವು ಹೇಳಬೇಕೆಂದಿರುವುದನ್ನು ಸ್ಪಷ್ಟವಾಗಿ ಹೇಳಿರಿ. ನನ್ನ ಹಿತವನ್ನು ಬಯಸುತ್ತಿರುವ ನಿಮ್ಮ ಮಾತನ್ನು ಖಂಡಿತ ನಡೆಸುತ್ತೇನೆ” ಎಂದು ಹೇಳಿದನು. ಆಗ ಮುನಿಯು ರಾಜಸೇವೆಯು ಎಷ್ಟು ಕಷ್ಟವೆಂಬುದನ್ನು ಮೊದಲು ವಿವರಿಸಿದನು. “ರಾಜನಿಗೆ ಬಹುಜನ ಮಿತ್ರರೂ ಶತ್ರುಗಳೂ ಇರುತ್ತಾರೆ. ಅಧಿಕಾರಿಗಳಿಗೆ ಇವರೆಲ್ಲರಿಂದ ಭಯವು ಇದ್ದೇ ಇರುತ್ತದೆ. ಧಗಧಗಿಸುವ ಬೆಂಕಿಯ ಸಮೀಪದಲ್ಲಿ ಎಚ್ಚರಿಕೆಯಿಂದ ಇರುವಂತೆ ರಾಜನು ಇಂಥವರ ಸಮೀಪದಲ್ಲಿ ಎಚ್ಚರಿಕೆಯಿಂದ ಇರಬೇಕು. ನನ್ನಂತಹವರು ಆಪತ್ಕಾಲದಲ್ಲಿ ರಾಜನಿಗೆ ಸಹಾಯಮಾಡಬೇಕು. ಅದಕ್ಕಾಗಿಯೇ ನಾನು ಕಾಗೆಯ ಮೂಲಕ ನಿನ್ನ ಅಧಿಕಾರಿಗಳ ಸ್ವಭಾವವನ್ನು ಕಂಡುಕೊಳ್ಳುತ್ತಿದ್ದೆನು. ಆದರೆ, ಅದೇ ಆ ಪಕ್ಷಿಯ ಪ್ರಾಣಕ್ಕೆ ಎರವಾಯಿತು. ನನ್ನ ಕಾಗೆಯು ಮರಣಹೊಂದಿದುದಕ್ಕೆ ನಾನು ನಿನ್ನನ್ನು ನಿಂದಿಸುವುದಿಲ್ಲ. ಆದರೆ, ನಿನ್ನ ಬೊಕ್ಕಸವನ್ನು ಲೂಟಿಮಾಡುತ್ತಿರುವವರು ನಿನ್ನ ಅರಮನೆಯಲ್ಲಿಯೇ ಇದ್ದಾರೆ. ಅವರಲ್ಲಿ ಪ್ರಜೆಗಳಿಗೆ ಹಿತವನ್ನುಂಟುಮಾಡುವ ಆಸಕ್ತಿಯೇನೂ ಇಲ್ಲ. ಅಂತಹ ಜನರೊಡನೆ ನನಗೆ ವೈರವುಂಟಾಗಿದೆ. ಅಂತಹವರಿಂದಲೇ ನನ್ನ ಕಾಗೆಯು ಕೊಲ್ಲಲ್ಪಟ್ಟಿತು. ಈ ನಿನ್ನ ರಾಜ್ಯದ ಅಧಿಕಾರಿಗಳ ಮೇಲೆ ನೀನೇ ವಿಶ್ವಾಸವಿಡುವುದು ಸಾಧ್ಯವಿಲ್ಲದಿರುವಾಗ ನನ್ನ ವಿಷಯವಾಗಿ ಹೇಳುವುದೇನಿದೆ? ಆದುದರಿಂದ ಈ ರಾಜ್ಯದಲ್ಲಿ ವಾಸಮಾಡುವುದು ಸಾಧ್ಯವಿಲ್ಲ. ಇಲ್ಲಿ ಸತ್ಕಾರ್ಯ ಮತ್ತು ದುಷ್ಕಾರ್ಯಗಳನ್ನು ಮಾಡುವವರಿಬ್ಬರೂ ಕೊಲೆಗೆ ಈಡಾಗುತ್ತಾರೆ. ಮಹಾವೃಕ್ಷದ ಪಕ್ಕದಲ್ಲಿ ಪೊದೆಯೊಂದು ಹುಟ್ಟಿ, ಅದನ್ನೇ ಆಶ್ರಯಿಸಿ ಬೆಳೆಯುತ್ತದೆ. ಕೆಲವು ದಿನಗಳಲ್ಲಿ ವೃಕ್ಷವನ್ನೇ ಆವರಿಸಿಬಿಡುತ್ತದೆ. ಒಂದು ವೇಳೆ ಆ ಪೊದೆಯು ಒಣಗಿ ದಾವಾಗ್ನಿಯು ಹತ್ತಿಕೊಂಡರೆ ಪೊದೆಯೊಡನೆ ವೃಕ್ಷವನ್ನೂ ನಾಶಮಾಡಿಬಿಡುತ್ತದೆ. ಹಾಗೆಯೇ ನಿನ್ನಿಂದಲೇ ನಿಯುಕ್ತರಾಗಿ ನಿನ್ನಿಂದಲೇ ವೇತನವನ್ನು ಪಡೆಯುತ್ತಿರುವವರು ನಿನ್ನನ್ನೇ ವಿನಾಶಮಾಡಿಬಿಡುತ್ತಾರೆ. ನನ್ನ ಮೇಲೆ ದ್ವೇಷಭಾವವಿರುವ ಅವರು ನನ್ನನ್ನೂ ನನ್ನ ಕಾಗೆಯನ್ನು ಕೊಂದಂತೆಯೇ ಕೊಲೆ ಮಾಡುತ್ತಾರೆ.” ಮುನಿಯ ಮಾತನ್ನು ಕೇಳಿ ರಾಜನು ದುಷ್ಟನಿಗ್ರಹಕ್ಕೆ ಸಹಾಯ ಮಾಡುವಂತೆ ಮುನಿಯನ್ನೇ ಬೇಡಿಕೊಂಡನು. ಆಗ ಮುನಿಯು ತನ್ನ ಕಾಗೆಯು ಸತ್ತ ವಿಷಯವನ್ನು ವಿಚಾರಿಸಲೇಬೇಡವೆಂದೂ ತಾನು ಹೇಳುವ ಅಧಿಕಾರಿಗಳನ್ನು ಒಬ್ಬೊಬ್ಬರನ್ನಾಗಿ ವಿಚಾರಣೆಗೊಳಪಡಿಸಿ ಅಧಿಕಾರದಿಂದ ತೆಗೆದು ಉಳಿದವರ ಸಹಾಯದಿಂದ ಶಿಕ್ಷೆಯನ್ನು ವಿಧಿಸುವಂತೆಯೂ ಬೋಧಿಸಿದನು. ತಾನು ಕ್ಷೇಮದರ್ಶಿಯ ತಂದೆಯ ಸ್ನೇಹಿತನೆಂದೂ ಆದ್ದರಿಂದಲೇ ರಾಜನನ್ನು ಎಚ್ಚರಿಸಲು ಬಂದಿರುವುದಾಗಿಯೂ ವಿವರಿಸಿದನು. ರಾಜನು ಕಾಲಕವೃಕ್ಷೀಯನನ್ನೇ ತನ್ನ ಪುರೋಹಿತನನ್ನಾಗಿ ಮಾಡಿಕೊಂಡು ಅವನ ಬುದ್ಧಿಕೌಶಲದ ಸಹಾಯದಿಂದ ಆಂತರಿಕ ಶತ್ರುಗಳನ್ನು ನಿರ್ಮೂಲಮಾಡಿ, ಅನೇಕಾನೇಕ ಯಜ್ಞಗಳನ್ನು ಮಾಡಿ ಅಭ್ಯುದಯವನ್ನು ಸಾಧಿಸಿದನು. ಹೀಗೆ ಮಹರ್ಷಿಗಳು ತಮ್ಮ ತಪಸ್ಸಿನ ಸಾಧನೆಯನ್ನು ಲೋಕೋಪಕಾರಕ್ಕಾಗಿ ಬಳಸುತ್ತ ಜನಹಿತ-ಆತ್ಮಹಿತಗಳೆರಡನ್ನೂ ಸಾಧಿಸಿದರು. ಈ ಮಹರ್ಷಿಗಳಿಗೆ ಹಿರಣ್ಯಹಸ್ತ ನೆಂಬ ಪುತ್ರನಿದ್ದನೆಂದು ತಿಳಿದುಬರುತ್ತದೆ. ಅವನೂ ಪ್ರಸಿದ್ದ ಋಷಿಯಾಗಿದ್ದು, ಪಕ್ಷಿಭಾಷೆಯಲ್ಲಿ ಪ್ರವೀಣನಾಗಿದ್ದನು. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಕೌಂಡಿನ್ಯ ಮಹರ್ಷಿಗಳ ನೆನಪಿಗಾಗಿ ಕಾಂಬೋಜಕ್ಕೆ ಕಾಂಬೋಡಿಯಾ ಎಂದು ನಾಮಕರಣ ಶಿವನ ಪಂಚಮುಖಗಳಲ್ಲಿ ಒಬ್ಬರಾದ, ಸಾಕ್ಷಾತ್ ಈಶ್ವರನ ಸ್ವರೂಪವಾದ ವಾಮದೇವ ಮಹರ್ಷಿ